ಶುಕ್ರವಾರ, ಜುಲೈ 30, 2021
28 °C
ಹಾರಂಗಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ, 3,583 ಕ್ಯುಸೆಕ್‌ ಒಳಹರಿವು

ಹಾರಂಗಿ ಜಲಾಶಯ ಭರ್ತಿಯಾಗಲು ಇನ್ನು 10 ಅಡಿ ಬಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ಹಾರಂಗಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕಾವೇರಿ ಕಣಿವೆಯ ಹಾರಂಗಿ ಅಣೆಕಟ್ಟೆಗೆ ನೀರಿನ ಒಳಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಜಲಾಶಯ ಭರ್ತಿಯಾಗಲು ಕೇವಲ 10 ಅಡಿ ಬಾಕಿ ಇದೆ.

ಗರಿಷ್ಠ 2,859 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಗುರುವಾರ ಬೆಳಿಗ್ಗೆ 6 ಗಂಟೆಗೆ 2,848.69 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಗುರುವಾರ ಬೆಳಿಗ್ಗೆ 2.4 ಮೀ.ಮೀ ಮಳೆ ದಾಖಲಾಗಿದೆ. ಕಳೆದ ಕೆಲವು ದಿನಗಳಿಂದ ಜಲಾನಯನ ಪ್ರದೇಶದಲ್ಲಿ ಮುಂಗಾರು ಬಿರುಸುಗೊಂಡಿದೆ.

ಜಲಾಶಯಕ್ಕೆ 3,583 ಕ್ಯುಸೆಕ್‌ ನೀರಿನ ಒಳ ಹರಿವು ಇದ್ದು, ನದಿಗೆ 30 ಕ್ಯುಸೆಕ್‌ ಹಾಗೂ ಕಾಲುವೆಗೆ 20 ಕ್ಯುಸೆಕ್‌ ಹರಿಸಲಾಗುತ್ತಿದೆ. ಇದೀಗ ಜಲಾಶಯದಲ್ಲಿ 5.62 ಟಿಎಂಸಿ ಅಡಿ ನೀರು ಸಂಗ್ರಹಗೊಂಡಿದೆ ಎಂದು ಅಣೆಕಟ್ಟು ವಿಭಾಗದ ಸಹಾಯಕ ಎಂಜಿನಿಯರ್ ನಾಗರಾಜು ತಿಳಿಸಿದ್ದಾರೆ.

ಕಳೆದ ವರ್ಷ ಇದೇ ಅವಧಿಯಲ್ಲಿ 2,813 ಅಡಿ ನೀರಿತ್ತು. 2.05 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. 638 ಕ್ಯುಸೆಕ್‌ ಒಳಹರಿವು ಇತ್ತು. ಇದರಲ್ಲಿ ನದಿಗೆ 30 ಹಾಗೂ ನಾಲೆಗೆ 20 ಕ್ಯುಸೆಕ್‌ ಹರಿಸಲಾಗುತ್ತಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಳೆ ಬೇಗ ಆರಂಭಗೊಂಡಿದೆ. ಇದರಿಂದ ನೀರಿನ ಮಟ್ಟ ಏರಿಕೆಯಾಗಿದೆ. ಮಳೆ ಇದೇ ರೀತಿ ಬಿರುಸು ಪಡೆದರೆ ಮುಂದಿನ ವಾರದೊಳಗೆ ಜಲಾಶಯ ಭರ್ತಿಯಾಗಬಹುದು.

ಕೃಷಿ ಚಟುವಟಿಕೆ ಚುರುಕು: ಹಾರಂಗಿ‌ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಮಳೆ ಬೀಳುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಜಲಾಶಯದಿಂದ ಜಿಲ್ಲೆಯ 12 ಗ್ರಾಮಗಳು ಪ್ರಯೋಜನ ಪಡೆಯುತ್ತವೆ. ಜೊತೆಗೆ ಮೈಸೂರು ಹಾಗೂ ಹಾಸನ ಜಿಲ್ಲೆಗಳ ಗಡಿಗ್ರಾಮಗಳಿಗೂ ಪ್ರಯೋಜನವಾಗುತ್ತಿದೆ.

ಜನರಲ್ಲಿ ಆತಂಕ: ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಕಾವೇರಿ ನದಿ ಹಾಗೂ ಹಾರಂಗಿ ಜಲಾಶಯಕ್ಕೆ ನೀರಿನ ಹರಿವಿನಲ್ಲಿ ಏರಿಕೆ ಕಂಡುಬಂದಿರುವುದರಿಂದ ನದಿ ಅಂಚಿನಲ್ಲಿರುವ ಜನರಲ್ಲಿ ಆತಂಕ ಉಂಟುಮಾಡಿದೆ.

ಕಳೆದ ವರ್ಷ ಜೂನ್‌ನಿಂದಲೇ ಮಳೆ ಆರಂಭಗೊಂಡರೂ ಆಗಸ್ಟ್‌ನಲ್ಲಿ ತೀವ್ರಗೊಂಡ ಮಳೆಯಿಂದ ಪ್ರಾಕೃತಿಕ ವಿಕೋಪ ಉಂಟಾಯಿತು. ಅಣೆಕಟ್ಟೆಯ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಜಲಪ್ರಳಯ ಸೃಷ್ಟಿಯಾಯಿತು. ಹಾರಂಗಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿತು. ಈ ವರ್ಷ ಮೇ ತಿಂಗಳಲ್ಲಿ ಆಗಾಗ್ಗೆ ಮಳೆ ಬಂದಿದೆ. ಜೂನ್‌ ಬಳಿಕ ಮಳೆಗಾಲ ಆರಂಭವಾಗಿದೆ.

ನದಿ ನೀರಿ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿರುವುದರಿಂದ ನದಿ ದಂಡೆಯಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ನೀರಾವರಿ ನಿಗಮದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು