ಶನಿವಾರ, ಜುಲೈ 31, 2021
22 °C

ಕರಾವಳಿಯಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಜು.11 ಮತ್ತು 12ರಂದು ಗುಡುಗು, ಸಿಡಿಲು ಸಹಿತ ವ್ಯಾಪಕ ಮಳೆಯಾ
ಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 'ಆರೆಂಜ್ ಅಡಲರ್ಟ್' ಘೋಷಿಸಲಾಗಿದೆ. ಕರಾವಳಿಯಲ್ಲಿ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, 3.3 ಮೀಟರ್ ಗಳಷ್ಟು ಎತ್ತರದ ಅಲೆಗಳೂ ಏಳುತ್ತಿವೆ. ಹಾಗಾಗಿ ಮೀನುಗಾರರು ಕಡಲಿಗೆ ಇಳಿಯದಂತೆ ಇಲಾಖೆ ಎಚ್ಚರಿಸಿದೆ.

ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲೂ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಉತ್ತರ ಒಳನಾಡಿನಲ್ಲಿ ಇದೇ 13ರಿಂದ ಮಳೆ ಪ್ರಮಾಣ ಹೆಚ್ಚಾಗಲಿದೆ.

ಮಳೆ- ಎಲ್ಲಿ, ಎಷ್ಟು?: ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ಗರಿಷ್ಠ 17 ಸೆಂ.ಮೀ ಮಳೆಯಾಗಿದೆ. ಕದ್ರಾ 11, ಕಾರವಾರ 6, ಕುಂದಾಪುರ 5, ಹೊನ್ನಾವರ, ಉಡುಪಿ, ಕೊಪ್ಪ, ಕೊರಟಗೆರೆ, ಶಿಕಾರಿಪುರ 4, ಮಂಗಳೂರು, ಮೂಡುಬಿದಿರೆ, ಚಿಕ್ಕೋಡಿ, ಬೈಲಹೊಂಗಲ, ನಿಪ್ಪಾಣಿ, ಬೆಳಗಾವಿ, ಗದಗ, ಬಂಗಾರಪೇಟೆ, ಕುಣಿಗಲ್, ಕನಕಪುರ, ಚಳ್ಳಕೆರೆ, ಆನೇಕಲ್, ಚನ್ನಪಟ್ಟಣ, ಕೋಲಾರ ತಲಾ 3, ಧಾರವಾಡ, ಹಾವೇರಿ, ಹುಬ್ಬಳ್ಳಿ, ಗೌರಿಬಿದನೂರು, ಚಿಂತಾಮಣಿ, ದೊಡ್ಡಬಳ್ಳಾಪುರ, ಸೊರಬ, ಭಾಗಮಂಡಲ, ಚಿತ್ರದುರ್ಗ, ಹೊಸದುರ್ಗ, ತೀರ್ಥಹಳ್ಳಿ, ಮಾಲೂರು, ತರೀಕೆರೆ, ಮೂಡಿಗೆರೆಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.

ಹೊಳೆಯಲ್ಲಿ ಕೊಚ್ಚಿಹೋದ ವ್ಯಕ್ತಿ

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಶುಕ್ರವಾರವೂ ಉತ್ತಮ ಮಳೆಯಾಗಿದೆ. ಉಡುಪಿಯ ಹೆಬ್ರಿ ತಾಲ್ಲೂಕಿನ ಸಿದ್ದಾಪುರದ ಹೊಸಂಗಡಿ ಗ್ರಾಮದ ಕಂಠಗದ್ದೆ ಬಳಿಯ ಹೊಳೆಯಲ್ಲಿ ಕಾಲುಜಾರಿ ಬಿದ್ದು ವಿಠಲ ಗೊಲ್ಲ (42)ಎಂಬವರು ಮೃತಪಟ್ಟಿದ್ದಾರೆ. ಮಳೆಗೆ ಸಡಿಲಗೊಂಡಿದ್ದ ಮಣ್ಣಿನ ಮೇಲೆ ಜಾರಿ ಹೊಳೆಗೆ ಬಿದ್ದು ಕೊಚ್ಚಿಹೋಗಿದ್ದಾರೆ. 3 ಕಿ.ಮೀ ದೂರದಲ್ಲಿ ಶವ ಪತ್ತೆಯಾಗಿದೆ.

ಉಡುಪಿ ಜಿಲ್ಲೆ ಶಿರ್ವದಲ್ಲಿ ಸಿಡಿಲು ಬಡಿದು ಮನೆಯೊಂದಕ್ಕೆ ಹಾನಿಯಾಗಿದೆ. ಕೊಲ್ಲೂರಿನಲ್ಲಿ ಮನೆಯ ಆವರಣ, ಗೋಡೆ ಕುಸಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ವಿವಿಧೆಡೆ ಭೂ ಕುಸಿತ ಉಂಟಾಗಿದೆ. ಮಂಡೆಕೋಲಿನಲ್ಲಿ ಮನೆಯ ಆವರಣ ಕುಸಿದಿದೆ. ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆಯ ಹಲವೆಡೆ ಹದ ಮಳೆಯಾಗಿದೆ. ಬೀರೂರು, ಅಜ್ಜಂಪುರ, ಶಿವನಿ ಭಾಗದಲ್ಲಿ ಉತ್ತಮವಾಗಿ ಸುರಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು