ಕರಾವಳಿಯಲ್ಲಿ ಮಳೆ ಅಬ್ಬರ

7
ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಕರಾವಳಿಯಲ್ಲಿ ಮಳೆ ಅಬ್ಬರ

Published:
Updated:
Deccan Herald

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗಿರುವುದರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುರುವಾರ ಸಂಜೆಯಿಂದ ಮಳೆ ಆರಂಭವಾಗಿದೆ. ಗುಡುಗು–ಸಿಡಿಲು ಸಹಿತ ಮಳೆ ಸುರಿದಿದ್ದು, ತಂಪಾದ ವಾತಾವರಣ ನಿರ್ಮಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸಂಜೆ ಸುಮಾರು ಎರಡೂವರೆ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ಮೀನುಗಾರಿಕೆಗೆ ತರಳಿದ್ದ ಬೋಟ್‌ಗಳು ದಡಕ್ಕೆ ಹಿಂದಿರುಗುತ್ತಿವೆ. ಇದೇ 6 ರಿಂದ 8 ರವರೆಗೆ ಅರಬ್ಬಿ ಸಮುದ್ರವು ಪ್ರಕ್ಷುಬ್ಧವಾಗುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ತೆರಳಬಾರದು. ಈಗಾಗಲೇ ಮೀನುಗಾರಿಕೆಗೆ ತೆರಳಿರುವ ಎಲ್ಲಾ ದೋಣಿಗಳು ಇದೇ 5ರೊಳಗೆ ದಡ ಸೇರುವಂತೆ ಮೀನುಗಾರಿಕೆ ಇಲಾಖೆ ಎಚ್ಚರಿಕೆ ನೀಡಿದೆ.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಸುಮಾರು 500 ಬೋಟ್‌ಗಳು ದಡಕ್ಕೆ ಮರಳಿವೆ. ಇನ್ನೂ 700ಕ್ಕೂ ಅಧಿಕ ಬೋಟ್‌ಗಳು ಸಮುದ್ರದಲ್ಲಿದ್ದು, ಶುಕ್ರವಾರ ಹಿಂದಿರುಗುವ ಸಾಧ್ಯತೆ ಇದೆ ಎಂದು ಮೀನುಗಾರರ ಸಂಘದ ಅಧ್ಯಕ್ಷ ಮೋಹನ್‌ ಬೇಂಗ್ರೆ ತಿಳಿಸಿದ್ದಾರೆ.

ಉಡುಪಿಯಲ್ಲಿ ತುಂತುರು ಮಳೆ ಆರಂಭವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಸಾಧಾರಣ ಮಳೆ ಸುರಿದಿದೆ. ಕಾಸರಗೋಡಿನಲ್ಲೂ ಭಾರಿ ಮಳೆ ಸುರಿದಿದ್ದು, ಗಾಳಿಯಿಂದಾಗಿ ಅಂಗಡಿಗಳ ಮೇಲ್ಚಾವಣಿ ಹಾರಿ ಹೋಗಿವೆ. ಮೊಬೈಲ್‌ ಟವರ್‌ಗೆ ಹಾನಿಯಾಗಿದೆ.

ಮಡಿಕೇರಿ ವರದಿ: ಕೊಡಗು ಜಿಲ್ಲೆಯಲ್ಲಿ ಗುರುವಾರ ಸಂಜೆಯಿಂದ ಗಾಳಿ ಸಹಿತ ಮಳೆಯಾಗುತ್ತಿದೆ‌. ನಾಪೋಕ್ಲು, ಭಾಗಮಂಡಲ ಹಾಗೂ ತಲಕಾವೇರಿ ವ್ಯಾಪ್ತಿಯಲ್ಲಿ ಜೋರು ಮಳೆ‌ಯಾದರೆ, ಮಡಿಕೇರಿ, ಕುಶಾಲನಗರ, ಗೋಣಿಕೊಪ್ಪಲು, ವಿರಾಜಪೇಟೆ ಸುತ್ತಮುತ್ತ ತುಂತುರು ಮಳೆ ಸುರಿಯುತ್ತಿದೆ.

ಆಗಸ್ಟ್‌ನಲ್ಲಿ ಸುರಿದ ಮಹಾಮಳೆಯಿಂದ ಭೂಕುಸಿತ ಸಂಭವಿಸಿ ನೂರಾರು ಜನರು ಸಂಕಷ್ಟಕ್ಕೆ ಒಳಗಾಗಿದ್ದರು. ಈಗ ಮತ್ತೆ ವಾತಾವರಣ ಬದಲಾಗಿದ್ದು ಜನರು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.

ಸಿಡಿಲು ಬಡಿದು ಕಾರ್ಮಿಕ ಸಾವು
ಬಾಳೆಹೊನ್ನೂರು: ಸಮೀಪದ ದೇವದಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ್ಕೆಮನೆ ಎಸ್ಟೇಟ್‌ನಲ್ಲಿ ಗುರುವಾರ ಸಂಜೆ ಸಿಡಿಲು ಬಡಿದು ಹೂವಿನಹಡಗಲಿ ಮೂಲದ ಕಾರ್ಮಿಕ ಶಿವಪ್ಪ (30) ಮೃತಪಟ್ಟಿದ್ದಾರೆ.

ಬಳ್ಳಾರಿಯಿಂದ ಕೆಲಸಕ್ಕಾಗಿ ಇಲ್ಲಿಗೆ ಬುಧವಾರ ಬಂದಿದ್ದರು. ಮನೆ ಹೊರಗೆ ನಿಂತಿದ್ದ ವೇಳೆ ಸಿಡಿಲು ಬಡಿದು ಆಸ್ವಸ್ಥಗೊಂಡು ಸ್ಥಳದಲ್ಲೇ ಸಾವನ್ನಪ್ಪಿದರು. ಅವರಿಗೆ ನಾಲ್ವರು ಮಕ್ಕಳಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !