ನರೇಂದ್ರ ಮೋದಿ ಗೆದ್ದರೆ ಹಿಂದೂ– ಮುಸ್ಲಿಂ ಸಂಘರ್ಷ: ರೇವಣ್ಣ

ಶುಕ್ರವಾರ, ಏಪ್ರಿಲ್ 19, 2019
22 °C

ನರೇಂದ್ರ ಮೋದಿ ಗೆದ್ದರೆ ಹಿಂದೂ– ಮುಸ್ಲಿಂ ಸಂಘರ್ಷ: ರೇವಣ್ಣ

Published:
Updated:

ಮಂಡ್ಯ: ‘ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ದೇಶದಲ್ಲಿ ಹಿಂದೂ– ಮುಸ್ಲಿಂ ಸಂಘರ್ಷ ಉಂಟಾಗುತ್ತದೆ’ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕೆ.ಆರ್‌.ಪೇಟೆ ಪಟ್ಟಣದಲ್ಲಿ ಭಾನುವಾರ ರಾತ್ರಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರ ಮತಯಾಚನೆ ಮಾಡಿದರು. ‘ನರೇಂದ್ರ ಮೋದಿ ಅವರಿಂದಾಗಿ ದೇಶದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ಬಂದಿದೆ. ಈಚೆಗೆ ಬೇಕಂತಲೇ ಎರಡೂ ಸಮುದಾಯಗಳ ನಡುವೆ ಹೊಡೆದಾಡಿಸಿದ್ದಾರೆ. ಅವರು ದೇಶಕ್ಕೆ ಕಂಟಕ ತರುವ ಕೆಲಸ ಮಾಡುತ್ತಿದ್ದಾರೆ. ಸರ್ಜಿಕಲ್‌ ಸ್ಟ್ರೈಕ್‌ ಹೆಸರಿನಲ್ಲಿ ಪರೋಕ್ಷವಾಗಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.

‘ಪಕ್ಷೇತರ ಅಭ್ಯರ್ಥಿ ಸುಮಲತಾ ಚುನಾವಣೆ ಮುಗಿದ ಮೇಲೆ ಮನೆ ಬಿಡುತ್ತಾರೆ. ಮಂಡ್ಯ ಕಡೆ ತಿರುಗಿಯೂ ನೋಡುವುದಿಲ್ಲ. ಆದರೆ ನಿಖಿಲ್‌, ಜನರ ಕಷ್ಟ ಸುಖ ವಿಚಾರಿಸಿಕೊಂಡು ಇಲ್ಲೇ ಇರುತ್ತಾರೆ. ಜಿಲ್ಲೆಯ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿಗಳ ಕೊಡುಗೆ ಕೊಟ್ಟಿದ್ದೇವೆ’ ಎಂದರು.

ಯಡಿಯೂರಪ್ಪಗೆ ತಿರುಗೇಟು: ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸೋಲಿನ ಹತಾಶೆ ಉಂಟಾಗಿದೆ ಎಂದು ಬಿ.ಎಸ್‌ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ನಿಖಿಲ್‌ ಕುಮಾರಸ್ವಾಮಿ, ‘ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಇಲ್ಲ, ಜನಬೆಂಬಲ ಇಲ್ಲ, ಕಾರ್ಯಕರ್ತರೂ ಇಲ್ಲ. ಹಾಗಾಗಿ ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಚುನಾವಣೆ ಸಂದರ್ಭದಲ್ಲಿ ನಮ್ಮ ಮುಖಂಡರ ಮೇಲೆ ಐ.ಟಿ ದಾಳಿ ನಡೆದಿರುವುದರ ಹಿಂದೆ ಬಿಜೆಪಿ ಕೈವಾಡವಿದೆ. ಜನರು ಇದನ್ನು ಗಮನಿಸುತ್ತಿದ್ದಾರೆ. ಮತ ಹಾಕುವಾಗ ತಕ್ಕ ಉತ್ತರ ಕೊಡುತ್ತಾರೆ’ ಎಂದು ಹೇಳಿದರು.

ಮುಂದುವರೆದ ಐ.ಟಿ ಶೋಧ: ಜೆಡಿಎಸ್‌ ಮುಖಂಡರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಶೋಧ ಮುಂದುವರೆಸಿದೆ. ಮೇಲುಕೋಟೆ ಸಮೀಪದ ಜಕ್ಕನಹಳ್ಳಿಯ ಜೆಡಿಎಸ್‌ ಬೆಂಬಲಿಗ ರವಿ ಅವರ ಮನೆಯ ಮೇಲೆ ಭಾನುವಾರ ರಾತ್ರಿ ಐ.ಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವ್ಯಾಪಾರ ಮಾಡಿಕೊಂಡಿರುವ ರವಿ ಮನೆಯಲ್ಲಿ ₹ 10 ಲಕ್ಷ ನಗದು ಸಿಕ್ಕಿದೆ. ಅದಕ್ಕೆ ಅವರು ದಾಖಲೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿಖಿಲ್‌ ವಿರುದ್ಧ ದೂರು

ಮತದಾರರ ಪಟ್ಟಿ ಹಾಗೂ ನಾಮಪತ್ರದಲ್ಲಿ ನಿಖಿಲ್‌ ಕುಮಾರಸ್ವಾಮಿ ಹೆಸರು ವ್ಯತ್ಯಾಸದಿಂದ ಕೂಡಿದ್ದು ಅವರ ಉಮೇದುವಾರಿಕೆಯನ್ನು ತಿರಸ್ಕಾರ ಮಾಡಬೇಕು ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಸೋಮವಾರ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ನಿಖಿಲ್‌ ಕೆ. ಎಂದು ನಮೂದಿಸಲಾಗಿದೆ. ಆದರೆ ರಾಮನಗರ ತಾಲ್ಲೂಕು, ಕೇತೋಗಾನಹಳ್ಳಿಯಲ್ಲಿರುವ ಮತದಾರರ ಪಟ್ಟಿಯಲ್ಲಿ ಅವರ ಹೆಸರು ನಿಖಿಲ್‌ ಕುಮಾರಸ್ವಾಮಿ ಎಂದಿದೆ. ಮತದಾರರ ಪಟ್ಟಿಯಲ್ಲಿರುವ ಹೆಸರು ಮರೆಮಾಚಿ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಅವರ ನಾಮಪತ್ರ ತಿರಸ್ಕರಿಸಲು ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 8

  Angry

Comments:

0 comments

Write the first review for this !