ಉತ್ತರಕ್ಕೆ ಸಿಂಹಪಾಲು ಕೊಟ್ಟ ಕುಮಾರ

7

ಉತ್ತರಕ್ಕೆ ಸಿಂಹಪಾಲು ಕೊಟ್ಟ ಕುಮಾರ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ 13 ಜಿಲ್ಲೆಗಳನ್ನು ಒಳಗೊಂಡ ಉತ್ತರ ಕರ್ನಾಟಕ ಭಾಗ ಸಿಂಹಪಾಲು ಪಡೆದಿದೆ.

ಹಣಕಾಸು ಖಾತೆಯನ್ನೂ ಹೊಂದಿರುವ ಕುಮಾರಸ್ವಾಮಿ ಜುಲೈ 5ರಂದು ಮಂಡಿಸಿದ ಬಜೆಟ್‌ನಲ್ಲಿ ಹಂಚಿಕೆ ಮಾಡಿದ ಅನುದಾನವನ್ನು ಜಿಲ್ಲಾವಾರು ವಿಂಗಡಿಸಿದಾಗ, ‘ಸಮ್ಮಿಶ್ರ ಸರ್ಕಾರ ಈ ಪ್ರದೇಶವನ್ನು ನಿರ್ಲಕ್ಷಿಸಿದೆ’ ಎಂಬ ಆರೋಪಕ್ಕೆ ತದ್ವಿರುದ್ಧವಾದ ಮಾಹಿತಿ ಲಭ್ಯವಾಗಿದೆ.

2018–19ನೇ ಸಾಲಿನ ಬಜೆಟ್‌ನಲ್ಲಿ ಹಂಚಿಕೆ ಮಾಡಿದ ₹ 14,479 ಕೋಟಿ ಅನುದಾನದಲ್ಲಿ ₹ 7,241 ಕೋಟಿ ಉತ್ತರ ಕರ್ನಾಟಕ ಭಾಗಕ್ಕೆ ಹಂಚಿಕೆಯಾಗಿದೆ.  ರೈತರ ಸಾಲ ಮನ್ನಾ, ಇಸ್ರೇಲ್‌ ಮಾದರಿಯ ಕೃಷಿ ಪದ್ಧತಿ ಅಳವಡಿಕೆ ಮತ್ತು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸೇರಿ 40 ವಿವಿಧ ಯೋಜನೆಗಳಿಗೆ ಅನುದಾನ ಮೀಸಲಿರಿಸಲಾಗಿದೆ.

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಫೆಬ್ರುವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಪ್ರಕಟಿಸಿದ ಎಲ್ಲ ಯೋಜನೆಗಳನ್ನೂ ಮುಂದುವರಿಸಲಾಗುವುದು ಎಂದು ಕುಮಾರಸ್ವಾಮಿ ತಮ್ಮ ಬಜೆಟ್‌ನಲ್ಲಿ ಉಲ್ಲೇಖಿಸಿದ್ದಾರೆ.

* ಉತ್ತರದ ವಿಸ್ತೀರ್ಣ: 94,462 ಚದರ ಕಿ.ಮೀ.

* ದಕ್ಷಿಣದ ವಿಸ್ತೀರ್ಣ: 97,329 ಚದರ ಕಿ.ಮೀ.

ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಮತ್ತು ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರು ದೂರಿದ್ದರು. ಬಿಜೆಪಿಯ ಬಿ. ಶ್ರೀರಾಮುಲು, ‘ಅನ್ಯಾಯ ಸರಿಪಡಿಸದಿದ್ದರೆ ಪ್ರತ್ಯೇಕ ರಾಜ್ಯದ ಬೇಡಿಕೆಗೆ ಬೆಂಬಲ ನೀಡಬೇಕಾದ ಅನಿವಾರ್ಯತೆ ಎದುರಾಗಬಹುದು’ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದರು.

ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಪ್ರಾಬಲ್ಯ ಹೊಂದಿರುವ ಬಿಜೆಪಿ, ಈ ವಿಷಯವನ್ನು ಮುಂದಿಟ್ಟು ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳಲು ಚಿಂತನೆ ನಡೆಸಿದೆ. ಚುನಾವಣೆಯಲ್ಲಿ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಸಮ್ಮಿಶ್ರ ಸರ್ಕಾರದಲ್ಲಿ ಪಾಲು ಹೊಂದಿರುವ ಕಾಂಗ್ರೆಸ್‌, ಈ ವಿಷಯದಲ್ಲಿ ಮೌನ ವಹಿಸಲು ಮುಂದಾಗಿದೆ.

ಬಜೆಟ್‌ ಹಂಚಿಕೆಯಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು ಸಿಂಹಪಾಲು ಪಡೆಯುವ ಜೊತೆಗೆ ಕೆಲವು ಯೋಜನೆಗಳ ಹೆಚ್ಚಿನ ಲಾಭವನ್ನು ಈ ಜಿಲ್ಲೆಗಳು ಪಡೆದುಕೊಳ್ಳಲಿವೆ. ಉದಾಹರಣೆಗೆ, ರೈತರ ಸಾಲಮನ್ನಾ ಯೋಜನೆಯಲ್ಲಿ ಬೆಳಗಾವಿ ಜಿಲ್ಲೆಯೊಂದಕ್ಕೆ ₹ 1,244 ಕೋಟಿ ಮನ್ನಾ ಆಗಿದೆ. ಎರಡನೇ ಸ್ಥಾನದಲ್ಲಿ ಬಾಗಲಕೋಟೆ (₹ 1,043 ಕೋಟಿ) ಇದೆ.

ಬರಹ ಇಷ್ಟವಾಯಿತೆ?

 • 30

  Happy
 • 0

  Amused
 • 4

  Sad
 • 2

  Frustrated
 • 9

  Angry

Comments:

0 comments

Write the first review for this !