ಹಾಸನ: ಒದ್ದೆ ನೆಲದಲ್ಲಿಯೇ ವಿದ್ಯಾರ್ಥಿಗಳಿಗೆ ಪಾಠ

7
ಜೆ.ಸಿ.ಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ಥಿತಿ ಶೋಚನಿಯ

ಹಾಸನ: ಒದ್ದೆ ನೆಲದಲ್ಲಿಯೇ ವಿದ್ಯಾರ್ಥಿಗಳಿಗೆ ಪಾಠ

Published:
Updated:

ಹಾಸನ: ಚಾವಣಿಯ ಹೆಂಚುಗಳು ಮುರಿದು ನೆಲಕ್ಕೆ ಉದುರುತ್ತಿರುವುದು ಒಂದೆಡೆ, ಮತ್ತೊಂದೆಡೆ ಶಿಥಿಲ ಗೋಡೆ ಎಲ್ಲಿ ಕುಸಿಯುವುದೋ ಎನ್ನುವ ಆತಂಕ ಶಿಕ್ಷಕರು, ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಇದರ ನಡುವೆ ಮೂಗಿಗೆ ಹೊಡೆಯುವ ಶೌಚದ ವಾಸನೆ.

ಇದು ಅರಸೀಕೆರೆ ತಾಲ್ಲೂಕಿನ ಜೆ.ಸಿ.ಪುರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ದುಃಸ್ಥಿತಿ.
1918ರಲ್ಲಿ ಆರಂಭವಾದ ಶಾಲೆ ಈಗ ಶತಮಾನದ ಹೊಸ್ತಿಲಲ್ಲಿದೆ.

ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ, ಬದುಕಿಗೆ ನೆಲೆ ಕಲ್ಪಿಸಿದೆ. ಬೆಳಗಾವಿ ವಿಶ್ವವಿದ್ಯಾಲಯದ ಕುಲಪತಿ ಕರಿಸಿದ್ದಪ್ಪ ಸೇರಿ ಹಲವರು ಉನ್ನತ ಹುದ್ದೆಯಲ್ಲಿದ್ದಾರೆ, ಉದ್ಯಮಿಗಳು, ರಾಜಕಾರಣಿಗಳಿದ್ದಾರೆ.

ಹಳೆಯದಾದ ಕಟ್ಟಡದಿಂದ ಹೆಂಚುಗಳು ಉದುರುವುದು ಹಾಗೂ ಮಳೆ ಬಂದರೆ ನೀರು ಸೋರಲಿದೆ. ಕೊಠಡಿಗಳು ಅಭದ್ರವಾಗಿರುವುದರಿಂದ ಮಕ್ಕಳು ಪಾಠ ಕೇಳಲು ಹೆದರುತ್ತಿದ್ದಾರೆ.

ಮಳೆ ಬಂದರೆ ಉಳಿದ ಕೋಣೆಗಳು ಸೋರುವುದರಿಂದ ಮಕ್ಕಳು ಒದ್ದೆ ನೆಲದಲ್ಲೇ ಪಾಠ ಕೇಳಬೇಕು. ಹಾಗಾಗಿ ಮಳೆಗಾಲದಲ್ಲಿ ಪಾಠ ಮಾಡುವುದು ದುಸ್ತರವಾಗಿದೆ.

1 ರಿಂದ 7ನೇ ತರಗತಿ ಓದುವ ಒಟ್ಟು 173 ವಿದ್ಯಾರ್ಥಿಗಳಿದ್ದಾರೆ. ಮೂವರು ಶಿಕ್ಷಕರಿದ್ದಾರೆ, ಏಳು ಬೋಧನಾ ಕೊಠಡಿಗಳಿವೆ. ಅದರಲ್ಲಿ ಎರಡು ಶಿಥಿಲಗೊಂಡು, ಭಾಗಶಃ ಕುಸಿದು ಬಿದ್ದಿದೆ.

ಇವುಗಳಿಗೆ ಹೊಂದಿಕೊಂಡಿರುವ ಇತರೆ ಕೊಠಡಿಗಳು ಬೀಳುವ ಸ್ಥಿತಿಯಲ್ಲಿವೆ. ಹಾಗಾಗಿ ಒಂದು, ಎರಡು, ಮೂರು ಹಾಗೂ ನಾಲ್ಕು, ಐದು ತರಗತಿ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ನೆಲದಲ್ಲಿ ಕೂರಿಸಿ ಪಾಠ ಹೇಳಲಾಗುತ್ತಿದೆ.

ಅಡುಗೆ ಮಾಡಲು ನೀರಿನ ಕೊರತೆ ಇದೆ. ನೀರಿನ ಸಂಪ್‌ಗೆ ಚರಂಡಿ ನೀರು ಸೇರಿದ ಕಾರಣ ಬಂದ್‌ ಮಾಡಲಾಗಿದೆ.

‘ಪಾಳು ಬಿದ್ದ ಕೊಠಡಿಗಳಲ್ಲಿ ಪುಂಡರು ರಾತ್ರಿ ವೇಳೆ ಅನೈತಿಕ ಚಟುವಟಿಕೆಯಲ್ಲಿ ತೊಡಗುತ್ತಾರೆ. ಇಸ್ಪೀಟ್‌ ಎಲೆ, ಮದ್ಯದ ಬಾಟಲಿಗಳು ಬಿಸಾಡಿ ಹೋಗುತ್ತಾರೆ. ರಜೆ ಬಂದರಂತೂ ಇಡೀ ಆವರಣವೇ ಗಲೀಜಾಗಿರುತ್ತದೆ’ ಎಂಬುದು ಶಿಕ್ಷಕರ ದೂರು.

ಇನ್ನು ಶೌಚಾಲಯ ಕಟ್ಟಡದಲ್ಲಿ ಗಿಡ, ಗಂಟಿಗಳು ಬೆಳೆದಿದ್ದು, ನೀರಿಲ್ಲದೆ ಗಬ್ಬು ನಾರುತ್ತಿದೆ. ಬಾಗಿಲು ಸಹ ಇಲ್ಲ. ಹಾಗಾಗಿ ಮಕ್ಕಳು ಬಯಲು ಪ್ರದೇಶದಲ್ಲಿಯೇ ಮಲ, ಮೂತ್ರ ವಿಸರ್ಜನೆ ಮಾಡುತ್ತಾರೆ.

ಕಟ್ಟಡ ನಿರ್ಮಾಣಕ್ಕೆ ₹27 ಕೋಟಿ
‘ಮಳೆಯಿಂದ ಹಾನಿಯಾಗಿರುವ, ತೀರಾ ಹಳೆಯದಾದ ಕಟ್ಟಡ, ಕೊಠಡಿಗಳನ್ನು ನೆಲಸಮಗೊಳಿಸಿ ಹೊಸದಾಗಿ ನಿರ್ಮಿಸಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ.

164 ಪ್ರಾಥಮಿಕ ಶಾಳೆಗಳ ದುರಸ್ತಿಗೆ ₹63 ಲಕ್ಷ, 80 ಪ್ರೌಢಶಾಲಾ ಕಟ್ಟಡಗಳ ದುರಸ್ತಿಗೆ ₹ 78.40 ಲಕ್ಷ, 121 ಪ್ರೌಢಶಾಲೆಗಳಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ₹ 5.65 ಕೋಟಿ ಸೇರಿ ಒಟ್ಟು ₹ 27 ಕೋಟಿ ಅನುದಾನ ಬಿಡುಗಡೆಯಾಗಿದೆ.

ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಕಾಂಪೌಂಡ್‌, ಇತರೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಡಿಡಿಪಿಐ ಮಂಜುನಾಥ್‌ ಅವರು ತಿಳಿಸುತ್ತಾರೆ.

ಜಿಲ್ಲೆಯಲ್ಲಿ ತುರ್ತು ರಿಪೇರಿ ಆಗಬೇಕಾದ ಶಾಲಾ ಕಟ್ಟಡಗಳ ವಿವರ ತಾಲ್ಲೂಕುವಾರು ಹೀಗಿದೆ; ಅರಕಲಗೂಡು– 62, ಆಲೂರು– 5, ಬೇಲೂರು– 21, ಚನ್ನರಾಯಪಟ್ಟಣ–16, ಹೊಳೆನರಸೀಪುರ– 58, ಸಕಲೇಶಪುರ– 10, ಹಾಸನ– 28, ಅರಸೀಕೆರೆ– 120

 ಪರೀಕ್ಷೆ ಮುಗಿದ ಬಳಿಕ ದುರಸ್ತಿ
‘ಕೊಠಡಿ ದುರಸ್ತಿ ಮಾಡಿಕೊಡುವಂತೆ ಮೇಲಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ದುರಸ್ತಿ ಕಾರ್ಯವನ್ನು ಈ ವರ್ಷದ ಅಂತಿಮ ವಾರ್ಷಿಕ ಪರೀಕ್ಷೆ ಮುಗಿದ ಬಳಿಕ ಕೈಗೆತ್ತಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶತಮಾನೋತ್ಸವ ಆಚರಣೆಗೆ ಹಳೇ ವಿದ್ಯಾರ್ಥಿಗಳ ಸಂಘ ರಚಿಸಲಾಗುವುದು. ಈ ಶಾಲೆಯಲ್ಲಿ ಕಲಿತವರು ನೆರವು ನೀಡಬಹುದು.
–ಧನಂಜಯ್ ಮೂರ್ತಿ, ಮುಖ್ಯ ಶಿಕ್ಷಕ

ತುರ್ತು ರಿಪೇರಿ ಆಗಬೇಕಾದ ಶಾಲಾ ಕಟ್ಟಡಗಳು
ತಾಲ್ಲೂಕು–ಶಾಲೆಗಳು
ಅರಕಲಗೂಡು– 62
ಆಲೂರು– 5
ಬೇಲೂರು– 21
ಚನ್ನರಾಯಪಟ್ಟಣ–16
ಹೊಳೆನರಸೀಪುರ– 58
ಸಕಲೇಶಪುರ– 10
ಹಾಸನ– 28
ಅರಸೀಕೆರೆ– 120

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !