ಸೋಮವಾರ, ಮಾರ್ಚ್ 8, 2021
18 °C
ಮಾಧ್ಯಮ ಸಂವಾದದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

ಅಸ್ಥಿರತೆ ಇಲ್ಲ, ಬಜೆಟ್ ತಯಾರಿಯಲ್ಲಿ ಬ್ಯುಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಾನು ರಾಜಕೀಯ ಅಸ್ಥಿರತೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಬಜೆಟ್ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

‘ಎಲ್ಲ ವರ್ಗದ ಜನರಿಗೂ ಅನುಕೂಲವಾಗುವಂತಹ ಬಜೆಟ್ ಮಂಡಿಸುತ್ತೇನೆ. ಬಜೆಟ್ ಮಂಡನೆ ಬಗ್ಗೆ ಹಾಗೂ ಅದರ ಅನುಷ್ಠಾನದ ಬಗ್ಗೆ ಯಾವುದೇ ಅನುಮಾನ ಬೇಡ‘ ಎಂದು ಅವರು ಸೋಮವಾರ ಮಾಧ್ಯಮ ಸಂವಾದದಲ್ಲಿ ಹೇಳಿದರು.

‘ರಾಜಕೀಯ ಮ್ಯಾನೇಜ್‌ಮೆಂಟ್ ಬಗ್ಗೆ ನಾನು ಆಲೋಚಿಸುವುದಿಲ್ಲ. ಅದನ್ನು ನೋಡಿಕೊಳ್ಳಲು ಬೇರೆಯವರು ಇದ್ದಾರೆ. ಕಾಂಗ್ರೆಸ್‌ನ ನಾಲ್ಕು ಅತೃಪ್ತ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ಅಧಿವೇಶನಕ್ಕೆ ಬರುತ್ತಾರೆ. ಸರ್ಕಾರವನ್ನು ಬೆಂಬಲಿಸುತ್ತಾರೆ’ ಎಂದರು.

‘ರಾಜ್ಯ ಸರ್ಕಾರ ಅತಂತ್ರವಾಗಿದೆ ಎನ್ನುವುದು ಕೇವಲ ಪ್ರಚಾರ ಅಷ್ಟೆ. ಸರ್ಕಾರ ಭದ್ರವಾಗಿದೆ. ನಾನು ಐದು ವರ್ಷವೂ ಮುಖ್ಯಮಂತ್ರಿಯಾಗಿರುತ್ತೇನೆ’ ಎಂದರು.

‘ಐದು ವರ್ಷವೂ ಮುಖ್ಯಮಂತ್ರಿಯಾಗಿರುತ್ತೀರಿ ಎಂಬ ವಿಶ್ವಾಸವಿದ್ದರೆ ಯಾಕೆ ನೀವು ರಾಜೀನಾಮೆಯ ಮಾತನಾಡುತ್ತಿದ್ದೀರಿ’ ಎಂದು ಕೇಳಿದ್ದಕ್ಕೆ ‘ಅವೆಲ್ಲಾ ಭಾವನಾತ್ಮಕ ಪ್ರತಿಕ್ರಿಯೆಗಳು’ ಎಂದು ಉತ್ತರಿಸಿದರು.

‘ರಾಜಕೀಯ ಸಂಘರ್ಷದ ಸಂದರ್ಭದಲ್ಲಿ ಭಾವನಾತ್ಮಕ ಹೇಳಿಕೆಗಳು ಒಳ್ಳೆಯದಲ್ಲ ಅಲ್ಲವೇ’ ಎಂದು ಪ್ರಶ್ನಿಸಿದ್ದಕ್ಕೆ ‘ನಮ್ಮ ಸಮಾಜದಲ್ಲಿ ಭಾವನಾತ್ಮಕ ಹೇಳಿಕೆಗಳಿಗೆ ಬೆಲೆ ಇದೆ. ಈಗ ಸುಮಲತಾ ಅವರು ಮಂಡ್ಯದಲ್ಲಿ ಸ್ಪರ್ಧಿಸುವ ಮಾತನಾಡುತ್ತಿದ್ದಾರೆ. ಆ ಕ್ಷೇತ್ರಕ್ಕೆ ಅವರ ಕೊಡುಗೆ ಏನು? ಅವರದು ಭಾವನಾತ್ಮಕ ಹೇಳಿಕೆ ಅಷ್ಟೆ. ಮಂಡ್ಯಕ್ಕೆ ಅಂಬರೀಷ್ ಕೊಡುಗೆ ಏನು’ ಎಂದೂ ಅವರು ಪ್ರಶ್ನಿಸಿದರು.

ಮಂಡ್ಯ ಕ್ಷೇತ್ರದಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರ್‌ ಸ್ಪರ್ಧೆ ಮಾಡುವ ಕುರಿತಂತೆ ಸ್ಪಷ್ಟನೆ ನೀಡಿದ ಅವರು ಆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಆಗಿಲ್ಲ ಎಂದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾಜರ್ಜಿ ಅವರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ವಿಪ್‌ ಉಲ್ಲಂಘಿಸಿದರೆ ಕ್ರಮ: ದಿನೇಶ್‌
ಮೈಸೂರು: ‘ಮುಂಬರುವ ಬಜೆಟ್‌ ಅಧಿವೇಶನದಲ್ಲಿ ವಿಪ್‌ ಉಲ್ಲಂಘಿಸುವ ಕಾಂಗ್ರೆಸ್‌ ಶಾಸಕರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಇಲ್ಲಿ ಸೋಮವಾರ ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಆಪರೇಷನ್‌ ಕಮಲ ಯಶಸ್ವಿಯಾಗುವುದಿಲ್ಲ. 80 ಶಾಸಕರೂ ನಮ್ಮ ಜೊತೆ ಇರುತ್ತಾರೆ ಎಂಬ ನಂಬಿಕೆ ಇದೆ. ಬಿಜೆಪಿ ಒತ್ತಡ, ಆಮಿಷ ಹಾಗೂ ಭಯದಿಂದ 2–3 ಶಾಸಕರು ಸುಮ್ಮನಿದ್ದಾರೆ. ಅಧಿವೇಶನದ ಬಳಿಕ ಬಿಜೆಪಿ ಬಣ್ಣ ಬಯಲಾಗಲಿದೆ’ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜನರ ಆಶೋತ್ತರಗಳಿಗೆ ಸ್ಪಂದಿಸುವ ಬಜೆಟ್‌ ಮಂಡಿಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.

‘ಸಿ.ಎಂ ಜವಾಬ್ದಾರಿಯಿಂದ ನಡೆಯಲಿ’
ತುಮಕೂರು:
‘ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಏನೂ ಆಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ಭೇದ ಇದ್ದಾಗಲೇ ಉತ್ತಮ ಆಡಳಿತ ಕೊಡಲು ಸಾಧ್ಯ. ಇದನ್ನು ಅರಿತು ಮುಖ್ಯಮಂತ್ರಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು’ ಎಂದು ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಒಂದೇ ಉದ್ದೇಶದಿಂದ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿದೆ. ಇದನ್ನು ಅರ್ಥಮಾಡಿಕೊಂಡು ಕುಮಾರಸ್ವಾಮಿ ಅಧಿಕಾರ ನಡೆಸಬೇಕು. ಸಿದ್ದರಾಮಯ್ಯ ಇಲ್ಲದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಶಕ್ತಿಯೇ ಇಲ್ಲ’ ಎಂದು ಹೇಳಿದರು.

‘ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ನಾನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ. ಇಲ್ಲಿ ಕಾಂಗ್ರೆಸ್ ಸಂಸದರು ಇದ್ದಾರೆ. ಕ್ಷೇತ್ರವನ್ನು ನಮಗೆ ಬಿಟ್ಟುಕೊಡಿ ಎಂದು ಕೇಳುವುದು ಜೆಡಿಎಸ್‌ ಪಕ್ಷಕ್ಕೆ ಗೌರವ ತರುವ ಸಂಗತಿಯಲ್ಲ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು