ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಕೊಚ್ಚಿ ಹೋದ ವಾಹನಗಳು

Last Updated 24 ಜೂನ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಬಳ್ಳಾರಿ, ವಿಜಯಪುರ, ಬೆಳಗಾವಿ, ಕಲಬುರ್ಗಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಹಲವೆಡೆ ರಸ್ತೆಗಳು, ಹಳ್ಳಗಳು ತುಂಬಿಹರಿದ ಪರಿಣಾಮ ಸಂಚಾರಕ್ಕೆ ತೊಂದರೆಯಾಯಿತು.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಲ್ಲಿ ಭಾನುವಾರ ಸಂಜೆಯಿಂದ ಸುರಿದ ಮಳೆಗೆ ಯಲ್ಲಮ್ಮನ ಹಳ್ಳ ತುಂಬಿ ಹರಿದಿದ್ದು, ಎರಡು ಲಾರಿಗಳು ಪಲ್ಟಿಯಾಗಿವೆ. ಪ್ರಯಾಣಿಕರಿದ್ದ ಬಸ್‌ ಸಂಚರಿಸಲಾಗದೇ ವಾಲಿ ನಿಂತಿತು. ಸ್ಥಳೀಯರ ಸಹಾಯದಿಂದ ಪ್ರಯಾಣಿಕರನ್ನು ರಕ್ಷಿಸಲಾಯಿತು.

ಸಿರುಗುಪ್ಪ ಹಾಗೂ ಆಂಧ್ರದಆದೋನಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ಮಟ್ಟದ ಸೇತುವೆಯ ಮೇಲಿಂದ ಭಾನುವಾರ ರಾತ್ರಿಯಿಂದಲೇ ಹಳ್ಳ ತುಂಬಿ, ಉಕ್ಕಿ ಹರಿಯುತ್ತಿತ್ತು. ಸೋಮವಾರ ಬೆಳಗಿನ ಜಾವ ಸರಕು ತುಂಬಿದ ಲಾರಿಗಳು ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದವು. ಆದೋನಿಯಿಂದ ಸಿರುಗುಪ್ಪಕ್ಕೆ ಬರುತ್ತಿದ್ದ ಖಾಸಗಿ ಬಸ್‌ ಹಳ್ಳಕ್ಕೆ ವಾಲಿತು. ನಿಯಂತ್ರಣ ಕಳೆದುಕೊಳ್ಳುವ ಮುನ್ನವೇ ಚಾಲಕ, ಬಸ್‌ ನಿಲ್ಲಿಸಿದ್ದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ. ಮಧ್ಯಾಹ್ನದ ನಂತರ ಈ ರಸ್ತೆಯಲ್ಲಿ ವಾಹನ ಸಂಚಾರ ಆರಂಭವಾಯಿತು.

ಐವರ ರಕ್ಷಣೆ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕು ಹೊನಗನಹಳ್ಳಿ–ಸವನಳ್ಳಿ ಬಳಿಯ ಭೀಮಾನದಿಯಲ್ಲಿ ಸಿಲುಕಿದ್ದ ಮಹಾರಾಷ್ಟ್ರದ ಐವರನ್ನು ಭಾನುವಾರ ರಾತ್ರಿ ರಕ್ಷಿಸಲಾಗಿದೆ.

ಕೊಚ್ಚಿ ಹೋದ ಪಲ್ಲಕ್ಕಿ:ತಿಕೋಟಾ ತಾಲ್ಲೂಕು ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳ ತುಂಬಿ ಹರಿದಿದ್ದು, ಸಂಗಮನಾಥ ದೇವಸ್ಥಾನದ ಗರ್ಭಗುಡಿಗೆ ನೀರು ನುಗ್ಗಿದೆ. ದೇವಸ್ಥಾನದ ಹೊರಭಾಗದಲ್ಲಿ ಇಟ್ಟಿದ್ದ ದೇವರ ಪಲ್ಲಕ್ಕಿ ಕೊಚ್ಚಿ ಹೋಗಿದೆ.

ಕಾರು ಜಖಂ: ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾದಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳು ಕಾಲುವೆಯಂತಾಗಿದ್ದವು. ನೀರಿನ ರಭಸಕ್ಕೆ ಅಲ್ಲಲ್ಲಿ 15 ದ್ವಿಚಕ್ರವಾಹನಗಳು ಹಾಗೂ 5 ಕಾರುಗಳು ನೀರಿನಲ್ಲಿ ಕೊಚ್ಚಿ ಹೋಗಿ, ರಸ್ತೆಬದಿಯಲ್ಲಿ ಸಿಲುಕಿಕೊಂಡಿದ್ದವು. ಅವುಗಳಲ್ಲಿ ಬಹುತೇಕ ವಾಹನಗಳು ಜಖಂಗೊಂಡಿವೆ.

ಇಲ್ಲಿನ 50 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೀರು ನುಗ್ಗಿದ್ದರಿಂದ ರೋಗಿಗಳನ್ನು ಚಿಕ್ಕೋಡಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಬಳಿಕ ಅಲ್ಲಿನ ಸಿಬ್ಬಂದಿ ನೀರು ತೆರವುಗೊಳಿಸಿದರು.

ಕಲಬುರ್ಗಿಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದರಿಂದ ಬಹುತೇಕ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿತು. ಇದರಿಂದ ಜನರು ಕೊಂಚ ತೊಂದರೆ ಅನುಭವಿಸಿದರು. ಚಿಂಚೋಳಿ ತಾಲ್ಲೂಕಿನ ಪಸ್ತಾಪುರ, ಕಮಲಾಪುರದಲ್ಲಿ ಉತ್ತಮ ಮಳೆಯಾಯಿತು.

ರಾಯಚೂರು ಜಿಲ್ಲೆಯಹಟ್ಟಿ ಪಟ್ಟಣದಲ್ಲಿ ಭಾನುವಾರ ತಡರಾತ್ರಿ ಉತ್ತಮ ಮಳೆಯಾಗಿದ್ದು, 24 ಗಂಟೆಗಳ ಅವಧಿಯಲ್ಲಿ74 ಮಿ.ಮೀ. ಮಳೆ ದಾಖಲಾಗಿದೆ. ಮಳೆಯಿಂದಾಗಿ ಹಟ್ಟಿ- ಗುರುಗುಂಟಾ ರಸ್ತೆಯ ಕೋಠಾ ಕ್ರಾಸ್ ಸಮೀಪದ ಹಳ್ಳ ತುಂಬಿ ಹರಿದು ವಾಹನ ಸಂಚಾರಕ್ಕೆ ತೊಂದರೆಯಾಯಿತು.ಮಾನ್ವಿಯಲ್ಲಿ ಸಾಧಾರಣ ಮಳೆಯಾಯಿತು.ಕೊಪ್ಪಳ ಜಿಲ್ಲೆಯಲ್ಲಿ ಯಲಬುರ್ಗಾ, ಗಂಗಾವತಿ ಮತ್ತುತಾವರಗೇರಾದಲ್ಲಿ ಸಾಧಾರಣ ಮಳೆಯಾಗಿದೆ.

ಸಾಧಾರಣ ಮಳೆ:ಶಿವಮೊಗ್ಗ ಜಿಲ್ಲೆಯ ಹಲವೆಡೆ ಸೋಮವಾರ ಸಾಧಾರಣ ಮಳೆಯಾಗಿದೆ. ಶಿಕಾರಿಪುರ, ಭದ್ರಾವತಿ, ತೀರ್ಥಹಳ್ಳಿ, ಸೊರಬ, ಸಾಗರ, ತುಮರಿಯಲ್ಲಿ ಸಾಧಾರಣ ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ಬಮ್ಮನಕಟ್ಟೆ, ತಿರುಮಲಾಪುರ, ಸಾಂತೇನಹಳ್ಳಿ, ಲೋಕದೊಳಲು ಹಾಗೂ ಮುಂತಾದೆಡೆ ಸೋನೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT