ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವ್ಯತ್ಯಾಸ ಮರೆತು ದುಡಿಯೋಣ’: ಎಚ್‌.ಡಿ.ದೇವೇಗೌಡ

ಕೂಡ್ಲಿಗಿ ಪ್ರಚಾರ ಸಭೆಯಲ್ಲಿ ದೇವೇಗೌಡ, ಸಿದ್ದರಾಮಯ್ಯ
Last Updated 29 ಅಕ್ಟೋಬರ್ 2018, 20:22 IST
ಅಕ್ಷರ ಗಾತ್ರ

ಕೂಡ್ಲಿಗಿ (ಬಳ್ಳಾರಿ ಜಿಲ್ಲೆ): ‘ರಾಜ್ಯದಲ್ಲಿ ನಡೆಯುತ್ತಿರುವ 5 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಾವು ಗೆದ್ದರೆ ದೇಶದ ರಾಜಕೀಯ ಚಿತ್ರಣವೇ ಬದಲಾಗಲಿದೆ. ಆದ್ದರಿಂದ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಮರೆತು ಎಲ್ಲರೂ ಒಂದಾಗಿ ಚುನಾವಣೆ ಎದುರಿಸಬೇಕಾಗಿದೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ, ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಮೋದಿ ಪ್ರಧಾನಿಯಾದ ಮೊದಲ ವರ್ಷದಲ್ಲಿ ಕಾಶ್ಮೀರದಲ್ಲಿ ಅದ್ಧೂರಿಯಾಗಿ ದೀಪಾವಳಿ ಆಚರಿಸಿದರು. ಆ ಬಳಿಕ ಮತ್ತೆ ಅತ್ತ ತಿರುಗಿಯೂ ನೋಡಿಲ್ಲ. ಅಲ್ಲಿನ ಜನರ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ದೇಶದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಗುಜರಾತಿನಲ್ಲಿ ಪರಿಶಿಷ್ಟ ಜಾತಿಯವರನ್ನು ಬೆತ್ತಲೆ ಮಾಡಿ ಹೊಡೆಯಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ದನದ ಮಾಂಸದ ವಿಷಯವನ್ನು ಮುಂದಿಟ್ಟುಕೊಂಡು ಅಮಾಯಕರನ್ನು ಕೊಲ್ಲಲಾಗುತ್ತಿದೆ’ ಎಂದು ವಿಷಾದಿಸಿದರು.

ವೇದಿಕೆಯಲ್ಲಿದ್ದ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಹೆಗಲ ಮೇಲೆ ಕೈಹಾಕಿ ಮಾತನಾಡಿಸಿದರು.

ರೆಡ್ಡಿ ಅಪ್ಪ ಸಾಮ್ರಾಟನಾಗಿದ್ದನೇ?

‘ಜನಾರ್ದನ ರೆಡ್ಡಿ ತಪ್ಪು ಮಾಡಿ ಜೈಲಿಗೆ ಹೋಗದೇ ಬೀಗತನಕ್ಕೆ ಹೋಗಿದ್ದರೇ? ಗಣಿ ಹಣದಲ್ಲಿ ಬಂಗಾರದ ಕುರ್ಚಿ, ಕಮೋಡ್ ಮಾಡಿಸಿದ್ದ ರೆಡ್ಡಿಯ ಅಪ್ಪ ಸಾಮ್ರಾಟನಾಗಿದ್ದನೇ?’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಲೇವಡಿ ಮಾಡಿದರು.

‘ಸಿದ್ದರಾಮಯ್ಯ ಹಾಗೂ ಉಗ್ರಪ್ಪ ಸೇರಿ ತಮ್ಮ ವಿರುದ್ಧ ಸಂಚು ಮಾಡಿ ನಾಲ್ಕೂವರೆ ವರ್ಷ ಜೈಲಿನಲ್ಲಿ ಇರುವಂತೆ ಮಾಡಿದ್ದರು ಎಂದು ರೆಡ್ಡಿ ಹೇಳಿದ್ದಾರೆ. ಆ ಸಂಚನ್ನು ಅವರು ಸಾಬೀತುಪಡಿಸಲಿ’ ಎಂದು ಸವಾಲು ಹಾಕಿದರು. ‘ಬಳ್ಳಾರಿಗೆ ಬಂದರೆ ನೋಡಿಕೊಳ್ಳುವುದಾಗಿ ಜನಾರ್ದನ ರೆಡ್ಡಿ ವಿಧಾನಸೌಧದಲ್ಲಿ ಹಾಕಿದ್ದ ಸವಾಲನ್ನು ಸ್ವೀಕರಿಸಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ್ದೆ. ನಂತರ ಬಳ್ಳಾರಿಯ ಜನ ಭಯದ ವಾತಾವರಣದಿಂದ ಹೊರಬಂದರು’ ಎಂದರು.

‘ಉಗ್ರಪ್ಪ ಅವರ ಸತತ ಪ್ರಯತ್ನದಿಂದ ಕೂಡ್ಲಿಗಿ ಸೇರಿದಂತೆ ಮೊಳಕಾಲ್ಮುರು, ಚಳ್ಳಕೆರೆ, ಪಾವಗಡ ತಾಲ್ಲೂಕುಗಳಿಗೆ ₹ 2,250 ಕೋಟಿ ವೆಚ್ಚದ ನೀರಿನ ಯೋಜನೆ ಜಾರಿ ಮಾಡಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಸಾಧನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT