ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಂಗ್‌ಮ್ಯಾನ್‌ ಒಬ್ಬನನ್ನು ಸಂಸತ್‌ಗೆ ಕಳಿಸಿದ್ದೇನೆ, ನಾನು ಪಕ್ಷ ಕಟ್ಟುತ್ತೇನೆ’

Last Updated 1 ಡಿಸೆಂಬರ್ 2019, 10:35 IST
ಅಕ್ಷರ ಗಾತ್ರ

ಬೆಂಗಳೂರು: ‘ಯಂಗ್‌ ಮ್ಯಾನ್‌ ಒಬ್ಬನನ್ನು ಪಾರ್ಲಿಮೆಂಟ್‌ಗೆ ಕಳುಹಿಸಿದ್ದೇನೆ. ನಾನು ಇಲ್ಲಿದ್ದುಕೊಂಡು ಪಕ್ಷ ಸಂಘಟನೆ ಮಾಡುತ್ತೇನೆ. ಉಪಚುನಾವಣೆಗೆ ಪ್ರಜ್ವಲ್‌ ನಿಲ್ಲುವುದಿಲ್ಲ,’ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಅವರು ತಿಳಿಸಿದ್ದಾರೆ.

ಬೆಂಗಳೂರಿನ ಜೆಪಿ ಭವನದಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ವೆಬ್ ಸೈಟ್‌ಗೆ ಚಾಲನೆ ನೀಡಿ ದೇವೇಗೌಡರು ಮಾತನಾಡಿದರು. ‘ನಾನು ಇವತ್ತು ಹುಣಸೂರಿಗೆ ಹೋಗುತ್ತಿದ್ದೇನೆ. ಈಗಾಗಲೇ ನನ್ನ ಮನೆಯಲ್ಲಿ ಹುಣಸೂರಿನ ಹಳೆ ಸ್ನೇಹಿತರ ಜೊತೆ ಸಭೆ ಮಾಡಿದ್ದೇನೆ. ಅವರನ್ನು ಕರೆಸಿಕೊಂಡು ‌ಚುನಾವಣೆ ಕುರಿತು ಮಾತನಾಡಿದ್ದೇನೆ. ಅವರೆಲ್ಲರೂ ಒಂದು ಮಾತು ಹೇಳಿದ್ದಾರೆ. ಪ್ರತಿ ಬಾರಿ ಹೊರಗಿನ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ನಾವೂ ಅವರನ್ನು ಗೆಲ್ಲಿಸುತ್ತೇವೆ. ನಂತರ ಅವರು ಪಕ್ಷಕ್ಕೆ ದ್ರೋಹ ಮಾಡಿ ಹೋಗುತ್ತಾರೆ ಎಂದು ಅಲ್ಲಿನ ಕಾರ್ಯಕರ್ತರು ಹೇಳಿದ್ದಾರೆ. ಕೆಲವರು ಪ್ರಜ್ವಲ್ ನಿಲ್ಲಿಸಿ ನನ್ನನ್ನು ಪಾರ್ಲಿಮೆಂಟ್‌ಗೆ ಹೋಗುವಂತೆ ಸಲಹೆ ನೀಡಿದ್ದಾರೆ. ಅದಕ್ಕೇ ‌ನಾನು ಅವರಿಗೆ ಹೇಳಿದ್ದೇನೆ ಒಬ್ಬ ಯಂಗ್ ಮ್ಯಾನ್ ಪಾರ್ಲಿಮೆಂಟ್‌ಗೆ ಹೋಗಿದ್ದಾನೆ. ಹೀಗಾಗಿ ನಾನು ಪಕ್ಷ ‌ಕಟ್ಟುತ್ತೇನೆ ಎಂದಿದ್ದೇನೆ. ಕ್ಷೇತ್ರದ ಕಾರ್ಯಕರ್ತರೇ ಒಂದು ಸಭೆ‌ ಮಾಡಿ ‌ಸಮರ್ಥ ಅಭ್ಯರ್ಥಿ ಕೊಡುವುದಾಗಿ ತಿಳಿಸಿದ್ದಾರೆ,’ಎಂದರು.

ಕುಟುಂಬದಿಂದ ಯಾರೂ ಸ್ಪರ್ಧಿಸಲ್ಲ

‘ಉಪಚುನಾವಣೆಯಾಗಲಿ, ಸಾರ್ವತ್ರಿಕ ಚುನಾವಣೆಯಾಗಲಿ, ಕ್ಷೇತ್ರದಲ್ಲೇ ಯಾರಾದರೊಬ್ಬರನ್ನು ಅಭ್ಯರ್ಥಿಯಾಗಿ ಮಾಡುತ್ತೇನೆ. ಈಗಾಗಲೇ ಕುಮಾರಸ್ವಾಮಿ ಅವರು ಕೆ. ಆರ್. ಪೇಟೆಗೆ ಹೋಗಿದ್ದಾರೆ ಈಗ ಅಲ್ಲಿನ ಕಾರ್ಯಕರ್ತರ ಒತ್ತಾಯದ ಮೇರೆಗೆ ನಾನು ಅಲ್ಲಿಗೆ ಹೋಗುತ್ತಿದ್ದೇನೆ. ಅಲ್ಲಿನ ಕಾರ್ಯಕರ್ತರು ಯಾರನ್ನು ಗುರುತು ಮಾಡುತ್ತಾರೋ ಅವರನ್ನೇ ಅಲ್ಲಿ ಅಭ್ಯರ್ಥಿಯನ್ನಾಗಿ ಮಾಡುತ್ತೇವೆ. ‌ಉಪಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡುವುದಿಲ್ಲ. ಕೆ.ಆರ್.ಪೇಟೆ ಮತ್ತು ಹುಣಸೂರು ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲಾಗುವುದು,’ ಎಂದು ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.

ಮೈತ್ರಿ ಬಗ್ಗೆ ಸೋನಿಯಾ ನಿರ್ಧಾರ ತೆಗೆದುಕೊಳ್ಳುತ್ತಾರೆ

‘ಈಗ ತೆರವಾಗಿರುವ 17 ಕ್ಷೇತ್ರಗಳಲ್ಲೂ ನಾವು ಸ್ಪರ್ಧಿಸಬೇಕು ಎಂದು ಏನಿಲ್ಲ. ಹಿಂದೆ ಕಾಂಗ್ರೆಸ್‌ಗೆ ಗುಂಡ್ಲುಪೇಟೆ, ನಂಜನಗೂಡು ಕ್ಷೇತ್ರಗಳನ್ನು ನಾನೇ ಬಿಟ್ಟುಕೊಟ್ಟಿದ್ದೆ. ಅಂದು ಕಾಂಗ್ರೆಸ್‌ ನಮ್ಮವರನ್ನೇ ಅಭ್ಯರ್ಥಿಗಳನ್ನಾಗಿ ಮಾಡಿ, ಗೆಲ್ಲಿಸಿಕೊಂಡಿತ್ತು. ಮೈತ್ರಿ ಮುಂದುವರೆಸುವ ಬಗ್ಗೆ ಸೋನಿಯಾ ಗಾಂಧಿ ‌ಏನು ನಿರ್ಧಾರ ಕೈಗೊಳ್ತಾರೋ ಗೊತ್ತಿಲ್ಲ. ಅವರ ಜೊತೆ ಚರ್ಚೆ ಮಾಡಿದ ಬಳಿಕ ಮೈತ್ರಿ ಮುಂದುವರೆಸುವ ಬಗ್ಗೆ ನಿರ್ಧಾರ ಮಾಡುತ್ತೇನೆ. ಮೈತ್ರಿ ಬಗ್ಗೆ ಸ್ಥಳೀಯ ಕಾಂಗ್ರೆಸ್ ‌ನಾಯಕರ‌ ಭಾವನೆ ಏನಿದೆ ಎಂಬುದು ಗೊತ್ತಿಲ್ಲ. ಅವರ ಪಕ್ಷದ ನಾಯಕರು ಒಂದು ತೀರ್ಮಾನಕ್ಕೆ ಬಂದರೆ ಅದಕ್ಕೆ ನಮ್ಮ ಸಹಮತ ಇರುತ್ತದೆ. ನಮ್ಮ ಶಕ್ತಿ ಏನಿದೆಯೋ ಅದನ್ನು ‌ಸಮರ್ಥವಾಗಿ ಬಳಕೆ ಮಾಡಿಕೊಳ್ಳುತ್ತೇವೆ. ಇನ್ನುಮುಂದೆ ನಮ್ಮ ಪಕ್ಷವನ್ನು ‌ಯಾರೂ ‘ಬಿ ಟೀಮ್’ ಎಂದು ಕರೆಯಲು ಸಾಧ್ಯವಿಲ್ಲ. ಕಳೆದ ಚುನಾವಣೆ ವೇಳೆ ಕಾಂಗ್ರೆಸ್ ‌ಏನೇ ಪ್ರಯತ್ನ ಮಾಡಿದರೂ ಕೊನೆಗೆ ಯಶಸ್ಸು ಕಂಡಿತೇ? 130 ಇದ್ದವರು ಕೊನೆಗೆ 78ಕ್ಕೆ ಬಂದರು,’ ಎನ್ನುವ ಕಾಂಗ್ರೆಸ್‌ ಅನ್ನು ಟೀಕಿಸಿದರು.

ಜಿಟಿಡಿ ಮುನಿಸಿನ ಬಗ್ಗೆ

ಮಾಜಿ ಸಚಿವ ಜಿಟಿ ದೇವೇಗೌಡರ ‌ಅಸಮಧಾನದ ಕುರಿತು ಪ್ರತಿಕ್ರಿಯಿಸಿದ ದೇವೇಗೌಡರು, ‘ಅವರ ಬಗ್ಗೆ ‌ಈಗ ನಾನು ಮಾತಾನಾಡುವುದಿಲ್ಲ. ನಮ್ಮ ಪಕ್ಷಕ್ಕೆ ಸ್ವಾಭಿಮಾನ ಇದೆ, ಶಕ್ತಿ ಇದೆ, ದೈವ ಶಕ್ತಿ ಇದೆ. ನಿಮ್ಮ ಕಣ್ಣು ಮುಂದೆ ಈ ಪಕ್ಷವನ್ನೂ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ. ಅಲ್ಲಿಯವರೆಗೂ ನನಗೆ ದೇವರು ಆಯಸ್ಸು ಕೊಟ್ಟಿದ್ದಾನೆ. ನೀವು ಇನ್ನು ಚಿಕ್ಕವರು. ನನಗೆ ಇವಾಗ ವಯಸ್ಸು ‌ 86 ವರ್ಷ. ನಿಮ್ಮ ಎದುರು ನಮ್ಮ ಪಕ್ಷ ಒಂದು ದಿನ ಅಧಿಕಾರಕ್ಕೆ ಬರುತ್ತೆ. ಆಗ ನಿಮ್ಮನ್ನು ಕರೆದು ಒಳ್ಳೆಯ ಔತಣ ಏರ್ಪಡಿಸುತ್ತೇನೆ,’ ಎಂದು ಜಿ.ಟಿ.ದೇವೇಗೌಡರಿಗೆ ಮಾಧ್ಯಮದ ಮೂಲಕವೇ ತಿರುಗೇಟು ನೀಡಿದರು.

ಡಿಕೆ ಶಿವಕುಮಾರ ಪರ ಪ್ರತಿಭಟನೆಗೆ ನಾನು ಬೆಂಬಲಿಸಿದ್ದೆ

‘ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಒಕ್ಕಲಿಗರ ಒಕ್ಕೂಟಗಳು ನಡೆಸಿದ ಪ್ರತಿಭಟನೆಗೆ ನನ್ನ ಬೆಂಬಲ ನೀಡಿದ್ದೆ. ಶಿವಕುಮಾರ್‌ಗೆ ನಮ್ಮ ಬೆಂಬಲವಿದೆ. ಕುಮಾರಸ್ವಾಮಿ ಅವರು ಈಗಾಗಲೇ ಡಿಕೆಶಿ ತಾಯಿಯನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ನಿನ್ನೆ ನಡೆದ ಪ್ರತಿಭಟನೆಯಲ್ಲಿ ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು,’ ಎಂದು ತಿಳಿಸಿದರು.

ಮಹಾಲಕ್ಷ್ಮಿ ಲೇಔಟ್‌ನ ನಮ್ಮ ಕಾರ್ಯಕರ್ತರಿಗೆ ರಕ್ಷಣೆ ನೀಡಿ

‘ಮಹಾಲಕ್ಷ್ಮಿ ಲೇಔಟ್‌ ಉಪ ಚುನಾವಣೆಗೆ ಈಗಾಗಲೇ 5 ಸುತ್ತಿನ ಮಾತುಕತೆ ಆಗಿದೆ. ಈಗಿರುವ ಅನರ್ಹ ಶಾಸಕರು ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಡುತ್ತಿದ್ದಾರೆ. ಭಯ ಹುಟ್ಟಿಸುತ್ತೇನೆ ಎಂದು ಅವರೇನಾದರೂ ಅಂದುಕೊಂಡಿದ್ದರೆ ಅದು ಆಗುವುದಿಲ್ಲ. ನಾನು ಅದಕ್ಕೆಲ್ಲ ಬಿಡುವುದಿಲ್ಲ. ಬೆದರಿಗೆ ಬಗ್ಗೆ ಸರ್ಕಾರ ಕೂಡಲೇ ಗಮನಹರಿಸಬೇಕು. ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು,’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT