ಕಾಡಾನೆ ತಡೆಗೆ ಬಂತು ತೂಗು ಸೌರಬೇಲಿ

7
ರೈಲು ಕಂಬಿ ಬೇಲಿಗಿಂತ ಅಗ್ಗ, ಮಡಿಕೇರಿ, ತಮಿಳುನಾಡಿನಲ್ಲಿ ಯಶಸ್ವಿ

ಕಾಡಾನೆ ತಡೆಗೆ ಬಂತು ತೂಗು ಸೌರಬೇಲಿ

Published:
Updated:

ಮೈಸೂರು: ಆನೆಗಳು ಕಾಡಿನಿಂದ ಹೊರಗೆ ಬರುವುದನ್ನು ತಡೆಯಲು ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಎತ್ತರದ ತೂಗು ಸೌರಬೇಲಿ ಅಳವಡಿಕೆ ಕಾರ್ಯ ಭರದಿಂದ ನಡೆಯುತ್ತಿದೆ. ಒಟ್ಟು 40 ಕಿ.ಮೀ ಉದ್ದದ ಬೇಲಿ ನಿರ್ಮಾಣಕ್ಕೆ ಉದ್ದೇಶಿಸಿದ್ದು, ಸದ್ಯ 16 ಕಿ.ಮೀ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ಈಗಾಗಲೇ ಮಡಿಕೇರಿ ಮತ್ತು ತಮಿಳುನಾಡಿನಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ. ಇದರಿಂದ ಕೇವಲ ಕಾಡಾನೆಗಳು ಮಾತ್ರವಲ್ಲ ಇತರ ವನ್ಯಜೀವಿಗಳೂ ಕಾಡಿನಿಂದ ಹೊರಬರುವುದನ್ನು ತಡೆಯುತ್ತವೆ. ಜತೆಗೆ, ಕಾಡಾನೆ ನಿಯಂತ್ರಣದ ಇತರ ಕ್ರಮಗಳಿಗೆ ಹೋಲಿಸಿದರೆ ಅಗ್ಗವಾಗಿರುವುದರಿಂದ ಬಂಡೀಪುರದಲ್ಲಿ ಅಳವಡಿಸಲಾಗುತ್ತಿದೆ.

ಏನಿದು ತೂಗು ಸೌರಬೇಲಿ?: ಸಾಂಪ್ರದಾಯಿಕ ಸೌರಬೇಲಿಗಿಂತ ತೂಗು ಸೌರಬೇಲಿಗಳು ವಿಭಿನ್ನ ಎನಿಸಿವೆ. 17 ಅಡಿ ಎತ್ತರದ ಕಂಬದಿಂದ ತಂತಿಗಳನ್ನು ಉದ್ದಕ್ಕೂ ಇಳಿ ಬಿಡಲಾಗುತ್ತದೆ. ಕಂಬದ ಮೇಲೆ ಸೌರಫಲಕ ಅಳವಡಿಸಿದ್ದು, ವಿದ್ಯುತ್ ಉತ್ಪತ್ತಿಯಾಗಿ ತಂತಿಗಳಿಗೆ ಸರಬರಾಜಾಗುತ್ತದೆ. ನೆಲದಿಂದ ಒಂದು ಅಡಿ ಅಂತರದವರೆಗೂ ಈ ತಂತಿಗಳು ತೂಗುತ್ತಿರುವುದರಿಂದ ಸಹಜವಾಗಿಯೇ ಒಂದು ಅಡಿಗಿಂತ ಎತ್ತರದ ಯಾವುದೇ ಪ್ರಾಣಿ ನುಸುಳಲು ಸಾಧ್ಯವಿಲ್ಲ. ಈ ತಂತಿಯಿಂದ ಹೊರಹೊಮ್ಮುವ ವಿದ್ಯುತ್‌ನಿಂದ ಯಾವುದೇ ಪ್ರಾಣಿ ಸಾಯುವುದಿಲ್ಲ.

ಎಲ್ಲೆಲ್ಲಿ ಬೇಲಿ?: ಸದ್ಯ ಬಂಡೀಪುರ ರಾಷ್ಟ್ರೀಯ ಉದ್ಯಾನದ ಹಿಮವದ್‌ ಗೋಪಾಲಸ್ವಾಮಿ ಬೆಟ್ಟ, ಹಂಗಳ, ಗುಂಡ್ರೆ ವಲಯದಲ್ಲಿ 40 ಕಿ.ಮೀ ಉದ್ದಕ್ಕೆ ಈ ತೂಗು ಸೌರ ಬೇಲಿ ಹಾಕಲಾಗುತ್ತಿದೆ. ಮೈಸೂರು ಪ್ರಾದೇಶಿಕ ಅರಣ್ಯ ವಲಯಕ್ಕೆ ಸೇರುವ ಸರಗೂರು ವಲಯದಲ್ಲೂ 7 ಕಿ.ಮೀ ವರೆಗೆ ಹಾಕಲಾಗುತ್ತಿದೆ. ಇದರ ಯಶಸ್ಸು ಆಧರಿಸಿ ಇತರೆಡೆ ವಿಸ್ತರಿಸುವ ಚಿಂತನೆಯನ್ನು ಅರಣ್ಯ ಇಲಾಖೆ ಹೊಂದಿದೆ.

ವೆಚ್ಚ: ಆನೆಗಳನ್ನು ನಿಯಂತ್ರಿಸಲು ಕೆಲವೆಡೆ ರೈಲು ಕಂಬಿಬೇಲಿ ನಿರ್ಮಿಸಿದ್ದು, 1 ಕಿ.ಮೀ ನಿರ್ಮಾಣಕ್ಕೆ ₹1.30 ಕೋಟಿ ಬೇಕಾಗುತ್ತದೆ. ಆದರೆ, ತೂಗು ಸೌರಬೇಲಿ 1 ಕಿ.ಮೀ.ಗೆ ₹ 4.50 ಲಕ್ಷ ವೆಚ್ಚವಾಗುತ್ತದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

‘ಪ್ರತಿ 3 ಕಿ.ಮೀ.ಗೆ 120 ಕಂಬಗಳು ಇರಲಿವೆ. ಇವುಗಳಿಂದ ಜೋತು ಬೀಳುವ ತಂತಿಗಳಿಗೆ ಸರಬರಾಜಾಗುವ ಸೌರ ವಿದ್ಯುತ್‌ನಿಂದ ಯಾವುದೇ ಪ್ರಾಣಿ ಗಾಯಗೊಳ್ಳುವುದಿಲ್ಲ. ಆನೆಗಳಿಗೆ ಒಂದು ಬಾರಿ ಶಾಕ್ ತಗುಲಿದರೆ ಮತ್ತೆ ದಾಟಲು ಯತ್ನಿಸುವುದಿಲ್ಲ’ ಎಂದು ಸರಗೂರು ವಲಯ ಅರಣ್ಯ ಅಧಿಕಾರಿ ಮೊಹಿಸಿನ್ ಭಾಷಾ ತಿಳಿಸಿದರು.

ನಡೆಯುತ್ತಲೇ ಇದೆ ಪ್ರಯತ್ನ

ಕಾಡಿನಿಂದ ನಾಡಿನತ್ತ ಆನೆಗಳು ಬಾರದಂತೆ ತಡೆಯಲು ಅರಣ್ಯ ಇಲಾಖೆ ಇದುವರೆಗೆ ಕೈಗೊಂಡ ಯಾವ ಕ್ರಮಗಳೂ ಪೂರ್ಣಪ್ರಮಾಣದಲ್ಲಿ ಸಫಲವಾಗಿಲ್ಲ.

ಕಂದಕಗಳನ್ನು ಸುಲಭವಾಗಿ ದಾಟಲು ತೊಡಗಿದ ನಂತರ ರೈಲು ಕಂಬಿಬೇಲಿ ಅಳವಡಿಸಲಾಯಿತು. ಕೆಲವೆಡೆ ಇದನ್ನೂ ದಾಟಲಾರಂಭಿಸಿದವು. ಹುಣಸೂರು ಬಳಿ ಈಚೆಗಷ್ಟೇ ಆನೆ ರೈಲು ಕಂಬಿಬೇಲಿ ದಾಟಲು ಯತ್ನಿಸಿ ಸಾವನ್ನಪ್ಪಿತ್ತು. ಈಗ ತೂಗು ಸೌರಬೇಲಿ ನಿರ್ಮಿಸಲಾಗುತ್ತಿದೆ.

***

ರೈಲು ಕಂಬಿಬೇಲಿಗೆ ಹೋಲಿಸಿದರೆ ತೂಗು ಸೌರಬೇಲಿ ಅಗ್ಗವಾಗಿದೆ. ಜತೆಗೆ, ಇದು ಯಶಸ್ವಿಯಾಗಿರುವ ಉದಾಹರಣೆಗಳಿವೆ. ಹಾಗಾಗಿ, ಬಂಡೀಪುರದಲ್ಲಿ 40 ಕಿ.ಮೀ ಉದ್ದದವರೆಗೆ ಅಳವಡಿಸಲಾಗುತ್ತಿದೆ.

–ಅಂಬಾಡಿ ಮಾಧವ್, ಬಂಡೀಪುರ ಹುಲಿ ರಕ್ಷಿತಾರಣ್ಯದ ನಿರ್ದೇಶಕ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !