ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಕಣಕುಂಬಿಯಲ್ಲಿ ಭಾರಿ ಮಳೆ ಮುಂದುವರಿಕೆ

ಭಾರಿ ಮಳೆ; ಬೆಳಗಾವಿ ಶಾಲೆಗಳಿಗೆ ರಜೆ

Published:
Updated:

ಬೆಳಗಾವಿ: ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಮುಂದುವರಿದಿದ್ದು, ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಶಾಲೆಗಳಿಗೆ ಭಾನುವಾರ ರಜೆ ಘೋಷಿಸಲಾಗಿದೆ. ಕಳೆದ ತಿಂಗಳು ಮಳೆ ಕಾರಣದಿಂದ ನೀಡಲಾಗಿದ್ದ ರಜೆಗಳನ್ನು ಸರಿದೂಗಿಸಲು ಭಾನುವಾರವೂ ತರಗತಿಗಳನ್ನು ನಡೆಸಲಾಗುತ್ತಿತ್ತು. ಅದನ್ನು ರದ್ದುಪಡಿಸಿ, ರಜೆ ನೀಡಲಾಗಿದೆ.

ಮಲಪ್ರಭಾ ನದಿಯ ಉಗಮಸ್ಥಳವಾಗಿರುವ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಅರಣ್ಯ ಪ್ರದೇಶದಲ್ಲಿ ಶನಿವಾರವೂ ಧಾರಾಕಾರ ಮಳೆ ಮುಂದುವರಿದಿದ್ದು, ಕಳೆದ 24 ತಾಸುಗಳಲ್ಲಿ 17.1 ಸೆಂ.ಮೀ ಮಳೆ ಸುರಿದಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆ ಇದಾಗಿದೆ. ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ 13 ಸೆಂ.ಮೀ, ಆಗುಂಬೆಯಲ್ಲಿ 11 ಸೆಂ.ಮೀ, ದಕ್ಷಿಣ ಕನ್ನಡದ ಸುಬ್ರಹ್ಮಣ್ಯದಲ್ಲಿ 10 ಸೆಂ.ಮೀ ಮಳೆಯಾಗಿದೆ.

ಖಾನಾಪುರದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ನದಿ, ಹಳ್ಳ– ಕೊಳ್ಳ ತುಂಬಿ ಹರಿಯುತ್ತಿವೆ. ಸಿಂಧನೂರು– ಹೆಮ್ಮಡಗಾ, ಜಾಂಬೋಟಿ– ಜತ್ತ, ಖಾನಾಪುರ– ಮಿಲಾವಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಲಾವೃತಗೊಂಡಿರುವ  ಚಿಕ್ಕೋಡಿ, ನಿಪ್ಪಾಣಿ ಹಾಗೂ ರಾಯಬಾಗದ 7 ಸೇತುವೆಗಳು ಯಥಾಸ್ಥಿತಿಯಲ್ಲಿವೆ. ಇವುಗಳಿಗೆ ಪರ್ಯಾಯ ರಸ್ತೆಗಳಿದ್ದು, ಜನರ ಸಂಚಾರಕ್ಕೆ ತೊಂದರೆಯಾಗಿಲ್ಲ.

ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿದ್ದು, ಕೃಷ್ಣಾ ಮತ್ತು ಉಪನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಅಲ್ಲಿನ ರಾಜಾಪುರ ಬ್ಯಾರೇಜ್ ಮೂಲಕ 1.26 ಲಕ್ಷ ಕ್ಯುಸೆಕ್ ಹಾಗೂ ದೂಧ್ ಗಂಗಾ ನದಿಯ ಮೂಲಕ 24,000 ಕ್ಯುಸೆಕ್ ಸೇರಿದಂತೆ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ‌ ಕೃಷ್ಣಾ ನದಿಗೆ 1.50 ಲಕ್ಷ ಕ್ಯುಸೆಕ್ ನೀರು ಸೇರಿಕೊಳ್ಳುತ್ತಿದೆ.

ನದಿಗಳ ಹರಿವಿನಲ್ಲಿ ಏರಿಕೆ ಹೆಚ್ಚಾಗುತ್ತಿರುವುದರಿಂದ ನದಿ ದಂಡೆಯ ಮೇಲಿರುವ ಖಾನಾಪುರ ಹಾಗೂ ರಾಮದುರ್ಗ ತಾಲ್ಲೂಕುಗಳ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಡಳಿತ ಸೂಚನೆ ನೀಡಿದೆ.

Post Comments (+)