ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ

7
‘ಕಹಿ ನೆನಪು ಮರೆಯೋಣ’

ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ

Published:
Updated:
Deccan Herald

ನಾಗಮಂಗಲ: ‘ಐದು ತಿಂಗಳ ಹಿಂದಷ್ಟೇ ಕಾಂಗ್ರೆಸ್‌– ಜೆಡಿಎಸ್‌ ಮುಖಂಡರು ವೀರಾವೇಷದಿಂದ ಹೋರಾಡಿದ್ದೇವೆ, ನಿಜ. ಹಳ್ಳಿಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ಹೊಂದಾಣಿಕೆ ಕಷ್ಟ. ಆದರೆ ನರೇಂದ್ರ ಮೋದಿ ಸರ್ಕಾರ ಕಿತ್ತೊಗೆಯಲು ನಾವು ಹಳೆಯದೆಲ್ಲವನ್ನು ಮರೆತು ಒಂದಾಗಬೇಕು’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಪಟ್ಟಣದಲ್ಲಿ ಗುರುವಾರ ನಡೆದ ಲೋಕಸಭೆ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ಸಾರ್ವತ್ರಿಕ ಚುನಾವಣೆಗೂ ಮುನ್ನ ಎದುರಾಗಿರುವ ಈ ಅಗ್ನಿಪರೀಕ್ಷೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕು. ಬಿಜೆಪಿ ಗೆದ್ದರೆ ಮೈತ್ರಿ ಪಕ್ಷಗಳ ಮುಖಂಡರು ತಲೆ ಎತ್ತಿ ನಡೆಯಲು ಸಾಧ್ಯವಿಲ್ಲ. ಹಳೆಯದೆಲ್ಲವನ್ನೂ ಮರೆತು ನಾನೇ ಸಿದ್ದರಾಮಯ್ಯ ಅವರ ಮನೆಗೆ ಹೋಗಿದ್ದೆ. ನೀವೂ ಕಹಿ ನೆನಪು ಮರೆಯಬೇಕು’ ಎಂದು ಸಲಹೆ ನೀಡಿದರು.

‘ನಾನು ಪ್ರಧಾನಿಯಾಗಿದ್ದಾಗ ಕಾಶ್ಮೀರಕ್ಕೆ ಐದು ಬಾರಿ ಭೇಟಿ ನೀಡಿದ್ದೆ. ಆದರೆ, ಈಗ ಅಲ್ಲಿಗೆ ಭೇಟಿ ನೀಡಲು ಸಾಧ್ಯವಿಲ್ಲದಷ್ಟು ಅಶಾಂತಿ ನೆಲೆಸಿದೆ. ಗುಜರಾತ್‌ನಲ್ಲಿ ಹರಿಜನರ ಬಟ್ಟೆಬಿಚ್ಚಿ ಹೊಡೆಯುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಪ್ರೇಮ ವಿವಾಹ ಮಾಡಿಕೊಂಡರೆ ಹಿಂದೂ– ಮುಸ್ಲಿಂ ದಳ್ಳುರಿ ಉಂಟಾಗುತ್ತದೆ. ಇದು ಹಿಂದೂ ರಾಷ್ಟ್ರ ಎಂದು ಆರ್‌ಎಸ್‌ಎಸ್‌ನವರು ಹೇಳುತ್ತಿದ್ದಾರೆ. ಗಾಂಧಿ, ಅಂಬೇಡ್ಕರ್‌ ಬದುಕಿದ ನಾಡಿನಲ್ಲಿ ಬಡವರಿಗೆ ಉಳಿಗಾಲವಿಲ್ಲವಾಗಿದೆ’ ಎಂದರು.

ಪಟೇಲ್‌ ಮನೆಗೆ ಭೇಟಿ: ‘ಪ್ರಧಾನಿ ನರೇಂದ್ರ ಮೋದಿ ಅವರು ವಲಭಬಾಯ್‌ ಪಟೇಲ್‌ ಅವರ ಮನೆಗೆ ಭೇಟಿ ನೀಡಿದ್ದಾರೆಯೆ. ನಾನು ಪ್ರಧಾನಿಯಾಗಿದ್ದಾಗ ಅವರ ಮನೆಗೆ ಹೋಗಿದ್ದೆ. ಅದೊಂದು ಹೆಂಚಿನ ಮನೆ, ಯಾವ ಸೌಲಭ್ಯಗಳೂ ಇರಲಿಲ್ಲ. ಅವರ ನಿವಾಸದ ಅಭಿವೃದ್ಧಿಗಾಗಿ ಸ್ಥಳದಲ್ಲೇ ₹ 2 ಕೋಟಿ ಹಣ ಬಿಡುಗಡೆಗೆ ಆದೇಶ ನೀಡಿದ್ದೆ. ವಿಮಾನ ನಿಲ್ದಾಣಕ್ಕೆ ಅವರ ಹೆಸರು ನಾಮಕರಣ ಮಾಡಲು ಅನುಮೋದನೆ ನೀಡಿದ್ದೆ. ಈಗ ಏಕತಾ ಮೂರ್ತಿ ಮಾಡುತ್ತಾರೆ, ಅದರಲ್ಲಿ ಅರ್ಥವಿದೆಯೇ’ ಎಂದು ಪ್ರಶ್ನಿಸಿದರು.

ಎಲ್‌ಆರ್‌ಎಸ್‌ ಹೆಸರು ಎತ್ತಲಿಲ್ಲ!

ಪತ್ರಕರ್ತ, ವಕೀಲ ಕಂಚನಹಳ್ಳಿ ಗಂಗಾಧರ್‌ ಮೂರ್ತಿ ಕೊಲೆ ಪ್ರಕರಣದಲ್ಲಿ ಎಲ್‌.ಆರ್‌.ಶಿವರಾಮೇಗೌಡರ ವಿರುದ್ಧ ನಡೆಸಿದ್ದ ಹೋರಾಟದ ಬಗ್ಗೆ ದೇವೇಗೌಡರು ಯಾವುದೇ ಮಾತುಗಳನ್ನಾಡಲಿಲ್ಲ. ಭಾಷಣದುದ್ದಕ್ಕೂ ಶಿವರಾಮೇಗೌಡರ ಹೆಸರನ್ನೇ ಹೇಳಲಿಲ್ಲ. ಅವರ ಪರವಾಗಿ ಮತ ಯಾಚನೆಯನ್ನೂ ಮಾಡಲಿಲ್ಲ. ಒಟ್ಟಾರೆ ಐದೂ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿದರು. ಲಕ್ಷ್ಮಿ ಅಶ್ವಿನ್‌ಗೌಡರ ಅಸಮಾಧಾನದ ಬಗ್ಗೆಯೂ ಮಾತನಾಡಲಿಲ್ಲ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !