ಶಕ್ತಿಸೌಧದಲ್ಲಿ ದಲ್ಲಾಳಿಗಳದ್ದೇ ಕಾರುಬಾರು

7
ದುಂದುವೆಚ್ಚಕ್ಕೆ ಕಡಿವಾಣ ಹಾಕಿ: ಎಚ್‌.ವಿಶ್ವನಾಥ್‌ ಆಗ್ರಹ

ಶಕ್ತಿಸೌಧದಲ್ಲಿ ದಲ್ಲಾಳಿಗಳದ್ದೇ ಕಾರುಬಾರು

Published:
Updated:

ಬೆಂಗಳೂರು: ‘ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ದಲ್ಲಾಳಿಗಳೇ ತಿರುಗಾಡುತ್ತಾರೆ. ಗ್ರಾಮ ಲೆಕ್ಕಿಗರ ವರ್ಗಾವಣೆ ಆದೇಶಕ್ಕೆ ವಿಧಾನಸೌಧದಲ್ಲೇ ಸಹಿ ಬೀಳುತ್ತದೆ. ಇದು ಆಡಳಿತ ವಿಕೇಂದ್ರೀಕರಣವೇ’ ಎಂದು ಜೆಡಿಎಸ್‌ ಶಾಸಕ ಎಚ್‌.ವಿಶ್ವನಾಥ್‌ ಕಟುವಾಗಿ ಪ್ರಶ್ನಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ‘ಶಕ್ತಿ ಕೇಂದ್ರಕ್ಕೆ ಸಾಮಾನ್ಯ ಜನರು ಬರುತ್ತಿಲ್ಲ. ವರ್ಗಾವಣೆ, ಅನುದಾನ ಹಾಗೂ ಅಮಾನತು ವಿಷಯಗಳ ಕಡತಗಳನ್ನು ಹಿಡಿದುಕೊಂಡವರೇ ಇಲ್ಲಿ ಸುತ್ತಾಡುತ್ತಿರುತ್ತಾರೆ’ ಎಂದರು.

‘ವಿಧಾನಸೌಧ, ವಿಕಾಸಸೌಧ ಹಾಗೂ ಎಂ.ಎಸ್‌.ಬಿಲ್ಡಿಂಗ್‌ನಲ್ಲಿ ಜನರ ಕೆಲಸಗಳು ನಡೆಯುತ್ತಿಲ್ಲ. ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಧ್ಯಾಹ್ನ 12ರ ಬಳಿಕ ಇವುಗಳ ಗೇಟ್‌ ಬಂದ್‌ ಮಾಡಿ ಪರಿಶೀಲನೆ ನಡೆಸಬೇಕು. ಇಲ್ಲೇನು ನಡೆಯುತ್ತಿದೆ ಎಂಬುದು ಅವರಿಗೆ ಗೊತ್ತಾಗುತ್ತದೆ. ಮಧ್ಯಾಹ್ನ 12ರ ಬಳಿಕ ಎಂ.ಎಸ್‌.ಬಿಲ್ಡಿಂಗ್‌ ಶಾಪಿಂಗ್ ಕಾಂಪ್ಲೆಕ್ಸ್‌ನಂತಾಗುತ್ತದೆ. ಅಲ್ಲಿ ಚಡ್ಡಿಯಿಂದ ಹಿಡಿದು ಎಲ್ಲ ತರಹದ ವಸ್ತುಗಳು ಸಿಗುತ್ತವೆ. ಅಲ್ಲಿನ ನೌಕರರು ಖರೀದಿಯಲ್ಲಿ ಮಗ್ನರಾಗಿರುತ್ತಾರೆ’ ಎಂದರು.

ಸಮಾಜ ಕಲ್ಯಾಣ ಇಲಾಖೆಯನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳು ಎಂದು ನಾಲ್ಕು ಭಾಗಗಳಾಗಿ ವಿಭಜಿಸಿದ್ದೇವೆ. ನಾಲ್ವರು ಕಾರ್ಯದರ್ಶಿಗಳು, ನಾಲ್ವರು ಆಯುಕ್ತರು, ನಾಲ್ಕು ನಿರ್ದೇಶಕರು ಹಾಗೂ ಅವರ ಕೈಕೆಳಗೆ ಹತ್ತಾರು ಅಧಿಕಾರಿಗಳು ಇಲಾಖೆಯಲ್ಲಿದ್ದಾರೆ. ವಿದ್ಯಾರ್ಥಿ ವೇತನ ವಿತರಣೆ, ಶುಲ್ಕ ಹಾಗೂ ಹಾಸ್ಟೆಲ್‌ಗಳ ಮೇಲ್ವಿಚಾರಣೆಯನ್ನಷ್ಟೇ ಈ ಅಧಿಕಾರಿಗಳು ಮಾಡುತ್ತಾರೆ. ಈ ಕೆಲಸಕ್ಕೆ ಐಎಎಸ್‌ ಹಾಗೂ ಕೆಎಎಸ್‌ ಅಧಿಕಾರಿಗಳು ಬೇಕಾ. ಇದು ತೆರಿಗೆದಾರರಿಗೆ ಮಾಡುವ ಮೋಸವಲ್ಲವೇ’ ಎಂದು ಅವರು ಪ್ರಶ್ನಿಸಿದರು.

‘ಕೆಲವು ಶಾಸನಗಳನ್ನು ಅನುಷ್ಠಾನ ಮಾಡಲು ಯೋಗ್ಯವಾಗಿಲ್ಲ. ಇವುಗಳನ್ನು ಮಾರ್ಪಾಡು ಮಾಡಬೇಕಿದೆ. ಇದಕ್ಕಾಗಿ 15 ದಿನಗಳ ವಿಶೇಷ ಅಧಿವೇಶನ ಕರೆಯಬೇಕು’ ಎಂದು ಅವರು ಆಗ್ರಹಿಸಿದರು. ‘ರಾಜ್ಯದಲ್ಲಿ 23 ವಿಶ್ವವಿದ್ಯಾಲಯಗಳಿದ್ದು, 10 ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳಿಲ್ಲ. ನೇಮಕಾತಿ ಹಾಗೂ ಕಾಮಗಾರಿ ನಡೆಸುವ ಅಧಿಕಾರ ಕಿತ್ತು ಹಾಕಿದರೆ ಇಲ್ಲಿಗೆ ಬರಲು ಪೈಪೋಟಿ ನಡೆಸುವವರ ಸಂಖ್ಯೆ ಕಡಿಮೆಯಾಗುತ್ತದೆ’ ಎಂದರು.

‘ಆಡಳಿತ ವಿಕೇಂದ್ರೀಕರಣ ಆಗಬೇಕಿತ್ತು. ಆದರೆ, ಎಲ್ಲ ಅಧಿಕಾರಗಳನ್ನು ನಾವೇ ಇಟ್ಟುಕೊಂಡಿದ್ದೇವೆ. ಹಸು, ಸೈಟ್‌, ಮನೆ ವಿತರಣೆ, ಫಲಾನುಭವಿಗಳ ಆಯ್ಕೆ... ಹೀಗೆ ಎಲ್ಲ ಕೆಲಸಗಳನ್ನು ನಾವೇ ಮಾಡುತ್ತಿದ್ದೇವೆ. ಹಾಗಿದ್ದರೆ ಗ್ರಾಮ ಪಂಚಾಯಿತಿಗಳು ಇರುವುದು ಏಕೆ’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !