ಬುಧವಾರ, ಏಪ್ರಿಲ್ 21, 2021
32 °C

ಡಿಸಿಎಂ ನೇತೃತ್ವದಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ: ಎಚ್.ಡಿ. ರೇವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೆಆರ್ ಪೇಟೆ ಹಾಗೂ ಹುಣಸೂರು ಕ್ಷೇತ್ರಗಳಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ. ಮುಖ್ಯವಾಗಿ ಕೆ.ಆರ್. ಪೇಟೆಯಲ್ಲಿ ಸರ್ಕಲ್ ಇನ್ಸ್‌ಪಕ್ಟರ್ ನೇತೃತ್ವದಲ್ಲಿಯೇ ದುಡ್ಡು ಹಂಚುತ್ತಿದ್ದಾರೆ ಎಂದು ಶಾಸಕ ಎಚ್.ಡಿ. ರೇವಣ್ಣ ದೂರಿದ್ದಾರೆ.

ಡಿಸಿಎಂ ಅಶ್ವತ್ಥ್ ನಾರಾಯಣ ಅವರು ಇನ್ನು ಕೆ.ಆರ್. ಪೇಟೆಗೆ ಹತ್ತಿರವಿರುವ ಹಾಸನ ಜಿಲ್ಲೆಯ ಗಡಿ ಭಾಗದಲ್ಲಿ ವಾಸ್ತವ್ಯ ಹೂಡಿದ್ದು, ಬೆಂಗಳೂರಿನಿಂದ ಕಾರ್ಪೋರೇಟರ್ ಅವರನ್ನು ಕರೆತಂದು ಹಣ ಹಂಚಿಸುತ್ತಿದ್ದಾರೆ. ಡಿಸಿಎಂ ಆಗಿ ನಮ್ಮ ಪಕ್ಷದವರನ್ನು ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಂಡ್ಯ ಎಸ್‌ಪಿಗೆ ಅಧಿಕಾರವೇ ಇಲ್ಲ. ಆದರೆ ಮೈಸೂರು ಐಜಿಪಿಗೆ ಚಾರ್ಜ್ ನೀಡಿದ್ದಾರೆ. ಐಜಿಪಿಯೇ ಸರ್ಕಲ್ ಇನ್‌ಸ್ಪೆಕ್ಟರ್ ಅವರನ್ನು ಬಿಟ್ಟು ಹಣ ಹಂಚಿಸುತ್ರಿದ್ದಾರೆ. ಐಜಿಪಿಯವರು ಮಂಡ್ಯಕ್ಕೆ ಯಾಕೆ ಬಂದರು? ಐಜಿ ಹುದ್ದೆಗೆ ಅವರು ಅನ್‌ಫಿಟ್. 2000, 1000 ಹೀಗೆ ಹಣ ಹಂಚಿಸುತ್ತಿದ್ದಾರೆ ಎಂದರು.

ನನ್ನ ಮಗ ಸ್ಥಳದಲ್ಲಿ ಇಲ್ಲದಿದ್ದರು ಎಫ್‌ಐಆರ್‌ ಮಾಡಿಸಿದ್ದಾರೆ. ಆ ವೇಳೆ ಆತ ಮಂದಗೆರೆಯಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದ. ಶುಕ್ರವಾರ ಎಸ್‌ಪಿ ಕಚೇರಿ ಮುಂದೆ ಧರಣಿ ಕೂರುತ್ತೇವೆ. ಐಜಿಯವರು ಸ್ಥಳಕ್ಕೆ ಬರುವವರೆಗೂ ಸ್ಥಳದಿಂದ ಮೇಲೆ ಏಳುವುದಿಲ್ಲ. ಚುನಾವಣಾ ಆಯೋಗ ಇದನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಚುನಾವಣೆ ನಡೆಯುತ್ತಿರುವ ಪಕ್ಕದ ಜಿಲ್ಲೆಯಲ್ಲಿ ಡಿಸಿಎಂ ಅವರನ್ನು ಹೇಗೆ ವಾಸ್ತವ್ಯ ಹೂಡಲು ಬಿಟ್ಟಿದ್ದಾರೆ. ಹಣ ಹಂಚುವುದಕ್ಕೆ ಕಿಕ್ಕೇರಿ, ಕೆ.ಆರ್. ಪೇಟೆಯಲ್ಲಿ 15 ಲಾಡ್ಜ್‌ಗಳನ್ನು ಬುಕ್ ಮಾಡಿದ್ದಾರೆ. ಸ್ವತಃ ಐಜಿಯವರೇ ನಿಂತು ಮಾನಿಟರಿಂಗ್ ಮಾಡುತ್ತಿದ್ದಾರೆ. ಇದು ಸಮಗ್ರ ತನಿಖೆಯಾಗಬೇಕು, ಐಜಿಯವರ ಮೇಲೆ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ಐಜಿ ಕೆಲಸ ಮಾಡುವ ಬದಲು ಗುಲಾಮನ ಕೆಲಸ ಮಾಡಲಿ. ಬಿಜೆಪಿ ಆಫೀಸಿನಲ್ಲಿ ಹೋಗಿ ಏಜೆಂಟ್ ಕೆಲಸ ಮಾಡಲಿ. ಐಜಿಯವರಿಗೆ ಬಿಜೆಪಿ ಆಫೀಸಿನಲ್ಲೊಂದು ಕೆಲಸ ಕೊಡಲಿ. ಪ್ರಕರಣದಲ್ಲಿ ನನ್ನ ಮಗನನ್ನು ಮೊದಲನೇ ಆರೋಪಿಯನ್ನಾಗಿ ಮಾಡಬೇಕಾದರೆ ಆತ ಸ್ಥಳದಲ್ಲಿರಬೇಕು. ಆದರೆ ಅವನು ಅಲ್ಲಿರಲಿಲ್ಲ. ಸೂರಜ್‌ನನ್ನು ಪ್ರಕರಣದಲ್ಲಿ ಸೇರಿಸಿದರೆ ಕಾರ್ಯಕರ್ತರು ಹೆದರುತ್ತಾರೆ ಎಂದು ಹೀಗೆ ಮಾಡಿದ್ದಾರೆ ಎಂದರು.

ನಮ್ಮ ಸರ್ಕಾರ ಇರಲಿ, ಇಲ್ಲದಿರಲಿ ಯಡಿಯೂರಪ್ಪ ಅವರನ್ನು ಹೇಗೆ ಹದ ಮಾಡಬೇಕು ಎಂಬುದು ಗೊತ್ತಿದೆ. ಯಡಿಯೂರಪ್ಪನ ಮಗ ಕ್ಯಾಂಪ್ ಹಾಕಿಕೊಂಡು ದುಡ್ಡು ಹಂಚುತ್ತಿದ್ದಾರೆ. ಡಿಸಿಎಂ ಕೂಡ ಅಲ್ಲೇ ಕೂತು ಹಣ ಹಂಚುತ್ತಿದ್ದಾರೆ. ನಿನ್ನೆ ಯಡಿಯೂರಪ್ಪ ಕೆ.ಆರ್. ಪೇಟೆಗೆ ಪ್ರಚಾರಕ್ಕೆ ಬರಬೇಕಿತ್ತು. ಆದರೆ ಸೋಲಿನ ಭೀತಿಯಿಂದ ಬರಲಿಲ್ಲ ಎಂದು ಕಿಡಿಕಾರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು