ಭಾನುವಾರ, ಡಿಸೆಂಬರ್ 15, 2019
26 °C

ಹಂಪಿ ಉತ್ಸವದ ಕುರಿತು ರಾಜಕಾರಣ ಸಲ್ಲದು: ಸಂಸದ ವಿ.ಎಸ್. ಉಗ್ರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಹಂಪಿ ಉತ್ಸವದ ಕುರಿತು ಯಾವ ಪಕ್ಷದವರೂ ರಾಜಕಾರಣ ಮಾಡಬಾರದು ಎಂದು ಸಂಸದ ವಿ.ಎಸ್. ಉಗ್ರಪ್ಪ ಸಲಹೆ ನೀಡಿದರು.

ಭಿಕ್ಷೆ ಬೇಡಿ ಸರ್ಕಾರಕ್ಕೆ ಹಣ ನೀಡುವುದಾಗಿ ಹೇಳಿರುವ‌ ಬಿಜೆಪಿ ಮುಖಂಡರು 2013ರಲ್ಲೂ ಬರಗಾಲವಿದ್ದಾಗ ಏಕೆ‌ ಉತ್ಸವ ಮಾಡಲಿಲ್ಲ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ‌ ಪ್ರಶ್ನಿಸಿದರು.

ಉತ್ಸವ ನಡೆಸಿದ್ದರೆ ಉಪವಾಸ ಕೂರಲು ನಿರ್ಧರಿಸಿರುವ ಕಲಾವಿದರ ಭಾವನೆಗಳಿಗೆ ಸಹಮತವಿದೆ. ಬರದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಉತ್ಸವ ರೂಪಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿರುವೆ ಎಂದರು.

ನೀರನ್ನು ರಾಷ್ಟ್ರೀಯ ಸಂಪತ್ತು ಎಂದು ಕೇಂದ್ರ ಸರ್ಕಾರ ಘೋಷಿಸಬೇಕು. ಬರಗಾಲಪೀಡಿತ ಜಿಲ್ಲೆಗಳಲ್ಲಿ ಆದ್ಯತೆ‌ ಮೇರೆಗೆ ನೀರು ಪೂರೈಕೆ ಯೋಜನೆಗಳನ್ನು ರೂಪಿಸಬೇಕು. ಇಂಥ ವಿಷಯಗಳ ಕಡೆಗೆ ಬಿಜೆಪಿ ಮುಖಂಡರು ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಹೊಸಪೇಟೆ ಕೊಟ್ಟೂರು ರೈಲು ಸೇವೆ 1995ರಿಂದ ಸ್ಥಗಿತಗೊಂಡಿದೆ. ಅದಕ್ಕೆ ಅಡಚಣೆಯಾಗಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಬಿಜೆಪಿ ಮುಖಂಡರು ಆಗ್ರಹಿಸಲಿ ಎಂದರು.

ತುಂಗಭದ್ರ ಜಲಾಶಯದ ಹೂಳು ತೆಗೆಯುವ‌ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಬಳ್ಳಾರಿ-ಬೆಂಗಳೂರು ನಡುವೆ ರಾಯದುರ್ಗ ತುಮಕೂರು ಹೊಸ ರೈಲು ಮಾರ್ಗವನ್ನು ರೂಪಿಸಬೇಕು. ಆಂದ್ರದಲ್ಲಿ ಮಾರ್ಗ ಪೂರ್ಣಗೊಂಡಿದೆ.‌ ಕರ್ನಾಟಕದಲ್ಲಿಯೂ ಆದರೆ ಜಿಲ್ಲೆಯ‌ ಜನರಿಗೆ ಅನುಕೂಲವಾಗಲಿದೆ ಎಂದರು ‌.

ರಾಜ್ಯ ಸರ್ಕಾರವು ಬರಪೀಡಿತ ನೂರು ತಾಲ್ಲೂಕುಗಳಲ್ಲಿ ಕಾರ್ಯಕ್ರಮ ರೂಪಿಸುತ್ತಿದೆ. ಕೇಂದ್ರವು ಬರ ಪರಿಹಾರವನ್ನು ಸಮರ್ಪಕವಾಗಿ ಕೊಡುತ್ತಿಲ್ಲ ಎಂದು ದೂರಿದ ‌ಅವರು, ಬರಪೀಡಿತ ತಾಲ್ಲೂಕುಗಳಿಗೆ ಭೇಟಿ‌‌ ನೀಡಿರುವ ಬಿಜೆಪಿ ಮುಖಂಡರು ಸಂತ್ರಸ್ತ ತಾಲ್ಲೂಕುಗಳಿಗೆ‌ ವಿಶೇಷ ಅನುದಾನವನ್ನು ಕೇಂದ್ರದಿಂದ ‌ಕೊಡಿಸಲಿ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಯಾಗಿದ್ದಾಗ ಬಿ.ಎಸ್.ಯಡಿಯೂರಪ್ಪ‌ ವಿರೋಧ ಪಕ್ಷದ ನಾಯಕರಿಗೆ ಮಾಹಿತಿ ಕೊಡಬಾರದು ಎಂದು ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದರು.‌ಸಮ್ಮಿಶ್ರ ಸರ್ಕಾರ ಹಾಗೆ ಮಾಡಿಲ್ಲ. ಬರಗಾಲದ ಕುರಿತು ಮಾಹಿತಿ‌ ಪಡೆದು ಕೇಂದ್ರದ ಗಮನ ಸೆಳೆಯುವ‌ ಬದಲು, ವಿಧಾನಮಂಡಲ‌ ಅಧಿವೇಶನ ಹತ್ತಿರ ಬಂದಾಗ ಬರ ಪೀಡಿತ ತಾಲ್ಲೂಕುಗಳಿಗೆ ಭೇಟಿ ನೀಡುವ‌ ನಾಟಕ ಮಾಡಬಾರದು ಎಂದು ಟೀಕಿಸಿದರು.

ಜಿಲ್ಲೆಯ ಕಾಂಗ್ರೆಸ್ ಶಾಸಕರಾಗಲಿ,‌‌ ಸರ್ಕಾರಕ್ಕೆ ಬೆಂಬಲ ನೀಡಿರುವ ಎರಡೂ ಪಕ್ಷಗಳ ಬೇರೆ ಜಿಲ್ಲೆಗಳ ಶಾಸಕರಾಗಲಿ ಬಿಜೆಪಿಯ ಆಮಿಷಕ್ಕೆ ಒಳಗಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿರುವ‌ ಕಾಂಗ್ರೆಸ್ನ ಆರೂ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.

ಹಂಪಿಯಲ್ಲಿ ಆಗಬೇಕಾದ ಅಭಿವೃದ್ಧಿ ಮತ್ತು ಮೂಲಸೌಕರ್ಯ ಕಲ್ಪಿಸುವ‌ ಸಂಬಂಧ ವರದಿ ನೀಡುವಂತೆ ಮುಜರಾಯಿ ಮತ್ತು ಪುರಾತತ್ತ್ವ ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವೆ ಎಂದರು.

ಪಾಲಿಕೆ ಸದಸ್ಯ‌ ಬಿ.ಬಸವರಾಜ, ಮುಖಂಡರಾದ ಬಿ.ಎಸ್.ರಾಮಪ್ರಸಾದ್, ಅಸುಂಡಿ‌ ವನ್ನೂರಪ್ಪ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು