ಬುಧವಾರ, ಜುಲೈ 15, 2020
22 °C
ಡೋಣಿ ನದಿಯಲ್ಲಿ ಪ್ರವಾಹ; ಮುಳುಗಿದ ಸೇತುವೆ

ಹಳ್ಳದಲ್ಲಿ ಕೊಚ್ಚಿ ಹೋದ ರೈತ, ಸಿಡಿಲಿಗೆ ಬಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆಯ ಸುರಿದಿದ್ದು, ನದಿಗಳಲ್ಲಿ ಒಳಹರಿವು ಹೆಚ್ಚಾಗಿದೆ. ರೈತರೊಬ್ಬರು ಸೋಮವಾರ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ. ಸಿಡಿಲು ಬಡಿದು ಬಾಲಕ ಮೃತಪಟ್ಟಿದ್ದಾನೆ.

ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪಟ್ಟಣದ ಫಾರೆಸ್ಟ್ ಕಾಲೊನಿ ನಿವಾಸಿ ಕಿರಣ ಹನಮಂತ ನಾವಿ (15) ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ.

ಬೆಳಗಾವಿ ಜಿಲ್ಲೆಯಲ್ಲಿ ಮಳೆಯಾದ ಪರಿಣಾಮ ತುಪ್ಪರಿಹಳ್ಳದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಧಾರವಾಡ ತಾಲ್ಲೂಕಿನ ಹಾರೋಬೆಳವಡಿ ಗ್ರಾಮದ ರೈತ ಮಡಿವಾಳಪ್ಪ ಜಕ್ಕಪ್ಪನವರ (40) ಎಂಬುವರು ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ.

ವಿಜಯಪುರ ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ ಬಿರುಸಿನ ಮಳೆಯಾಗಿದ್ದು ಡೋಣಿ ನದಿ ಹಾಗೂ ಸೋಗಲಿ ಹಳ್ಳದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ತಾಳಿಕೋಟೆ–ಹಡಗಿನಾಳ ಸಂಪರ್ಕಿಸುವ ನೆಲಮಟ್ಟದ ಸೇತುವೆ ಮುಳುಗಿದ್ದರಿಂದ ಜನ, ವಾಹನ ಸಂಚಾರಕ್ಕೆ ಅಡಚಣೆಯಾಯಿತು. 

ಮುದ್ದೇಬಿಹಾಳ ತಾಲ್ಲೂಕಿನ ಬೂದಿಹಾಳ (ನಾಗರಬೆಟ್ಟ) ಗ್ರಾಮ ಸಂಪರ್ಕಿಸುವ ಸೇತುವೆಯೊಂದು ಸಂಪೂರ್ಣ ಕುಸಿದಿದ್ದು, ಗ್ರಾಮಸ್ಥರು ತಾಲ್ಲೂಕು ಕೇಂದ್ರದ ಸಂಪರ್ಕ ಕಳೆದುಕೊಂಡಿದ್ದಾರೆ. ನಾಲತವಾಡದಲ್ಲಿ ಎಂಟು ಗಂಟೆ ಕಾಲ ಎಡೆಬಿಡದೆ ಮಳೆಯಾಗಿದ್ದು ನಾಲ್ಕೈದು ಮನೆಗಳ ಗೋಡೆ ಕುಸಿದು ಹಾನಿಯಾಗಿದೆ. ಬಸವನ ಬಾಗೇವಾಡಿ, ಸಿಂದಗಿ ತಾಲ್ಲೂಕು ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗಿದೆ. ಹುಬ್ಬಳ್ಳಿ– ಧಾರವಾಡ ಅವಳಿ ನಗರದಲ್ಲಿಯೂ ಸಾಯಂಕಾಲ ಬಿರುಸಿನ ಮಳೆಯಾಗಿದೆ.

ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಎರಡು ದಿನಗಳಿಂದ ಸುರಿದ ಮಳೆಗೆ ಮುಖ್ಯ ಬಸ್ ನಿಲ್ದಾಣಕ್ಕೆ ನೀರು ನುಗ್ಗಿ ಬಸ್ ಸಂಚಾರ ಹಾಗೂ ಪ್ರಯಾಣಿಕರ ಓಡಾಟಕ್ಕೆ ತೊಂದರೆಯಾಯಿತು.ಸೋಮವಾರ ಬೆಳಿಗ್ಗೆ ಹಾಗೂ ಸಂಜೆ ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಮಳೆ ಸುರಿಯಿತು. ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ, ತಾಜಲಾಪುರ ಕ್ರಾಸ್‌, ಜೇವರ್ಗಿ ಪಟ್ಟಣ ಸೇರಿ
ದಂತೆ ಅಂದೋಲಾ, ಇಜೇರಿ, ನೆಲೋಗಿ, ಜೇರಟಗಿಯಲ್ಲಿ ಉತ್ತಮ ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗುತ್ತಿದ್ದು, ಸೋಮವಾರ 3.32 ಸೆಂ.ಮೀ. ದಾಖಲಾಗಿದೆ.

ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿಯಾದ್ಯಂತ ಬಿಟ್ಟುಬಿಟ್ಟು ಮಳೆ ಸುರಿದಿದೆ. ಕಡಲಿನ ಅಬ್ಬರವೂ ಜೋರಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಗಿರಿಶ್ರೇಣಿ, ಚಿಕ್ಕಮಗಳೂರು, ಕೊಪ್ಪ, ಕಳಸ ಭಾಗದಲ್ಲಿ ಉತ್ತಮ ಮಳೆಯಾಗಿದೆ.

ಕೊಡಗು, ಹಾಸನ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ.

ಶಿವಮೊಗ್ಗ ನಗರದ ಸುತ್ತಮುತ್ತ, ತೀರ್ಥಹಳ್ಳಿ, ಕೋಣಂದೂರಿನಲ್ಲಿ ಸಾಧಾರಣ ಮಳೆ, ಹೊಸನಗರದ ಸುತ್ತಮುತ್ತ ಜೋರು ಮಳೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ. ದಾವಣಗೆರೆಯಲ್ಲಿ ಸಾಧಾರಣ ಮಳೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು