ಶನಿವಾರ, ಮೇ 30, 2020
27 °C
ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ತಪಾಸಣೆಯಿಲ್ಲ; ಸರ್ಕಾರಿ ಆಸ್ಪತ್ರೆಗಳಲ್ಲೂ ಸಕಾಲಕ್ಕೆ ಚಿಕಿತ್ಸೆಯಿಲ್ಲ

ಮೈಸೂರು | ಖಾಸಗಿ ಕ್ಲಿನಿಕ್ ಬಂದ್; ಅನಾರೋಗ್ಯ ಪೀಡಿತರ ನರಳಾಟ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ಪಟ್ಟಣ/ನಗರ, ಗ್ರಾಮೀಣ ಪ್ರದೇಶದಲ್ಲಿ ಅನಾರೋಗ್ಯಕ್ಕೊಳಗಾದವರು, ಪ್ರಸ್ತುತ ದಿನಗಳಲ್ಲಿ ಸಕಾಲಕ್ಕೆ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರಕದೆ ನರಳುತ್ತಿದ್ದಾರೆ. ಚಿಕಿತ್ಸೆಗಾಗಿ ವೈದ್ಯರನ್ನು ಹುಡುಕಿಕೊಂಡು ಅಲೆದರೂ, ಸ್ಪಂದನೆ ಸಿಗದಾಗಿದೆ.

ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯ ವ್ಯಾಪ್ತಿಯಲ್ಲಿ ಎಲ್ಲೆಡೆಯಿರುವ ಖಾಸಗಿ ಕ್ಲಿನಿಕ್‌ಗಳು ಬಹುತೇಕ ಬಾಗಿಲು ಮುಚ್ಚಿವೆ. ಯಾವೊಬ್ಬ ವೈದ್ಯರು ಸಹ ತಮ್ಮ ಕ್ಲಿನಿಕ್‌ನ ಬಾಗಿಲು ತೆರೆದು ಚಿಕಿತ್ಸೆ ನೀಡಲು ಮುಂದಾಗುತ್ತಿಲ್ಲ.

ಬಹುತೇಕ ಖಾಸಗಿ ಆಸ್ಪತ್ರೆಗಳು ಸಹ ಹೊರ ರೋಗಿಗಳ ವಿಭಾಗವನ್ನು ಬಂದ್ ಮಾಡಿದ್ದು, ಚಿಕಿತ್ಸೆ ನೀಡುತ್ತಿಲ್ಲ. ಆಸ್ಪತ್ರೆಗೆ ದಾಖಲಾದ ಒಳ ರೋಗಿಗಳು ಹಾಗೂ ತುರ್ತು ಚಿಕಿತ್ಸೆಗಾಗಿ ಬಂದವರಿಗಷ್ಟೇ ವೈದ್ಯಕೀಯ ಸೇವೆ ಒದಗಿಸುತ್ತಿವೆ. ಇದೇ ಹೊತ್ತಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಚಿಕಿತ್ಸೆ ಪಡೆಯಲು ವೈದ್ಯರು ದೊರಕದಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರತೆಗೆ ತಳ್ಳಿದೆ.

ಅನಾರೋಗ್ಯದಿಂದ ಬಳಲುವುದನ್ನು ತಪ್ಪಿಸಿಕೊಳ್ಳಲಿಕ್ಕಾಗಿ ರೋಗಿಯೇ ಅನಿವಾರ್ಯವಾಗಿ ಮೆಡಿಕಲ್ ಸ್ಟೋರ್‌ಗಳ ಬಳಿ ತೆರಳಿ, ಕೆಮ್ಮು, ಶೀತ, ಜ್ವರ, ಮೈ–ಕೈ ನೋವು, ತಲೆ ನೋವು ಇನ್ನಿತರೆ ಕಾಯಿಲೆಗಳಿಗೆ ವೈದ್ಯರ ಸಲಹೆಯ ಚೀಟಿ ಇಲ್ಲದೆ, ಔಷಧಿ ಪಡೆಯುತ್ತಿರುವ ಚಿತ್ರಣ ಎಲ್ಲೆಡೆ ಗೋಚರಿಸುತ್ತಿದೆ.

ಮಧುಮೇಹಿಗಳ ಸಂಕಟ

ತಿಂಗಳಿಗೊಮ್ಮೆ ರಕ್ತ ಪರೀಕ್ಷೆಗೊಳಪಟ್ಟು ರಕ್ತದಲ್ಲಿನ ಸಕ್ಕರೆ ಪ್ರಮಾಣ ತಿಳಿದುಕೊಂಡು, ಅದರಂತೆ ನಿತ್ಯವೂ ಮಾತ್ರೆ ತೆಗೆದುಕೊಳ್ಳುತ್ತಿದ್ದ ಮಧುಮೇಹಿಗಳ ಸಂಕಟವೂ ದಿನದಿಂದ ದಿನಕ್ಕೆ ಹೆಚ್ಚಿದೆ.

‘ತಿಂಗಳು ಕಳೆಯಿತು. ರಕ್ತ ಪರೀಕ್ಷೆಗಾಗಿ ಹಲವು ಲ್ಯಾಬ್‌ಗಳಿಗೆ ಸುತ್ತಿದರೂ ಯಾವೊಂದು ಬಾಗಿಲು ತೆರೆದಿಲ್ಲ. ಶುಗರ್ ಯಾವ ಮಟ್ಟದಲ್ಲಿದೆ ಎಂಬುದು ಗೊತ್ತಾಗ್ತಿಲ್ಲ. ಎಷ್ಟು ಎಂಜಿಯ ಮಾತ್ರೆ ನುಂಗಬೇಕು ಎಂಬುದೇ ಅರಿಯದಾಗಿದೆ. ವೈದ್ಯರನ್ನು ಸಂಪರ್ಕಿಸಿದರೂ ಸರಿಯಾದ ಸಲಹೆ ಸಿಗದಾಗಿದೆ. ಬೇರೆ ದಾರಿಯಿಲ್ಲದೆ ಹಿಂದೆ ನುಂಗುತ್ತಿದ್ದ ಮಾತ್ರೆಗಳನ್ನೇ ಮುಂದುವರೆಸಿರುವೆ’ ಎಂದು ಮಧುಮೇಹಿ ಬಸವರಾಜು ಆತಂಕ ವ್ಯಕ್ತಪಡಿಸಿದರು.

ಕೆ.ಆರ್.ಆಸ್ಪ‍ತ್ರೆಯಲ್ಲಿಲ್ಲ ಜನಜಂಗುಳಿ

ಮೈಸೂರಿನ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ ಸದಾ ರೋಗಿಗಳು, ಅನಾರೋಗ್ಯ ಪೀಡಿತರ ಸಂಬಂಧಿಕರಿಂದಲೇ ತುಂಬಿರುತ್ತಿದ್ದವು. ಕೆಲವೊಮ್ಮೆ ಕಾಲಿಡಲು ಜಾಗವಿರುತ್ತಿರಲಿಲ್ಲ. ಓಡಾಡುವ ಸ್ಥಳದಲ್ಲೇ ರೋಗಿಗಳ ಸಂಬಂಧಿಕರು ಕೂತಿರುತ್ತಿದ್ದರು. ಆದರೆ ಕೆಲ ದಿನಗಳಿಂದೀಚೆಗೆ ಚಿಕಿತ್ಸೆಗೆ ರೋಗಿಗಳು ದಾಖಲಾಗುತ್ತಿರುವುದೇ ಕಡಿಮೆಯಾಗಿದೆ. ಮೊದಲಿನಷ್ಟು ಜನಜಂಗುಳಿಯಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ಎರಡೂ ಆಸ್ಪತ್ರೆಗೆ ನೆರೆ ಜಿಲ್ಲೆಯ ರೋಗಿಗಳು ಬರುತ್ತಿದ್ದರು. ಮಾರ್ಚ್‌ 22ರಿಂದ ಜನತಾ ಕರ್ಫ್ಯೂ, ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ವಾಹನ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ. ಇದರ ಪರಿಣಾಮ ರೋಗಿಗಳು ಬರುತ್ತಿರುವುದು ಕಡಿಮೆಯಾಗಿದೆ.

20 ಕಿ.ಮೀ. ಕಾಲ್ನಡಿಗೆಯಲ್ಲೇ ಆಸ್ಪತ್ರೆಗೆ

ಸಕಾಲಕ್ಕೆ ಯಾವೊಂದು ವಾಹನವೂ ಸಿಗದಿದ್ದರಿಂದ, ವಿಧಿಯಿಲ್ಲದೆ ಜ್ವರ ಪೀಡಿತ ತನ್ನ ಮಗನನ್ನು ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ಆಲನಹಳ್ಳಿಯಿಂದ ಹೆಗಲ ಮೇಲೆ ಹೊತ್ತು ತಂದ ಸಿದ್ದರಾಜು ವೈದ್ಯರಿಗೆ ತೋರಿಸಿದರು.

ಆತಂಕ ಪಡುವಂತಿಲ್ಲ ಎಂದು ವೈದ್ಯರು ಹೇಳಿದ ಬಳಿಕ ನಿರಾಳರಾದ ಸಿದ್ದರಾಜು, ಮನೆಗೆ ಮರಳಲು ಆಟೊ ಹುಡುಕಾಡಿದರೂ ಸಿಗಲಿಲ್ಲ. ಅನಿವಾರ್ಯವಾಗಿ ಪತ್ನಿ ಹಾಗೂ ಕುಟುಂಬದ ಹಿರಿಯರೊಬ್ಬರ ಜತೆ ಮಗನನ್ನು ಹೊತ್ತು ಶುಕ್ರವಾರ ತಡರಾತ್ರಿ ಬನ್ನೂರು ಮುಖ್ಯ ರಸ್ತೆ ಮೂಲಕ ಮನೆಗೆ ಮರಳಿದರು.

‘ಮಗ ಜ್ವರದಿಂದ ಬಳಲುತ್ತಿದ್ದ. ನಮ್ಮ ಬಳಿಯೂ ಯಾವ ವಾಹನವಿಲ್ಲ. ಕೊರೊನಾ ಆತಂಕದಿಂದ ಒಂದೇ ಉಸಿರಿಗೆ ಹೆಗಲ ಮೇಲೆ ಹೊತ್ತುಕೊಂಡು ಹೋದೆವು. ಬರುವಾಗಲೂ ಸಹ ಆಟೊ ಸಿಗಲಿಲ್ಲ. ವಿಧಿಯಿಲ್ಲದೆ 20 ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗಿದೆವು’ ಎಂದು ಸಿದ್ದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ವೈದ್ಯರನ್ನು ಕಾಡುತ್ತಿರುವ ಕೊರೊನಾ ಭಯ

‘ಎಲ್ಲೆಡೆಯೂ ಖಾಸಗಿ ಕ್ಲಿನಿಕ್ ಬಂದ್ ಆಗಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸಹ ಬಂದ್ ಮಾಡಲಾಗಿದೆ. ತುರ್ತು ಚಿಕಿತ್ಸೆಯನ್ನಷ್ಟೇ ಕೊಡುತ್ತಿದ್ದೇವೆ. ನಮ್ಮಲ್ಲಿ ಕೊರೊನಾ ವೈರಾಣು ವಿರುದ್ಧ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಾದ ಯಾವೊಂದು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವಿಲ್ಲ. ಆದ್ದರಿಂದ ಕ್ಲಿನಿಕ್ ಬಂದ್ ಮಾಡಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ವೈದ್ಯರೊಬ್ಬರು ಹೇಳಿದರು.

‘ಕೊರೊನಾ ವೈರಸ್ ಪೀಡಿತ ಯಾರು ಎಂಬುದನ್ನು ಆರಂಭದಲ್ಲಿ ಪತ್ತೆ ಹಚ್ಚೋದು ಕಷ್ಟ. ನಾವು ಕ್ಲಿನಿಕ್ ಬಾಗಿಲು ತೆಗೆದುಕೊಂಡರೆ, ಆರಂಭದಲ್ಲಿ ನಮ್ಮ ಬಳಿಗೆ ಕೆಮ್ಮು, ನೆಗಡಿ, ಜ್ವರ ಅಂತ ಬರ್ತಾರೆ. ನಾವೂ ಸೇರಿದಂತೆ ಕ್ಲಿನಿಕ್‌ಗೆ ಬರುವ ಇನ್ನಿತರ ರೋಗಿಗಳಿಗೂ ಕೋವಿಡ್–19 ತಗುಲುವ ಭಯದಿಂದ ಕ್ಲಿನಿಕ್ ಮುಚ್ಚಿದ್ದೇವೆ. ಸರ್ಕಾರ ಅಗತ್ಯ ಮುನ್ನೆಚ್ಚರಿಕೆಯ ಸೌಲಭ್ಯ ಒದಗಿಸಿದರೆ, ನಾವೂ ಚಿಕಿತ್ಸೆ ನೀಡಲು ಸಿದ್ಧರಿದ್ದೇವೆ’ ಎಂದು ಮತ್ತೊಬ್ಬ ವೈದ್ಯರು ತಿಳಿಸಿದರು.

ಖಾಸಗಿ ವೈದ್ಯರ ಹೇಳಿಕೆ ಬಗ್ಗೆ ಡಿಎಚ್ಒ ಡಾ.ವೆಂಕಟೇಶ್‌ ಪ್ರತಿಕ್ರಿಯೆಗೆ ಸಂಪರ್ಕಿಸಿದರೂ, ಸ್ಪಂದಿಸಲಿಲ್ಲ. ತಾಲ್ಲೂಕು ಆರೋಗ್ಯಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ‘ಸರ್ಕಾರ ಕ್ಲಿನಿಕ್ ನಡೆಸಲು ಅನುಮತಿ ನೀಡಿದೆ. ಆದರೆ ಯಾವುದೇ ವೈದ್ಯಕೀಯ ಸೌಲಭ್ಯ ಒದಗಿಸಲು ಅವಕಾಶವಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು