ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಫ್‌ಎ ಮತ್ತು ಕ್ಯೂಬ್‌ ಕಂಪನಿಗಳ ಮೇಲೆ ನಿರ್ಬಂಧ ಮುಂದೂಡಿಕೆ

ಇದೇ 9ರಿಂದ ಕಂಟೆಂಟ್‌ ಕೊಡದಿರಲು ವಾಣಿಜ್ಯ ಮಂಡಳಿ ನಿರ್ಧಾರ
Last Updated 1 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿನಿಮಾ ಪ್ರದರ್ಶನದ ಡಿಜಿಟಲ್‌ ಸೇವೆಗಳ ದರ ಇಳಿಕೆಗೆ ಸಂಬಂಧಿಸಿದಂತೆ ಮಾರ್ಚ್‌ 2ರಿಂದ ಡಿಜಿಟಲ್‌ ಪೂರೈಕೆದಾರ ಕಂಪನಿ
ಗಳಾದ ಕ್ಯೂಬ್‌ ಮತ್ತು ಯುಎಫ್‌ಒಗಳಿಗೆ ಚಿತ್ರಗಳನ್ನು ನೀಡುವುದನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಈ ವಾರ ಬಿಡುಗಡೆಯಾಗುತ್ತಿರುವ ನಾಲ್ಕು ಸಿನಿಮಾಗಳ ನಿರ್ಮಾಪಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈ ನಿರ್ಬಂಧವನ್ನು ಮಾರ್ಚ್‌ 9ರವರೆಗೆ ಮುಂದೂಡಲಾಗಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದ ಅವರು ತಿಳಿಸಿದರು.

ಗುರುವಾರ ಸಂಜೆ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಅವರು ಈ ವಿಷಯವನ್ನು ಬಹಿರಂಗಪಡಿಸಿದರು.

‘ಈಗ ವಿಧಿಸುತ್ತಿರುವ ದರದಲ್ಲಿ ಶೇ 25ರಷ್ಟು ಇಳಿಕೆ ಮಾಡಬೇಕು ಎಂದು ನಾವು ಬೇಡಿಕೆ ಇಟ್ಟಿದ್ದೆವು. ಆದರೆ ಯುಎಫ್‌ಎ ಮತ್ತು ಕ್ಯೂಬ್‌ ಸಂಸ್ಥೆಗಳು ಅದಕ್ಕೆ ಒಪ್ಪಿರಲಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಂಜೆಯವರೆಗೂ ‘ಹೈದರಾಬಾದ್‌ ನಿರ್ಮಾಪಕರ ಜಂಟಿ ಕ್ರಿಯಾ ಸಮಿತಿ’ ಚೆನ್ನೈನಲ್ಲಿ ಮಾತುಕತೆ ನಡೆಸುತ್ತಲೇ ಇತ್ತು. ಆದರೆ ಇದುವರೆಗೆ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ವಾಣಿಜ್ಯ ಮಂಡಳಿಗಳೂ ಯುಎಫ್‌ಒ ಮತ್ತು ಕ್ಯೂಬ್‌ಗಳನ್ನು ನಿರ್ಬಂಧಿಸುವ ನಿರ್ಧಾರಕ್ಕೆ ಬಂದಿವೆ. ಉಳಿದ ರಾಜ್ಯಗಳಲ್ಲಿ ಈ ವಾರದಿಂದಲೇ ನಿರ್ಬಂಧ ಜಾರಿಗೆ ಬರುತ್ತಿದೆ. ಕರ್ನಾಟಕದಲ್ಲಿ ಮಾತ್ರ ಮಾರ್ಚ್‌ 9ರಿಂದ ಜಾರಿಗೆ ಬರುತ್ತದೆ’ ಎಂದು ಅವರು ವಿವರಿಸಿದರು.

‘ಮಾರ್ಚ್‌ 2ರ ಒಳಗಾಗಿ ಸಮಸ್ಯೆ ಬಗೆಹರಿಯುತ್ತದೆ ಎಂದುಕೊಂಡು ನಾಲ್ಕು ಚಿತ್ರಗಳ ನಿರ್ಮಾಪಕರು ಚಿತ್ರ ಬಿಡುಗಡೆಗೆ ಸಿದ್ಧತೆ ನಡೆಸಿದ್ದರು. ಅವರಿಗೆ ನಷ್ಟ ಆಗಬಾರದು ಎಂಬ ಕಾರಣಕ್ಕೆ ಆ ಚಿತ್ರಗಳ ಬಿಡುಗಡೆಗೆ ಅವಕಾಶ ಕೊಡುತ್ತಿದ್ದೇವೆ. ಆದರೆ ಮಾರ್ಚ್‌ 9 ಮತ್ತು 14ರಂದು ಯಾವುದೇ ಚಿತ್ರ ಬಿಡುಗಡೆಗೆ ಸಿದ್ಧಮಾಡಿಕೊಳ್ಳಬಾರದು ಎಂದು ಎಲ್ಲ ನಿರ್ಮಾಪಕರಿಗೆ ಕೇಳಿಕೊಳ್ಳಲಾಗಿದೆ. ಎಲ್ಲರೂ ಒಪ್ಪಿಕೊಂಡಿದ್ದಾರೆ’ ಎಂದರು.

ಪರ್ಯಾಯ ವ್ಯವಸ್ಥೆ: ‘ನಮ್ಮ ದರಕ್ಕೆ ಹೊಂದಿಕೊಳ್ಳುವ ಹಾಗೆ ಚಿತ್ರಪ್ರದರ್ಶನದ ಡಿಜಿಟಲ್‌ ಸೇವೆಗಳನ್ನು ಒದಗಿಸಲು ಮುಂದೆ ಬಂದರೆ ತಕ್ಷಣವೇ ಅವರಿಗೆ ಸಿನಿಮಾಗಳನ್ನು ಕೊಡುತ್ತೇವೆ. ಅಂಥ ಪರ್ಯಾಯ ವ್ಯವಸ್ಥೆ ಸಿಗುವವರೆಗೂ ಈ ನಿರ್ಬಂಧ ಮುಂದುವರಿಯಲಿದೆ’ ಎಂದು ಗೋವಿಂದ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT