ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನದಲ್ಲಿ ದೇವೇಗೌಡರೇ ಸ್ಪರ್ಧಿಸಬೇಕು: ಪ್ರಜ್ವಲ್ ರೇವಣ್ಣ

Last Updated 28 ಫೆಬ್ರುವರಿ 2019, 20:29 IST
ಅಕ್ಷರ ಗಾತ್ರ

ಕಡೂರು: ‘ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ದೇವೇಗೌಡರು ಹಾಸನದಿಂದ ಸ್ಪರ್ಧಿಸಿದರೆ 5 ಲಕ್ಷ ಮತಗಳ ಅಂತರದಿಂದ ಗೆದ್ದು ಬರುವುದು ನಿಶ್ಚಿತ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ತಿಳಿಸಿದರು.

ಕಡೂರಿನಲ್ಲಿ ಗುರುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಕಡೂರು ಜನತೆಯ ಆಶೀರ್ವಾದ ನಮ್ಮ ಮೇಲೆ ನಿರಂತರವಾಗಿದೆ. ದೇವೇಗೌಡರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಜೆಡಿಎಸ್ ಪಕ್ಷಕ್ಕೆ ಅವರೇ ಆಸ್ತಿ. ಹಾಸನದಿಂದ ಅವರೇ ಸ್ಪರ್ಧಿಸಿದರೆ ವೈಯಕ್ತಿಕವಾಗಿ ನನಗೆ ಸಂತೋಷ. ಅವರೆದುರು ಮೊತ್ತ ಮೊದಲ ಬಾರಿ ಮಾತನಾಡುತ್ತಿದ್ದೇನೆ. ಇಲ್ಲಿನ ಲೋಕಸಭಾ ಚುನಾವಣಾ ಅಭ್ಯರ್ಥಿಯ ನಿರ್ಧಾರ ದೇವೇಗೌಡರದು. ಇಲ್ಲಿನ ಜನತೆಯ ಸಹಕಾರ ಇದೇ ರೀತಿ ಮುಂದುವರಿಯಲಿ’ ಎಂದರು.

ವೈ.ಎಸ್‌.ವಿ.ದತ್ತ ಅವರನ್ನು ಉದ್ದೇಶಿಸಿ ಮಾತನಾಡಿದ ಪ್ರಜ್ವಲ್, ‘ಚುನಾವಣೆಯಲ್ಲಿ ನೀವು ಸೋತಿದ್ದೇನೆ ಎಂದು ಹೇಳಬೇಡಿ. ಕ್ಷೇತ್ರದ ಜನತೆ ಮತ್ತು ಕಾರ್ಯಕರ್ತರ ಹೃದಯವನ್ನು ಗೆದ್ದಿದ್ದೀರಿ’ ಎಂದು ಶ್ಲಾಘಿಸಿದಾಗ ಕಾರ್ಯಕರ್ತರು ಹರ್ಷೋದ್ಗಾರ ಮಾಡಿದರು. ಸಚಿವ ರೇವಣ್ಣ ಅವರು ತಮ್ಮ ಭಾಷಣದಲ್ಲಿ ಈ ಮಾತುಗಳನ್ನು ಅನುಮೋದಿಸಿದರು.

ಕಾದು ನೋಡೋಣ– ಎಚ್‌ಡಿಡಿ:
‘ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಜಿನಿವಾ ಒಪ್ಪಂದದ ಪ್ರಕಾರ ನಡೆಸಿಕೊಳ್ಳಬೇಕು. ಅವರಿಗೆ ಯಾವುದೇ ತೊಂದರೆ ನೀಡಬಾರದು. ಅವರು ಸುರಕ್ಷಿತವಾಗಿ ವಾಪಸ್ ಬರುತ್ತಾರೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶ ಒಗ್ಗಟ್ಟಾಗಿರಬೇಕು’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಪತ್ರಕರ್ತರಿಗೆ ತಿಳಿಸಿದರು.

ಕನ್ನಡಿಗ ಒಬ್ಬರು ಪ್ರಧಾನಿಯಾಗುತ್ತಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನಾನು ಪ್ರಧಾನಿಯಾಗಿದ್ದಾಗ ಪರಿಸ್ಥಿತಿ ಬೇರೆ ಇತ್ತು. ಈಗ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದೇವೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಒಂದಾಗಿವೆ. ರಾಹುಲ್ ಗಾಂಧಿ ಪ್ರಧಾನಿ ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಇದಕ್ಕೆ ಎಡ ಪಕ್ಷಗಳ ಸಹಕಾರ, ಸಹಮತ ಬೇಕು. ಏನಾಗುತ್ತದೆ ಎಂಬುದನ್ನು ಕಾದು ನೋಡೋಣ’ ಎಂದರು.

ಗಳಗಳನೆ ಅತ್ತ ಎಸ್.ಎಲ್.ಧರ್ಮೇಗೌಡ

ಕಡೂರು ತಾಲ್ಲೂಕು ಜೆಡಿಎಸ್ ಪಕ್ಷದೊಳಗೆ ಮಾಜಿ ಶಾಸಕ ವೈ.ಎಸ್.ವಿ. ದತ್ತ ಮತ್ತು ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರ ನಡುವಿನ ಭಿನ್ನಾಭಿಪ್ರಾಯವನ್ನು ಗಮನಿಸಿದ ಸಂಸದ ದೇವೇಗೌಡರು ತಮ್ಮ ಭಾಷಣದ ನಡುವೆ ಈ ವಿಷಯ ಪ್ರಸ್ತಾಪಿಸಿದರು.

‘ಮುಂದಿನ ವಿಧಾನಸಭಾ ಚುನಾವಣೆಗೆ ಕಡೂರಿನಿಂದ ಮತ್ತೆ ಟಿಕೆಟ್ ನೀಡುವುದು ದತ್ತನಿಗೆ. ಈ ವಿಚಾರದಲ್ಲಿ ಯಾರಿಗೂ ಯಾವುದೇ ರೀತಿಯ ಸಂಶಯ ಬೇಡ. ನಾನು ಅಧಿಕಾರದಲ್ಲಿದ್ದಾಗ ಹತ್ತಿರ ಸುಳಿಯದೆ, ಅಧಿಕಾರ ಕಳೆದುಕೊಂಡಾಗ ನನಗೆ ಹೆಗಲು ಕೊಟ್ಟವನು ದತ್ತ’ ಎಂದು ಹೇಳಿದರು.

‘ಅದೇ ರೀತಿ ಬೀರೂರಿನ ಎಸ್.ಆರ್.ಲಕ್ಷ್ಮಯ್ಯ ನನ್ನ ಆತ್ಮೀಯರಾಗಿದ್ದರು. ಅವರ ಮಗ ಧರ್ಮೇಗೌಡ ಅವರನ್ನು ವಿಧಾನ ಪರಿಷತ್ ಉಪಸಭಾಪತಿಯನ್ನಾಗಿ ಮಾಡಿದ್ದೇವೆ. ನೀವಿಬ್ಬರೂ ಇನ್ನು ಮುಂದೆ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷದ ಕೆಲಸವನ್ನು ಒಟ್ಟಾಗಿ ಮಾಡಬೇಕು. ನಿಮ್ಮಲ್ಲಿ ಏನಾದರೂ ತೊಂದರೆಯಾದರೆ ಸಾರ್ವಜನಿಕವಾಗಿ ಮಾತನಾಡದೆ ನನ್ನ ಮನೆಯಲ್ಲಿ ನನ್ನೆದುರು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕು’ ಎಂದು ಗೌಡರು ಸೂಚಿಸಿದರು. ಆಗ ಎಸ್‌.ಎಲ್‌.ಧರ್ಮೇಗೌಡರು ಗಳಗಳನೆ ಅತ್ತರು.

‘ನನ್ನ ಕುಟುಂಬಕ್ಕೆ ಗೌಡರ ಕುಟುಂಬದ ಆಶೀರ್ವಾದ ಮತ್ತು ಸಹಕಾರ ಎರಡೂ ನಿರಂತರವಾಗಿದೆ. ಅವರ ಮಾತಿಗೆ ಎದಿರಾಡುವುದಿಲ್ಲ’ ಎಂದು ಗದ್ಗದಿತರಾದರು.

ಕೂಡಲೇ ಬಳಿ ಬಂದ ವೈ.ಎಸ್‌.ವಿ.ದತ್ತ, ಧರ್ಮೇಗೌಡರ ಕಣ್ಣು ಒರೆಸಿ ಸಮಾಧಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT