2011ರ ಕೆಎಎಸ್‌ ನೇಮಕಾತಿ ರದ್ದು: ಹೈಕೋರ್ಟ್‌ ಆದೇಶ ಪ್ರಶ್ನಿಸಿದ್ದ ಮೇಲ್ಮನವಿ ವಜಾ

7

2011ರ ಕೆಎಎಸ್‌ ನೇಮಕಾತಿ ರದ್ದು: ಹೈಕೋರ್ಟ್‌ ಆದೇಶ ಪ್ರಶ್ನಿಸಿದ್ದ ಮೇಲ್ಮನವಿ ವಜಾ

Published:
Updated:

ನವದೆಹಲಿ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ವು 2011ನೇ ಸಾಲಿನ ಗ್ರೂಪ್‌ ‘ಎ’ ಮತ್ತು ಗ್ರೂಪ್‌ ‘ಬಿ’ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಕ್ಕಾಗಿ ನಡೆಸಿದ್ದ ಆಯ್ಕೆ ಪ್ರಕ್ರಿಯೆಯನ್ನು ರದ್ದುಪಡಿಸಿ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

‘ಹೈಕೋರ್ಟ್‌ ಕಳೆದ ಜುಲೈ 13ರಂದು ನೀಡಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಈ ಅರ್ಜಿಯನ್ನು ನಾವು ವಿಚಾರಣೆಗೆ ಪರಿಗಣಿಸುವುದಿಲ್ಲ’ ಎಂದು ನ್ಯಾಯಮೂರ್ತಿ ಅರುಣ್‌ಮಿಶ್ರಾ ನೇತೃತ್ವದ ದ್ವಿಸದಸ್ಯ ಪೀಠ ತಿಳಿಸಿದೆ.

‘ಒಟ್ಟು 362 ಹುದ್ದೆಗಳ ನೇಮಕಕ್ಕೆ ನಡೆಸಲಾದ ಮುಖ್ಯ ಲಿಖಿತ ಪರೀಕ್ಷೆಯೂ ಅಕ್ರಮದಿಂದ ಕೂಡಿದೆಯೇ ಎಂಬ ಕುರಿತು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಕಳೆದ ಏಪ್ರಿಲ್‌ 4ರಂದು ನೀಡಿದ್ದ ಸೂಚನೆ ಪಾಲಿಸಲೂ ಹೈಕೋರ್ಟ್‌ ವಿಫಲವಾಗಿದೆ’ ಎಂದು ಅರ್ಜಿದಾರರಾದ ಎಚ್‌.ಪಿ.ಎಸ್‌. ಮೈತ್ರಿ ಅವರ ಪರ ವಕೀಲರಾದ ನಾಗಮೋಹನದಾಸ್‌ ಹಾಗೂ ಶೇಖರ್‌ ಗೌಡ ನ್ಯಾಯಪೀಠಕ್ಕೆ ತಿಳಿಸಿದರು.

ಒಂದೊಮ್ಮೆ, ಮುಖ್ಯ ಲಿಖಿತ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ಶಂಕೆ ಇದ್ದರೆ ಇಡೀ ನೇಮಕಾತಿ ಪ್ರಕ್ರಿಯೆಗೆ ಮಾನ್ಯತೆ ನೀಡುವುದು ಸರಿ
ಯಲ್ಲ. ಮೌಖಿಕ ಸಂದರ್ಶನ ಪ್ರಕ್ರಿಯೆಯಲ್ಲಿ ಮಾತ್ರ ಅಕ್ರಮ ನಡೆದಿದ್ದಲ್ಲಿ ಹೊಸದಾಗಿ ಸಂದರ್ಶನ ನಡೆಸಿ ಅನ್ಯಾಯ ಸರಿಪಡಿಸಬಹುದು ಎಂದೂ ನ್ಯಾಯಪೀಠ ಹೇಳಿತ್ತು ಎಂದು ಅವರು ವಿವರಿಸಿದರು.

ಆದರೆ, ಈಗಾಗಲೇ ನೇಮಕಾತಿ ಪ್ರಕ್ರಿಯೆ ನಡೆದು ಸಾಕಷ್ಟು ಸಮಯ ಕಳೆದಿದೆ ಎಂಬ ಕಾರಣ ಮುಂದುವರಿಸಿ ಹೈಕೋರ್ಟ್‌ ಇಡೀ ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಪಡಿಸಿ ಆದೇಶ ನೀಡಿದೆ ಎಂದು ಅವರು ಹೇಳಿದರಾದರೂ ನ್ಯಾಯಪೀಠ ಅವರ ವಾದವನ್ನು ಪುರಸ್ಕರಿಸಲಿಲ್ಲ.

ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸಿಐಡಿ ವರದಿ ಸಲ್ಲಿಸಿದ ಬಳಿಕ ಸರ್ಕಾರ ನೇಮಕಾತಿ ಅಧಿಸೂಚನೆ ರದ್ದುಗೊಳಿಸಿತ್ತು. ಆದರೆ ಕೆಎಟಿ ನೀಡಿದ್ದ ನಿರ್ದೇಶನದ ಮೇರೆಗೆ ಕೆಲವರಿಗೆ ಮಾತ್ರ ನೇಮಕಾತಿ ಆದೇಶ ನೀಡಿತ್ತು.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !