ಶೋಧನಾ ಸಮಿತಿಯಲ್ಲಿ ಜಟಾಪಟಿ: ಮಲ್ಲಿಕಾ ಘಂಟಿ ಅರ್ಜಿ ವಿಚಾರದಲ್ಲಿ ತಕರಾರು

7
ಹಂಪಿ ಕನ್ನಡ ವಿ.ವಿ. ಕುಲಪತಿ ಆಯ್ಕೆ ಪ್ರಕ್ರಿಯೆಗೆ ಹಿನ್ನಡೆ

ಶೋಧನಾ ಸಮಿತಿಯಲ್ಲಿ ಜಟಾಪಟಿ: ಮಲ್ಲಿಕಾ ಘಂಟಿ ಅರ್ಜಿ ವಿಚಾರದಲ್ಲಿ ತಕರಾರು

Published:
Updated:
Prajavani

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಆಯ್ಕೆ ಪ್ರಕ್ರಿಯೆಗೆ ರಚಿಸಲಾಗಿರುವ ಶೋಧನಾ ಸಮಿತಿಯಲ್ಲಿ ಒಮ್ಮತ ಮೂಡದ ಕಾರಣ ನೂತನ ಕುಲಪತಿ ಆಯ್ಕೆಗೆ ಹಿನ್ನಡೆ ಉಂಟಾಗಿದೆ.

ಸಮಿತಿಯು ಮೂವರ ಹೆಸರನ್ನು ಅಂತಿಮಗೊಳಿಸಿ ಡಿ. 26ಕ್ಕೆ ರಾಜ್ಯಪಾಲರಿಗೆ ಸಲ್ಲಿಸಬೇಕಿತ್ತು. ಆದರೆ, ಆ ಸಭೆಯಲ್ಲಿ ಒಮ್ಮತ ಮೂಡದ ಕಾರಣ ಜ. 7ಕ್ಕೆ ಮತ್ತೆ ಸಭೆ ಕರೆಯಲಾಗಿದೆ.

ವಾಸ್ತವವಾಗಿ ಆಗಿದ್ದೇನು?: ರಾಜ್ಯ ಸರ್ಕಾರವು ಕನ್ನಡ ವಿ.ವಿ. ನೂತನ ಕುಲಪತಿ ಆಯ್ಕೆಗಾಗಿ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಲು ಡಿ. 15 ಕೊನೆಯ ದಿನವಾಗಿತ್ತು. ಈ ಅವಧಿಯಲ್ಲಿ ಒಟ್ಟು 24 ಅರ್ಜಿಗಳು ಬಂದಿವೆ. ನಿಗದಿತ ದಿನಾಂಕ ಮುಗಿದ ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸಮಿತಿ ಪರಿಗಣಿಸುವಂತಿಲ್ಲ.

ಆದರೆ, ಡಿ. 26ರಂದು ನಡೆದ ಸಭೆಯಲ್ಲಿ, ತಡವಾಗಿ ಅರ್ಜಿ ಸಲ್ಲಿಸಿರುವ ಹಾಲಿ ಕುಲಪತಿ ಮಲ್ಲಿಕಾ ಎಸ್‌. ಘಂಟಿ ಅವರ ಅರ್ಜಿಯನ್ನು ಪರಿಗಣಿಸಬೇಕೆಂದು ಸದಸ್ಯರೊಬ್ಬರು ಪಟ್ಟು ಹಿಡಿದಿದ್ದಾರೆ. ಅದಕ್ಕೆ ಮತ್ತೊಬ್ಬ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಮಲ್ಲಿಕಾ ಘಂಟಿ ಅರ್ಜಿ ವಿಚಾರದಲ್ಲಿ ಸಮಿತಿಯ ಸದಸ್ಯರು ಸಹಮತಕ್ಕೆ ಬಾರದ ಕಾರಣ ಕಾನೂನು ಸಲಹೆ ಪಡೆದು ಮುಂದುವರಿಯುವ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.

‘ಯಾರಾದರೂ ಕುಲಪತಿಯಾಗಿ ಆಯ್ಕೆಯಾಗಲಿ. ಅದು ನಂತರದ ವಿಷಯ. ಆದರೆ, ಯಾರು ಎಷ್ಟೇ ದೊಡ್ಡವರಾಗಿರಲಿ ಅವರು ಸರ್ಕಾರದ ನಿಯಮವನ್ನು ಪಾಲಿಸಬೇಕು. ತಡವಾಗಿ ಅರ್ಜಿ ಸಲ್ಲಿಸಿದ್ದು ಮಲ್ಲಿಕಾ ಘಂಟಿ ಅವರ ತಪ್ಪು. ಅದಕ್ಕೆ ಏನು ಮಾಡಲು ಆಗುವುದಿಲ್ಲ. ಸದಸ್ಯರೊಬ್ಬರು ಅವರ ಪರ ವಕಾಲತ್ತು ಮಾಡುತ್ತಿದ್ದಾರೆ. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೇನೆ. ಇದರಿಂದ ಸಭೆಯಲ್ಲಿ ಒಮ್ಮತ ಮೂಡಲಿಲ್ಲ. ಇದರಿಂದ ಆಯ್ಕೆ ಪ್ರಕ್ರಿಯೆ ವಿಳಂಬವಾಗಿದೆ’ ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದರು.

‘ಈ ಹಿಂದೆ ವಿ.ವಿ.ಯೊಂದರ ಕುಲಪತಿ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ತಡವಾಗಿ ಬಂದ ಅರ್ಜಿಯನ್ನು ಪರಿಗಣಿಸಿ, ಆ ಅರ್ಜಿದಾರರನ್ನೇ ಕುಲಪತಿಯಾಗಿ ಆಯ್ಕೆ ಮಾಡಲಾಗಿತ್ತು. ಕೆಲವರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರಿಂದ, ನ್ಯಾಯಾಲಯವು ಸಮಿತಿಗೆ ಛೀಮಾರಿ ಹಾಕಿತ್ತು. ಹೀಗಿರುವಾಗ ಅಂತಹ ಘಟನೆಗಳು ಮರುಕಳಿಸಬಾರದು. ಅಷ್ಟೇ ಅಲ್ಲ, ಅಂತಿಮವಾಗಿ ನಿಯಮವೆಂದರೆ ಅದು ನಿಯಮ. ಅದನ್ನು ಯಾರೂ ಮೀರಿ ನಡೆಯಬಾರದು’ ಎಂದೂ ಹೇಳಿದರು.

ಕನ್ನಡ ವಿ.ವಿ. ಹಾಲಿ ಕುಲಪತಿ ಮಲ್ಲಿಕಾ ಎಸ್‌. ಘಂಟಿ ಅವರ ಅವಧಿ 2018ರ ಸೆ. 8ರಂದು ಪೂರ್ಣಗೊಂಡಿತು. ರಾಜ್ಯಪಾಲರು ನಾಲ್ಕು ತಿಂಗಳ ವರೆಗೆ ಅಧಿಕಾರದ ಅವಧಿ ವಿಸ್ತರಣೆ ಮಾಡಿದ್ದರು. ಆ ಅವಧಿ ಜ. 7ರಂದು ಕೊನೆಗೊಳ್ಳಲಿದೆ. ಅದೇ ದಿನ ಸಮಿತಿ ಕೂಡ ಸಭೆ ಸೇರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !