ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗ್ಗರಿಸಿದ ದೇವೇಗೌಡ

ತಳ ಮಟ್ಟದಲ್ಲಿ ಬೆಸೆಯದ ಮೈತ್ರಿ; ಯಶ ಕಂಡ ಬಿಜೆಪಿ
Last Updated 23 ಮೇ 2019, 20:02 IST
ಅಕ್ಷರ ಗಾತ್ರ

ತುಮಕೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ತಮ್ಮ ಜೀವನದ ಸಂಧ್ಯಾಕಾಲದಲ್ಲಿ ರಾಜಕೀಯವಾಗಿ ಮುಗ್ಗರಿಸಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸುವ ವಿಶ್ವಾಸದಲ್ಲಿದ್ದ ಗೌಡರಿಗೆ ಚುನಾವಣಾ ಸೋಲು ತೀವ್ರ ಆಘಾತವನ್ನೇ ಉಂಟು ಮಾಡಿದೆ.

ಸಾಕಷ್ಟು ಅಳೆದು ತೂಗಿ ಕೊನೆ ಗಳಿಗೆಯಲ್ಲಿ ಗೌಡರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯುವ ನಿರ್ಧಾರ ಕೈಗೊಂಡರು. ಕ್ರಿಯಾಶೀಲ ಸಂಸದರೆನಿಸಿಕೊಂಡಿದ್ದ ಎಸ್‌.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್‌ ತಪ್ಪಿಸಿ ಮೈತ್ರಿ ಅಭ್ಯರ್ಥಿಯಾದ ಗೌಡರು ಆರಂಭದಲ್ಲಿಯೇ ಮುದ್ದಹನುಮೇಗೌಡ ಮತ್ತು ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಅವರಿಂದ ತೀವ್ರ ವಿರೋಧ ಎದುರಿಸಬೇಕಾಯಿತು.

ಹೈಕಮಾಂಡ್‌ ಮನವೊಲಿಕೆ ಬಳಿಕ ಕೊನೆಗಳಿಗೆಯಲ್ಲಿ ಮುದ್ದಹನುಮೇಗೌಡ ಮತ್ತು ರಾಜಣ್ಣ ನಾಮಪತ್ರ ವಾಪಸ್‌ ಪಡೆದರು. ಮೈತ್ರಿ ಪಕ್ಷಗಳ ಮುಖಂಡರು ಮೇಲ್ನೋಟಕ್ಕೆ ಒಗ್ಗಟ್ಟು ಪ್ರದರ್ಶಿಸಿದರೇ ಹೊರತು ತಳಮಟ್ಟದಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರನ್ನು ಬೆಸೆಯುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಲಿಲ್ಲ.

ಬಿಜೆಪಿ ಅಭ್ಯರ್ಥಿ ಜಿ.ಎಸ್‌.ಬಸವರಾಜು ಅವರ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಮುಖ್ಯ ಕಾರಣ. ಬಸವರಾಜು ಅವರ ಐದು ದಶಕಗಳ ರಾಜಕೀಯ ಅನುಭವದ ಜತೆಗೆ ಇಡೀ ಚುನಾವಣಾ ಪ್ರಕ್ರಿಯೆಯನ್ನು ಕಾರ್ಪೊರೇಟ್‌ ಶೈಲಿಯಲ್ಲಿ ನಿರ್ವಹಿಸಿದ್ದು ಬಿಜೆಪಿಗೆ ಗೆಲುವು ತಂದಿದೆ.

ತುಮಕೂರು ಜಿಲ್ಲೆಗೆ ಹೇಮಾವತಿ ನದಿ ನೀರನ್ನು ಹರಿಸಲು ಗೌಡರ ಕುಟುಂಬದವರು ಅಡ್ಡಿ ಮಾಡಿದರು, ಕುಟುಂಬ ರಾಜಕಾರಣದ ವಿಸ್ತರಣೆಗೆ ತುಮಕೂರು ಬಲಿಯಾಗುವುದು ಬೇಡ, ಗೌಡರು ಗೆದ್ದರೆ ಅವರನ್ನು ಹುಡುಕಿಕೊಂಡು ಎಲ್ಲಿಗೆ ಹೋಗುವುದು?– ಈ ವಿಚಾರಗಳನ್ನೇ ಬಿಜೆಪಿಯವರು ಪ್ರಧಾನವಾಗಿ ಪ್ರಸ್ತಾಪಿಸಿದರು. ಈ ಪ್ರಚಾರ ತಂತ್ರ ಫಲಿಸಿದೆ.

ಇನ್ನು ಬಿಜೆಪಿಯ ಉಸ್ತುವಾರಿ ವಹಿಸಿದ್ದ ಹಿರಿಯ ಮುಖಂಡ ವಿ.ಸೋಮಣ್ಣ ಅವರು ಒಂದು ಕಾಲದಲ್ಲಿ ದೇವೇಗೌಡರ ಜತೆಯಲ್ಲಿದ್ದವರೇ. ಸೋಮಣ್ಣ ಅವರ ರಾಜಕೀಯ ತಂತ್ರಗಾರಿಕೆಯು ಬಿಜೆಪಿಯ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದೆ. ಚುನಾವಣೆ ಘೋಷಣೆಗೂ ಮೊದಲು ಒಡೆದ ಮನೆಯಂತಿದ್ದ ಪಕ್ಷದಲ್ಲಿ ಅವರು ಒಗ್ಗಟ್ಟು ಮೂಡಿಸಿದರು. ಸೊಗಡು ಶಿವಣ್ಣ, ಬಿ.ಸುರೇಶಗೌಡ ಮೊದಲಾದ ಎಲ್ಲರೂ ಒಟ್ಟಾಗಿ ದುಡಿದದ್ದು ಫಲ ನೀಡಿದೆ.

ಜಾತಿ ಸಮೀಕರಣದ ತಂತ್ರಗಾರಿಕೆಯನ್ನು ಮಾಡುವುದರಲ್ಲಿ ಮತ್ತು ಅದರ ಲಾಭ ಪಡೆಯುವುದರಲ್ಲಿ ಬಿಜೆಪಿ ಯಶಸ್ಸು ಕಂಡಿದೆ. ಲಿಂಗಾಯಿತರು, ಒಕ್ಕಲಿಗರ ನಂತರ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳ ಮತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯುವಲ್ಲಿ ಸಫಲವಾಗಿದೆ.

ಮೈತ್ರಿ ಅಭ್ಯರ್ಥಿಯ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಕೊರಟಗೆರೆ ಕ್ಷೇತ್ರದಲ್ಲಿಯೂ ಗೌಡರಿಗೆ ಸಿಕ್ಕಿದ್ದು ಅಲ್ಪ ಮುನ್ನಡೆ ಮಾತ್ರ. ದಳ ಶಾಸಕರಿರುವ ಮಧುಗಿರಿ, ತುಮಕೂರು ಗ್ರಾಮಾಂತರಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸಿರುವುದು ಅಚ್ಚರಿ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT