ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ದಶಕವಾದರೂ ಆರಂಭವಾಗದ ಹಂಪಿ ಬೈ ನೈಟ್‌

ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ₹11 ಕೋಟಿ ಯೋಜನೆ ನನೆಗುದಿಗೆ
Last Updated 23 ಸೆಪ್ಟೆಂಬರ್ 2019, 19:31 IST
ಅಕ್ಷರ ಗಾತ್ರ

ಹೊಸಪೇಟೆ: ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರುವ ಮಹತ್ವಕಾಂಕ್ಷಿ ಹಂಪಿ ಬೈ ನೈಟ್‌ ಯೋಜನೆಗೆ ಚಾಲನೆ ಕೊಟ್ಟು ದಶಕವಾದರೂ ಅದು ಕಾರ್ಯಗತಗೊಂಡಿಲ್ಲ.

2008–09ರಲ್ಲಿ ರೂಪಿಸಿದ ಈ ಯೋಜನೆಗೆ ಅದೇ ವರ್ಷ ರಾಜ್ಯ ಸರ್ಕಾರ ₹11 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ ಆರಂಭದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಆರಂಭಿಸಿತು.

ಯೋಜನೆಗೆ ಗುರುತಿಸಲಾಗಿದ್ದ ಪ್ರಮುಖ ಸ್ಮಾರಕಗಳ ಬಳಿ ವಿದ್ಯುದ್ದೀಪಗಳನ್ನು ಅಳವಡಿಸಿ, ಪ್ರಯೋಗ ಕೂಡ ನಡೆಸಿತ್ತು. ಬಳಿಕ ಅದನ್ನು ಹೇಗೆ ಕಾರ್ಯಗತಗೊಳಿಸಬೇಕು. ಯಾವ ಸಂಸ್ಥೆಗೆ ವಹಿಸಬೇಕು ಎನ್ನುವುದರ ಬಗ್ಗೆ ಗೊಂದಲ ಉಂಟಾಗಿ ಯೋಜನೆ ನನೆಗುದಿಗೆ ಬಿದ್ದಿದೆ.

ಎರಡು ವರ್ಷಗಳ ಹಿಂದೆ ಪ್ರವಾಸೋದ್ಯಮ ಇಲಾಖೆಯ ಅಂದಿನ ಕಾರ್ಯದರ್ಶಿ ನವೀನ್‌ ರಾಜ್‌ ಸಿಂಗ್‌ ಅವರು ವಿಶೇಷ ಕಾಳಜಿ ವಹಿಸಿ, ಸ್ಥಳ ಪರಿಶೀಲನೆ ನಡೆಸಿ, ಅದನ್ನು ಆರಂಭಿಸಲು ಮುಂದಾಗಿದ್ದರು. ಆದರೆ, ಇಲಾಖೆಯಿಂದ ಅವರು ವರ್ಗಾವಣೆಗೊಂಡ ಬಳಿಕ ಯೋಜನೆ ಪ್ರಗತಿ ಕಾಣಲಿಲ್ಲ.

‘ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ ಹಂಪಿಗೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಅದರಿಂದ ನೂರಾರು ಕಲಾವಿದರಿಗೆ ಉದ್ಯೋಗಾವಕಾಶಗಳು ಸಿಗುತ್ತವೆ. ಸ್ಥಳೀಯವಾಗಿ ಪ್ರವಾಸೋದ್ಯಮ ಬೆಳೆಯುವ ಸಾಧ್ಯತೆ ಕೂಡ ಇದೆ. ಆದರೆ, ಅದರ ಬಗ್ಗೆ ನಿರಾಸಕ್ತಿ ಹೊಂದಿರುವ ಕಾರಣ ಯೋಜನೆ ಕುಂಠಿತಗೊಂಡಿದೆ’ ಸ್ಥಳೀಯ ಕಲಾವಿದರು, ಲೇಖಕರು.

‘ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಹೀಗಿದ್ದರೂ ಅದರ ಅನುಷ್ಠಾನಕ್ಕೆ ನಿರಾಸಕ್ತಿ ತೋರಿಸುತ್ತಿರುವುದು ಸರಿಯಲ್ಲ. ಹತ್ತು ವರ್ಷ ಕಳೆದರೂ ಒಂದು ಯೋಜನೆ ಜಾರಿಗೆ ಬಂದಿಲ್ಲ ಎಂದರೆ ನಮ್ಮ ಅಧಿಕಾರಷಾಹಿ ಎಷ್ಟು ನಿಷ್ಕ್ರಿಯವಾಗಿದೆ ಎಂಬುದು ಗೊತ್ತಾಗುತ್ತದೆ’ ಎನ್ನುತ್ತಾರೆ ಹಿರಿಯ ರಂಗಕರ್ಮಿ ಪಿ. ಅಬ್ದುಲ್ಲಾ.

‘ಕೆಂಡದಂತಹ ಬಿಸಿಲಿನಲ್ಲಿ ಯಾರು ಹಂಪಿ ನೋಡಲು ಇಷ್ಟಪಡುವುದಿಲ್ಲವೋ ಅಂತಹವರಿಗಾಗಿ ರಾತ್ರಿ ವೇಳೆ ವೀಕ್ಷಣೆಗಾಗಿ ಈ ಯೋಜನೆ ರೂಪಿಸಿರುವಂತಹದ್ದು. ದೇಶ–ವಿದೇಶದಲ್ಲಿನ ಶ್ರೀಮಂತ ವರ್ಗದವರನ್ನು ಆಕರ್ಷಿಸುವ ಉದ್ದೇಶವೂ ಇದರ ಹಿಂದಿದೆ. ಇದು ಜಾರಿಗೆ ಬಂದರೆ ದೊಡ್ಡ ಮಟ್ಟದಲ್ಲಿ ಪ್ರವಾಸೋದ್ಯಮ ಬೆಳೆಯುತ್ತದೆ. ಆದರೆ, ಇಚ್ಛಾಶಕ್ತಿ ಕೊರತೆಯಿಂದ ನನೆಗುದಿಗೆ ಬಿದ್ದಿದೆ’ ಎಂದು ಜನಸಂಗ್ರಾಮ ಪರಿಷತ್ತಿನ ಮುಖಂಡ ಶಿವಕುಮಾರ ಮಾಳಗಿ ಪ್ರತಿಕ್ರಿಯಿಸಿದರು.

‘ಯೋಜನೆಯ ಭಾಗವಾಗಿ ಈಗಾಗಲೇ ಹಂಪಿ ಸ್ಮಾರಕಗಳಿಗೆ ವಿದ್ಯುದ್ದೀಪಗಳನ್ನು ಅಳವಡಿಸಲಾಗಿದೆ. ಆದರೆ, ಅವುಗಳನ್ನು ಉತ್ಸವದ ಸಂದರ್ಭದಲ್ಲಷ್ಟೇ ಹಾಕಲಾಗುತ್ತಿದೆ. ಸೂಕ್ತ ಯೋಜನೆ ರೂಪಿಸಿ ಶಾಶ್ವತವಾಗಿ ಇರುವಂತೆ ನೋಡಿಕೊಳ್ಳಬೇಕು’ ಎಂದು ಸಾಹಿತಿ ಮೃತ್ಯುಂಜಯ ರುಮಾಲೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT