‘ರಾಜಕೀಯ ವ್ಯವಸ್ಥೆ ಸರಿಪಡಿಸಲಾಗದಷ್ಟು ಕೆಟ್ಟಿದೆ’

7
‘ಅಥೆನ್ಸ್‌ ರಾಜ್ಯಾಡಳಿತ’ ಪುಸ್ತಕ ಬಿಡುಗಡೆ ಸಮಾರಂಭ

‘ರಾಜಕೀಯ ವ್ಯವಸ್ಥೆ ಸರಿಪಡಿಸಲಾಗದಷ್ಟು ಕೆಟ್ಟಿದೆ’

Published:
Updated:
Deccan Herald

ಬೆಂಗಳೂರು: ‘ದೇಶದ ರಾಜಕೀಯ ವ್ಯವಸ್ಥೆ ಅತ್ಯಂತ ಹದಗೆಟ್ಟಿದ್ದು, ಅದನ್ನು ಸರಿಪಡಿಸಲಾಗದ ಪರಿಸ್ಥಿತಿಗೆ ತಲುಪಿದ್ದೇವೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ವಿಷಾದಿಸಿದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌. ವಿಶ್ವನಾಥ್‌ ಅವರ ‘ಅಥೆನ್ಸ್‌ ರಾಜ್ಯಾಡಳಿತ’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಮೂರ್ನಾಲ್ಕು ದಶಕಗಳಿಂದ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ ಎಂದು ಅಭಿಪ್ರಾಯ‍ಪಟ್ಟರು.

‘ನಾವು ರಾಜಕೀಯಕ್ಕೆ ಪ್ರವೇಶಿಸಿದಾಗ ಜನ ಏನಂ‌ದುಕೊಳ್ಳುವರೊ ಎಂಬ ಅಳುಕಿನಿಂದಲೇ ಇರುತ್ತಿದ್ದೆವು. ಯಾರಾದರೂ ಟೀಕೆ ಮಾಡಿದರೆ ಪುನಃ ಅವರ ಕಣ್ಣಿಗೆ ಬೀಳದೆ ತಪ್ಪಿಸಿಕೊಂಡು ತಿರುಗುತ್ತಿದ್ದೆವು. ಈಗಿನವರಿಗೆ ಅಂತಹ ಭಯ– ಅಂಜಿಕೆ ಯಾವುದೂ ಇಲ್ಲ. ವಿಶ್ವನಾಥ್‌ ಅವರ ಪುಸ್ತಕ ನಮ್ಮ ರಾಜಕೀಯ ವ್ಯವಸ್ಥೆಯನ್ನು ಸ್ವಲ್ಪಮಟ್ಟಿಗಾದರೂ ಸುಧಾರಿಸಲು ನೆರವಾಗಲಿ’ ಎಂದು ಆಶಿಸಿದರು.

ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ‘ನಮ್ಮಲ್ಲಿ ಪ್ರಜಾಪ್ರಭುತ್ವದ ಮೂಲತತ್ವಗಳನ್ನು ಉಳಿಸುವಂತಹ ಚರ್ಚೆಗಳು ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ನಡೆಯಬೇಕಿದೆ’ ಎಂದು ಅವರು ನುಡಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ವಿಶ್ವನಾಥ್, ‘ಅಥೆನ್ಸ್‌ನಲ್ಲಿ 20 ದಿನ ತಂಗಿದ್ದು ಪುಸ್ತಕ ಬರೆದಿದ್ದೇನೆ. ಅಲ್ಲಿ ನಮಗಿಂತಲೂ ಹೆಚ್ಚು ಮೂಢನಂಬಿಕೆಗಳಿವೆ. ಗೂಬೆಯನ್ನು ಪೂಜಿಸಲಾಗುತ್ತದೆ. ಕಲೆ, ಸಂಸ್ಕೃತಿ, ಶಿಕ್ಷಣ, ರಾಜಕಾರಣ ಮೇಳೈಸಿದ ಆ ದೇಶ 10 ವರ್ಷಗಳ ಹಿಂದೆಯೇ ನೋಟು ಅಮಾನ್ಯ ಮಾಡಿ ಸಂಕಷ್ಟಕ್ಕೆ ಸಿಲುಕಿದೆ’ ಎಂದು ಹೇಳಿ ಪ್ರಧಾನಿ ನರೇಂದ್ರ ಮೋದಿ ಅವರ ನೋಟು ಅಮಾನ್ಯೀಕರಣ ತೀರ್ಮಾನವನ್ನು ಪರೋಕ್ಷವಾಗಿ ಟೀಕಿಸಿದರು.

‘ಪ್ರಜಾವಾಣಿ’ ಸಹ ಸಂಪಾದಕ ಬಿ.ಎಂ. ಹನೀಫ್‌ ಪುಸ್ತಕ ಕುರಿತು ಮಾತನಾಡಿದರು.

**

ಆಪರೇಷನ್‌ ಕಮಲ: ದೇವೇಗೌಡರ ವ್ಯಂಗ್ಯ

‘ಆಪರೇಷನ್‌ ಕಮಲ ಕಾರ್ಯಾಚರಣೆಯಲ್ಲಿ ಬಿಜೆಪಿಯವರು ಎಷ್ಟರ ಮಟ್ಟಿಗೆ ಸಫಲರಾಗುವರೊ ನೋಡೋಣ’ ಎಂದು ದೇವೇಗೌಡ ವ್ಯಂಗ್ಯವಾಡಿದರು.

ಬಿಬಿಎಂಪಿ ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆ ವೇಳೆ ನಡೆದ ಆಪರೇಷನ್‌ ಕಮಲ ಕಾರ್ಯಾಚರಣೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

‘2008ರಲ್ಲೂ ಆಪರೇಷನ್‌ ಕಮಲ ನಡೆದಿತ್ತು. ಇದು ಅದರ ಮುಂದುವರಿದ ಭಾಗ ಅಷ್ಟೆ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !