ಭಾನುವಾರ, ಆಗಸ್ಟ್ 25, 2019
20 °C

ದೆಹಲಿಗೆ ಹೋಗಬೇಡಿ, ಪ್ರವಾಹ ಸ್ಥಿತಿ ಗಮನಿಸಿ: ಯಡಿಯೂರಪ್ಪಗೆ ಎಚ್‌.ಕೆ.ಪಾಟೀಲ ಸಲಹೆ

Published:
Updated:

ಬೆಂಗಳೂರು: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಯಲ್ಲಿ ಪ್ರವಾಹ ಸ್ಥಿತಿ ತಲೆದೋರಿದೆ. ನೀವೀಗ ದೆಹಲಿಗೆ ಹೋಗುವ ಬದಲು ರಾಜ್ಯದ ಪ್ರವಾಹಪೀಡಿತ ಪ್ರದೇಶಗಳತ್ತ ಧಾವಿಸಿ ಪರಿಸ್ಥಿತಿ ಅವಲೋಕಿಸಬೇಕು ಎಂದು ಕಾಂಗ್ರೆಸ್ ನಾಯಕ ಎಚ್‌.ಕೆ.ಪಾಟೀಲ ಯಡಿಯೂರಪ್ಪ ಅವರಿಗೆ ಪತ್ರಬರೆದು ಆಗ್ರಹಿಸಿದ್ದಾರೆ.

ಕೃಷ್ಣಾ ಕೊಳ್ಳದ ಹಿಪ್ಪರಗಿ, ಅಲಮಟ್ಟಿ, ನಾರಾಯಣಪುರ, ಗೂಗಲ್ ಜಲಾಶಯಗಳು ತುಂಬಿವೆ. ಜುರಾಲಾ ಹಿನ್ನೀರಿನಿಂದಲೂ ಕರ್ನಾಟಕದ ಗಡಿಭಾಗದ ಪ್ರದೇಶ ಜಲಾವೃತವಾಗುವ ಭೀತಿ ಎದುರಾಗಿದೆ. ಕೃಷ್ಣಾ ನದಿಗೆ 2.3 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ ಎಂದು ಹೇಳಿರುವ ಪಾಟೀಲ್ ಸಂತ್ರಸ್ತ ಗ್ರಾಮಗಳ ಪಟ್ಟಿಯನ್ನು ನೀಡಿದ್ದಾರೆ.

ಮಳೆಯಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಏರುತ್ತಿರುವ ಕಾರಣ ಸಾಕಷ್ಟು ಸೇತುವೆಗಳು ಮುಳುಗಿವೆ. ಸಂಚಾರ ಸ್ಥಗಿತಗೊಂಡಿದೆ ಎಂದು ಈಗಾಗಲೇ ಮುಳುಗಡೆಯಾಗಿರುವ ಮತ್ತು ಮುಳುಗಡೆ ಭೀತಿ ಎದುರಿಸುತ್ತಿರುವ ಸೇತುವೆಗಳ ಪಟ್ಟಿ ನೀಡಿದ್ದಾರೆ.

ಇಷ್ಟೆಲ್ಲಾ ಗಂಭೀರ ಪರಿಸ್ತಿತಿ ಇದ್ದರೂ ಸಮರೋಪಾದಿಯಲ್ಲಿ ತುರ್ತು ಪರಿಹಾರ ಕಾರ್ಯಗಳ ನಡೆಯುತ್ತಿಲ್ಲ. ತಾವು ದೆಹಲಿ ಪ್ರವಾಸ ರದ್ದುಗೊಳಿಸಿ, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು. ಪ್ರಧಾನಿಯವರೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಒತ್ತಾಯಿಸಿ ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

 

 

Post Comments (+)