ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಭೇಟಿಯಾಗಲಿರುವ ಎಚ್‌ಡಿಕೆ?

26 ಮತ್ತು 27ರಂದು ದೆಹಲಿ ಪ್ರವಾಸ
Last Updated 25 ಡಿಸೆಂಬರ್ 2018, 19:34 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇದೇ 26 ಮತ್ತು 27ರಂದು ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚಿಸುವ ಸಾಧ್ಯತೆ ಇದೆ.

26ರ ಮಧ್ಯಾಹ್ನ ದೆಹಲಿಗೆ ತೆರಳಲಿರುವ ಅವರು, 27ರ ರಾತ್ರಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

ಮುಖ್ಯಮಂತ್ರಿ ಅವರ ಅಧಿಕೃತ ಕಾರ್ಯಕ್ರಮ ಪಟ್ಟಿಯಲ್ಲಿ ರಾಹುಲ್ ಗಾಂಧಿ ಭೇಟಿ ನಿಗದಿಯಾಗಿಲ್ಲ. ದೆಹಲಿಗೆ ಹೋದಾಗ, ಮೈತ್ರಿ ಸರ್ಕಾರದ ಭಾಗಿದಾರಪಕ್ಷದ ನೇತಾರರನ್ನು ಭೇಟಿ ಮಾಡಿ ಚರ್ಚಿಸುವ ಪರಿಪಾಠವನ್ನು ಕುಮಾರಸ್ವಾಮಿ ಇಟ್ಟುಕೊಂಡಿದ್ದಾರೆ.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಂಪುಟ ಪುನಾರಚನೆ ನಡೆದಿದೆ. ಅದರ ಬೆನ್ನಲ್ಲೇ ಅತೃಪ್ತಿಯೂ ಭುಗಿಲೆದ್ದಿದೆ. ಖಾತೆ ಹಂಚಿಕೆ ಕಗ್ಗಂಟಾಗಿಯೇ ಉಳಿದಿದೆ. ಈ ಎಲ್ಲ ವಿಷಯಗಳ ಬಗ್ಗೆ ಕುಮಾರಸ್ವಾಮಿ ಅವರು ರಾಹುಲ್‌ ಜತೆ ಸಮಾಲೋಚನೆ ನಡೆಸುವ ಸಂಭವ ಇದೆ ಎಂದು ಮೂಲಗಳು ಹೇಳಿವೆ.

ಗಡ್ಕರಿ ಭೇಟಿ: ದೆಹಲಿ ಭೇಟಿ ವೇಳೆ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಮುಖ್ಯಮಂತ್ರಿ ಭೇಟಿ ಮಾಡಲಿದ್ದಾರೆ.ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಹಂಚಿಕೆ ಮಾಡುವಂತೆ ಕೋರಲಿರುವ ಅವರು, ಉದ್ದೇಶಿತ ಬೆಂಗಳೂರು–ಮೈಸೂರು ಹೆದ್ದಾರಿ ಕಾಮಗಾರಿಯ ಶಂಕುಸ್ಥಾಪನೆಗೆ ಬರುವಂತೆ ಆಮಂತ್ರಣ ನೀಡಲಿದ್ದಾರೆ.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿಯಾಗಲಿರುವ ಅವರು, ಬೆಳಗಾವಿ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಮವಾಗಿ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಹೆಸರಿಡಬೇಕು ಎಂದು ಮನವಿ ಮಾಡಲಿದ್ದಾರೆ.

ಕಲ್ಲಿದ್ದಲು ಸಚಿವ ಪೀಯೂಷ್ ಗೋಯಲ್ ಅವರನ್ನು ಭೇಟಿಯಾಗಲಿರುವ ಮುಖ್ಯಮಂತ್ರಿ, ರಾಜ್ಯದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಗೆ ಅಗತ್ಯವಾದ ಕಲ್ಲಿದ್ದಲು ಪೂರೈಸಲು ನೆರವಿಗೆ ಬರುವಂತೆ ಮನವಿ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT