ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದ 8 ಶಾಸಕರ ಒತ್ತಾಯಕ್ಕೆ ಮಣಿದು ನಿಖಿಲ್‍ನ್ನು ಕಣಕ್ಕಿಳಿಸಿದೆವು: ಎಚ್‍ಡಿಕೆ

Last Updated 29 ಮಾರ್ಚ್ 2019, 18:10 IST
ಅಕ್ಷರ ಗಾತ್ರ

ರಾಜ್ಯದ ರಾಜಕಾರಣ ಮತ್ತು ಪತ್ರಿಕೋದ್ಯಮದ ನಡುವೆ ಇರುವ ಅಂತರವನ್ನು ಪ್ರಜಾವಾಣಿ ಕಾಯ್ದುಕೊಂಡಿದೆ. ರಾಜಕಾರಣ ಮತ್ತು ಜನರ ನಡುವೆ ಸೇತುವೆ ಬೆಸೆಯುತ್ತಿದೆ. ಜನರಿಗೂ ಅಧಿಕಾರಕ್ಕೂ ಈ ಪತ್ರಿಕೆಗಳು ಕೊಂಡಿ. ನಾನು ಚಿಕ್ಕಂದಿನಿಂದಲೂ ಪ್ರಜಾವಾಣಿ / ಡೆಕ್ಕನ್ ಹೆರಾಲ್ಡ್ ಓದುವ ಹವ್ಯಾಸ ಇಟ್ಟುಕೊಂಡಿದ್ದೆ. ಹಿಂದಿನ ದಿನಗಳಲ್ಲಿ ಹಲವು ಹಿರಿಯ ಪತ್ರಕರ್ತರು ಈ ಪತ್ರಿಕೆಗಳಲ್ಲಿ ದುಡಿದಿದ್ದಾರೆ. ಇಂದಿನ ಮಾಧ್ಯಮಗಳಲ್ಲಿ ನಾವು ಕಾಣುವ ಕೆಲವು ಸುದ್ದಿಗಳು ಎಲ್ಲಕ್ಕೂ ಮೀರಿದ ಸುದ್ದಿ ಕೊಡುವ ಮಾಧ್ಯಮ ಇದು. ರಾಜ್ಯದ ಹಲವು ನೈಜತೆಯ ವಿಷಯಗಳನ್ನು ಯಾವುದೇ ಪರ–ವಿರೋಧಕ್ಕಿಂತಲೂ ನೈಜತೆಯನ್ನು ಜನರ ಮುಂದೆ ಇಡಲು ನಿಷ್ಪಕ್ಷಪಾತವಾಗಿ ಜನರ ಮುಂದೆ ಇಡಲು ಈ ಎರಡೂ ಪತ್ರಿಕೆಗಳು ವಿಶೇಷತೆ ಇದೆ. ಇವು ವಿಶೇಷ ಪತ್ರಿಕೆಗಳು ಅನ್ನೋದು ನನ್ನ ಅಭಿಪ್ರಾಯ. 2019ರ ಲೋಕಸಭಾ ಚುನಾವಣೆಯ ಕಾಲಘಟ್ಟದಲ್ಲಿ ‘ಪ್ರಜಾಮತ‘ ಸಂವಾದ ನನಗೆ ಖುಷಿಕೊಟ್ಟಿದೆ. ರಾಜ್ಯದ ನಾಯಕರ ಭಾವನೆಗಳನ್ನು ಜನರ ಮುಂದೆ ಇಡುವ ಉತ್ತಮ ಕಾರ್ಯಕ್ರಮ ಇದು. ಕೇವಲ ಪ್ರಿಂಟ್ ಮಾತ್ರವಲ್ಲ, ಯುಟ್ಯೂಬ್–ಟ್ವಿಟರ್–ಫೇಸ್‌ಬುಕ್‌ನಲ್ಲಿ ನೇರವಾಗಿ ವೀಕ್ಷಿಸಲು ಪತ್ರಿಕೆ ಅವಕಾಶ ಮಾಡಿಕೊಟ್ಟಿದೆ. ರಾಜ್ಯದ ಹಲವು ನಾಯಕರ ಭಾವನೆಗಳನ್ನು ನೀವು ಜನರ ಮುಂದೆ ಇಟ್ಟಿದ್ದೀರಿ. ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದ ನಾಡಿನ ಜನತೆ ಇದು ಅತ್ಯಂತ ಮಹತ್ವದ ಚುನಾವಣೆ. ಕೇವಲ ಕಾರ್ಯಕ್ರಮಗಳನ್ನು ಪ್ರಚಾರಕ್ಕೆ ಸೀಮಿತಗೊಳಿಸಿ ಕಾರ್ಯಕ್ರಮ ಘೋಷಿಸುವ ಸರ್ಕಾರದ ಅಗತ್ಯ ನಿಮಗಿದೆಯೋ? ಕಾರ್ಯಕ್ರಮ ಅನುಷ್ಠಾನ ಮಾಡುವ ಸಾಮರ್ಥ್ಯದ ಸರ್ಕಾರ ನಿಮಗೆ ಅಗತ್ಯವಿದೆಯೋ ಜನರು ನಿರ್ಧರಿಸಬೇಕು ಎಂದು ಪ್ರಜಾವಾಣಿ 'ಪ್ರಜಾಮತ' ಸಂವಾದದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಸಂವಾದದ ಆರಂಭದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಕುಮಾರಸ್ವಾಮಿ, ಯೋಧರ ಶ್ರಮವನ್ನು ಮೀರಿ ನಾನೇ ಮಾಡಿದ್ದೇನೆ ಎಂದು ಬಿಂಬಿಸುವ ಪ್ರಯತ್ನವನ್ನು ಪ್ರಧಾನಿ ಮಾಡ್ತಿದ್ದಾರೆ. ದೇಶದ ಪ್ರಧಾನಿಯಾಗಿ ಆಡುವ ಮಾತುಗಳು ಮೋದಿ ಸರಿಯಾಗಿ ಆಡುತ್ತಿಲ್ಲ, ಸಮಾಜವಾದಿ ಪಾರ್ಟಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಮೋದಿ. ಚುನಾವಣೆ ಪ್ರಚಾರಗಳಲ್ಲಿ ಪ್ರಧಾನಿ ಹೀಗೆ ಮಾತನಾಡುವುದು ಎಷ್ಟರಮಟ್ಟಿಗೆ ಸರಿ? ಯುವಕರೇ, ಅದನ್ನು ನೋಡಿ ಕೇಕೆ ಹಾಕಬೇಡಿ, ಚಪ್ಪಾಳೆ ಹೊಡೆದು ಬೆಂಬಲ ಕೊಡಬೇಡಿ. ಅವರು ನಿಮಗೇನು ಮಾಡಿದ್ದಾರೆ ಎಂಬುದನ್ನು ಯೋಚಿಸಿ. ಚೌಚೌ ಪಕ್ಷಗಳು ದೇಶಕ್ಕೆ ಸುಭದ್ರ ಸರ್ಕಾರ ಕೊಡಲು ಸಾಧ್ಯವಿಲ್ಲ ಅಂತ ಪ್ರಧಾನಿ ಹೇಳ್ತಾರೆ. ನನ್ನ ಪ್ರಕಾರ ಮೋದಿಯವರು ಈ ಬಾರಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದು ಅನುಮಾನ. ಹೋದ ಬಾರಿ ಸ್ವತಂತ್ರವಾಗಿ ಆಡಳಿತ ಮಾಡಲು ಜನರು ಆಶೀರ್ವಾದ ಮಾಡಿದರು, ಮೋದಿಗೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ವಿಶ್ವಾಸ ಇದ್ದರೆ ಎಐಎಡಿಎಂಕೆ ಜೊತೆಗೆ ತಮಿಳುನಾಡಿನಲ್ಲಿ, ನಿತೀಶ್ ಜೊತೆಗೆ ಬಿಹಾರದಲ್ಲಿ ಏಕೆ ಒಪ್ಪಂದ ಮಾಡಿಕೊಂಡರು? ಹಲವು ಕಡೆ ಹೀಗೆ ಒಪ್ಪಂದ ಮಾಡಿಕೊಂಡಿದ್ದು ಏನು ತೋರಿಸುತ್ತದೆ? ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಅವರು ಅಧಿಕಾರಕ್ಕೆ ಬರಲು ಪ್ರಾದೇಶಿಕ ಪಕ್ಷಗಳ ಬೆಂಬಲ ಬೇಕಿದೆ. ದೇಶದ, ನಾಡಿನ ಜನರಿಗೆ ನನ್ನ ಮನವಿ ಇದು, ಮೋದಿ ಈ ಸಲ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತಾರೆ ಅಂತ ಅಂದುಕೊಳ್ಳಬೇಡಿ .ಈ ಸಲ ಇತರ ಪಕ್ಷಗಳ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ.. ಮುಂದಿನ ಸಲ 273ರ ಗಡಿಯನ್ನು ಮೋದಿ ಸ್ವತಂತ್ರವಾಗಿ ದಾಟಲು ಸಾಧ್ಯವಿಲ್ಲ.
5 ವರ್ಷಗಳಲ್ಲಿ ಮುಖ್ಯ ನಿರ್ಧಾರ ತೆಗೆದುಕೊಳ್ಳುವಾಗ ಸಂಪುಟ ಸಹೋದ್ಯೋಗಿಗಳನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಮೋದಿಗೆ 20 – 25 ಸ್ಥಾನಗಳ ಕೊರೆತೆ ಬಂದಾಗ ಅವರದು ಸುಭದ್ರ ಸರ್ಕಾರ ಆಗುತ್ತಾ?. ಅವರದೂ ಚೌಚೌ ಪಾರ್ಟಿ ಆಗಲ್ವಾ?
ಇವತ್ತಿನ ದೃಷ್ಟಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ಸ್ವತಂತ್ರವಾಗಿ ಆಡಳಿತಕ್ಕೆ ಬರಲು ಸಾಧ್ಯವಿಲ್ಲ. ಅವರ ಇಂದಿನ ನಡವಳಿಕೆ ನೋಡಿದರೆ ಮುಂದೆ ಅವರು ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಹಿಂದಿನ ಬಾರಿಯಂತೆ ಸ್ವತಂತ್ರ ಸರ್ಕಾರ ಮಾಡುವ ವಿಶ್ವಾಸ ಬಿಜೆಪಿಯಲ್ಲಿ ಇಂದು ಉಳಿದಿಲ್ಲ.

ಪ್ರ: ರಾಜ್ಯದಲ್ಲಿ ಯಾಕೆ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು?
ಉ: ರಾಜ್ಯದಲ್ಲಿ ಹಲವೆಡೆ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಬೇರೆ ರಾಜ್ಯಗಳಿಗೆ ಸಿಗುವಷ್ಟು ಆದ್ಯತೆ ರಾಜ್ಯಕ್ಕೆ ಸಿಗುತ್ತಿಲ್ಲ. ಅಭಿವೃದ್ಧಿಗೆ, ನೀರಾವರಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ದೊಡ್ಡಮಟ್ಟದಲ್ಲಿ ಕೊಡುಗೆ ಕೊಡಲು
ಅವಕಾಶವದೆ. ಕೇಂದ್ರ ಸರ್ಕಾರದ ನೀತಿಗಳು, ರಾಜ್ಯ ಸರ್ಕಾರಗಳ ಬಗ್ಗೆ ಅವರು ತೋರುವ ಧೋರಣೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಲು ಮೈತ್ರಿ ಅಭ್ಯರ್ಥಿಗಳ ಅವಶ್ಯಕತೆ ಇದೆ.

ಪ್ರ: ಸಾಲಮನ್ನಾ ರಾಜ್ಯದಲ್ಲಿ ನಿಜವಾಗಿಯೂ ಆಗಿದೆಯಾ?
ಉ: ರಾಜ್ಯದಲ್ಲಿ ನಾನು ಅಧಿಕಾರ ತಗೊಂಡಿದ್ದು ಮೇ23ರಂದು, ಜುಲೈನಲ್ಲಿ ಬಜೆಟ್ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾಕ್ಕೆ 6500 ಕೋಟಿ ತೆಗೆದಿರಿಸಿದೆ. ಅನುಷ್ಠಾನಗೊಳ್ಳುತ್ತಿರುವ ಯಾವುದೇ ಯೋಜನೆಗಳ ಹಣವನ್ನು ಅಲ್ಲಿಗೆ ಕೊಡಲಿಲ್ಲ. ಸುಮಾರು 12 ಸಾವಿರ ಕೋಟಿ ಈ ವರ್ಷವೇ ಸಾಲಮನ್ನಾಕ್ಕೆ ಹಣ ಎತ್ತಿಟ್ಟಿದ್ದೇವೆ. ದೇಶದ ಪ್ರಧಾನಿಯಾಗಿ ಮೋದಿ ಸುಳ್ಳು ಹೇಳುತ್ತಿದ್ದಾರೆ, ಮಾಹಿತಿ ಇದ್ದರೂ ಸುಳ್ಳುಹೇಳುತ್ತಿದ್ದಾರೆ. ರಾಜ್ಯದಲ್ಲಿ 15.55 ಲಕ್ಷ ಕುಟುಂಬಗಳಿಗೆ ಸಾಲಮನ್ನಾ ಫಲ ದೊರೆತಿದೆ. ಚುನಾವಣಾ ಸಮಯ ಆಗಿ ಚುನಾವಣಾ ಆಯೋಗ ಸಾಲಮನ್ನಾ ನಿಲ್ಲಿಸಿ ಅಂತ ನಮಗೆ ಹೇಳಿದ್ದಾರೆ. ಆದರೆ ಮೋದಿ ಅವರು 2000 ರೂಪಾಯಿ ಕೊಡುವ ಯೋಜನೆ ಮುಂದುವರಿಸಲು ಕೆಂದ್ರಕ್ಕೆ ಅವಕಾಶ ಕೊಟ್ಟಿದ್ದಾರೆ. ನಮ್ಮದು ಹೊಸ ಕಾರ್ಯಕ್ರಮ ಅಲ್ಲ, ನಡೆಯುತ್ತಿರುವ ಕಾರ್ಯಕ್ರಮ. ಸಾಲಮನ್ನಾ ನಿಲ್ಲಿಸಬೇಕು ಅಂಥ ನಮಗೆ ಹೇಳ್ತಾರೆ, ಅವರಿಗೆ ₹2000 ಕೊಡಲು ಅವಕಾಶ ಕೊಡುತ್ತಾರೆ. ನಮ್ಮ ರಾಜ್ಯ ಸರ್ಕಾರಕ್ಕೆ ರೈತರು ಸಲ್ಲಿಸಿದ ಅರ್ಜಿಗಳು ₹10 ಲಕ್ಷಕ್ಕೂ ಹೆಚ್ಚು ರೈತರು ಅರ್ಜಿ ಕೊಟ್ಟಿದ್ದರು. ರಾಜ್ಯದ ಅಧಿಕಾರಿಗಳು 8 ಲಕ್ಷ ರೈತರ ಅರ್ಜಿಗಳನ್ನು ರಾಜ್ಯದ ಅಧಿಕಾರಿಗಳು ಕೇಂದ್ರ ಸರ್ಕಾರದ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ್ದಾರೆ. ಆದರೆ ಹಣ ಕೊಡಲಿಲ್ಲ. ಜೇಟ್ಲಿ ಅವರು ನಾವು ಸಹಕಾರ ಕೊಡುತ್ತಿಲ್ಲ ಅಂತ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೇವಲ 6 ಜನರಿಗೆ ಮಾತ್ರ ಹಣ ಸಂದಾಯವಾಗಿದೆ. 18.57 ಲಕ್ಷ ರೈತರಿಗೆ ಇಲ್ಲಿವರೆಗೆ ಸಾಲಮನ್ನಾದ ಫಲ ಸಿಕ್ಕಿದೆ. ಸಾಲಮನ್ನಾ ಪ್ರಕ್ರಿಯೆ ಆರಂಭಿಸಿದಾಗ ರಾಷ್ಟ್ರೀಕೃತ ಬ್ಯಾಂಕ್‌ಗಳ ಬಾಕಿಯ ವಿವರ ತಗೊಂಡಾಗ ₹34 ಸಾವಿರ ಕೋಟಿ ಬಾಕಿ ಇದೆ ಅಂತ ಮಾಹಿತಿ ಕೊಟ್ಟರು. ಕೆಲವು ಎನ್‌ಪಿಎ, ಕೆಲವು ಸಾಲ ಕಟ್ಟಿ ಮತ್ತೆ ಸಾಲ ತಗೊಂಡಿ ಖಾತೆಗಳೂ ಇವೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಜೊತೆಗೆ ಹಲವು ಬಾರಿ ಮೀಟಿಂಗ್ ಮಾಡಿದ್ದೇವೆ. 2017 ಜೂನ್‌ನಲ್ಲಿ ಎಸ್‌ಬಿಐ ಜಾಹೀರಾತು ಕೊಟ್ಟಿತ್ತು.

ರೈತರು ಎನ್‌ಪಿಎ ಅಕೌಂಟ್ ಇದ್ದರೆ, ಬ್ಯಾಂಕ್‌ಗೆ ಬನ್ನಿ, ಬಡ್ಡಿ ಮನ್ನಾ ಮಾಡಿ– ಅಸಲಿನಲ್ಲಿ ಅರ್ಧ ಕಡಿತ ಮಾಡಿಕೊಡ್ತೀವಿ ಅಂತ ಜಾಹೀರಾತು ಕೊಟ್ಟಿತ್ತು. ನೀವು ಹೇಳಿದಂತೆ ನಾವು ಒನ್‌ ಟೈಂ ಸೆಟ್ಲಮೆಂಟ್‌ಗೆ ಸಿದ್ಧರಿದ್ದೇವೆ ಅಂತ ಹೇಳಿದೆ. ಮೊದಲು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ ಕೊನೆಗೆ ಹಿಂದೇಟು ಹಾಕಿದರು . ಒಟ್ಟು 45 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಜವಾಭ್ದಾರಿ ನನ್ನ ಮೇಲಿದೆ. ಸಹಕಾರ ಸಂಘಗಳಲ್ಲಿ ಕಾರ್ಯದರ್ಶಿಗಳು ಸಾಲವನ್ನು ದುರುಪಯೋಗಪಡಿಸಿಕೊಂಡಿದ್ದಾರೆ, ನಾವು ನಿಯಮಾವಳಿಗಳನ್ನು ಬಿಗಿ ಮಾಡಿದೆವು. ಪಹಣಿ, ಆಧಾರ್ ಕಾರ್ಡ್‌ ಕೊಡಲು ಹೇಳಿದೆವು, ರೇಷನ್ ಕಾರ್ಡ್ ಕೇಳಿದ್ದೇವೆ. ಟೋಪಿ ಹಾಕಿದವರು ಸಿಕ್ಕಿಬಿದ್ದ ಕಾರಣ ಸುಮಾರು ₹4 ಸಾವಿರ ಕೋಟಿ ನಮಗೆ ಉಳಿಯಬಹುದು. ರೈತರ ಹೆಸರಿನಲ್ಲಿ ಬೇರೆಯವರು ದುರುಪಯೋಪಡಿಸಿಕೊಳ್ಳಬಾರದು ಅಂತ ನಿಯಮಗಳನ್ನು ಹಾಕಿದ್ದೇವೆ

ಪ್ರ: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಜಾಸ್ತಿಸೀಟು ಅಂತ ನಿಮಗೆ ಅನಿಸುವುದಿಲ್ಲವಾ?
ಉ: ನನ್ನ ಪ್ರಕಾರ ಅದು ಜಾಸ್ತಿ ಡಿಮ್ಯಾಂಡ್ ಅಲ್ಲ. ಮೈಸೂರಿನಲ್ಲಿ ನಾವು ಸದಾ ಮುಂದೆ ಇರುತ್ತಿದ್ದೆವು. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ನಷ್ಟೇ ಮತ ಪಡೆದಿದ್ದೆವು. ನಾನು ಅರ್ಜಿ ಹಾಕಿ ಬಂದೆ ಅಷ್ಟೇ. . ಕೋಲಾರದಲ್ಲಿ ಕಾಂಗ್ರೆಸ್‌ಗಿಂತಲೂ ಹೆಚ್ಚು ಮತ ಗಳಿಸಿದ್ದೆವು. ಮೈತ್ರಿಯಲ್ಲಿ ಹೆಚ್ಚು ಡ್ಯಾಮೇಜ್ ಆಗಬಾರದು ಅಂತ ಎಲ್ಲಿ ನಿರಂತರವಾಗಿ ಬಿಜೆಪಿ ಐದು ಬಾರಿ ಗೆದ್ದಿದ್ದಾರೆ ಅಂತ ಕ್ಷೇತ್ರಗಳನ್ನೇ ನಮಗೆ ಕೊಡ ಅಂತ ಕೇಳಿದ್ದೆವು.ಮೊನ್ನೆ ವಿಧಾನಸಭೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ಗಿಂತ 1.19 ಲಕ್ಷ ಹೆಚ್ಚು ಮತ ಜಾಸ್ತಿ ಗಳಿಸಿದ್ದೆವು.
ಕಾಂಗ್ರೆಸ್‌ಗೂ ಅನೇಕ ಕಡೆ ಅಭ್ಯರ್ಥಿಗಳಿಲ್ಲ. ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್‌ನಲ್ಲಿಯೇ ಅಭ್ಯರ್ಥಿಗಳಿರಲಿಲ್ಲ. ಅದಕ್ಕೆ ದೇವೇಗೌಡರನ್ನು ನಿಲ್ಲಿಸಲು ಅವರು ಕೇಳಿದ್ರು. ಆದರೆ ಕೊನೆಗೆ ನಡೆದ ಬೆಳವಣಿಗೆಗಳಲ್ಲಿ ನಾವು ಅವರಿಗೆ ಬಿಟ್ಟುಕೊಟ್ಟೆವು. ಸೀಟು ಹೊಂದಾಣಿಕೆಯಲ್ಲಿ ತೊಂದರೆ ಬೇಡ ಅಂತಲೇನಾವೇ ಶರಣಾದೆವು.

ಹಾಗಾದರೆ ನೀವು ತುಮಕೂರು ಕೇಳಲಿಲ್ಲವೇ?
ಸಿದ್ದರಾಮಯ್ಯನವರೇ ಹೇಳಿದ್ದಾರೆ, ಮೈಸೂರು ಕೊಡಿ, ತುಮಕೂರು ಬಿಡಿ ಅಂತ, ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರಮೋದ್ ಮಧ್ವರಾಜ್ ಗೆಲ್ಲುವ ಅಭ್ಯರ್ಥಿ. ಜಯಪ್ರಕಾಶ್ ಹೆಗ್ಡೆ ಅವರನ್ನು ಕೇಳಿದ್ದೆ. ನನಗೆ ಕರಾವಳಿಯಲ್ಲಿ ಅಂತ ಶಕ್ತಿಯಿಲ್ಲ. ಚಿಕ್ಕಮಗಳೂರಿನಲ್ಲಿ ನನಗೆ ಶಕ್ತಿ ಇದೆ.
ಚುನಾವಣೆಯಲ್ಲಿ ಗೆಲ್ಲಲೇ ಬೇಕು ಅಂಥ ಗುರಿ ಇಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಅನುಮತಿ ಪಡೆದೇ ನಮ್ಮ ಅಭ್ಯರ್ಥಿಯಾದರು.

ಪ್ರ: ಸಿದ್ದರಾಮಯ್ಯನವರನ್ನು ಹಾಗೆಲ್ಲಾ ಟೀಕಿಸಿದ್ದಿರಿ. ಹೇಗೆ ಬೇಗ ಹೊಂದಾಣಿಕೆ ಮಾಡಿಕೊಂಡಿರಿ?
ಉ: ನಮ್ಮ ಸ್ವತಂತ್ರ ಸರ್ಕಾರ ಬಂದರೆ ದಲಿತ–ಮುಸ್ಲಿಂ ಉಪಮುಖ್ಯಮಂತ್ರಿ ಮಾಡ್ತೀನಿ ಅಂತ ಹೇಳಿದ್ದೆ. ನಿಜ ಮೈತ್ರಿ ಸರ್ಕಾರ ಬಂದಾಗ, ನಾನೇನು ಕಾಂಗ್ರೆಸ್‌ನವರಿಗೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಲಿಲ್ಲ. ದೇವೇಗೌಡರು, ನನ್ನ ಮಗ ಬೇಡ ಖರ್ಗೆ ಅಥವಾ ಬೇರೆ ಯಾರನ್ನಾದರೂ ಮಾಡಿ ಅಂತ ಹೇಳಿದ್ದರು. ಆದರೆ ಕಾಂಗ್ರೆಸ್ ನಾಯಕರೇ ನನ್ನ ನಾಯಕತ್ವ ಬೇಕು ಅಂತ ಹೇಳಿದರು, ದಲಿತರನ್ನು ಉಪಮುಖ್ಯಮಂತ್ರಿ ಮಾಡೋದು ಸ್ವತಂತ್ರವಾದ ಸರ್ಕಾರ ಮಾಡಿದರೆ ಅಂತ ಮಾತ್ರ ಹೇಳಿದ್ದೆ, ಈಗ ನನ್ನ ಕೈಲಿ ಅದಿಲ್ಲ. ಸಿದ್ದರಾಮಯ್ಯನವರು ಸಮಾಜವಾದಿ ಹಿನ್ನೆಲೆಯಿಂದ ಬಂದವರು ಅಂತ ಹೇಳ್ತಾರೆ. ಆದರೆ ನೀವು ಧರಿಸುವ ಕೆಲವು ವಸ್ತುಗಳ ಬೆಲೆ ಏನು ಅಂತ ಪ್ರಶ್ನಿಸಿದ್ದು ನಿಜ. ತನಿಖೆ ಮಾಡ್ತೀನಿ ಅಂತ ಹೇಳಲಿಲ್ಲ. ಸಿದ್ದರಾಮಯ್ಯ ಸಮಾಜವಾದಿಯಲ್ಲಿ ಮಜಾವಾದಿ ಅಂತ ಹೇಳಿದ್ದು ನಿಜ

ಪ್ರ: ಬಸವರಾಜ ಹೊರಟ್ಟಿ ಅವರನ್ನು ನಗಣ್ಯ ಮಾಡಿದ್ದೀರಿ ಏಕೆ?
ಉ: ನಾವು ಅವರನ್ನು ಸಭಾಪತಿ ಮಾಡಬೇಕು ಅಂತ ಪ್ರಯತ್ನ ಪಟ್ಟೆವು. ಕಾಂಗ್ರೆಸ್‌ನವರು ಒಪ್ಪಲಿಲ್ಲ
ಪ್ರ: ಯಡಿಯೂರಪ್ಪ– ಸಿದ್ದರಾಮಯ್ಯ ಪೈಕಿ ಯಾರು ಉತ್ತಮರು?
ಉ: ಮೈತ್ರಿ ಸರ್ಕಾರದ ಜವಾಬ್ದಾರಿ ನಿರ್ವಹಿಸುವಾಗ ಸಮಸ್ಯೆಗಳು ಸಹಜ. ಅದನ್ನು ಮೀರಿ ಕೆಲಸ ಮಾಡಬೇಕು. ಸಮಸ್ಯೆಗಳನ್ನು ದೊಡ್ಡಮಟ್ಟದಲ್ಲಿ ಬೆಳೆಸಲು ಹೋಗಿಲ್ಲ. ಎಲ್ಲರ ಸಹಕಾರದಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಯಡಿಯೂರಪ್ಪ ಸಹಕಾರದ ಸರ್ಕಾರದಲ್ಲಿ ಹಗರಣದ ಸಮಸ್ಯೆ ಇತ್ತು. ಈ ಸಲ ಅಂಥ ಸಮಸ್ಯೆಗಳಿಲ್ಲ.

ಪ್ರ: ಕುಮಾರಸ್ವಾಮಿ ಸಿಎಂ, ಸಿದ್ದರಾಮಯ್ಯ ಸೂತ್ರಧಾರಿ ಅನ್ನೋ ಮಾತು ನಿಜವಾ?
ಉ: ಸಿದ್ದರಾಮಯ್ಯ ನಮಗೆಲ್ಲರಿಗೂ ಹಿರಿಯರು. ದೇವೇಗೌಡರ ಒಡನಾಟದಲ್ಲಿ ಸಚಿವರಾಗಿ ಕೆಲಸ ಮಾಡಿದವರು ಸಿದ್ದರಾಮಯ್ಯ. ಅವರ ಅನುಭವವನ್ನು ನಾನು ಬೆಲೆಕೊಡ್ತೀನಿ. ಹಿರಿಯ ಸಚಿವರ ಅನುಭವಕ್ಕೆ ಬೆಲೆ ಕೊಡ್ತೀನಿ. ಸೂಪರ್– ಇನ್ನೊಬ್ಬರು ಕಡಿಮೆ ಅಂತ ಇಲ್ಲ
ಪ್ರ: ಸಿದ್ದರಾಮಯ್ಯನವರಿಗೆ ದೇವೇಗೌಡ–ರೇವಣ್ಣ ಜೊತೆಗೆ ಉತ್ತಮ ಬಾಂಧವ್ಯ ಇದೆ. ನಿಮ್ಮ ಜೊತೆಗೆ ಇಲ್ಲ ಅಲ್ವಾ?
ಉ: ಅದಕ್ಕೆ ಕಾರಣ ರೇವಣ್ಣ ನನಗಿಂತಲೂ ಮೊದಲೇ ರಾಜಕೀಯಕ್ಕೆ ಬಂದವರು. ಅದಕ್ಕೇ ಒಡನಾಟ ಚೆನ್ನಾಗಿದೆ. ನಾನು ಶಾಸಕನಾದಾಗ ಅವರು ಉಪಮುಖ್ಯಮಂತ್ರಿ ಆದರು.ಹೀಗಾಗಿ ಒಡನಾಟ ಹೆಚ್ಚು ಬೆಳೆಯಲಿಲ್ಲ. ಅದು ನಿಜ.

ಪ್ರ: ಎತ್ತಿನಹೊಳೆ ಬಗ್ಗೆ ಏನು ಹೇಳ್ತೀರಿ?
ಉ: ಎತ್ತಿನಹೊಳೆಯಿಂದ ನಾವು ದೊಡ್ಡಮಟ್ಟದ ನೀರಿನ ಸೌಲಭ್ಯಕೊಡಬೇಕು ಅಂತ ಹಿಂದಿನ ಸರ್ಕಾರ ಚಿಂತನೆ ಮಾಡಿದೆ. ಅದರ ಬಗ್ಗೆ ನಾನು ಈಗ ಚರ್ಚೆ ಮಾಡುವುದಿಲ್ಲ. ನನಗೆ ಒಟ್ಟಾರೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗಕ್ಕೆ ನೀರು ಕೊಡಬೇಕು. ಅದು ನನ್ನ ಆದ್ಯತೆ. ಹೇಮಾವತಿ ಯೋಜನೆ ಆಗಬೇಕು ಅಂತ ದೇವೇಗೌಡರೇ ನಿಜಲಿಂಗಪ್ಪ ಅವರಿಗೆ ಆಗ್ರಹಿಸಿದ್ದು, ನಾವು ನೀರು ಕೊಡ್ತೀವಿ, ನೀವು ಭತ್ತಕೊಡಿ ಅಂತ ತಮಿಳುನಾಡಿಗೆ ನಿಜಲಿಂಗಪ್ಪ ಕೇಳಿದ್ದರು, ಇದನ್ನು ಪ್ರತಿಭಟಿಸಿ ದೇವೇಗೌಡರು ಖಾಸಗಿ ಬಿಲ್ ಮಂಡಿಸಿದ್ದರು, ಹೇಮಾವತಿ ಜಲಾಶಯ ಆಗಿದೆ ಅಂದರ ಅದಕ್ಕೆ ದೇವೇಗೌಡರು ಕಾರಣ, ಪ್ರಾಧಿಕಾರ ನೀಡಿದ ಆದೇಶಕ್ಕಿಂತಲೂ 2 ಟಿಎಂಸಿ ನೀರು ಜಾಸ್ತಿ ಕೊಟ್ಟಿದ್ದೇವೆ. ಕೃಷ್ಣಾ ನೀರನ್ನು ಪುಂಗನೂರು, ಮಡಕಶಿರಾಕ್ಕೆ ಆಂಧ್ರದವರು ಕೊಡುತ್ತಿದ್ದಾರೆ, ಇವೆಲ್ಲಾ ತುಮಕೂರು–ಚಿತ್ರದುರ್ಗ–ಕೋಲಾರ ಜಿಲ್ಲೆಗೆ ಗಡಿಯಲ್ಲಿವೆ. ಇವನ್ನು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲು ಆಗಲ್ಲ. ಮಾತುಕತೆಯಿಂದ ಪರಿಹರಿಸಿಕೊಳ್ಳಬೇಕು. ನನಗೆ ಎತ್ತಿನಹೊಳೆಗಿಂತಲೂ ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರ ಜಿಲ್ಲೆಗಳಿಗೆ ನೀರುವು ಕೊಡುವುದು ಮುಖ್ಯ. ಈಗಾಗಲೇ ಕಾವೇರಿ ಪ್ರಾಧಿಕಾರ ರಚನೆಯಾಗಿದೆ. ರೈತರಿಗೆ ಇದು ಅರ್ಥವಾಗ್ತಿಲ್ಲ ನದಿಯಲ್ಲಿ ಎಷ್ಟು ನೀರು ಹರಿದುಹೋಗಿದೆ ಅಂತ ಪ್ರತಿದಿನ ನಾವು ಕೇಂದ್ರ, ತಮಿಳುನಾಡು ಸರ್ಕಾರದ ಪ್ರತಿನಿಧಿಗಳಿಗೆ ಲೆಕ್ಕ ಕೊಡಬೇಕು. ಎರಡನೇ ಬೆಳೆಗೆ ನೀರು ಕೊಡಿ ಅಂದ್ರೆ ಎಲ್ಲಿಂದ ಕೊಡಲಿ? ಈ ವರ್ಷ ಯಥೇಚ್ಛ ಮಳೆಯಾಯ್ತು, 300 ಟಿಎಂಸಿ ಸಮುದ್ರಕ್ಕೂ ಹರಿದು ಹೋಯಿತು. ಪರವಾಗಿಲ್ಲ.

ಎತ್ತಿನ ಹೊಳೆ ಯೋಜನೆ ಹಣದ ಹೊಳೆ ಯೋಜನೆ ಅಂತಾರಲ್ಲಾ ?
ಕೆಲವು ಯೋಜನೆಗಳ ಹೆಸರಿನಲ್ಲಿ ಹಣದ ಹೊಳೆ ಹರಿಯುವುದು ನಿಜ. ಏನೇ ಕಾರ್ಯಕ್ರಮ ಮಾಡಿದ್ರೂ ಜನರ ದುಡ್ಡು ಜನರಿಗೆ ತಲುಬೇಕು. ಅದು ನನ್ನ ಆದ್ಯತೆಯ ವಿಷಯ.

ಪ್ರ: ಬಿಜೆಪಿ ನಿಮಗೆ ಬೆಂಬಲ ಕೊಡುತ್ತೆ ಅಂದರೆ ಏನು ಮಾಡುತ್ತೀರಿ?
ಉ: ರಾಜಕಾರಣ ಎನ್ನುವುದು ಆಶಯಗಳ ಮೇಲೆ ನಡೆಯುವ ವಿಚಾರ. ಸಂಸತ್ತಿನ ಚುನಾವಣೆ ನಂತರವೂ ಈ ಸರ್ಕಾರ ಅಭದ್ರತೆ ಬರುತ್ತೆ ಅಂತ ಇಲ್ಲ. ಕಳೆದ 8 ತಿಂಗಳಿನಿಂದ ಈ ಸರ್ಕಾರ ಈಗ ಬಿದ್ದು ಹೋಯ್ತು , ಆಗ ಬಿದ್ದು ಹೋಯ್ತು ಅಂತಿದ್ದರು. ಒಬ್ಬೊಬ್ಬರು ಒಂದೊಂದು ರೀತಿ ವಿಶ್ಲೇಷಣೆ ಮಾಡ್ತಿದ್ದಾರೆ. ಎನ್‌ಡಿಎ ಮೆಜಾರಿಟಿ ಬಂದರೂ, ಅಲ್ಲಿಯೂ ಬಿಜೆಪಿ 245ಕ್ಕೆ ನಿಂತು ಹೋದರೆ ಇಲ್ಲಿಯೂ ಅವರಿಗೆ ಕ್ಲಿಯರ್ ಮೆಜಾರಿಟಿ ಇರಲ್ಲ. ಲೋಕಸಭೆಯಲ್ಲಿ ನಾವು ಎಷ್ಟು ಗೆಲ್ಲುತ್ತೀವೋ ನೋಡೋಣ, ರಾಹುಲ್ ಗಾಂಧಿ ನನಗೆ ಲಿಖಿತ ಭರವಸೆಯ ಬೆಂಬಲ ಕೊಟ್ಟಿದ್ದಾರೆ. ಅವರು ಬೆಂಬಲ ಹಿಂಪಡೆಯುವ ವಿಚಾರವೇ ಅಪ್ರಸ್ತುತ.

ಪ್ರ.ಕುಟುಂಬ ರಾಜಕಾರಣದ ಬಗ್ಗೆ ಏನು ಹೇಳುತ್ತೀರಿ?
ಕುಟುಂಬ ರಾಜಕಾರಣ ಇವತ್ತು ಅರ್ಥ ಕಳೆದುಕೊಂಡಿದೆ. ದೇಶದ ಹಲವು ರಾಜ್ಯಗಳಲ್ಲಿ ಎಲ್ಲ ಪಕ್ಷಗಳಲ್ಲೂ ಈ ವಾತಾವರಣ ಬಂದಿದೆ. ಪ್ರಾದೇಶಿಕ ಪಕ್ಷಗಳಷ್ಟೇ ಅಲ್ಲ, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಕಾಂಗ್ರೆಸ್‌ಗಳಲ್ಲೂ ನಡೆಯುತ್ತಲೇ ಇದೆ. ಪ್ರಾದೇಶಿಕ ಪಕ್ಷಗಳು ಉಳಿದಿರುವುದು ಕುಟುಂಬ ರಾಜಕಾರಣದಿಂದಲೇ. ತಮಿಳುನಾಡಿನಲ್ಲಿ ನೋಡಿ– ಕರುಣಾನಿಧಿ ಇಲ್ಲದಿದ್ದರೆ ಡಿಎಂಕೆ ಯಾರು ಕಟ್ಟುತ್ತಿದ್ದರು? ಮಹಾರಾಷ್ಟ್ರದಲ್ಲಿ ಶರದ್‌ ಪವಾರ್ ಇಲ್ಲದಿದ್ರೆ ಎನ್‌ಸಿಪಿ ಎಲ್ಲಿ ಇರುತ್ತಿತ್ತು? ನಮ್ಮ ಕಾರ್ಯಕರ್ತರ ಒತ್ತಡ ಇದೆ. ನಾವು ಮುಂದೆ ಬಂದರೆ ಪಕ್ಷ ಉಳಿಯುತ್ತೆ ಅಂತ ಅವರು ಅಂದುಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಕುಟುಂಬ ರಾಜಕಾರಣದ ಹಿನ್ನೆಲೆಯಲ್ಲಿಯೇ ಉಳಿದಿದೆ. ನಾನು ಕುಟುಂಬ ರಾಜಕಾರಣದ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಕುಟುಂಬ ಜಕಾರಣದ ಹೆಸರಿನಲ್ಲಿ ಮತದಾರರ ಮೇಲೆ ಯಾರನ್ನೂ ಹೇರಲು ಆಗದು. ಜನರು ತೀರ್ಮಾನ ಮಾಡಬೇಕು
ಯಡಿಯೂರಪ್ಪ ಕುಟುಂಬದಲ್ಲಿಯೂ ಇಬ್ಬರು ಸಕ್ರಿಯವಾಗಿದ್ದಾರೆ. ಮೂರನೇ ಮಗನೂ ಸಕ್ರಿಯ ಆಗಿದ್ದಾನೆ. ದೇವೇಗೌಡಡ ಕುಟುಂಬಕ್ಕೆ ಮಾತ್ರ ಏಕೆ ದೋಷ ಹೊರಿಸ್ತೀರಿ?. ನಾನು ಎಸ್‌ಐಟಿ ರಚನೆ ಮಾಡಿ, ಅಧಿಕಾರಿಗಳು ಸ್ಪೀಡ್ ಮಾಡಿದ್ರೆ ಅದಕ್ಕೆ ಇನ್ನೊಂದು ಬಣ್ಣ ತರುತ್ತಾರೆ.ಯಡಿಯೂರಪ್ಪನವರು ವೀರಶೈವ ಸಮಾಜವನ್ನು ಮುಂದೆ ತರುತ್ತಾರೆ.ನಾನೇಕೆ ಈಗ ಒಂದು ಸಮಾಜವನ್ನು ಎದುರ ಹಾಕಿಕೊಳ್ಳಬೇಕು? ರಮೇಶ್‌ಕುಮಾರ್ ಅವರ ಸಂಶಯಕ್ಕೂ ಉತ್ತರ ದೊರಕುತ್ತದೆ, ನಾನು ಲೋಕಸಭೆ ಚುನಾವಣೆಗೆ ಹೆಚ್ಚು ಗಮನ ಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಸಿಗುತ್ತೆ.

ಪ್ರ: ಮಂಡ್ಯ ಏಕೆ ಪ್ರತಿದಿನ ವಿವಾದ– ಹೆಡ್‌ಲೈನ್ ಆಗ್ತಿದೆ?
ಉ: ಮಾಧ್ಯಮಗಳು ಅನಗತ್ಯವಾಗಿ ಮಂಡ್ಯಕ್ಕೆ ಪ್ರಾಮುಖ್ಯತೆ ಕೊಡ್ತಿವೆ. ನಾನು ಅಲ್ಲಿದ್ದೇನೆ. ನನ್ನ ವಿರೋಧಿ ಅಭ್ಯರ್ಥಿ ಬಿಜೆಪಿಯಿಂದ ಬೆಂಬಲ ತಗೊಂಡು ಶಕ್ತಿಶಾಲಿ ಅಂತ ಅಂದುಕೊಂಡಿದ್ದಾರೆ. ಆದರೆ ವಾಸ್ತವ ಸ್ಥಿತಿ ಬೇರೆಯೇ ಇದೆ. ಎಲೆಕ್ಟ್ರಾನಿಕ್ ಮಾಧ್ಯಮಗಳು ಮಂಡ್ಯದಲ್ಲಿ ಮಾತ್ರವೇ ಲೋಕಸಭೆ ಚುನಾವಣೆ ನಡೆಯುತ್ತಿದೆ ಅಂತ ಅಂದುಕೊಂಡಿದ್ದಾರೆ. ಕನ್ನಡ ಚಾನೆಲ್‌ಗಳು ಹೇಗೆ ವರ್ತಿಸುತ್ತಿವೆ ಅಂತ ನನಗೆ ಗೊತ್ತಾಗಿದೆ.

ಹಾಗಾದರೆನಿಖಿಲ್ ಕುಮಾರ ಸ್ವಾಮಿಗೆ ಯಾಕೆ ಟಿಕೆಟ್ ಕೊಟ್ಟಿದ್ದೀರಿ? ಅಲ್ಲಿ ಬೇರೆ ಅಭ್ಯರ್ಥಿಗಳು ಇರಲಿಲ್ಲವೇ?
ಉ: ನಾವು ಯಾರಿಗೂ ವಂಚನೆ ಮಾಡಿಲ್ಲ. ಕಳೆದ ಉಪಚುನಾವಣೆಯಲ್ಲಿಯೂ ನಿಖಿಲ್ ಕುಮಾರಸ್ವಾಮಿ ನಿಲ್ಲಿಸಬೇಕು ಅಂತ 8 ಶಾಸಕರು ಒತ್ತಾಯಿಸಿದ್ದರು. ನಾನೇ ಆಗ ನಿಲ್ಲಿಸಿದ್ದೆ. ನಿಖಿಲ್ ಕುಮಾರಸ್ವಾಮಿ ಹೆಸರು ಎಳೆದು ತಂದಿದ್ದೇ ಕನ್ನಡ ಚಾನೆಲ್‌ಗಳು.

ಮೈಸೂರಿನಲ್ಲಿ ನಿಲ್ಲುತ್ತಾನೆ ಅಂತ ಹೇಳಿದ್ರು, ಆಮೇಲೆ ಪಲಾಯನ ಮಾಡಿದ ಅಂತ ಹೇಳ್ತಾರೆ. ಈ ಬಗ್ಗೆ?
8 ಶಾಸಕರ ಒತ್ತಡದಿಂದ ನಿಖಿಲ್ ಕುಮಾರಸ್ವಾಮಿ ಚುನಾವಣೆಗೆ ನಿಲ್ಲಬೇಕಾಯಿತು. ಕಳೆದ ವಿಧಾನಸಭೇ ಚುನವಣೆಯಲ್ಲಿ ನಿಖಿಲ್ ಎಂಟೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದ. ಶಾಸಕರಿಗೆ ಅವನ ಬಗ್ಗ ಮಮಕಾರ ಇದೆ. ಶಾಸಕರ ಒತ್ತಡದಿಂದ, ಶಿವರಾಮೇಗೌಡರ ಸಮ್ಮತಿಯೊಂದಿಗೆ ನಿಖಿಲ್‌ನ ನಿಲ್ಲಿಸಿದೆವು.

ಪ್ರ: ಮಂಡ್ಯ ವಿಚಾರದಲ್ಲಿ ಮಹಿಳೆಯ ಭಾವನೆಗಳಿಗೆ ಧಕ್ಕೆಯಾಗಿದೆ ಅನ್ನಿಸಲ್ವಾ ನಿಮಗೆ?
ಉ: ಅವರು ಗೌಡ್ತಿ ಅಲ್ಲ ನಾಯ್ಡು ಅಂತ ಶ್ರೀಕಂಠೇಗೌಡ ಹೇಳಿದ್ರು. ರೇವಣ್ಣ ಮತ್ತೇನೋ ಹೇಳಿದ್ರಂತೆ. ಅದರಿಂದ ಅವಮಾನ ಮಾಡಿದಂತೆ ಆಗಲಿಲ್ಲ. ಮಾಧ್ಯಮದವರೇ ಕೇಳಿದ್ದು, ಅದಕ್ಕೆ ರೇವಣ್ಣ ಉತ್ತರ ಕೊಟ್ಟು ಟ್ರ್ಯಾಪ್ ಆದ. ಅದಕ್ಕೂ ನಾನೇ ಕ್ಷಮೆ ಕೋರಿದೆ. ನಮ್ಮ ಕುಟುಂಬದಲ್ಲಿ ಮಹಿಳೆಯರಿಗೆ ಅಗೌರವ ಸಲ್ಲಿಸುವ ಕುಟುಂಬ ಅಲ್ಲ ನಮ್ಮದು.

ಪ್ರ: ಮಹಿಳೆಗೆ ಏಕೆ ಕೊಡಲಿಲ್ಲಟಿಕೆಟ್?
ಉ: ಕಾರ್ಯಕರ್ತರು ಒಪ್ಪಲಿಲ್ಲ

ಪ್ರ: ಚಿತ್ರನಟರ ಬಗ್ಗೆ ಹಲವು ಸಲ ಕೀಳಾಗಿ ಮಾತನಾಡಿದ್ದೀರಿ?
ಉ: ರಮ್ಯಾ ಮಾತ್ರವಲ್ಲ, ಅಂಬರೀಷ್‌ನನ್ನೂ ನಾನು ಟೀಕಿಸಿದ್ದೆ. ಅಂಬರೀಷ್ ಹುಟ್ಟು ರಾಜಕಾರಿಣಿ ನಿಖಿಲ್ ಸಹ ಹುಟ್ಟಾ ರಾಜಕಾರಿಣಿ. ಅವ ಕಲಾವಿದ ಅಲ್ಲ, ಅವನಿಗೆ ಸಿನಿಮಾ ಎರಡನೆಯದು. ಎಂಪಿ ಆದ್ರೆ ಸಿನಿಮಾ ಮಾಡಬಾರದು ಅಂತ ಏನಿಲ್ಲ. ನಿಖಿಲ್ ಜನಗಳ ಮಧ್ಯೆ ಬದುಕುತ್ತಿದ್ದಾರೆ. ಇವತ್ತು ಅವನು ಸಿನಿಮಾ ಮಾಡುತ್ತಿರಬಹುದು. ಅದರೆ ಕೊನೆಗೆ ಜನರು ಅವನನ್ನು ಆಯ್ಕೆ ಮಾಡ್ತಾರೆ ಅನ್ನೋದು ಖಾತ್ರಿ ಇದೆ.

ನಿಖಿಲ್ ಎಲ್ಲ ಸಿನಿಮಾಗಳಿಗೂ ನೀವು ವಿಪರೀತ ತೊಡಗಿಸಿಕೊಂಡಿರಿ ಅಲ್ವಾ?
ನಾನು ವೈಯಕ್ತಿಕವಾಗಿ ಅವನಿಗೆ ಸಿನಿಮಾದಲ್ಲಿ ತೊಡಗಿಸಿಕೊಳ್ಳುವಂತೆ ಹೇಳಿದ್ದೆ, ಆದರೆ ನಮ್ಮ ಕಾರ್ಯಕರ್ತರು ಅವನನ್ನು ಒತ್ತಾಯಿಸಿ ರಾಜಕೀಯಕ್ಕೆ ಕರೆದು ತಂದರು.

ಮಹಿಳೆಯರಿಗೆ ನೀವು ಯಾಕೆ ಸೀಟು ಕೊಟ್ಟಿಲ್ಲ?
ಬಿಜಾಪುರದಲ್ಲಿ ನಾವು ಮಹಿಳೆಗೆ ಕೊಟ್ಟಿದ್ದೇವೆ. ಅವರನ್ನು ಗೆಲ್ಲಿಸಿಕೊಳ್ತೀವಿ. ನನಗೆ ನಂಬಿಕೆ ಇದೆ.

ಕುಟುಂಬದಲ್ಲಿ ಕೋಲ್ಡ್ ವಾರ್ ಇದೆಯಾ?
ನಮ್ಮ ಕುಟುಂಬದಲ್ಲಿ ಯಾವುದೇ ಕೋಲ್ಡ್‌ವಾರ್ ಇಲ್ಲ . ನಾನು–ರೇವಣ್ಣ ರಾಜ್ಯದ ಅಭಿವೃದ್ಧಿಗಾಗಿ ಒಟ್ಟಿಗೆ ಕೆಲಸ ಮಾಡುತ್ತೀವಿ.
ಅಣ್ಣ ತಮ್ಮರು ತಮ್ಮ ಮಮ್ಕಳಿಗಾಗಿ ದೇವೇಗೌಡರನ್ನು ಏಕಾಂಗಿ ಮಾಡಿದರು ಅಂತಾರೆ?
ಕಳೆದ ಬಾರಿಯೇ ದೇವೇಗೌಡರು ಪ್ರಜ್ವಲ್‌ಗೆ ಲೋಕಸಭೆಗೆ ಕಳಿಸುವ ಭರವಸೆ ಕೊಟ್ಟಿದ್ದರು, ದೇವೇಗೌಡರು ಚುನಾವಣೆಗೆ ನಿಲ್ಲಬಾರದು ಅಂತ ಇದ್ದರು. ಅವರು ನಿಲ್ಲಲು ತಯಾರಿರಲಿಲ್ಲ. ದೆಹಲಿಯಲ್ಲಿ ಅವರ ಸ್ನೇಹಿತರು ಒತ್ತಾಯ ಮಾಡಿದರು. ನಿಮ್ಮ ಅವಶ್ಯಕತೆ ಜಾಸ್ತಿ ಇದೆ ಅಂತ ಒತ್ತಾಯ ಮಾಡಿದ್ದರಿಂದ ಅವರು ನಿಂತರು.
ನಾನು ಮತ್ತು ರೇವಣ್ಣ ನೀವು ಹಾಸನದಲ್ಲಿಯೇ ನಿಲ್ಲಿ ಅಂತ ಹೇಳಿದ್ದೆವು. ಪ್ರಜ್ವಲ್ ಕೂಡ ಹೇಳಿದ್ದರು, ನಾನು ಈಗಾಗಲೇ ಸಾರ್ವಜನಿಕವಾಗಿ ಅವನನ್ನು ಅಭ್ಯರ್ಥಿ ಅಂತ ಮಾಡಿ ಮತ್ತೆ ಹೋದರೆ ಸರಿಯಿಲ್ಲ ಅಂತ ಗೌಡರು ಹಾಸನ ಬಿಟ್ಟುಕೊಟ್ಟರು.

ಹಾಗಾದರೆ ದೇವೇಗೌಡರ ಕುಟುಂಬಕ್ಕೆ ಯಾರು ಉತ್ತರಾಧಿಕಾರಿ?
ಯಾರ ಕೈಲೂ ಯಾರನ್ನೂ ಉತ್ತರಾಧಿಕಾರಿ ಮಾಡಲು ಆಗಲ್ಲ. ಪ್ರಜ್ವಲ್–ನಿಖಿಲ್ ಯಾರು ಆಗ್ತಾರೋ ಗೊತ್ತಿಲ್ಲ.
ಪಕ್ಷದಲ್ಲಿ ಉತ್ತರಾಧಿಕಾರಿ ಆಗೋದು ಅವರ ದುಡಿಮೆ. ಜನರ ಜೊತೆಗೆ ಎಷ್ಟು ಹತ್ತಿರದಲ್ಲಿರ್ತಾರೆ ಅನ್ನೋದು ಕೌಂಟ್ ಆಗುತ್ತೆ.

ಪ್ರ: ಐಟಿ ರೈಡ್ ವಿಚಾರ?
ಉ: ಅಮಿತ್ ಶಾ ನನ್ನನ್ನು ಭೇಟಿಯಾಗಲು ಪ್ರಯ್ನಿಸಿದ್ರು ಅಂತ ದೇವೇಗೌಡರು ಹೇಳಿದ್ದರು. ಅದು ಸರ್ಕಾರ ಮಾಡುವ ಸಂದರ್ಭದ ಮಾತು. ಅಮಿತ್ ಶಾ ಮಾತನ್ನು ನಾನು ಒಪ್ಪಲಿಲ್ಲ. ಭೇಟಿಯಾಗಲಿಲ್ಲ. ಅದರಿಂದಲೆ ಇದೆಲ್ಲಾ ನಡೀತಿದೆ. ಕೆಲವು ವಿಷಯಗಳನ್ನು ನಾನೂ ಹೇಳಲು ಆಗಲ್ಲ. ಇದೆಲ್ಲಾ ರಾಜಕರಣ. ತೆರಿಗೆ ಇಲಾಖೆ ಸರಿಯಾಗಿ ಕೆಲಸ ಮಾಡಿದರೆ ನನ್ನ ವಿರೋಧ ಇಲ್ಲ. ತೆರಿಗೆ ಇಲಾಖೆ ಇರೋದೆ ರೇಡ್ ಮಾಡೋಕೆ, ಅವರಿಗೆ ಅಧಿಕಾರವಿದೆ. ಒಂದೇ ದಿನ 68 ಕಡೆ ಯಾವ ಕಾರಣಕ್ಕೆ ಹೋದರು? ಇಷ್ಟು ದಿನ ಏನು ಮಾಡ್ತಿದ್ರು? ಮುಖ್ಯವಾಗಿ ಎರಡು ಕ್ಷೇತ್ರಗಳನ್ನೇ ಏಕೆ ಆಯ್ಕೆ ಮಾಡಿಕೊಂಡ್ರು. ಇದು ರಾಜಕೀಯ ಪ್ರೇರಿತ ತಾನೆ? ಮೈಸೂರು, ಹಾಸನ, ಮಂಡ್ಯ,

ಕ್ಕಮಗಳೂರಿಗೆ ಮಾತ್ರ ಏಕೆ ಸೀಮಿತರಾದರು?
ನಾನು ಮೊನ್ನೆ ಹೇಳಿಕೆ ಕೊಟ್ಟೆ. ಇಲ್ಲದಿದ್ದರೆ ಇನ್ನಷ್ಟು ಎಂಎಲ್‌ಎ, ಎಂಎಲ್‌ಸಿ, ಮಂತ್ರಿಗಳ ಮನೆಗಳ ಮೇಲೆಯೂ ರೇಡ್ ಮಾಡುತ್ತಿದ್ದರು,
ನಾವೇನು ಅವರನ್ನು ಕೇಳಿದ್ವಾ? ನೀವು ಶಾಸಕರ ಮನೆಗೆ ಬಂದಿದ್ದೀರಿ ಅಂತ? ಅವರೇಕೆ ತರಾತುರಿಯಲ್ಲಿ ಸ್ಪಷ್ಟನೆ ಕೊಟ್ಟರು. ಕನ್ನಡದ ಕೆಲವು ಚಾನೆಲ್‌ಗಳ ಪರಿಸ್ಥಿತಿ ನೋಡಿದರೆಏನು ಹೇಳಬೇಕೋ ಗೊತ್ತಾಗಲ್ಲ. ರಾಜ್ಯದಲ್ಲಿ ಲಕ್ಷಾಂತರ ಜನ ಗುತ್ತಿಗೆದಾರರಿದ್ದಾರೆ. ಅವರ ಮನೆಗೆ ಯಾಕೆ ಹೋಗಲಿಲ್ಲ ತೆರಿಗೆ ಅಧಿಕಾರಿಗಳು?
ರಾಜ್ಯದ ಬಿಜೆಪಿ ಅಧಿಕಾರಿಗಳು ಲಿಸ್ಟ್ ಕೊಡ್ತಾರೆ. ಅದರಂತೆ ದಾಳಿ ನಡೆಯುತ್ತದೆ, ತೆರಿಗೆ ಇಲಾಖೆಯವರು ಆಯಾ ರಾಜ್ಯಗಳ ಪೊಲೀಸರನ್ನೇ ಭದ್ರತೆ ತಗೊಳ್ಳುತ್ತಾರೆ. ಈ ಸಲ ಯಾಕೆ ಬೇರೆಡೆಯಿಂದ ತರಿಸಿದರು?
ನಾನಂತೂ ಯಾವ ಗುತ್ತಿಗೆದಾರ, ಐಎಎಸ್ ಅಧಿಕಾರಿಯಿಂದ ಹಣ ಪಡೆದಿಲ್ಲ. ಯಾರಾದ್ರೂ ಪ್ರೂವ್ ಮಾಡಿದ್ರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಮುಖ್ಯಮಂತ್ರಿಯಾಗಿ ನಾನೇ ಹೇಳಿದ್ದೆ ’ವಿಧಾನಸೌಧದಲ್ಲಿ ಕಮಿಷನ್ ಏಜೆಂಟ್ ಇದ್ದಾರೆ‘ ಅಂತ. ಯಾವುದೋ ಕೆಲಸ ಕೊಡಲು ಅಥವಾ ಬೇರೆ ಯಾವುದಕ್ಕೋ ನಾನು ಹಣ ಫಿಕ್ಸ್ ಮಾಡಿಲ್ಲ. ಎಸಿಬಿ ಅವರಿಗೂ ನಾನು ಯಾವ ತಡೆ ಹಾಕಿಲ್ಲ. ಯಾವುದೋ ಎಂಜಿನಿಯರ್ ಮನೆ ರೇಡ್ ಮಾಡಿದ್ರು, 18 ಕೆಜಿ ಚಿನ್ನ ಸಿಕ್ಕಿತು. ತನಿಖೆಯಲ್ಲಿ ನಾನು ಮಧ್ಯಪ್ರವೇಶಿಸಲ್ಲ
ಲೋಕಾಯುಕ್ತ ಪ್ರಸ್ತಾಪ ಕೊಟ್ರೆ ನನ್ನ ಮೇಲೆ ರೇಡ್ ಮಾಡುವ ಅಧಿಕಾರ ಬೇಕಿದ್ರೂ ಕೊಡ್ತೀನಿ. ಬೇಕಾದ ಎಲ್ಲ ಸ್ವಾತಂತ್ರ್ಯ ಕೊಡ್ತೀನಿ. ಅವರಿಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡ್ತೀನಿ.

ಮಂಡ್ಯದ ಬಗ್ಗೆ?
ಅಂಬರೀಷ್ ಶರೀರಕ್ಕೆ ಬೆಂಕಿ ಹಚ್ಚುವ ಮೊದಲೇ ರಾಜಕೀಯ ಶುರು ಮಾಡಿದ್ರು. ಸುಮಲತಾ ಮಂಡ್ಯ ಜನರ ಬಗ್ಗೆ ಬಾಯಿಗೆ ಬಂದಂತೆ ಮಾತಾಡ್ತಿದ್ದಾರೆ. ಪ್ರಚಾರಕ್ಕೆ ಬರಲ್ಲ ಅಂತ ಹೇಳುತ್ತಿದ್ದವರೆಲ್ಲಾ ಈಗ ಬಂದಿದ್ದಾರೆ.

ಎನ್‌ಡಿಎ ಅಧಿಕಾರಕ್ಕೆ ಬರುತ್ತದಾ?
ಈ ಬಾರಿ ಎನ್‌ಡಿಎ ನೂರಕ್ಕೆ ನೂರು ಅಧಿಕಾರಕ್ಕೆ ಬರಲ್ಲ. ನರೇಂದ್ರ ಮೋದಿ ಹೇಗೆ ನಡೆದುಕೊಳ್ತಿದ್ದಾರೆ ಗಮನಿಸಿ. ಅವರಿಗೆ ಸಣ್ಣಪುಟ್ಟ ಪಕ್ಷಗಳು ಹೇಗೆ ಬೆಂಬಲ ಕೊಡ್ತಾವೆ. ಬಿಜೆಪಿ ನಾಯಕರೇ ಅವರ ಬಗ್ಗೆ ವಿಶ್ವಾಸವಿಲ್ಲ, ಬಿಜೆಪಿಗೆ ಪೂರ್ಣ ಬಹುಮತ ಬರದಿದ್ದರೆ ಅವರನ್ನೇ ಸೂಚನೆ ಮಾಡುತ್ತಾರೆ ಅನ್ನುವ ಯಾವುದೇ ಭರವಸೆ ಇಲ್ಲ.

ಪ್ರ:ಸದಾಶಿವ ಆಯೋಗದ ಬಗ್ಗೆನಿಮ್ಮ ನಿಲುವೇನು?
ಉ: ನನ್ನದು ಮೈತ್ರಿ ಸರ್ಕಾರ. ನಾನು ಸ್ವತಂತ್ರವಾಗಿ ತೀರ್ಮಾನ ತಗೊಳ್ಳೋ ಹಾಗಿಲ್ಲ. ಸಿದ್ದರಾಮಯ್ಯ, ವೇಣುಗೋಪಾಲ್ ಒಪ್ಪಿದರೆ ನನ್ನ ತಕರಾರು ಏನೂ ಇಲ್ಲ.

ಪ್ರ: ಎಲಿವೇಟೆಡ್ ಕಾರಿಡಾರ್ ಬಗ್ಗೆ ಏನು ಹೇಳ್ತೀರಿ?
ಉ: ಮೆಟ್ರೊ ಇದ್ಯಾಲ್ಲಾ ಅದೇನು? ಅದೂ ಎಲಿವೇಟೆಡ್ ತಾನೆ? ಅದರಿಂದ ಜನರಿಗೆ ಅನುಕೂಲವಾಯಿತೋ, ಅನಾನುಕೂಲವಾಯಿತೋ? ಮೆಟ್ರೊಗೆ ಪ್ರಧಾನಿ ಕರೆತಂದು ಭೂಮಿಪೂಜೆ ಮಾಡಿಸಿದ್ದೇ ನಾನು. ಸುರಂಗ ಯೋಜನೆ ಮಾಡಿ ಅಂತ ಅಮೆರಿಕ, ಬ್ರಿಟನ್‌ ಸಂಸ್ಥೆಗಳು ಹೇಳಿದ್ದವು, ಆದರೆ ನಮ್ಮ ಅಧಿಕಾರಿಗಳು ಬೇಡ ಅಂದರು,
ನಾನು ಅವತ್ತೂ ಸಹ ಮೊದಲ 19 ಕಿ.ಮೀ.ಗೆ ಟೆಂಡರ್ ಸಹಿ ಹಾಕಿದವನು. ಗುತ್ತಿಗೆದಾರ ಯಾರು ಅಂತ ನೋಡಲಿಲ್ಲ. ಸಮಯ ನಿಗದಿಗೆ ತಕ್ಕಂತೆ ಕೆಲಸ ಮುಗೀಬೇಕು ಅಂತ ಹೇಳಿದ್ದೆ. ನನಗೆ ಇಲ್ಲಿರುವ ಸಮಸ್ಯೆ ಪರಿಹಾರ ಆಗಬೇಕು ,
ಎಲೆವೇಟೆಡ್ ಕಾರಿಡಾರ್ ವಿರೋಧಿಸುವವರು ಕೂತು ಚರ್ಚೆ ಮಾಡಲಿ, ಹೊರವರ್ತುಲ ರಸ್ತೆಗೆ 4500 ಕೋಟಿ ದುಡ್ಡು ತೆಗೆದಿಟ್ಟೆ. 1500 ಕೋಟಿ ಕೊಟ್ಟೆ. 2015ರಲ್ಲಿ ಯಾರೋ ಗ್ರೀನ್ ಬೆಂಚ್‌ನಿಂದ ಸ್ಟೇ ತಂದಿದ್ದಾರೆ. ಈಗ ಸ್ಟೇ ವೆಕೇಟ್ ಮಾಡೋಕೆ ಒದ್ದಾಡ್ತಾ ಇದ್ದಾರೆ. ನಾವು ಪಬ್ಲಿಕ್ ಟ್ರಾನ್ಸ್‌ಪೋರ್ಟ್‌ ಸಿಸ್ಟಂಗೆ ಎಲೆವೇಟೆಡ್ ಕಾರಿಡಾರ್ ಮಾಡೋದು. ಕಾರ್‌ಗೆ ಅಲ್ಲ.
ಚುನಾವಣೆ ಕಳೆದ ಮೇಲೆ ಕೂತು ಚರ್ಚೆ ಮಾಡೋಣ ಅಂತ ಹೇಳಿದ್ದೇನೆ ವಿರೋಧಿಗಳಿಗೆ. ಕಾರಿಡಾರ್ ಮತ್ತೊಂದು ಪ್ರಾಜೆಕ್ಟ್ ಕಟ್ಟಿಕೊಂಡು ನನಗೆ ಏನೂ ಆಗಬೆಕಿಲ್ಲ. ಸರ್ಕಾರದ ಯೋಜನೆ ಜನರಿಗೆ ಉಪಯೋಗಕ್ಕೆ ಬರಬೇಕು.
ಆರ್‌ಟಿಇ ಬಗ್ಗೆ?
ಬಡ ಮಕ್ಕಳಿಗೆ ವಿದ್ಯೆ ಕೊಡುವ ವಿಚಾರದಲ್ಲಿ, ಇದರಲ್ಲೂ ದುಡ್ಡು ಹೊಡೆಯುವ ವಿಚಾರಕ್ಕೆ ತಡೆಹಾಕಲು ಯತ್ನ
ನಿಯಮಾವಳಿ ರೂಪಿಸುತ್ತೇವೆ, ಅಜೀಂ ಪ್ರೇಂಜಿ ಫೌಂಡೇಶನ್‌ಗೆ ಆರೋಗ್ಯ ಮತ್ತು ಶಿಕ್ಷಣದ ವಿಷಯದಲ್ಲಿ ಸಹಕಾ ನೀಡಲು ಕೋರಿದ್ದೇವೆ. ಮೂರು ಮತ್ತು ನಾಲ್ಕನೇ ದರ್ಜೆ ನೌಕರರು ಕನ್ನಡಿಗರೇ ಇರುತ್ತಾರೆ ಎಲ್ಲೆಡೆ.ಮೊದಲು ಕೆಲಸ ಸಿಕ್ಕ ಮೇಲೆ ಕನ್ನಡ ಕಲೀಬಹುದು ಅಂತ ಇತ್ತು. ಆದರೆ ಈಗ ಕೆಲಸಕ್ಕೆ ಅರ್ಜಿ ಹಾಕುವಾಗಲೇ ಕನ್ನಡ ಕಲಿತಿರಬೇಕು ಅಂತ ನಿಯಮ ಮಾಡಿದ್ದೇವೆ.

ಸರ್ಕಾರದ ಆರ್ಥಿಕ ಪರಿಸ್ಥಿತಿ ಹೇಗಿದೆ?
ನಮ್ಮ ಸರ್ಕಾರದಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ. ನಮ್ಮ ನಿರ್ಧಾರಗಳಲ್ಲಿ ವಿತ್ತೀಯ ಕೊರತೆ ಕೇವಲ ಶೇ3 ಮಾತ್ರ ಇದೆ. ಆರ್ಥಿಕ ಶಿಸ್ತು ಎಲ್ಲಿಯೂ ಉಲ್ಲಂಘಿಸಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಾವು ಸುಭದ್ರವಾಗಿಯೇ ಇದ್ದೇವೆ.
ಸಾಲಮನ್ನಾ, ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗ ಜಾರಿ ಮಾಡಿದ ನಂತರವೂ ₹17 ಸಾವಿರ ಕೋಟಿ ನೀರಾವರಿಗೆ ಇಟ್ಟಿದ್ದೇವೆ. ಅಭಿವೃದ್ಧಿಗೆ ಹಣಕೊಡುವಲ್ಲಿ ನಾನು ಎಲ್ಲಿಯೂ ರಾಜಿಯಾಗಿಲ್ಲ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದೇನೆ. ಸೊರಬ ಸುತ್ತಮುತ್ತ ನೀರಾವರಿ ಕೊಡಬೇಕು ಅಂತ ಬಂಗಾರಪ್ಪ ₹30ಕೋಟಿಗೆ ಆದೇಶ ಕೊಟ್ಟಿದ್ದರು. ಈವರೆಗೂ ಅನುಷ್ಠಾನ ಆಗಲಿಲ್ಲ.
ಇವತ್ತು ಅದಕ್ಕೆ ₹195 ಕೋಟಿ ಮೊತ್ತ ಮುಟ್ಟಿದೆ. ಈಗ ಅದನ್ನು ಕ್ಲಿಯರ್ ಮಾಡಿದೆ. ಬಂಗಾರಪ್ಪ ಅಂದ್ರೆ ನನಗೆ ಗೌರವ
ಜನಪ್ರಿಯ ಕಾರ್ಯಕ್ರಮಗಳ ನಡುವೆಯೂ ಆರ್ಥಿಕ ಶಿಸ್ತು ಕಾಪಾಡಿಕೊಂಡಿದ್ದೇನೆ.

ಓಲಾ ಚಾಲಕರಿಗೆ ನೆರವು ನೀಡುತ್ತೀರಾ?
ನಾನು ಬ್ಯುಸಿನೆಸ್‌ಮನ್ ಅಲ್ಲ. ನಾನು ಮೂಲಭೂತವಾಗಿ ಒಬ್ಬ ಮನುಷ್ಯ ಅಷ್ಟೇ. ನಾನು ಕೆಲವರಿಗೆ ಸಹಾಯ ಮಾಡಬೇಕು ಅಂತ ಪ್ರಯತ್ನಿಸಿದ್ದು ನಿಜ. ಓಲಾ ಚಾಲಕರನ್ನೂ ಕೂಡಿಸಿಕೊಂಡು ಪ್ರವಾಸೋದ್ಯಮ ಇಲಾಖೆಯಲ್ಲಿ ಮೀಟಿಂಗ್ ಮಾಡಿದೆ. ಪ್ರವಾಸೋದ್ಯಮ ಇಲಾಖೆಯಿಂದಲೇ ಅವರಿಗೆ ಸರಿಯಾಗಿ ಆದಾಯ ಬರುವಂತೆ ಏನಾದರೂ ಮಾಡಲು ಸಾಧ್ಯವೇ ಯೋಚಿಸಿ ಅಂತ ಹೇಳಿದ್ದೆ, ಸರ್ಕಾರದಿಂದಲೇ ಏನಾದರೂ ಮಾಡಬೇಕು ಅಂತ. ಚಾಲಕರಿಗೆ ನೆರವು ನೀಡಬೇಕು ಎಂಬುದು ನನ್ನ ಯೋಚನೆಯಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT