ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ಬಂಡಾಯಕ್ಕೆ ದೇವೇಗೌಡ ಗರಂ

ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಕೂಟದಲ್ಲಿ ಅಪಸ್ವರ ಎತ್ತಿದವರಿಗೆ ಬಿಜೆಪಿ ಗಾಳ
Last Updated 24 ಮಾರ್ಚ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ಉದ್ದೇಶದಿಂದ ‘ಮೈತ್ರಿ’ ಮಾಡಿಕೊಂಡು ಹಂಚಿಕೊಂಡಿರುವ ಕ್ಷೇತ್ರಗಳಲ್ಲಿ ಅಸಮಾಧಾನ ಕಾಣಿಸಿಕೊಂಡಿರುವುದಕ್ಕೆ ‘ಕೈ’ ನಾಯಕರ ಮೇಲೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗರಂ ಆಗಿದ್ದಾರೆ.

ಕಾಂಗ್ರೆಸ್‌–ಜೆಡಿಎಸ್‌ ಹೊಂದಾಣಿಕೆಯಲ್ಲಿ ಸೃಷ್ಟಿಯಾಗಿರುವ ಬಂಡಾಯದ ಲಾಭ ಪಡೆದು, ಆ ಎರಡೂ ಪಕ್ಷಗಳ ಪ್ರಾಬಲ್ಯದ ಕ್ಷೇತ್ರಗಳಲ್ಲಿ ರಾಜಕೀಯ ಲಾಭ ಎತ್ತಲು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ. ಅಪಸ್ವರ ಎತ್ತಿದವರಿಗೆ ಗಾಳ ಹಾಕಿರುವ ಕಮಲ ಪಕ್ಷದ ನಾಯಕರು, ‘ದೋಸ್ತಿ’ಗಳ ಒಡಕಿನ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಮಂಡ್ಯ, ಹಾಸನದಲ್ಲಿ ಕಾರ್ಯಕರ್ತರ ಮಧ್ಯೆ ಹೊಂದಾಣಿಕೆ ಆಗಿಲ್ಲ. ತುಮಕೂರಿನಲ್ಲಿ ಹಾಲಿ ಸಂಸದ ಮುದ್ದಹನುಮೇಗೌಡ ಬಂಡಾಯದ ಕಹಳೆ ಊದಿದ್ದಾರೆ. ಈ ಅಸಮಾಧಾನ ಬಗೆಹರಿಸಲು ಕಾಂಗ್ರೆಸ್‌ ನಾಯಕರು ಗಂಭೀರ ಪ್ರಯತ್ನ ಮಾಡುತ್ತಿಲ್ಲ ಎನ್ನುವುದು ಜೆಡಿಎಸ್‌ ನಾಯಕರ ಕೋಪಕ್ಕೆ ಕಾರಣ.

ಪದ್ಮನಾಭನಗರದಲ್ಲಿರುವ ನಿವಾಸದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಸಚಿವರಾದ ಶಿವಶಂಕರ ರೆಡ್ಡಿ, ಜಮೀರ್ ಅಹಮ್ಮದ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾನುವಾರ ಬೆಳಿಗ್ಗೆ ಭೇಟಿಯಾದರು. ಚುನಾವಣೆಯಲ್ಲಿ ಮೈತ್ರಿ ಧರ್ಮಪಾಲನೆ ಆಗುತ್ತಿಲ್ಲ ಎಂದು ಈ ಸಂದರ್ಭದಲ್ಲಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ವಿಶ್ವಾಸ: ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ಮೈತ್ರಿ ಕುರಿತಂತೆ ಕೆಲವು ಕ್ಷೇತ್ರಗಳಲ್ಲಿ ಉಂಟಾಗಿರುವ ಅತೃ‍ಪ್ತಿ ಶಮನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಟಿ ಸುಮಲತಾ ಅಂಬರೀಷ್‌ ಅವರಿಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ತುಂಬಾ ಸಂತೋಷ’ ಎಂದರು.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್ ಅವರೂ ದೇವೇಗೌಡ ಅವರನ್ನು ಭೇಟಿ ಮಾಡಿ ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಪ್ರಚಾರ ಕುರಿತು ಸಮಾಲೋಚನೆ ನಡೆಸಿದರು. ಚಿಕ್ಕಬಳ್ಳಾಪುರ ಕ್ಷೇತ್ರದ ‘ಮೈತ್ರಿ’ ಅಭ್ಯರ್ಥಿ, ಸಂಸದ ಎಂ. ವೀರಪ್ಪ ಮೊಯಿಲಿ ಕೂಡ ದೇವೇಗೌಡ ಮತ್ತು ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಬೆಂಬಲ ನೀಡುವಂತೆ ಕೋರಿದರು.

ಬೆಂಬಲಿಸುವುದು ಅನಿವಾರ್ಯ: ತುಮಕೂರು ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ. ದೇವೇಗೌಡ ಅವರು ಸೋಮವಾರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪಕ್ಷದ ಎಲ್ಲರೂ ಹಾಜರಿರುವಂತೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಮಾಡಿದ ಮನವಿಗೆ ಹಾಲಿ ಸಂಸದ ಎಸ್.ಪಿ ಮುದ್ದಹನುಮೇಗೌಡರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.

‘ಮುದ್ದಹನುಮೇಗೌಡರಿಗೆ ನೋವಾಗಿದೆ ನಿಜ. ಆದರೆ, ದೇವೇಗೌಡರೇ ಇಳಿಯುತ್ತಿರುವುದರಿಂದ ಬೆಂಬಲಿಸುವುದು ಅನಿವಾರ್ಯ. ಮೈತ್ರಿ ಧರ್ಮ ಪಾಲಿಸಲೇಬೇಕಿದೆ. ಆದರೆ, ನಾಮಪತ್ರ ಸಲ್ಲಿಸುವುದಾಗಿ ಹೇಳಿರುವ ಮುದ್ದಹನುಮೇಗೌಡ ಮತ್ತು ಕೆ.ಎನ್. ರಾಜಣ್ಣ ಅವರ ಮನವೊಲಿಸುತ್ತೇನೆ’ ಎಂದು ಪರಮೇಶ್ವರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT