ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲವೂ ನನ್ನಿಂದಲೇ ಎನ್ನುವ ಮೋದಿ’- ಎಚ್‌.ಡಿ.ದೇವೇಗೌಡ

ದೇಶಪ್ರೇಮ ಅವರೊಬ್ಬರಿಗೇ ಇದೆ * ಹಳೆಯ ಯೋಜನೆಗಳಿಗೆ ಹೊಸ ಹೆಸರು ಕೊಟ್ಟಿದ್ದೇ ಸಾಧನೆ
Last Updated 5 ಮಾರ್ಚ್ 2019, 19:15 IST
ಅಕ್ಷರ ಗಾತ್ರ

ಬೆಂಗಳೂರು: ‘ವಾಜಪೇಯಿ ಕೈಲಾಗದೇ ಇದ್ದಿದ್ದು ತನ್ನಿಂದಾಗಿದೆ ಎಂಬ ಅಹಂ ಪ್ರಧಾನಿ ಮೋದಿ ಅವರಿಗಿದೆ. ಹೌದು, ಎಲ್ಲವನ್ನೂ ನಾನೇ ಮಾಡಿದ್ದು ಎಂಬ ಭಾವದಲ್ಲಿ ಓಡಾಡುತ್ತಿರುವ ಅವರಿಗೊಬ್ಬರಿಗೇ ದೇಶಪ್ರೇಮ ಇರುವುದು. ಇನ್ಯಾರಿಗೂ ಇಲ್ಲ’

–ಪ್ರಧಾನಿ ನರೇಂದ್ರ ಮೋದಿಯವರನ್ನು ಹೀಗೆಂದು ಹೀಯಾಳಿಸಿದವರು ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ. ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳಿಂದ ಮಂಗಳವಾರ ಏರ್ಪಡಿಸಲಾಗಿದ್ದ ಮುಕ್ತ ಸಂವಾದದಲ್ಲಿ ಅವರು ಮಾತನಾಡಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೊಂದಿಗೆ ಚರ್ಚಿಸಲು ನವದೆಹಲಿಗೆ ತೆರಳಬೇಕಿದ್ದ ಅವರು ವಿಮಾನ ಏರುವ ವೇಳೆ ಸಮೀಪಿಸುತ್ತಿದ್ದರೂ ಆತುರ ತೋರದೆ ಸಂವಾದದಲ್ಲಿ ಮುಕ್ತವಾಗಿ ಪಾಲ್ಗೊಂಡರು. ದಶಕಗಳ ಹಿಂದಿನ ತಮ್ಮ ರಾಜಕೀಯದ ನೆನಪುಗಳನ್ನು ಒಂದೊಂದಾಗಿ ಹೆಕ್ಕಿ ತೆಗೆದರು. ದಿನಾಂಕಗಳ ಸಹಿತ ಅಂದಿನ ಘಟನಾವಳಿಗಳು, ಅದಕ್ಕೆ ಸಾಕ್ಷಿಯಾದ ಸ್ಥಳಗಳು, ಸಂಬಂಧಿಸಿದ ವ್ಯಕ್ತಿಗಳು, ಅವರು ಆಡಿದ ಮಾತುಗಳನ್ನು ಎಳೆ ಎಳೆಯಾಗಿ ಸ್ಮರಿಸಿದರು. ಮಾತಿನ ಈ ಮಂಥನದಲ್ಲಿ ರಾಜ್ಯ ರಾಜಕೀಯದ ಹಲವು ಐತಿಹಾಸಿಕ ಕ್ಷಣಗಳು ಕೇಳುಗರ ಮನದಂಗಳದಲ್ಲಿ ಮೆರವಣಿಗೆ ಹೊರಟವು.

ಚರ್ಚೆ ಮೋದಿಯವರತ್ತ ತಿರುಗಿದ ಕೂಡಲೇ ಬತ್ತಳಿಕೆಯಿಂದ ಆಯ್ದ ಒಂದೊಂದೇ ಮಾತಿನ ಬಾಣವನ್ನು ಹೂಡಿದ ಗೌಡರು, ತಮ್ಮ ಎಂದಿನ ವ್ಯಂಗ್ಯಭರಿತ ಶೈಲಿಯಲ್ಲಿ ಅವರನ್ನು ಗೇಲಿ ಮಾಡಿದರು.

‘ಸ್ಥಾನದ ಗೌರವವನ್ನು ಉಳಿಸಿಕೊಂಡು ಮಾತನಾಡ ಬೇಕು. ಅಬ್ಬರದ ಪ್ರಚಾರ ತರವಲ್ಲ. ಆದರೆ, ಮಾಧ್ಯಮದವರಿಗೂ ಅವರ ಮೇಲೆ ಆಸಕ್ತಿ ಹೆಚ್ಚು. ಮಾತಿನ ಮೋಡಿಯಿಂದ ಎಲ್ಲವನ್ನೂ ಜಯಿಸಲು ಆಗುವುದಿಲ್ಲ. ತಪ್ಪು ಮಾಡಿದ್ದನ್ನು ಜನ ಎಂದಿಗೂ ಮರೆಯುವುದಿಲ್ಲ’ ಎಂದು ತಮ್ಮ ರಾಜಕೀಯ ಎದುರಾಳಿಗೆ ಕಿವಿಮಾತು ಹೇಳಿದರು.

‘2014ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ ಎಂದಿದ್ದರು ಮೋದಿ. ಆದರೆ, ಅವರು ಮಾಡಿದ್ದೇನು? ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಅಧಿಕಾರದಲ್ಲಿದ್ದ ಅವರ ಪಕ್ಷದ ಮುಖ್ಯಮಂತ್ರಿಗಳ ವಿರುದ್ಧವೇ ದೊಡ್ಡ ಆರೋಪಗಳು ಕೇಳಿಬಂದಾಗ ಸಂಸತ್‌ನಲ್ಲಿ ಅವರು ಶ್ರೀಮದ್ಗಾಂಭೀರ್ಯದಿಂದ ಮೌನವಾಗಿ ಕುಳಿತಿದ್ದರು’ ಎಂದು ಕುಟುಕಿದರು.

‘ಮಹಾ ಘಟಬಂಧನ್‌, ಮಹಾ ಬೆರಕೆ’ ಎಂಬ ಮೋದಿಯವರ ಟೀಕೆಗೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಗೌಡರು, ‘ಈ ದೇಶದ ಅಭಿವೃದ್ಧಿಗೆ ಒಂದು ಸುಸ್ಥಿರ ಸರ್ಕಾರ ಬೇಕು ಅನ್ನುವ ವಾದವಿದೆ. ಇದು ಮೋದಿಯವರ ಪೀಠಿಕೆ. ಹಾಗಾದರೆ ಅವರೇಕೆ ತಮಿಳುನಾಡಿನಲ್ಲಿ ಮೈತ್ರಿ ಮಾಡಿಕೊಳ್ಳಲು ಓಡಿಹೋದರು? ಅಷ್ಟೆಲ್ಲ ರಾದ್ಧಾಂತ ಮಾಡಿಕೊಂಡಿದ್ದ ಶಿವಸೇನಾ ಜತೆ ಏಕೆ ರಾಜಿ ಮಾಡಿಕೊಳ್ಳಲು ಮುಂದಾದರು? ಸರಳ ಬಹುಮತವೂ ಕಷ್ಟ ಎನ್ನುವುದು ಗೊತ್ತಿರುವುದರಿಂದಲೇ ಅವರ ಪಕ್ಷ ಮೈತ್ರಿಗಾಗಿ ಒದ್ದಾಡುತ್ತಿದೆ’ ಎಂದು ಹಂಗಿಸಿದರು.

‘ಸೈನಿಕರಿಗೆ ಶೂಗಳಿರಲಿಲ್ಲ, ಜಾಕೆಟ್‌ಗಳಿರಲಿಲ್ಲ ಎಂದೆಲ್ಲಾ ಅವರು ಹೇಳುತ್ತಾರಲ್ಲ, ವಾಜಪೇಯಿ ಅವರ ಅವಧಿಯಲ್ಲಿ ಭಾರತ ಕಾರ್ಗಿಲ್‌ ಯುದ್ಧವನ್ನು ಗೆದ್ದಾಗ ನಮ್ಮ ಸೈನಿಕರೇನು ಬರಿಗಾಲಲ್ಲಿ ಕಾದಾಡಿದರೇ’ ಎಂದು ಪ್ರಶ್ನಿಸಿದರು. ‘ಮೋದಿಯವರು ಎಲ್ಲವೂ ತನ್ನಿಂದಲೇ ಎಂದು ಹೇಳುವುದಾದರೆ ನೆಹರೂ, ಇಂದಿರಾ, ಮನಮೋಹನ್‌ ಸಿಂಗ್‌, ವಾಜಪೇಯಿ ಹಾಗೂ ನನ್ನ ಸರ್ಕಾರಗಳು ಈ ದೇಶಕ್ಕೆ ಏನೂ ಮಾಡಲಿಲ್ಲವೇ’ ಎಂದೂ ಕೇಳಿದರು.

‘ಹಾಗಾದರೆ ಮೋದಿಯವರಿಂದ ಯಾವ ಕೆಲಸವೂ ಆಗಿಲ್ಲವೇ’ ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಉತ್ತರಿಸಿದ ಗೌಡರು, ‘ಮೋದಿ ಸರ್ಕಾರ ಏನೇನೂ ಮಾಡಿಲ್ಲ ಎಂದು ನಾನು ಹೇಳುವುದಿಲ್ಲ. ಹಳೆಯ ಯೋಜನೆಗಳಿಗೆ ಹೊಸ ಹೆಸರು ಇಟ್ಟಿದ್ದಾರೆ. ಆ ಕೆಲಸಗಳನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ. ಸ್ವಚ್ಛ ಭಾರತ ಹೊಸದೇ? ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಮೊದಲಿನಿಂದಲೂ ಇರಲಿಲ್ಲವೇ’ ಎಂಬ ಪ್ರಶ್ನೆ ಎತ್ತಿದರು.

ಗೌಡರ ಮಾತಿನ ಈ ಪರಿ

*ಆಧುನಿಕ ತಂತ್ರಜ್ಞಾನದ ನೆರವಿನಿಂದ ಮೋದಿ ಏಕಕಾಲದಲ್ಲಿ 20 ಕಡೆ ಭಾಷಣ ಮಾಡುವಂತಹ ವ್ಯವಸ್ಥೆ ಮಾಡಿಕೊಂಡಿದ್ದಾರೆ

*ನಾನು ಪ್ರಧಾನಿಯಾಗಿದ್ದಾಗ ಬೇರೆ ದೇಶಕ್ಕೆ ಹೋಗಬೇಕೆಂದು ಹಂಬಲಿಸಿದವನ್ನಲ್ಲ. ನನ್ನ ದೇಶವನ್ನು ಸುತ್ತಿ ಸಮಸ್ಯೆಗಳನ್ನು ತಿಳಿಯಲು ಬಯಸಿದವನು

*ನಮಗೆ ಅವರಂತೆ ಮಾಧ್ಯಮ ಮ್ಯಾನೇಜ್‌ ಮಾಡುವ ಕಲೆ ಗೊತ್ತಿಲ್ಲ. ಮಾಡಿದ ಕೆಲಸಗಳ ಕುರಿತು ತಮಟೆಯನ್ನೂ ಹೊಡೆಯಲಿಲ್ಲ

*ದೇಶದ ಅಭಿವೃದ್ಧಿಗೆ ಸುಸ್ಥಿರ ಸರ್ಕಾರ ಬೇಕು ಎಂಬ ಅಭಿಪ್ರಾಯ ಬಿತ್ತಲಾಗಿದೆ. 21 ಪಕ್ಷಗಳ ನೆರವಿನ ವಾಜಪೇಯಿ ಸರ್ಕಾರ ಕಾರ್ಗಿಲ್‌ ಯುದ್ಧ ಜಯಿಸಲಿಲ್ಲವೇ?

*ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಅಂತ ತೀರ್ಮಾನ ಮಾಡಿಲ್ಲ. ಸಂಸತ್ತಿನಲ್ಲಿ ಇದೇ ನನ್ನ ಕೊನೆಯ ಭಾಷಣ ಅಂತ ಮಾತನಾಡೋಕೆ ಅವಕಾಶ ಪಡೆದುಕೊಂಡಿದ್ದೆ

*ಮೈತ್ರಿ ಸರ್ಕಾರಕ್ಕೆ ಅಪಾಯ ಆಗಬಾರದು ಎಂಬ ಉದ್ದೇಶದಿಂದ ಚುನಾವಣೆಗೆ ಇನ್ನೂ ಪೂರ್ವತಯಾರಿ ಆರಂಭಿಸಿಲ್ಲ. ಭಿನ್ನಾಭಿಪ್ರಾಯ, ನ್ಯೂನತೆಗಳ ನಡುವೆಯೂ ಕುಮಾರಸ್ವಾಮಿ ಸರ್ಕಾರ ಒಳ್ಳೆಯ ಆಡಳಿತ ನೀಡುತ್ತಿದೆ

ಪ್ರಧಾನಿ ಪಟ್ಟ: ರಾಹುಲ್‌ಗೆ ಬೆಂಬಲ

‘ರಾಹುಲ್ ಗಾಂಧಿ ಅವರ ಬೆಂಬಲದಿಂದಲೇ ನನ್ನ ಮಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾನೆ. ಹೀಗಾಗಿ ರಾಹುಲ್‌ ಪ್ರಧಾನಿಯಾಗಲು ಬೆಂಬಲ ಸೂಚಿಸಬೇಕಾಗಿರುವುದು ನನ್ನ ಧರ್ಮ. ಅವರು ಪ್ರಧಾನಿಯಾಗಲು ಸಹಾಯ ಮಾಡುವೆ’ ಎಂದು ದೇವೇಗೌಡ ಹೇಳಿದರು.

‘ಮಹಾ ಘಟಬಂಧನ್‌ ಬಹುಮತ ಪಡೆದರೆ, ಪ್ರಧಾನಿ ಅಭ್ಯರ್ಥಿಯಾಗಿ ಯಾರನ್ನು ಬೆಂಬಲಿಸುತ್ತೀರಿ’ ಎಂಬ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.

‘ಮಮತಾ ಬ್ಯಾನರ್ಜಿ ಅವರಿಗೂ ಪ್ರಧಾನಿಯಾಗುವ ಆಸೆ ಇರಬಹುದು. ಆಕೆ ಪ್ರಬಲ ಹೋರಾಟಗಾರ್ತಿ. ಸರಳ ಜೀವನ ನಡೆಸುತ್ತಾರೆ. ಯಾರು, ಏನೇ ಹೇಳಿದರೂ ಅವರು ಭ್ರಷ್ಟರು ಎಂದು ನಂಬಲು ಆಗುವುದಿಲ್ಲ. ಮಾಯಾವತಿ, ಚಂದ್ರಬಾಬು ನಾಯ್ಡು ಅವರಿಗೂ ಆಸೆ ಇರಬಹುದು. ಅಂತಿಮ ನಿರ್ಧಾರ ಕೈಗೊಳ್ಳುವಾಗ ಎಲ್ಲ ಪಕ್ಷಗಳ ಅಭಿಪ್ರಾಯ ಮುಖ್ಯ’ ಎಂದು ಹೇಳಿದರು.

ಸ್ಪರ್ಧೆ: ಇನ್ನೂ ನಿರ್ಧಾರವಿಲ್ಲ

‘ನನಗೀಗ 86 ವರ್ಷ ವಯಸ್ಸು. ಇನ್ನು ಚುನಾವಣೆಗೆ ಸ್ಪರ್ಧಿಸುವ ಮನಸ್ಸಿಲ್ಲ. ಅದೇ ಕಾರಣದಿಂದ ಸಂಸತ್ತಿನಲ್ಲಿ ನನ್ನ ಕೊನೆಯ ಭಾಷಣ ಎಂದು ಮಾತನಾಡಿದ್ದೆ. ಆದರೆ, ಸ್ನೇಹಿತರೆಲ್ಲ ಸ್ಪರ್ಧೆಗೆ ಒತ್ತಾಯಿಸುತ್ತಿದ್ದಾರೆ’ ಎಂದು ದೇವೇಗೌಡ ಹೇಳಿದರು.

‘ಹಾಗಾದರೆ ಸ್ಪರ್ಧಿಸುತ್ತೀರೋ, ಇಲ್ಲವೋ’ ಎಂಬ ನೇರಪ್ರಶ್ನೆಗೆ, ‘ನನಗೆ ಮನಸ್ಸಿಲ್ಲ. ಸನ್ನಿವೇಶ ಹೇಗೆ ಬರುತ್ತದೋ ನೋಡೋಣ’ ಎಂದು ಕುತೂಹಲವನ್ನು ಅವರು ಹಾಗೇ ಉಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT