ಮಂಗಳವಾರ, ಸೆಪ್ಟೆಂಬರ್ 28, 2021
23 °C

ಮೈತ್ರಿಧರ್ಮ ಪಾಲಿಸುವಂತೆ ದೇವೇಗೌಡ ತಾಕೀತು: ಸಿದ್ದರಾಮಯ್ಯ–ಎಚ್‌ಡಿಕೆ ಮಾತುಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಬೆಂಗಳೂರು/ಹುಬ್ಬಳ್ಳಿ: ‘ಮಿತ್ರ ಪಕ್ಷದ ಸದಸ್ಯರ ಬಗ್ಗೆ ಗೌರವದೊಂದಿಗೆ ನಡೆದುಕೊಳ್ಳುವ ಮೂಲಕ ಮೈತ್ರಿ ಧರ್ಮ ಪಾಲಿಸುವಂತೆ ಸೂಚಿಸಬೇಕು’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಕಾಂಗ್ರೆಸ್‌ ವರಿಷ್ಠರಿಗೆ ತಾಕೀತು ಮಾಡಿದ್ದಾರೆ.

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರಿಗೆ ಮಂಗಳವಾರ ದೂರವಾಣಿ ಕರೆ ಮಾಡಿರುವ ಗೌಡರು, ‘ಲೋಕಸಭೆ ಚುನಾವಣೆ ನಂತರ ಜೆಡಿಎಸ್‌ ಮುಖಂಡರ ನಡೆ ಹಾಗೂ ಸರ್ಕಾರದ ಅಸ್ತಿತ್ವದ ಕುರಿತು ಕಾಂಗ್ರೆಸ್‌ ಮುಖಂಡರು ವಿವಾದಾತ್ಮಕ ಹೇಳಿಕೆ ನೀಡುತ್ತ ಮುಜುಗರ ಉಂಟು ಮಾಡುತ್ತಿದ್ದಾರೆ. ಈ ಕುರಿತು ಗಮನ ಹರಿಸದಿದ್ದರೆ ಮೈತ್ರಿ ಸರ್ಕಾರ ಸಂಕಷ್ಟದಲ್ಲಿ ಸಿಲುಕಿಕೊಳ್ಳಲಿದೆ ಎಂದು ತಿಳಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಜೆಡಿಎಸ್‌ ಮುಖಂಡರೂ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಮೈತ್ರಿ ಧರ್ಮದ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ಇಂತಹ ಬೆಳವಣಿಗೆಗಳೇ ಉಭಯ ಪಕ್ಷಗಳ ಮುಖಂಡರು ವಿವಾದ ಸೃಷ್ಟಿಸುವಂತಹ ಹೇಳಿಕೆ ನೀಡುವುದಕ್ಕೆ ಪ್ರೇರಣೆಯಾಗಿದೆ’ ಎಂದು ವೇಣುಗೋಪಾಲ್‌ ಅವರು ದೇವೇಗೌಡರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.

‘ಯಾವುದೇ ರೀತಿಯ ಹೇಳಿಕೆ ನೀಡದಂತೆ ನಮ್ಮ ಪಕ್ಷದವರಿಗೆ ಸೂಚಿಸಲಾಗಿದೆ. ಲೋಕಸಭೆ ಚುನಾವಣೆಯ ಫಲಿತಾಂಶ ಯಾವುದೇ ರೀತಿಯದ್ದಾದರೂ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆ ಆಗದಂತೆ ಈಗಿನಿಂದಲೇ ಎಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ’ ಎಂದು  ವೇಣುಗೋಪಾಲ್‌ ಅವರಿಗೆ ಗೌಡರು ಹೇಳಿದರು ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ–ಎಚ್‌ಡಿಕೆ ಮಾತುಕತೆ: ಮೈತ್ರಿ ನಾಯಕರ ಮಧ್ಯೆ ಮಾತಿನ ಸಮರ ತಾರಕಕ್ಕೇರಿದ ಬೆನ್ನಲ್ಲೇ ಸಿದ್ದರಾಮಯ್ಯ ಜತೆ ದೂರವಾಣಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ‘ಮೈತ್ರಿ ಸರ್ಕಾರ ಎಂದ ಮೇಲೆ ಸಣ್ಣಪುಟ್ಟ ಅಸಮಾಧಾನ, ಇರಿಸುಮುರಿಸು ಇದ್ದಿದ್ದೆ. ಅಣ್ಣ ತಮ್ಮಂದಿರಂತೆ ಒಟ್ಟಿಗೆ ಸೇರಿ ಕೆಲಸ ಮಾಡಿಕೊಂಡು ಹೋಗೋಣ. ಇದನ್ನು ಇನ್ನು ಮುಂದುವರಿಸಬೇಡಿ’ ಎಂದು ಮನವಿ ಮಾಡಿದ್ದಾಗಿ ಗೊತ್ತಾಗಿದೆ

ಸೋಮವಾರ ಹುಬ್ಬಳ್ಳಿಗೆ ಬಂದಿದ್ದ ಕುಮಾರಸ್ವಾಮಿ ಡೆನಿಸನ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಮಂಗಳವಾರ ಇಲ್ಲಿಗೆ ಬಂದ ಸಿದ್ದರಾಮಯ್ಯ ಅವರೂ 10 ಗಂಟೆ ಸುಮಾರಿಗೆ ಅದೇ ಹೋಟೆಲ್‌ಗೆ ಹೋಗಿ, ಅಲ್ಲಿಯೇ ಉಪಾಹಾರ ಸೇವಿಸಿದರು. ಹೋಟೆಲ್‌ನಲ್ಲೇ ಇದ್ದ ಕುಮಾರಸ್ವಾಮಿ ಕೆಳಗೆ ಇಳಿದು ಬರಲಿಲ್ಲ. 

ನಂತರ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ ಕುಮಾರಸ್ವಾಮಿ, ಮೂರು ದಿನಗಳಿಂದ ನಡೆದ ವಾಕ್ಸಮರ ಕುರಿತು ಪ್ರಸ್ತಾಪಿಸಿದರು. ‘ಎರಡೂ ಕಡೆಯವರಿಂದ ಬಾಯಿ ತಪ್ಪಿ ಮಾತುಗಳು ಹೊರಬಿದ್ದಿವೆ. ಇದನ್ನು ಇಲ್ಲಿಗೆ ನಿಲ್ಲಿಸಿಬಿಡೋಣ’ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.

‘ಕುಮಾರಸ್ವಾಮಿ ಅವರನ್ನು ಭೇಟಿಯಾಗಿಲ್ಲ. ಆದರೆ, ಫೋನ್‌ನಲ್ಲಿ ಮಾತನಾಡಿದ್ದೇನೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ’ ಎಂದು ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.

‘ನಮ್ಮ ನಾಯಕರು ಹೋಟೆಲ್‌ನಲ್ಲಿ ಭೇಟಿಯಾಗದೇ ಇದ್ದರೂ ಫೋನ್‌ನಲ್ಲಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದಾರೆ. ಮೈತ್ರಿ ನಾಯಕರ ಮಧ್ಯೆ ಇದ್ದ ಸಣ್ಣಪುಟ್ಟ ಗೊಂದಲಗಳು ಬಗೆಹರಿದಿದೆ. ಅಣ್ಣ ತಮ್ಮಂದಿರಂತೆ ಒಟ್ಟಿಗೆ ಕೆಲಸ ಮಾಡಿಕೊಂಡು ಹೋಗಲಿದ್ದೇವೆ’ ಎಂದು ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು