ಕೊಡಗಿನಲ್ಲಿ ಮಳೆಯ ಆರ್ಭಟ

7
ಹಾರಂಗಿ ಜಲಾಶಯದ ಹೊರಹರಿವು ಏರಿಕೆ; ಜಲಪಾತಗಳ ಭೋರ್ಗರೆತ

ಕೊಡಗಿನಲ್ಲಿ ಮಳೆಯ ಆರ್ಭಟ

Published:
Updated:
ಕೊಡಗು ಜಿಲ್ಲೆಯ ನೆಲ್ಯಹುದಿಕೇರಿಯ ಬಳಿ ಕಾವೇರಿ ಮೈದುಂಬಿ ಹರಿಯುತ್ತಿದೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದೆ. ಬಿಡುವು ಕೊಟ್ಟು ಧಾರಾಕಾರ ಮಳೆಯಾಗುತ್ತಿದೆ. 

ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಅಪಾಯದಮಟ್ಟ ಮೀರಿ ಹರಿಯುತ್ತಿವೆ. ಲಕ್ಷ್ಮಣತೀರ್ಥ ನದಿಯ ಪ್ರವಾಹಕ್ಕೆ ದಕ್ಷಿಣ ಕೊಡಗು ವ್ಯಾಪ್ತಿಯಲ್ಲಿ ಸಾವಿ
ರಾರು ಎಕರೆಯಷ್ಟು ಭತ್ತದ ಗದ್ದೆಗಳು ಜಲಾವೃತಗೊಂಡಿದ್ದು, ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ.

ಮಡಿಕೇರಿ, ಮಾದಾಪುರ ವ್ಯಾಪ್ತಿಯಲ್ಲಿ ಬೀಳುತ್ತಿರುವ ಮಳೆಗೆ ಹಾರಂಗಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾಶಯದ ಹೊರಹರಿವನ್ನು 8,934 ಕ್ಯುಸೆಕ್‌ಗೆ ಏರಿಕೆ ಮಾಡಲಾಗಿದೆ. ಭಾಗಮಂಡಲ, ತಲಕಾವೇರಿ, ನಾಪೋಕ್ಲು ಭಾಗದಲ್ಲೂ ಭಾನುವಾರ ರಾತ್ರಿಯಿಡೀ ಧಾರಾಕಾರ ಮಳೆಯಾಗಿದೆ. ಭಾಗಮಂಡಲದಲ್ಲಿ ಪ್ರವಾಹ ಇನ್ನೂ ತಗ್ಗಿಲ್ಲ.

ಅಬ್ಬಿ, ಮಲ್ಲಳ್ಳಿ ಹಾಗೂ ಇರ್ಪು ಜಲಪಾತಗಳಲ್ಲಿ ಭಾರಿ ಪ್ರಮಾಣದ ನೀರು ಧುಮ್ಮಿಕ್ಕುತ್ತಿದ್ದು ಪ್ರವಾಸಿಗರು ಸೊಬಗು ಕಣ್ತುಂಬಿಕೊಳ್ಳುತ್ತಿದ್ದಾರೆ.

ಬಿಸಿಲೆ ಭಾಗದಲ್ಲಿ 240 ಮಿ.ಮೀ ಮಳೆ: ಸಕಲೇಶಪುರ ತಾಲ್ಲೂಕಿನಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರಿದಿದ್ದು, ಪಶ್ಚಿಮಘಟ್ಟದ ಅಂಚಿನ ಬಿಸಿಲೆ, ಗೊದ್ದು, ವಣಗೂರು, ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 240 ಮಿ.ಮೀ ಮಳೆಯಾಗಿರುವುದು ದಾಖಲಾಗಿದೆ.

ಮಳೆಯ ಅಬ್ಬರಕ್ಕೆ ಹುದಿನೂರು– ಮಾವಿನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ಹಡ್ಲಗದ್ದೆ ಬಳಿ ಭಾರೀ ಭೂ ಕುಸಿತ ಉಂಟಾಗಿ ಸಂಚಾರ ಸ್ಥಗಿತಗೊಂಡಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆ ಚುರುಕುಗೊಂಡಿದ್ದು, ಹೊಸನಗರ, ತೀರ್ಥಹಳ್ಳಿ ತಾಲ್ಲೂಕು ಭಾಗಗಳಲ್ಲಿ ನಿರಂತರ ಮಳೆ ಸುರಿಯುತ್ತಿದೆ. ತೀರ್ಥಹಳ್ಳಿ ತಾಲ್ಲೂಕಿನ ಹಲವೆಡೆ ಸುರಿದ ಭಾರಿ ಮಳೆಗೆ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಸಾಗರ ತಾಲ್ಲೂಕು ಭಾಗದಲ್ಲೂ ಉತ್ತಮ ಮಳೆ ಬೀಳುತ್ತಿದೆ.

ನದಿಗಳ ಹರಿವಿನಲ್ಲಿ ಹೆಚ್ಚಳ: ದಕ್ಷಿಣ ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ ಹಾಗೂ ವೇದಗಂಗಾ ನದಿಗಳ ಹರಿವಿನ ಪ್ರವಾಹ ಸೋಮವಾರವೂ ಹೆಚ್ಚಳವಾಗಿದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ– ಯಡೂರ ಹಾಗೂ ಮಲಿಕವಾಡ– ದತ್ತವಾಡ ಸೇತುವೆಗಳು ಮುಳುಗಡೆ ಸ್ಥಿತಿಯಲ್ಲಿಯೇ ಇವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಸಾಧಾರಣ ಮಳೆಯಾಗಿದೆ. ಶಿರಸಿ, ಸಿದ್ದಾಪುರ, ದಾಂಡೇಲಿ, ಯಲ್ಲಾಪುರ ಭಾಗದಲ್ಲಿ ದಿನವಿಡೀ ಬಿಟ್ಟುಬಿಟ್ಟು ಮಳೆ ಆಗಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !