ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಥ ನೀಚ ಮುಖ್ಯಮಂತ್ರಿಯನ್ನು ಬೆಳೆಸಿದ್ದೇ ಅಪರಾಧವಾಗಿದೆ’

Last Updated 10 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಇಂಥ ನೀಚ ಮುಖ್ಯಮಂತ್ರಿಯನ್ನು ಬೆಳೆಸಿದ್ದೇ ನಾನು ಜೀವನದಲ್ಲಿ ಮಾಡಿದ ದೊಡ್ಡ ಅಪರಾಧ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೆಂಗೇರಿ ಉಪನಗರ ಬಳಿ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಸೋನಿಯಾ ಗಾಂಧಿ ಬಲ ಕುಗ್ಗಿದೆ. ಆ ಕಾರಣಕ್ಕೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದಾರೆ. ಇಂಥ ಕೀಳು ವ್ಯಕ್ತಿಯನ್ನು ನಾನು ಜೀವನದಲ್ಲಿ ನೋಡಿಲ್ಲ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುತ್ತೇವೆ’ ಎಂದು ಕಿಡಿ ಕಾರಿದರು.

‘ನೀವೇನು ಮಾಡಿದ್ದೀರಿ ‌ಎಂಬುದನ್ನು ಅಂಕಿ– ಅಂಶ ಇಟ್ಟುಕೊಂಡು ಮಾತನಾಡಲು ಸಿದ್ಧ. ಖಜಾನೆ ಲೂಟಿ ಮಾಡಿದ್ದೀರಿ. ನಿಮ್ಮ ಕಾಲ ಮುಗಿಯುತ್ತಾ ಬಂದಿದೆ. ಇನ್ನು 120 ದಿನಗಳು ಮಾತ್ರ ಉಳಿದಿದೆ. ಆದರೂ ಕೈ ಎತ್ತಿ ಮಾತನಾಡುತ್ತಾರೆ, ಡ್ಯಾನ್ಸ್‌ ಮಾಡುತ್ತಾರೆ. ದೊಡ್ಡ ಸತ್ಯವಂತನ ಹಾಗೆ ವರ್ತಿಸುತ್ತಾರೆ. ಇವರ ಮನೆ ಮುಂದೆಯೇ ಸತ್ಯ ಹರಿಶ್ಚಂದ್ರ ಹಾದು ಹೋಗಿರಬೇಕು’ ಎಂದು ಲೇವಡಿ ಮಾಡಿದರು.

‘ಯಾರೂ ಭ್ರಷ್ಟಾಚಾರದ ಆರೋಪ ಮಾಡಲು ಸಾಧ್ಯವಿಲ್ಲ ಎಂದು ಬೀಗುತ್ತಿದ್ದಾರೆ. ಆದರೆ, ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದ ಕೆಂಪಣ್ಣ ಆಯೋಗದ ವರದಿ ಏನಾಯಿತು. ಇವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನಾಚಿಕೆ ಆಗೋದಿಲ್ವೆ’ ಎಂದು ಕಿಡಿಕಾರಿದರು.

ಲೂಟಿಕೋರರ ರಾಜ್ಯ: ‘ಕರ್ನಾಟಕವನ್ನು ಲೂಟಿಕೋರರ ರಾಜ್ಯವನ್ನಾಗಿ ಮಾಡಿದ ಕೀರ್ತಿ ಮುಖ್ಯಮಂತ್ರಿಗೆ ಸಲ್ಲುತ್ತದೆ’ ಎಂದು ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಅನ್ನಭಾಗ್ಯ ಯೋಜನೆ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆಯಂತಾಗಿದೆ. ಮಾಡಿದ ಕೆಲಸಕ್ಕಿಂತ ಪುಕ್ಕಟೆ ಪ್ರಚಾರ ಹೆಚ್ಚು ಪಡೆಯುತ್ತಿದ್ದಾರೆ ಎಂದರು.

ಕುರುಬ ಸಮಾಜಕ್ಕೆ ಸಿಎಂ ಮಾಡಿದ್ದೇನು?

‘ಕುರುಬ ಸಮಾಜಕ್ಕೆ ಸಿದ್ದರಾಮಯ್ಯ ಅವರಿಂದ ಯಾವುದೇ ಲಾಭ ಸಿಕ್ಕಿಲ್ಲ. ಅಹಿಂದ ವರ್ಗವನ್ನು ಆರ್ಥಿಕವಾಗಿ ಸಬಲಗೊಳಿಸಿಲ್ಲ. ಈ ವರ್ಗ ಇವರಿಂದ ದೂರವಾಗುತ್ತಿದೆ’ ಎಂದು ಜೆಡಿಎಸ್‌ ಮುಖಂಡ ಎಚ್‌. ವಿಶ್ವನಾಥ್ ಹೇಳಿದರು.

‘ತಾನೊಬ್ಬನೇ ಹಿಂದುಳಿದ ವರ್ಗದ ನಾಯಕ ಎಂದು ಹೇಳಿಕೊಂಡು ಸಿದ್ದರಾಮಯ್ಯ ಓಡಾಡುತ್ತಿದ್ದಾರೆ. ಅವರ ಹಿಂದೆ ಯಾವ ಹಿಂದುಳಿದ ವರ್ಗಗಳೂ ಇಲ್ಲ. ಇವರನ್ನು ಬೆಳೆಸಿದ್ದೇ ದೇವೇಗೌಡರು’ ಎಂದು ಪತ್ರಿಕಾಗೋಷ್ಠಿಯಲ್ಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT