ಮಕ್ಕಳ ಬಟ್ಟೆ ಹೊಲಿಯುವ ಮುಖ್ಯಶಿಕ್ಷಕ!

7

ಮಕ್ಕಳ ಬಟ್ಟೆ ಹೊಲಿಯುವ ಮುಖ್ಯಶಿಕ್ಷಕ!

Published:
Updated:
Deccan Herald

ಮಂಡ್ಯ: ಮಕ್ಕಳ ಬಟ್ಟೆ ಹರಿದರೆ ಮುಖ್ಯಶಿಕ್ಷಕರೇ ಹೊಲಿದು ಕೊಡುತ್ತಾರೆ. ಇದಕ್ಕಾಗಿ ಎರಡು ಹೊಲಿಗೆಯಂತ್ರಗಳನ್ನು ಶಾಲೆಯಲ್ಲೇ  ಇಟ್ಟುಕೊಂಡಿದ್ದಾರೆ.

ತಾಲ್ಲೂಕಿನ ಆಲಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸ್ವಾಮಿ ಅವರು ಯುವಕರಾಗಿದ್ದಾಗ ಕಲಿತ ಹೊಲಿಗೆ ವಿದ್ಯೆ ವ್ಯರ್ಥವಾಗಿಲ್ಲ. ಮಕ್ಕಳು ಶಾಲೆಯಲ್ಲಿದ್ದಾಗ, ಆಟವಾಡುವಾಗ ಬಟ್ಟೆ ಹರಿದರೆ ಹಾಗೆಯೇ ಮನೆಗೆ ಕಳುಹಿಸುವುದಿಲ್ಲ. ಮಗುವನ್ನು ಸ್ಥಳದಲ್ಲೇ ನಿಲ್ಲಿಸಿಕೊಂಡು ಬಟ್ಟೆಯ ಬಣ್ಣಕ್ಕೆ ಹೊಂದುವ ನೂಲು ಹಾಕಿ ಹೊಲಿದು ಕೊಡುತ್ತಾರೆ.

ಕೆಲ ಮಕ್ಕಳ ಸಮವಸ್ತ್ರ ಮನೆಯಲ್ಲೇ ಹರಿದಿದ್ದರೂ, ಅದನ್ನೂ ಪ್ರೀತಿಯಿಂದ ಹೊಲಿದು ಕೊಡುತ್ತಾರೆ. ಮಕ್ಕಳ ಮೇಲೆ ಮುಖ್ಯ ಶಿಕ್ಷಕರು ತೋರುವ ಪ್ರೀತಿಯಿಂದಾಗಿ ಜನರು ಹೊಲಿಗೆ ಯಂತ್ರ ದಾನ ಕೊಟ್ಟಿದ್ದಾರೆ.

‘ಹರಿದ ಬಟ್ಟೆ ಧರಿಸಿ ಶಾಲೆಗೆ ಬಂದರೆ ಮಕ್ಕಳ ಆತ್ಮವಿಶ್ವಾಸ ಕುಗ್ಗುತ್ತದೆ. ಗಮನ ಪಾಠದತ್ತ ಇರುವುದಿಲ್ಲ, ಹರಿದ ಬಟ್ಟೆಯ ಕಡೆಗೆ ಗಮನ ಕೇಂದ್ರೀಕರಿಸುತ್ತಾರೆ. ಹರಿದ ಬಟ್ಟೆ ಧರಿಸಿ ಶಾಲೆಗೆ ಬಂದರೆ ನನಗೆ ನೋವಾಗುತ್ತದೆ. ಕೆಲಸ ಗೊತ್ತಿರುವ ಕಾರಣ ನಾನೇ ಹೊಲಿಗೆ ಹಾಕಿ ಕೊಡುತ್ತೇನೆ. ಬಟ್ಟೆ ಹೊಲಿದು ಕೊಟ್ಟರೆ ಮುಖ್ಯಶಿಕ್ಷಕನ ಸ್ಥಾನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಭಾವಿಸಿದ್ದೇನೆ’ ಎಂದು ಸ್ವಾಮಿ ಹೇಳುತ್ತಾರೆ.

ತರಕಾರಿ ತೋಟ: ಸ್ವಾಮಿ ಅವರು ಮುಖ್ಯಶಿಕ್ಷಕರಾಗಿ ಬಂದ ನಂತರ ಶಾಲಾ ಆವರಣ ಹೂವು, ತರಕಾರಿ ತೋಟವಾಗಿ ಮಾರ್ಪಟ್ಟಿದೆ. ಬಿಸಿಯೂಟಕ್ಕೆ ಅವಶ್ಯಕವಾದ ಸೊಪ್ಪು, ತರಕಾರಿ ಆವರಣದಲ್ಲೇ ದೊರೆಯುತ್ತವೆ. ಟೊಮೆಟೊ, ಬಾಳೆ, ಬದನೆ, ಚಪ್ಪರದ ಅವರೆ, ನುಗ್ಗೇಕಾಯಿ, ಪುದಿನಾ, ಕರಿಬೇವು ಕೂಡ ಸಿಗುತ್ತದೆ. ಶಾಲಾ ಕಾಂಪೌಂಡ್‌ ಸುತ್ತಲೂ ಹೂವಿನ ಗಿಡ ನೆಡಸಲಾಗಿದೆ. ಸ್ವಾಮಿ ಅವರು ಬೆಳಿಗ್ಗೆ 8.30ಕ್ಕೆ ಬಂದರೆ ಸಂಜೆ 6ರ ವರೆಗೂ ಇಲ್ಲೇ ಇರುತ್ತಾರೆ.

ಶಾಲೆ ಆವರಣದಲ್ಲಿ 5 ಸಾವಿರ ಲೀಟರ್‌ ಸಾಮರ್ಥ್ಯದ ಮಳೆ ನೀರು ಸಂಗ್ರಹ ಘಟಕವಿದೆ. ದಾನಿಗಳ ಸಹಾಯದಿಂದ ಶಾಲೆಯ ಪ್ರತಿ ಕೊಠಡಿಯಲ್ಲಿ ಸ್ಪೀಕರ್‌ ಅಳವಡಿಸಲಾಗಿದೆ. ಎಲ್ಲ ಸ್ಪೀಕರ್‌ಗಳ ನಿಯಂತ್ರಣ ಮುಖ್ಯಶಿಕ್ಷಕರ ಕೊಠಡಿಯಲ್ಲೇ ಇವೆ. ಪ್ರಕಟಣೆಗಳಿದ್ದರೆ ಕಾರ್ಡ್‌ಲೆಸ್‌ ಮೈಕ್‌ ಮೂಲಕ ಆಯಾ ಕೊಠಡಿಗಳಿಗೆ ತಿಳಿಸುತ್ತಾರೆ. 7 ಕಂಪ್ಯೂಟರ್‌ಗಳಿದ್ದು ಪ್ರತ್ಯೇಕ ಕೊಠಡಿ ಹಾಗೂ ಕಂಪ್ಯೂಟರ್‌ ಶಿಕ್ಷಕಿ ಇದ್ದಾರೆ. ಯುಪಿಎಸ್‌, ಪ್ರೊಜೆಕ್ಟರ್‌ ವ್ಯವಸ್ಥೆಯೂ ಇದೆ.

ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 136 ಮಕ್ಕಳಿದ್ದಾರೆ. ಮಕ್ಕಳ ಮನೆಯಲ್ಲಿ (ಎಲ್‌.ಕೆ.ಜಿ, ಯು.ಕೆ.ಜಿ) 50 ಚಿಣ್ಣರಿದ್ದಾರೆ.

**

ಸ್ವಾಮಿ ಅವರು ಸಮಾಜಕ್ಕೆ ಮಾದರಿ. ಕೇವಲ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲೇ ಅತ್ಯುತ್ತಮ ಶಾಲೆಯನ್ನು ನಿರ್ಮಾಣ ಮಾಡಿದ್ದಾರೆ. ಮಕ್ಕಳ ಸಂಖ್ಯೆಯೂ ಜಾಸ್ತಿಯಾಗಿದೆ.

-ನಿರಂಜನ್‌, ಎಸ್‌ಡಿಎಂಸಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !