ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸೇರಲು ದೇವೇಗೌಡರ ಬಯಕೆ: ಎಸ್‌.ಎಂ. ಕೃಷ್ಣ ಬಿಚ್ಚಿಟ್ಟ ಸತ್ಯ

‘ಸ್ಮೃತಿ ವಾಹಿನಿ’ಯಲ್ಲಿ ‘ರಾಜಕೀಯ’ ನೆನಪು
Last Updated 25 ಡಿಸೆಂಬರ್ 2019, 2:18 IST
ಅಕ್ಷರ ಗಾತ್ರ

ಬೆಂಗಳೂರು: ‘ಎಂಬತ್ತರ ದಶಕದಲ್ಲಿ ಎಚ್‌.ಡಿ. ದೇವೇಗೌಡ ಹಾಗೂ ಎಸ್.ಆರ್. ಬೊಮ್ಮಾಯಿ ಕಾಂಗ್ರೆಸ್‌ ಸೇರುವ ಬಯಕೆ ವ್ಯಕ್ತಪಡಿಸಿದ್ದರು.ಆಟೋರಿಕ್ಷಾದಲ್ಲಿ ನನ್ನ ಮನೆಗೆ ಬಂದಿದ್ದ ಗೌಡರು, ‘ವಿರೋಧ ಪಕ್ಷದಲ್ಲಿ ಒಗ್ಗಟ್ಟಿಲ್ಲ, ಒಂದು ನೀತಿ ಇಲ್ಲ. ನಾನು ಕಾಂಗ್ರೆಸ್ ಸೇರುವ ಮನಸ್ಸು ಮಾಡಿದ್ದೇನೆ’ ಎಂಬುದಾಗಿ ಹೇಳಿದ್ದರು...’

- ಬಿಜೆಪಿಯ ಹಿರಿಯ ರಾಜಕಾರಣಿ ಎಸ್‌.ಎಂ. ಕೃಷ್ಣ ಅವರ ಸಂದರ್ಶನ ಆಧಾರಿತ ಪುಸ್ತಕ ‘ಸ್ಮೃತಿ ವಾಹಿನಿ’ಯಲ್ಲಿ ಇಂತಹದೊಂದು ಉಲ್ಲೇಖವಿದೆ. ಜನವರಿ 4ರಂದು ಬಿಡುಗಡೆಯಾಗಲಿರುವ ಈ ಪುಸ್ತಕದಲ್ಲಿ ‘ದೇವೇಗೌಡ ಮತ್ತು ಬೊಮ್ಮಾಯಿ– ಕಾಂಗ್ರೆಸ್ ಸೇರುವ ಬಯಕೆ’ ಎಂಬ ಅಧ್ಯಾಯವಿದ್ದು, ಆ ಕಾಲದ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಅವರು ವಿವರವಾಗಿ ಮಾತನಾಡಿದ್ದಾರೆ.

ಕೃಷ್ಣ ಹೇಳಿರುವುದೇನು?

‘80 ದಶಕದಲ್ಲಿ ಜನತಾ ಪಕ್ಷದ ಪ್ರಧಾನಿ ಚರಣಸಿಂಗ್‌ ಅವರು ವಿಶ್ವಾಸ ಮತ ಯಾಚನೆಗಾಗಿ ಲೋಕಸಭೆಯ ತುರ್ತು ಅಧಿವೇಶನ ಕರೆದಿದ್ದರು. ವಿಐಪಿ ಗ್ಯಾಲರಿಯಲ್ಲಿದ್ದ ನನ್ನ ಜತೆ ದೇವೇಗೌಡ, ಬೊಮ್ಮಾಯಿ ಕೂಡ ಇದ್ದರು. ವಿಶ್ವಾಸ ಮತ ಸಾಬೀತುಪಡಿಸಲಾಗದೇ ಚರಣಸಿಂಗ್ ರಾಜೀನಾಮೆ ಕೊಟ್ಟರು. ಬಳಿಕ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಕಾಫಿ ಕುಡಿಯುವಾಗ ‘ದೇವೇಗೌಡ್ರೆ, ಬೊಮ್ಮಾಯಿ ಸಾಹೇಬರೇ ತಾವುಗಳು ಇನ್ನೂ ಏಕೆ ಜನತಾ ಪಾರ್ಟಿ ಅಂತ ಬಡಿದಾಡುತ್ತೀರಾ. ಈಗಾಗಲೇ ಕಾಂಗ್ರೆಸ್ ಸೇರಿರುವ ಚರಣಸಿಂಗ್‌ರಂತಹ ನಾಯಕರನ್ನು ಕಟ್ಟಿಕೊಂಡು ಏನು ಮಾಡಲು ಸಾಧ್ಯ. ನಿಮ್ಮ ರಾಜಕೀಯ ಭವಿಷ್ಯವನ್ನು ಪುನರ್‌ಚಿಂತನೆ ಮಾಡಬೇಕು’ ಎಂದು ಒತ್ತಾಯಿಸಿದೆ. ಇಬ್ಬರೂ ಸಮ್ಮತಿಸಿದರು.

ಪ್ರಣವ್ ಮುಖರ್ಜಿ ಅವರನ್ನು ಒಪ್ಪಿಸಲಾಯಿತು. ಇಂದಿರಾಗಾಂಧಿಯವರಿಗೆ ರಿಪೋರ್ಟ್‌ ಮಾಡಲೇ ಎಂದು ಪ್ರಣವ್ ಮುಖರ್ಜಿ ಕೇಳಿದಾಗ, ಇಬ್ಬರು ನಾಯಕರೂ ಒಪ್ಪಿದರು. ಬೆಂಗಳೂರಿಗೆ ಹೋಗಿ ಒಡನಾಡಿಗಳನ್ನು ಸಂಪರ್ಕಿಸಿ ನಿರ್ಣಯವೊಂದನ್ನು ತಮಗೆ ಕಳುಹಿಸುತ್ತೇವೆ ಎಂದು ಹೇಳಿದರು. ಒಮ್ಮತದ ನಿರ್ಣಯಕ್ಕೆ ಬರಲು ಅವರಿಗೆ ಸಾಧ್ಯವಾಗದೇ ಹೋಗಿರಬಹುದು. ಸರಿಯಾಗಿ ಪ್ಲಾನ್ ಮಾಡಿದ್ದರೆ ವೀರೇಂದ್ರಪಾಟೀಲರಂತೆ ದೇವೇಗೌಡ, ಬೊಮ್ಮಾಯಿ ಇಬ್ಬರೂ ಆ ಕಾಲದಲ್ಲೇ ಕಾಂಗ್ರೆಸ್ ಸೇರಿಬಿಡುತ್ತಿದ್ದರು. ಅವರು ಕಾಂಗ್ರೆಸ್‌ ಮನಸ್ಥಿತಿಯಲ್ಲಿದ್ದರು ಎಂಬುದು ಸ್ಪಷ್ಟವಾಗುತ್ತದೆ.

ಅದಾದ ಬಳಿಕ ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿದ್ದ ದೇವೇಗೌಡರು ಪೆರೋಲ್ ಮೇಲೆ ಹೊರಗಡೆ ಬಂದರು. ಆಗ ಅಸಿಸ್ಟೆಂಟ್ ಕಮಿಷನರ್ ಆಗಿದ್ದ ಶಿವರಾಂ ಕೆಲಕಾಲ ನನ್ನ ಆಪ್ತ ಕಾರ್ಯದರ್ಶಿಯಾಗಿದ್ದರು. ಒಂದು ದಿನ ಶಿವರಾಂ ಅವರು, ‘ದೇವೇಗೌಡರು ನಿಮ್ಮನ್ನು ಖಾಸಗಿಯಾಗಿ ಭೇಟಿಯಾಗಬೇಕಂತೆ. ಒಂದೂವರೆಯಿಂದ ನಾಲ್ಕು ಗಂಟೆಯವರೆಗೆ ಯಾರೂ ಇರುವುದಿಲ್ಲ. ಎಲ್ಲ ಊಟಕ್ಕೆ ಹೋಗಿರುತ್ತಾರೆ ಆವಾಗ ಬನ್ನಿ ಎಂದು ಗೌಡರಿಗೆ ಹೇಳಿದ್ದೇನೆ. ‘ನಾನು ಕಾರಿನಲ್ಲಿ ಬರುವುದಿಲ್ಲ. ಆಟೋರಿಕ್ಷಾದಲ್ಲಿ ಬರುತ್ತೇನೆ’ ಎಂದು ಗೌಡರು ಹೇಳಿದ್ದಾರೆ’ ಎಂದು ತಿಳಿಸಿದರು.

ಆಟೋರಿಕ್ಷಾದಲ್ಲಿ ಮನೆಗೆ ಬಂದ ಗೌಡರು, ‘ಕೃಷ್ಣ ನನಗೆ ತುಂಬಾ ಬೇಜಾರಾಗಿದೆ. ವಿರೋಧ ಪಕ್ಷದಲ್ಲಿ ಒಗ್ಗಟ್ಟಿಲ್ಲ, ಒಂದು ನೀತಿಯಿಲ್ಲ. ನಾನು ಕಾಂಗ್ರೆಸ್‌ ಸೇರುವ ಮನಸ್ಸು ಮಾಡಿದ್ದೇನೆ’ ಎಂದರು. ಆಗ ನಾನು ಮಾತನಾಡುತ್ತಾ ‘ಈಗ ತಾನೇ ಮುಖ್ಯಮಂತ್ರಿ ದೇವರಾಜ ಅರಸ್‌ ವಿರುದ್ಧ 18 ಆಪಾದನೆ ಮಾಡಿ, ಇವುಗಳನ್ನು ನಾನು ಋಜುವಾತು ಮಾಡದೇ ಇದ್ದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವುದಾಗಿ ಹೇಳಿದ್ದೀರಿ. ಈಗ ಕಾಂಗ್ರೆಸ್‌ಗೆ ಬಂದರೆ ಜನಗಳ ಮುಂದೆ ನಿಮ್ಮ ಘನತೆ ಏನಾಗುತ್ತದೆ? ಅರಸ್‌ ಅವರನ್ನು ತೆಗೆದುಹಾಕಿ, ನಾವು ನಿಮ್ಮ ಜತೆಗೆ ಬರುತ್ತೇವೆ ಅಂಥ ಕಂಡೀಷನ್ ಹಾಕಿದರೆ ಅದಕ್ಕೊಂದು ಅರ್ಥವಿದೆ. ಆಗ ನೀವು ಕಾಂಗ್ರೆಸ್ ಸೇರಿದರೆ ನಿಮಗೆ ಘನತೆ ಬರುತ್ತದೆಯಲ್ಲವೇ’ ಎಂದೆ. ಸ್ವಲ್ಪ ಹೊತ್ತು ಮೌನಿಯಾದ ಗೌಡರು, ‘ಕೃಷ್ಣ, ನೀನು ಹೇಳುವುದರಲ್ಲೂ ಸತ್ಯ ಇದೆ. ನಾನು ಏಕಾಏಕಿ ದುಡುಕುವುದಿಲ್ಲ’ ಎಂದರು.

ಸೋನಿಯಾ ಬಗ್ಗೆ ಮತೀಯ ಶಕ್ತಿಗಳ ಟೀಕೆ:‘ಸೋನಿಯಾಗಾಂಧಿ ವಿದೇಶಿ ಮಹಿಳೆ ಎಂದು ಮತೀಯ ಶಕ್ತಿಗಳು ಸಾಕಷ್ಟು ಗಂಟೆ ಬಾರಿಸುತ್ತಾ ಇರುತ್ತಾರೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸ್ಥಾಪನೆ ಮಾಡಿದವರು ಕೂಡ ಒಬ್ಬ ವಿದೇಶಿಯರೇ. ಸೋನಿಯಾಗಾಂಧಿ ಭಾರತೀಯ ಸೊಸೆಯಾದ ಮೇಲೆ ಅವರು ಭಾರತೀಯರೇ ಅಲ್ಲವೇ? ಅವರು ಭಾರತವನ್ನು ತನ್ನ ತಾಯ್ನಾಡಿಗಿಂತ ಹೆಚ್ಚು ಪ್ರೀತಿಸಿದ್ದಾರೆ. ಆದರೆ, ಮತೀಯ ಶಕ್ತಿಗಳು ಅದನ್ನು ಒಪ್ಪಲಾರರೇನೋ. ಅದನ್ನು ಆಗಾಗ ಕೆದಕುತ್ತಿರುತ್ತಾರೆ. 2004 ಹಾಗೂ 2009ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯರು ಅದಕ್ಕೆ ಸ್ಪಷ್ಟ ಉತ್ತರ ಕೊಟ್ಟಿದ್ದಾರೆ’ ಎಂದು ಕೃಷ್ಣ ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT