ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಹಗಳು ಬದಲಾಗಬಹುದು; ಶಾಸಕರು ಬದಲಾಗಲ್ಲ’

Last Updated 10 ಜನವರಿ 2019, 20:26 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಕ್ರಾಂತಿಗೆ ಗ್ರಹಗಳು ಬದಲಾಗಬಹುದು. ಆದರೆ, ಪಕ್ಷದ ಶಾಸಕರು ಬದಲಾಗುವುದಿಲ್ಲ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ವ್ಯಂಗ್ಯವಾಡಿದರು.

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಆಗಲ್ಲ. ಬಿಜೆಪಿ ಹಗಲುಗನಸು ಕಾಣುತ್ತಿದೆ’ ಎಂದರು.

‘ಲೋಕಸಭೆ ಚುನಾವಣೆಯಲ್ಲೂ ಜೆಡಿಎಸ್ ಜೊತೆಗೇ ಹೋಗುತ್ತೇವೆ. ಮೈತ್ರಿ ಮಾಡಿಕೊಂಡು ಐದು ವರ್ಷ ಸುಭದ್ರವಾಗಿ ಸಾಗುತ್ತೇವೆ. ಪರಸ್ಪರ ಮಾತುಕತೆ ಮಾಡಿಕೊಂಡು, ಅದರಂತೆ ನಡೆದುಕೊಳ್ಳುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜೆಡಿಎಸ್ 12 ಸ್ಥಾನಗಳನ್ನು ಕೇಳಿದೆ ಎನ್ನುವುದನ್ನೇ ಮುಂದಿಟ್ಟುಕೊಂಡು ನೀವು (ಮಾಧ್ಯಮದವರು) ಮಾತನಾಡುತ್ತೀರಿ. ದೇವೇಗೌಡರೇ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಈ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದು ಅವರೂ ಹೇಳಿದ್ದಾರೆ. ನಾವು ಹೊಂದಾಣಿಕೆ ಮಾಡಿಕೊಂಡು ಮುಂದುವರಿಯುತ್ತೇವೆ’ ಎಂದರು.

‘ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ್ದಾರೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಈ ಹೊಣೆಗಾರಿಕೆ ಕೊಟ್ಟಿದ್ದಾರೆ. ಮುಂಬರುವ ಚುನಾವಣೆ ಅತ್ಯಂತ ಮಹತ್ವದ್ದು’ ಎಂದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಸಚಿವ ಸ್ಥಾನದ ಬದಲು ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇದು ಸಚಿವ ಸ್ಥಾನಕ್ಕಿಂತಲೂ ದೊಡ್ಡ ಹುದ್ದೆ ಮತ್ತು ಜವಾಬ್ದಾರಿ. ರಾಜ್ಯದಲ್ಲಿ 33 ಮಂದಿ ಸಚಿವರಿದ್ದಾರೆ. ಆದರೆ, ಪ್ರಚಾರ ಸಮಿತಿ ಜವಾಬ್ದಾರಿ ಒಬ್ಬನದ್ದೇ. ಹೀಗಾಗಿ, ಸಚಿವ ಸ್ಥಾನ ಸಿಗಲಿಲ್ಲವೆಂಬ ಅಸಮಾಧಾನವಿಲ್ಲ’ ಎಂದು ಸಮರ್ಥನೆ ನೀಡಿದರು.

ಕೇಂದ್ರದಿಂದ ಸುಳ್ಳು ಪ್ರಚಾರ: ‘ಕೇಂದ್ರ ಬಿಜೆಪಿ ನಾಯಕರ ಮಾತುಗಳು ಭಾಷಣಗಳಿಗಷ್ಟೆ ಸೀಮಿತವಾಗಿದೆ. ಬಡವರ, ರೈತರ ಸಮಸ್ಯೆಗಳು ಪರಿಹಾರವಾಗಿಲ್ಲ. ಸುಳ್ಳು ಪ್ರಚಾರ ಮಾಡಿ, ಗೊಂದಲ ಸೃಷ್ಟಿಸಿದ್ದಾರೆ. ಭ್ರಷ್ಟಾಚಾರ, ಲೂಟಿ ಎಲ್ಲವನ್ನೂ ಜನ ಅರಿತಿದ್ದಾರೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರದ ನಡೆಯ ಬಗ್ಗೆ ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳು ಆತಂಕ ವ್ಯಕ್ತಪಡಿಸಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆಯೇ ಎಚ್ಚರಿಸಿದ್ದರು. ಬಿಜೆಪಿಯವರು ಸಂಸತ್ತನ್ನೇ ಲಘುವಾಗಿ ಪರಿಗಣಿಸಿದ್ದಾರೆ. ಲೋಕಪಾಲದಂಥ ಸಂಸ್ಥೆಯ ಬಗ್ಗೆಯೇ ಧ್ವನಿ ಎತ್ತಲಿಲ್ಲ. ಈ ಎಲ್ಲದರ ವಿರುದ್ಧ ಪಕ್ಷ ಹೋರಾಟ ನಡೆಸಿದೆ. ಚುನಾವಣಾ ಪ್ರಚಾರಕ್ಕೆ ತಂತ್ರಗಾರಿಕೆ ರೂಪಿಸುತ್ತೇವೆ. ಕಾಂಗ್ರೆಸ್ ತತ್ವ, ಸಿದ್ಧಾಂತಗಳನ್ನು ಜನರಿಗೆ ತಲುಪಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT