ಶುಕ್ರವಾರ, ನವೆಂಬರ್ 22, 2019
27 °C
ನೆಲಕಚ್ಚಿದ ಮನೆಗಳು, ಜಲಾವೃತಗೊಂಡ ಸಾವಿರಾರು ಎಕರೆ ಜಮೀನು

ಮಳೆ, ಪ್ರವಾಹ ಭೀತಿ, ಕಡಿತಗೊಂಡ ಸಂಪರ್ಕ: ಮತ್ತೆ ಉಕ್ಕಿ ಹರಿದ ಹಳ್ಳ-ಕೊಳ್ಳ

Published:
Updated:

ಹುಬ್ಬಳ್ಳಿ: ಕೇವಲ ಎರಡು ತಿಂಗಳ ಹಿಂದಷ್ಟೇ ಮಹಾಮಳೆ, ಪ್ರವಾಹದಿಂದ ತತ್ತರಿಸಿದ್ದ ಉತ್ತರ ಕರ್ನಾಟಕ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.

ಗದಗ ಜಿಲ್ಲೆಯ ರೋಣ ಮತ್ತು ನರಗುಂದ ತಾಲ್ಲೂಕುಗಳ ಮಲಪ್ರಭಾ ನದಿಪಾತ್ರದಲ್ಲಿ ಬರುವ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ನೆರೆ ನೀರಿನಿಂದ ನರಗುಂದ ತಾಲ್ಲೂಕಿನ ಕೊಣ್ಣೂರು ಬಳಿ ಹುಬ್ಬಳ್ಳಿ– ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ನರಗುಂದ– ರೋಣ ರಸ್ತೆಯಲ್ಲೂ ಸಂಚಾರ ಕಡಿತಗೊಂಡಿದೆ. ಕೆಲ ಗ್ರಾಮಗಳು ನಡುಗಡ್ಡೆಗಳಾಗಿವೆ.

ಬಾದಾಮಿ ತಾಲ್ಲೂಕು ಗೋವನಕೊಪ್ಪ ಬಳಿ ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿದ್ದು ಹುಬ್ಬಳ್ಳಿ– ಸೊಲ್ಲಾಪುರ ನಡುವೆ ಸಂಚಾರ ಬಂದ್‌ ಆಗಿದೆ. ಜಮಖಂಡಿ ತಾಲ್ಲೂಕಿನಲ್ಲಿ ಭಾರಿ ಮಳೆಗೆ 149 ಮನೆಗಳಿಗೆ ಹಾನಿಯಾಗಿದ್ದು, ಸಾವಿರಾರು ಎಕರೆ ಭೂಮಿಯಲ್ಲಿ ಬೆಳೆಯಲಾಗಿದ್ದ ಬೆಳೆಗಳಲ್ಲಿ ನೀರು ನುಗ್ಗಿದೆ. ಮುಧೋಳ ತಾಲ್ಲೂಕಿನಲ್ಲಿ 229 ಮನೆಗಳು ಕುಸಿದಿವೆ. ಮಳೆ ನೀರು ನುಗ್ಗಿ ಐದು ಸಾವಿರ ಕೋಳಿಗಳು ಸತ್ತಿವೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮಲಪ್ರಭಾ (ನವಿಲುತೀರ್ಥ) ಜಲಾಶಯದಿಂದ 36 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಿದ್ದರಿಂದಾಗಿ ಸವದತ್ತಿ, ರಾಮದುರ್ಗ ತಾಲ್ಲೂಕಿನಲ್ಲಿ ಪ್ರವಾಹ ಸ್ಥಿತಿ ಉಂಟಾಗಿತ್ತು. ಹಲವು ಹಳ್ಳಿಗಳು ಜಲಾವೃತಗೊಂಡಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಮಳೆಯಿಂದಾಗಿ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಒಂದು ಲಕ್ಷ ಕ್ಯುಸೆಕ್‌ ನೀರು ಸೇರುತ್ತಿದೆ. ಸೇತುವೆಯೊಂದು ಮುಳುಗಡೆಯಾಗಿದೆ. ಖಾನಾಪುರ ದೊಡ್ಡ ಹೊಸೂರು ಗ್ರಾಮದಲ್ಲಿ ನೀರಿನ ಹೊಂಡದಲ್ಲಿ ಬಾಲಕಿಯೊಬ್ಬಳು ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಶಿಡ್ಲಗುಂಡಿ ಸೇತುವೆ ಪಕ್ಕ ನಿರ್ಮಿಸಿದ್ದ ತಾತ್ಕಾಲಿಕ ರಸ್ತೆ, ಮಳೆ ನೀರಿನಲ್ಲಿ ಮುಳುಗಿದ್ದರಿಂದ ಯಲ್ಲಾಪುರ ಮತ್ತು ಮುಂಡಗೋಡ ತಾಲ್ಲೂಕುಗಳ ನಡುವಿನ ಸಂಪರ್ಕ ಸೋಮವಾರ ಕಡಿತಗೊಂಡಿತು.

ಸ್ಮಾರಕ ಮತ್ತೆ ಮುಳುಗಡೆ: ಹೊಸಪೇಟೆಯ ತುಂಗಭದ್ರಾ ಅಣೆಕಟ್ಟೆಯಿಂದ 60 ಸಾವಿರ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದ್ದು ತಾಲ್ಲೂಕಿನ ಹಂಪಿಯ ಅನೇಕ ಸ್ಮಾರಕಗಳು ಮತ್ತೆ ಮುಳುಗಡೆಯಾಗಿವೆ.

ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶನಿವಾರ ಹಾಗೂ ಭಾನುವಾರ ಸುರಿದ ಮಳೆಯಿಂದ ಹಲವು ಗ್ರಾಮಗಳು ಜಲಾವೃತವಾಗಿದ್ದು, ಹಲವೆಡೆ ಸಂಪರ್ಕ ಕಡಿತಗೊಂಡಿದೆ. ಸಾವಿರಾರು ಮನೆಗಳು ಕುಸಿದಿವೆ.


ಬೆಳಗಾವಿ ತಾಲ್ಲೂಕಿನ ಹೊಸವಂಟಮೂರಿ ಬಳಿ ಭೂಕುಸಿತ ಉಂಟಾಗಿ ಸಾರಿಗೆ ಬಸ್‌ ಗುಂಡಿಯಲ್ಲಿ ಸಿಲುಕಿದ್ದ ದೃಶ್ಯ

ಹುಬ್ಬಳ್ಳಿ ತಾಲ್ಲೂಕಿನ ಇಂಗಳಹಳ್ಳಿಯ ಯರನಹಳ್ಳದ ಮಧ್ಯೆ 15 ತಾಸು ಸಿಲುಕಿದ್ದ ಆಂಧ್ರಪ್ರದೇಶ ಮೂಲದ 10 ಕಾರ್ಮಿಕರನ್ನು ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಸೋಮವಾರ ರಕ್ಷಿಸಿದ್ದಾರೆ. ನವಲಗುಂದ ತಾಲ್ಲೂಕಿನ ಯಮನೂರು ಹಾಗೂ ಪಡೆಸೂರ ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ತುಪ್ಪರಿ ಹಳ್ಳ ಉಕ್ಕಿದ ಪರಿಣಾಮ ಸೃಷ್ಟಿಯಾದ ನಡುಗಡ್ಡೆಯಲ್ಲಿ ಭಾನುವಾರ ರಾತ್ರಿ ಸಿಲುಕಿದ್ದ ದಂಪತಿಯನ್ನು ಸೋಮವಾರ ನಸುಕಿನಲ್ಲಿ ರಕ್ಷಿಸಲಾಗಿದೆ.

ಭಾನುವಾರ ರಾತ್ರಿ ಬೆಂಗಳೂರಿನಿಂದ ಗದಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಸವಣೂರಿನ ಯಲವಿಗಿ ರೈಲ್ವೆ ಕೆಳಸೇತುವೆಯಲ್ಲಿ ಅರ್ಧದಷ್ಟು ಮುಳುಗಿತ್ತು. ಬಸ್‌ನಲ್ಲಿದ್ದ 35ಕ್ಕೂ ಹೆಚ್ಚು ಪ್ರಯಾಣಿಕರನ್ನು ಅಗ್ನಿಶಾಮಕ ಸಿಬ್ಬಂದಿ ಬೋಟ್ ಮೂಲಕ ರಕ್ಷಿಸಿದರು.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಸವನಳ್ಳಿ ಬಳಿ ಸೋಮವಾರ ಸಂಜೆ ಡೋಣಿ ನದಿ ಪ್ರವಾಹದಲ್ಲಿ ಇಬ್ಬರು ಯುವಕರು ಸಿಲುಕಿದ್ದು ಅವರನ್ನು ರಕ್ಷಿಸುವ ಕಾರ್ಯ ನಡೆದಿದೆ.

ಧಾರವಾಡ ಜಿಲ್ಲೆಯಲ್ಲಿ 850ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹತ್ತಿ, ಗೋವಿನಜೋಳ, ಈರುಳ್ಳಿ ಬೆಳೆಗಳು ನೀರುಪಾಲಾಗಿವೆ. ನಗರ ಪ್ರದೇಶದ ಹಲವು ಬಡಾವಣೆಗಳು ಜಲಾವೃತಗೊಂಡಿವೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ರಾತ್ರಿ ಮನೆ ಮುಂದೆ ಆಟವಾಡುತ್ತಿದ್ದ 13 ವರ್ಷದ ಶೋಯಬ್, ಚರಂಡಿಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದಾನೆ. ಹಿರೇಕೆರೂರಿನ ಕೋಳಿಫಾರ್ಮ್‌ಗೆ ನೀರು ನುಗ್ಗಿ ಸುಮಾರು ಒಂದೂವರೆ ಸಾವಿರ ಕೋಳಿಗಳು ಅಸುನೀಗಿವೆ. ರಾಣೆಬೆನ್ನೂರಿನಲ್ಲಿ ಯುವಕನೊಬ್ಬ ಕಣ್ಮರೆಯಾಗಿದ್ದು, ಆತ ಕೂಡ ನೀರಿನಲ್ಲೇ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ.

ಪ್ರವಾಹಕ್ಕೆ ಇಬ್ಬರ ಬಲಿ (ಕ‌ಲಬುರ್ಗಿ ವರದಿ): ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಕೊಪ್ಪಳ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆವರೆಗೆ ಭಾರಿ ಮಳೆಯಾಗಿದ್ದು, ಎರಡು ಪ್ರತ್ಯೇಕ ಘಟನೆಗಳಲ್ಲಿ ಪ್ರವಾಹಕ್ಕೆ ವೃದ್ಧ ಹಾಗೂ ಬಾಲಕ ಕೊಚ್ಚಿ ಹೋಗಿದ್ದಾರೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ತೆಗ್ಗಿಹಾಳ ಗ್ರಾಮದಲ್ಲಿ ಹನುಮಪ್ಪ ಹೊಳಿಯಪ್ಪ ನಂದಿಹಾಳ (65) ಎಂಬ ವೃದ್ಧ ಹಳ್ಳದ ಪ್ರವಾಹಕ್ಕೆ ಸಿಲುಕಿ ಮೃತಪಟ್ಟರು. ದನ–ಕರುಗಳಿಗೆ ನೀರು ಕುಡಿಸಲು ಹಳ್ಳದ ಕಡೆ ಹೋಗಿದ್ದ ಸಂದರ್ಭ, ನೀರಿನ ಸೆಳವಿಗೆ ಸಿಕ್ಕಿ ತೇಲಿಹೋದರು. ಸುಮಾರು 5 ಕಿ.ಮೀ ದೂರದ ಬನ್ನಟ್ಟಿ ಗ್ರಾಮದ ಸೇತುವೆಯ ಹತ್ತಿರ ಅವರ ಶವ ಪತ್ತೆಯಾಗಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಚಿಂಚೋಡಿ ಬಳಿ ಹರಿಯುವ ಕೃಷ್ಣಾನದಿಯಲ್ಲಿ ನೀರಿನ ಪ್ರಮಾಣ ಏಕಾಏಕಿ ಜಾಸ್ತಿಯಾಗಿದ್ದರಿಂದ ಗ್ರಾಮದ ಸಂತೋಷ ದೇವೇಗೌಡ (16) ಎಂಬ ಬಾಲಕ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ತಡರಾತ್ರಿಯಾದರೂ ಸುಳಿವು ಸಿಕ್ಕಿಲ್ಲ.

ರಸ್ತೆ ಬದಿ ಶವ ಸಂಸ್ಕಾರ

ಬೆಣ್ಣೆಹಳ್ಳದಲ್ಲಿ ಉಂಟಾದ ಪ್ರವಾಹದಿಂದಾಗಿ ಸ್ಮಶಾನ ಜಲಾವೃತಗೊಂಡಿದ್ದರಿಂದ, ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಭಾನುವಾರ ಮೃತಪಟ್ಟಿದ್ದ ಇಬ್ಬರ ಅಂತ್ಯಸಂಸ್ಕಾರವನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕ ನೆರವೇರಿಸಲಾಯಿತು.

ಮನೆಗಳಿಗೆ ಹಾನಿ

ದಾವಣಗೆರೆ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಹಲವು ಮನೆಗಳು ಹಾನಿಯಾಗಿದ್ದು, ಸಿಡಿಲು ಬಡಿದು ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ರೈತ ಜಯಪ್ಪ (45) ಮೃತಪಟ್ಟಿದ್ದಾರೆ. ಹೊನ್ನಾಳಿಯಲ್ಲಿ 8 ಕೋಣಗಳು ಸಾವನ್ನಪ್ಪಿವೆ.

ದಾವಣಗೆರೆ ನಗರದಲ್ಲಿ 500ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆಯಂತೆ ಶಂಕರವಿಹಾರ ಬಡಾವಣೆಯಲ್ಲಿ ಸಂತ್ರಸ್ತರ ಪರಿಹಾರ ಕೇಂದ್ರ ತೆರೆಯಲಾಗಿದೆ. ಚನ್ನಗಿರಿಯಲ್ಲಿ 72 ಮನೆಗಳಿಗೆ ನೀರು ನುಗ್ಗಿದೆ. ಸಂತೇಬೆನ್ನೂರಿನಲ್ಲಿ 17 ಮನೆ, ಹರಿಹರದಲ್ಲಿ 14, ಹೊನ್ನಾಳಿಯಲ್ಲಿ 127, ಮಲೇಬೆನ್ನೂರಿನಲ್ಲಿ 12, ಹರಪನಹಳ್ಳಿಯಲ್ಲಿ 44 ಮನೆಗಳಿಗೆ ಹಾನಿಯಾಗಿವೆ. ಹರಿಹರದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ಶಾದಿಮಹಲ್‌ನಲ್ಲಿ ಜನ ರಾತ್ರಿ ಕಳೆದಿದ್ದಾರೆ. ಮೆಕ್ಕೆಜೋಳ ಹೊಲದಲ್ಲಿ ನೀರು ನಿಂತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಪ್ರತಿಕ್ರಿಯಿಸಿ (+)