ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಎಲ್‌ ಯುದ್ಧವಿಮಾನ ದುಬಾರಿ: ಆರೋಪ ನಿರಾಕರಿಸಿದ ಎಚ್ಎಎಲ್‌

ರಕ್ಷಣಾ ಸಚಿವಾಲಯದ ಲೆಕ್ಕಪರಿಶೋಧನಾ ವರದಿ
Last Updated 19 ಅಕ್ಟೋಬರ್ 2018, 19:44 IST
ಅಕ್ಷರ ಗಾತ್ರ

ಬೆಂಗಳೂರು: ವಿದೇಶಗಳಲ್ಲಿ ನಿರ್ಮಿಸ‌ಲಾಗುವ ಯುದ್ಧ ವಿಮಾನಗಳಿಗಿಂತ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ (ಎಚ್‌ಎಎಲ್‌) ತಯಾರಿಸುವ ಯುದ್ಧ ವಿಮಾನಗಳ ಬೆಲೆ ದುಬಾರಿ ಎಂದು ರಕ್ಷಣಾ ಸಚಿವಾಲಯದ ಲೆಕ್ಕಪರಿಶೋಧನಾ ವರದಿ ಹೇಳಿದೆ.

ರಷ್ಯಾ ಸಹಭಾಗಿತ್ವದಲ್ಲಿ ಎಚ್‌ಎಎಲ್‌ ತಯಾರಿಸುವ ಎಸ್‌ಯು–30ಎಂಕೆಐ ಯುದ್ಧ ವಿಮಾನಗಳ ಬೆಲೆ ರಷ್ಯಾದಲ್ಲಿ ತಯಾರಾಗುವ ವಿಮಾನಗಳಿಗಿಂತ ₹150 ಕೋಟಿಯಷ್ಟು ದುಬಾರಿ ಎಂದು ಇಂಗ್ಲಿಷ್‌ ದೈನಿಕ ‘ಹಿಂದೂಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ.

ರಕ್ಷಣಾ ಸಚಿವಾಲಯದ ಲೆಕ್ಕ ಪರಿಶೋಧನಾ ವರದಿಯ ಪ್ರತಿ ತನಗೆ ಲಭ್ಯವಾಗಿದೆ ಎಂದು ಪತ್ರಿಕೆ ಹೇಳಿದೆ.

ರಷ್ಯಾ ನಿರ್ಮಿತ ಎಸ್‌ಯು–30ಎಂಕೆಐ ಯುದ್ಧ ವಿಮಾನದ ಮೂಲದರ ₹260.77 ಕೋಟಿಯಾದರೆ, ಎಚ್‌ಎಎಲ್‌ನಲ್ಲಿ ತಯಾರಾಗುವ ಅದೇ ವಿಮಾನಕ್ಕೆ ₹417.69 ಕೋಟಿ ತೆರಬೇಕಾಗುತ್ತದೆ. ಪ್ರತಿ ವಿಮಾನಕ್ಕೆ ₹150 ಕೋಟಿಯಷ್ಟು ಹೆಚ್ಚುವರಿ ಹಣ ತೆರಬೇಕಾಗುತ್ತದೆ ಎಂದು ದಾಖಲೆಗಳು ಹೇಳುತ್ತಿರುವುದಾಗಿ ವರದಿ ಮಾಡಿದೆ.

ಅದೇ ರೀತಿ ಬ್ರಿಟಿಷ್‌ ಏರೋಸ್ಪೇಸ್‌ ಮತ್ತು ಎಚ್‌ಎಎಲ್‌ ನಿರ್ಮಿಸಿದ ಹಾಕ್‌ ತರಬೇತಿ ಯುದ್ಧ ವಿಮಾನಗಳ ಬೆಲೆಗಳಲ್ಲೂ ಭಾರಿ ವ್ಯತ್ಯಾಸ ಕಂಡುಬಂದಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2004ರಲ್ಲಿ ಬ್ರಿಟನ್‌ ಕಂಪನಿಯಿಂದ 62 ಹಾಕ್‌ ಯುದ್ಧ ವಿಮಾನಗಳನ್ನು ಭಾರತ ಖರೀದಿಸಿತ್ತು. ಆ ಪೈಕಿ 24 ಸಿದ್ಧ ವಿಮಾನಗಳನ್ನು ಬ್ರಿಟನ್‌ನಿಂದಲೇ ತರಲಾಗಿತ್ತು. ಉಳಿದ ವಿಮಾನಗಳನ್ನು ಎಚ್‌ಎಎಲ್‌ ತಯಾರಿಸಿತ್ತು.

ಬ್ರಿಟನ್‌ ಕಂಪನಿ ತಯಾರಿಸಿದ ಪ್ರತಿ ವಿಮಾನದ ದರ ₹78 ಕೋಟಿಯಾದರೆ, ಎಚ್‌ಎಎಲ್‌ ₹88 ಕೋಟಿ ಬೆಲೆ ನಿಗದಿಪಡಿಸಿತ್ತು. ನಂತರ ಅದು 2010ರಲ್ಲಿ ₹98 ಕೋಟಿ ಮತ್ತು 2016ರಲ್ಲಿ ₹153 ಕೋಟಿಗೆ ಏರಿಕೆಯಾಗಿತ್ತು.

ಫ್ರಾನ್ಸ್‌ನ ಡಾಸೋ ಮತ್ತು ಬ್ರಿಟನ್‌ನ ಬ್ರಿಟಿಷ್‌ ಏರೋಸ್ಪೇಸ್‌ ಕಂಪನಿಗಳಿಗೆ ಹೋಲಿಸಿದರೆ ಎಚ್‌ಎಎಲ್‌ನಲ್ಲಿ ವಿಮಾನ ತಯಾರಿಕೆಗೆ ತಗಲುವ ಮಾನವ ಗಂಟೆಗಳ ಅವಧಿ 2.7ರಷ್ಟು ಹೆಚ್ಚು. ಅದಕ್ಕೆ ಅನುಗುಣವಾಗಿ ಬೆಲೆ ಕೂಡ ಸಹಜವಾಗಿ ಹೆಚ್ಚಾಗುತ್ತದೆ ಎಂದು ವರದಿ ಹೇಳಿದೆ.

**

ಎಚ್‌ಎಎಲ್‌ನಲ್ಲಿ ತಯಾರಾಗುವ ಯುದ್ಧ ವಿಮಾನಗಳ ದರ ಮೂಲ ಕಂಪನಿಯಿಂದ ನೇರವಾಗಿ ಖರೀದಿಸುವುದಕ್ಕಿಂತ ಹೆಚ್ಚು.

-ರಕ್ಷಣಾ ಇಲಾಖೆ

**

ಆರೋಪ ನಿರಾಕರಿಸಿದ ಎಚ್ಎಎಲ್‌

ಈ ವರದಿಗೆ ಸಂಬಂಧಿಸಿದ ವಿಶ್ಲೇಷಣೆಗಳನ್ನು ಎಚ್‌ಎಎಲ್‌ ಸಾರಾಸಗಟಾಗಿ ತಳ್ಳಿ ಹಾಕಿದ್ದು, ಸಮಜಾಯಿಷಿ ನೀಡಿದೆ.

2005ರಿಂದ ಹಾಕ್‌ ಯುದ್ಧ ವಿಮಾನಗಳ ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ ಬೆಲೆ ಏರಿಕೆ ಸಹಜವಾಗಿದೆ. ಕೇವಲ ದರಗಳನಷ್ಟೇ ಅಲ್ಲ, ದೇಶದಲ್ಲಿ ತಯಾರಿಸಲಾಗುವ ಯುದ್ಧ ವಿಮಾನಗಳ ಬಾಳಿಕೆ ಮತ್ತು ಇತರ ಲಾಭಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್‌ಎಎಲ್‌ ವಕ್ತಾರರು ಹೇಳಿದ್ದಾರೆ.

ಯುದ್ಧ ವಿಮಾನ ತಯಾರಿಕೆ ಪ್ರಕ್ರಿಯೆಯಲ್ಲಿ ಎಚ್‌ಎಎಲ್‌ ಜತೆ ಹಲವು ಸಣ್ಣಪುಟ್ಟ ಪಾಲುದಾರ ಕಂಪನಿಗಳಿವೆ. ಕಚ್ಚಾವಸ್ತು, ಬಿಡಿಭಾಗ ಪೂರೈಕೆ ವಿಳಂಬದಿಂದಾಗಿ ಉತ್ಪಾದನಾ ಸಮಯ ಮತ್ತು ವೆಚ್ಚ ಸಹಜವಾಗಿ ಹಿಗ್ಗುತ್ತದೆ ಎಂದು ಸಂಸ್ಥೆಯ ವಕ್ತಾರರು ಸ್ಪಷ್ಪಡಿಸಿದ್ದಾರೆ.

ಭಾರತೀಯ ವೈಮಾನಿಕ ಉದ್ಯಮ ಕ್ಷೇತ್ರ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಬೆಲೆ ಹೆಚ್ಚಳ ಅಂಶವನ್ನು ಮಾತ್ರ ಪರಿಗಣಿಸದೆ, ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಸಕಾರಾತ್ಮಕ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು ಎಂದು ಎಚ್‌ಎಎಲ್‌ ವಕ್ತಾರರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT