ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯಲ್ಲಿ ಬಿರುಸಾದ ಮಳೆ

ಕಡಲ್ಕೊರೆತಕ್ಕೆ ನಾಲ್ಕು ಮನೆಗಳು ಕೊಚ್ಚಿ ಹೋಗಿವೆ
Last Updated 12 ಜೂನ್ 2019, 18:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕರಾವಳಿ, ಕೊಡಗು, ಚಿಕ್ಕಮಗಳೂರ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿರುಸಾಗಿ, ಒಳನಾಡು ಹಾಗೂ ಮಲೆನಾಡು ಪ್ರದೇಶದಲ್ಲಿ ಸಾಧಾರಣ ಮಳೆಯಾಗಿದೆ.

ಮಂಗಳವಾರ ರಾತ್ರಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಆರಂಭವಾದ ಮಳೆ ಬುಧವಾರ ಜೋರಾಗಿ ಸುರಿಯಿತು.

ಸಮುದ್ರ ಪ್ರಕ್ಷುಬ್ಧವಾಗಿದ್ದು, ಕಡಲ್ಕೊರೆತ ತೀವ್ರವಾಗಿದೆ. ಉಳ್ಳಾಲದಲ್ಲಿ ಕೈಕೋ, ಕಿಲೇರಿಯಾ ನಗರದಲ್ಲಿ ನಾಲ್ಕು ಮನೆಗಳು ಕೊಚ್ಚಿಕೊಂಡು ಹೋಗಿದ್ದು, ಇನ್ನೂ ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಉಚ್ಚಿಲದಲ್ಲಿ ಒಂದು ಮನೆಗೆ ಹಾನಿಯಾಗಿದೆ. ಎಂಟು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.

ಮಳೆಯ ಜೊತೆಯಲ್ಲೇ ಚಂಡಮಾರುತದಿಂದ ಸಮುದ್ರದಲ್ಲಿ ಗಾಳಿಯ ವೇಗ ಹೆಚ್ಚಿದ್ದು, ಬೃಹದಾಕಾರದ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿವೆ. ಸಸಿಹಿತ್ಲು ಬೀಚ್‌ನಲ್ಲಿ ಅಂಗಡಿ ಮಳಿಗೆಯೊಂದು ಕೊಚ್ಚಿಕೊಂಡು ಸಮುದ್ರ ಸೇರುವ ಸ್ಥಿತಿಯಲ್ಲಿದೆ. ಉಡುಪಿಯ ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಕೆರೆ ಬಳಿ ಸಮುದ್ರ ಅಲೆಗಳು ಉಕ್ಕಿ ತೀರದ ಮನೆಗಳಿಗೆ ನುಗ್ಗಿದೆ. ಈ ಭಾಗದಲ್ಲಿ ಕಡಲ್ಕೊರೆತದ ಭೀತಿ ಎದುರಾಗಿದೆ.

ಮಲೆನಾಡಿನಲ್ಲೂ ಬಿರುಸು: ಕಾಫಿನಾಡು ಚಿಕ್ಕಮಗಳೂರು ಭಾಗದಲ್ಲಿ ಬುಧವಾರ ಮಳೆಯಾಗಿದೆ. ತಾಲ್ಲೂಕಿನ ಅರೆನೂರು ಬಳಿ ಬೃಹತ್‌ ಮರವೊಂದು ರಸ್ತೆಗೆ (ಚಿಕ್ಕಮಗಳೂರು –ಶೃಂಗೇರಿ ಮಾರ್ಗ) ಉರುಳಿ ಕೆಲಕಾಲ ಸಂಚಾರಕ್ಕೆ ಅಡಚಣೆಯಾಗಿತ್ತು. ಶೃಂಗೇರಿ, ಕೊಪ್ಪ, ಎನ್‌.ಆರ್‌.ಪುರ, ಮೂಡಿಗೆರೆ, ಚಿಕ್ಕಮಗಳೂರು ಭಾಗದ ವಿವಿಧೆಡೆಗಳಲ್ಲಿ ಬಿಟ್ಟುಬಿಟ್ಟು ಮಳೆಯಾಗಿದೆ.

ಗಾಳಿ ಸಹಿತ ಧಾರಾಕಾರ ಮಳೆ: ಕೊಡಗಿನ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ವಿರಾಜಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು ಉರುಳಿ ಬಿದ್ದಿವೆ. ಗ್ರಾಮೀಣ ಪ್ರದೇಶಕ್ಕೆ ವಿದ್ಯುತ್‌ ಪೂರೈಕೆ ಸ್ಥಗಿತವಾಗಿದೆ. ಮಡಿಕೇರಿ, ಗೋಣಿಕೊಪ್ಪಲು, ಬಿರುನಾಣಿ, ಪೊನ್ನಂಪೇಟೆ, ಭಾಗಮಂಡಲ, ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆ ಅಬ್ಬರ ಜೋರಾಗಿತ್ತು.

ಪೊನ್ನಪ್ಪಸಂತೆ – ಕೋಣನಕಟ್ಟೆ ಮಾರ್ಗದಲ್ಲಿ ಮರ ಬಿದ್ದು ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮರ ತೆರೆವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಲಾಯಿತು.

ಕಳೆದ 24 ಗಂಟೆಯ ಅವಧಿಯಲ್ಲಿ ವಿರಾಜಪೇಟೆಯಲ್ಲಿ 55 ಮಿ.ಮೀ, ಅಮ್ಮತ್ತಿ 72, ಭಾಗಮಂಡಲ 33, ಹುದಿಕೇರಿ 24 ಮಿ.ಮೀ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಮುಂಗಾರು ಕಾಲಿಟ್ಟಿದೆ. ಬುಧವಾರ ಇಡೀ ದಿನ ಜಿಲ್ಲೆಯಹಲವೆಡೆತುಂತುರು ಮಳೆಯಾಗಿದೆ.

ಹೊಸನಗರ ತಾಲ್ಲೂಕಿನ ವಿವಿಧೆಡೆ ಜೋರು ಗಾಳಿ, ಮಳೆಯಾಗಿದೆ. ಸಾಗರ, ಶಿಕಾರಿಪುರ, ಶಿವಮೊಗ್ಗ, ಭದ್ರಾವತಿ, ಸೊರಬ ತಾಲ್ಲೂಕುಗಳಲ್ಲಿ ತುಂತುರು ಮಳೆಯಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ದಾವಣಗೆರೆ ನಗರ, ಹರಪನಹಳ್ಳಿ, ನ್ಯಾಮತಿ, ತ್ಯಾವಣಿಗೆ, ಬೆನಕನಹಳ್ಳಿ, ಚಿಕ್ಕಬಾಸೂರು, ಕಮ್ಮಾರಗಟ್ಟೆಯಲ್ಲಿ ಸಾಧಾರಣ ಮಳೆಯಾಗಿದೆ.

ಉತ್ತರ ಕನ್ನಡ, ಧಾರವಾಡ, ಗದಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಬುಧವಾರ ಸಾಧಾರಣ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಇಡೀ ದಿನ ರಭಸದ ಮಳೆಸುರಿಯಿತು. ಕಾರವಾರ, ಶಿರಸಿ, ಯಲ್ಲಾಪುರ ಹಾಗೂ ಸುತ್ತಮುತ್ತ ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಆಗಾಗ ತುಂತುರು ಮಳೆಯಾಯಿತು. ಅರಬ್ಬಿ ಸಮುದ್ರದಲ್ಲಿ ಆಳೆತ್ತರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಸಾಂಪ್ರದಾಯಿಕ ಮೀನುಗಾರರು ಕೂಡ ಮೀನುಗಾರಿಕೆಯಿಂದ ದೂರ ಉಳಿದಿದ್ದಾರೆ.

ಹುಬ್ಬಳ್ಳಿ, ಬೆಳಗಾವಿ, ಅಥಣಿ, ಬೈಲಹೊಂಗಲ, ನಿಪ್ಪಾಣಿ, ಹುಕ್ಕೇರಿ, ರಾಮದುರ್ಗ, ಗದಗ ಮತ್ತು ನರಗುಂದದಲ್ಲಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT