ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಿನ್ನುವ ಅನ್ನದ ಅಗುಳ ಮೇಲೆ ಕುಮಾರಣ್ಣನ ಹೆಸರಿದೆ ಎಂದಿದ್ದ ಸಿಂಗ್‌ ಮೋಸ ಮಾಡಿದರು’

Last Updated 1 ಡಿಸೆಂಬರ್ 2019, 10:46 IST
ಅಕ್ಷರ ಗಾತ್ರ

ಕಮಲಾಪುರ(ಹೊಸಪೇಟೆ ತಾಲ್ಲೂಕು):'ಕುಮಾರಣ್ಣ ನಿನ್ನಿಂದ ನಾನು ಬದುಕಿದೆ ಎನ್ನುತ್ತಿದ್ದ ಆನಂದ್ ಸಿಂಗ್ ಬಿಜೆಪಿ ಸೇರಿ ನನ್ನ ಬೆನ್ನಿಗೆ‌ ಚೂರಿ ಹಾಕಿದರು' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಪಟ್ಟಣದಲ್ಲಿ ಸೋಮವಾರ ವಿಜಯನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್.ಎಂ.ನಬಿ ಅವರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 'ನಾನು ತಿನ್ನುವ ಅನ್ನದ ಪ್ರತಿ ಅನ್ನದ ಅಗುಳಿನ ಮೇಲೂ ಕುಮಾರಸ್ವಾಮಿ ಹೆಸರಿದೆ ಎನ್ನುತ್ತಿದ್ದರು. ಆದರೆ
ನನ್ನಿಂದ ಸಹಾಯ ಪಡೆದು ಬಿಜೆಪಿಗೆ ಹೋದರು. ಅವರು ಮತದಾರರಿಗೆ ಕೊಡುವ ಹಣ ಬೆವರು ಹರಿಸಿ ದುಡಿದಿದ್ದಲ್ಲ. ಜಿಲ್ಲೆಯ ಅದಿರು ಸಂಪತ್ತನ್ನು ಮಾರಾಟ ಮಾಡಿ ಗಳಿಸಿದ ಹಣ. ಹೀಗಾಗಿ ಮತದಾರರು ಎಚ್ಚರಿಕೆಯಿಂದ ಮತದಾನ ಮಾಡಬೇಕು' ಎಂದರು.

'ಆನಂದ್ ಸಿಂಗ್ 2008ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2013 ರಲ್ಲಿ ಮತ್ತೆ ಗೆದ್ದರು. 2018 ರಲ್ಲಿ ಮತ್ತೆ ಕಾಂಗ್ರೆಸ್ ಸೇರಿ ಮತ್ತೆ ಗೆದ್ದು ರಾಜೀನಾಮೆ ನೀಡುವ ಬದಲು ಬಿಜೆಪಿಯಲ್ಲೇ ಉಳಿಯಬೇಕಿತ್ತು.
2018 ರಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಬರುವ ಮುನ್ನವೇ ವಿಜಯನಗರ ಸಾಮ್ರಾಜ್ಯವನ್ನು ಆನಂದ್ ಸಿಂಗ್ ಏಕೆ ಕಟ್ಟಲಿಲ? ಬಿಜೆಪಿ ಸರ್ಕಾರ ಇದ್ದಾಗಲೇ ಏಕೆ ಜಿಲ್ಲೆ ಬಗ್ಗೆ ಮಾತನಾಡಲಿಲ್ಲ?' ಎಂದು ಕುಮಾರಸ್ವಾಮಿ ಆಕ್ಷೇಪಿಸಿದರು.

'ಅನರ್ಹರಿಗಾಗಿ ಪ್ರಾಣತ್ಯಾಗದ ಮಾತನಾಡಿರುವ ಯಡಿಯೂರಪ್ಪ ರಾಜ್ಯದ ಆರೂವರೆ ಕೋಟಿ ಜನರ ಪರವಾಗಿ ಮಾತನಾಡಿದ್ದರೆ ಅವರಿಗೆ ದೀರ್ಘ ದಂಡ ನಮಸ್ಕಾರ ಮಾಡುತ್ತಿದ್ದೆ.
ವೀರಶೈವರನ್ನು ಬಿಟ್ಟು ಬೇರೆ ಯಾರ ಮತಗಳೂ ಬೇಡ ಎನ್ನುವ ಮೂಲಕ ಅವರು ಆ ಸಮುದಾಯವನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇತರೆ ಸಮುದಾಯದವರನ್ನೂ ಅವಮಾನಿಸಿದ್ದಾರೆ. ವಿಜಯನಗರ ಕ್ಷೇತ್ರದಲ್ಲಿ ಮುಸಲ್ಮಾನರು ಒಗ್ಗಟ್ಟಾದರೆ ನಬಿ ಅವರನ್ನು ಗೆಲ್ಲಿಸಲು ಬೇರೆ ಪ್ರಯತ್ನ ಬೇಕಾಗುವುದಿಲ್ಲ' ಎಂದು ಪ್ರತಿಪಾದಿಸಿದರು.

'ಪಕ್ಷಾಂತರದಿಂದ ನಡೆಯುತ್ತಿರುವ ಉಪಚುನಾವಣೆಗೆ ಸರ್ಕಾರದ ಸುಮಾರು 35 ಕೋಟಿ ರುಪಾಯಿ ಖರ್ಚಾಗುತ್ತದೆ. ಅದು ಜನರ ತೆರಿಗೆ ಹಣ. 50 ಕೋಟಿ ರುಪಾಯಿ ಸಂಗ್ರಹಿಸಿ ಯಡಿಯೂರಪ್ಪ ಉಪ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಅವರನ್ನು ಸೋಲಿಸಿದರೆ ಮಾತ್ರ ರಾಜ್ಯದ ಜನರ ಬದುಕು ಸುಭಿಕ್ಷವಾಗುತ್ತದೆ ಎಂದರು.

'14 ತಿಂಗಳು ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ನಡೆಸಲು ಹಲವು ಸಮಸ್ಯೆಗಳನ್ನು ಎದುರಿಸಿದೆ. ರೈತರ ಸಾಲ ಮನ್ನಾ ನನ್ನ ಉದ್ದೇಶವಾಗಿತ್ತು. ಸುಮಾರು 25 ಸಾವಿರ ಕೋಟಿ ರುಪಾಯಿ ಸಾಲ ಮನ್ನಾ ಮಾಡಲಾಗಿದೆ 26 ಲಕ್ಷ ಮಂದಿಗೆ ಅನುಕೂಲವಾಗಿದೆ. ಆದರೆ ಮತ ಹಾಕಬೇಕಾದರೆ ಏಕೆ ನಮ್ಮನ್ನು ಮರೀತೀರಿ?' ಎಂದರು.

'ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಾಗ ಅತಿಥಿಯಂತೆ ದೇಶಕ್ಕೆ ಬಂದು ಹೋಗುತ್ತಾರೆ. ಉಳಿದ ಸಮಯದಲ್ಲಿ ವಿದೇಶ ಪ್ರವಾಸ ಮಾಡುತ್ತಿರುತ್ತಾರೆ.
ಆದರೆ ರಾಜ್ಯದಲ್ಲಿ ನೆರೆ ಹಾವಳಿ ಉಂಟಾದ ಸಂದರ್ಭದಲ್ಲಿ ಒಮ್ಮೆಯೂ ಭೇಟಿ‌ ಕೊಡಲಿಲ್ಲ. ಭರವಸೆಯ ಮಾತನ್ನೂ ಆಡಲಿಲ್ಲ. ರಾಜ್ಯದಲ್ಲಿ ಸರ್ಕಾರ ಅನರ್ಹರ ಪರವಾಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಬೆಳಗಾವಿಯ ಗೋಕಾಕ್ ನಲ್ಲಿ ಜನ ಸಾಹುಕಾರ್ರು ಅಂತ ಕರಿತಾರೆ. ಅದ್ಯಾವ ಸಾಹುಕಾರನೋ ಗೊತ್ತಿಲ್ಲ. ಆದರೆ ರೈತರಿಂದ ಕಬ್ಬು ಖರೀದಿಸಿ ಹಣ ಕೊಡದೆ ಹೆದರಿಸಿ ಬೆದರಿಸಿ ಜೀವನ ನಡೆಸುತ್ತಿದ್ದಾರೆ' ಎಂದು ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹೆಸರು ಹೇಳದೆ ವ್ಯಂಗ್ಯವಾಡಿದರು.

ಬಿಜೆಪಿ ಜೊತೆ ಯಾಕೆ ಹೋಗಲಿ?

ಕಾಂಗ್ರೆಸ್ ಜೊತೆಗೂ ಹೋಗಲ್ಲ. ಆದರೆ ಸರ್ಕಾರವಂತೂ ಉಳಿಯುತ್ತದೆ. ಅದಕ್ಕೆ ಏನು ಮಾಡುತ್ತೇನೆ ಎಂಬುದನ್ನು ಆಮೇಲೆ ಹೇಳುವೆ' ಎಂದು ಕುಮಾರಸ್ವಾಮಿ ಕುತೂಹಲ ಮೂಡಿಸಿದರು.

ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಜನಗಳನ್ನು ಖರೀದಿಸುತ್ತೇವೆ ಎಂಬ ದೊಡ್ಡ ಮಟ್ಟದ ಅಹಂಕಾರವನ್ನು ಬಿಜೆಪಿ ಪ್ರದರ್ಶಿಸಿದೆ. ನೆರೆ ಸಂತ್ರಸದತರಿಗೆ ನೆರವೂ ನೀಡಲಿಲ್ಲ' ಎಂದರು.

'ಬಿಜೆಪಿ ಕಾಂಗ್ರೆಸ್ ಗಿಂತಲೂ ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆ ಇದೆ‌' ಎಂದು ವಿಶ್ವಾಸ ವ್ಯಕ್ತಪಡಿಸಿದರು.

***
ಜನಪರ ಆಡಳಿತ ನಡೆಸಿರುವ ನನಗೆ ಎರಡು ಮೂರು ವರ್ಷ ಅಧಿಕಾರ ನಡೆಸಲು ಅವಕಾಶ ಕೊಡಿ.
-ಎಚ್.ಡಿ.ಕುಮಾರಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT