ಕೊಡಗು: ಕೊಚ್ಚಿ ಹೋದ ರಾಜ್ಯ ಹೆದ್ದಾರಿ, ಸಂಚಾರ ವ್ಯತ್ಯಯ

7
ಮಡಿಕೇರಿಗೆ ಸಂಪರ್ಕ ಕಲ್ಪಿಸುವ ಬಹುತೇಕ ಮಾರ್ಗಗಳು ಬಂದ್‌ * ಮುಳುಗುವ ಹಂತದಲ್ಲಿ ವೆಲ್ಲೆಸ್ಲಿ ಸೇತುವೆ * ಕಂಪ್ಲಿ– ಗಂಗಾವತಿ ಸೇತುವೆ ಜಲಾವೃತ

ಕೊಡಗು: ಕೊಚ್ಚಿ ಹೋದ ರಾಜ್ಯ ಹೆದ್ದಾರಿ, ಸಂಚಾರ ವ್ಯತ್ಯಯ

Published:
Updated:
Deccan Herald

ಬೆಂಗಳೂರು: ಕೊಡಗು ಹಾಗೂ ಘಟ್ಟ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ತಗ್ಗಿದೆ. ಕೊಡಗು ಜಿಲ್ಲೆಯ ಶಾಲಾ– ಕಾಲೇಜುಗಳಿಗೆ ಗುರುವಾರ (ಆ. 16) ರಜೆ ನೀಡಲಾಗಿದೆ.

ಕೊಡಗು ಜಿಲ್ಲೆಯಲ್ಲಿ ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಾಜ್ಯ ಹೆದ್ದಾರಿ ಕೊಚ್ಚಿ ಹೋಗಿದೆ. ಘಟ್ಟ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಶಿರಾಡಿ, ಸಂಪಾಜೆ ಎರಡೂ ಘಾಟಿಗಳಲ್ಲಿ ಭೂಕುಸಿತ ನಿಂತಿಲ್ಲ. ಹೀಗಾಗಿ ಈ ಎರಡೂ ಘಾಟಿ ಹೆದ್ದಾರಿಗಳಲ್ಲಿ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಮಡಿಕೇರಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಬಂದ್ ಆಗಿವೆ. ಮೈಸೂರು– ಮಡಿಕೇರಿ ಹೊರತುಪಡಿಸಿದರೆ ಉಳಿದ ಎಲ್ಲಾ ಮಾರ್ಗಗಳಲ್ಲೂ ಸಂಚಾರ ಸ್ಥಗಿತಗೊಂಡಿದೆ.

ಮಡಿಕೇರಿ– ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಹಟ್ಟಿಹೊಳೆ ಬಳಿ ರಸ್ತೆ ಕೊಚ್ಚಿ ಹೋಗಿದೆ. 300 ಅಡಿಗಳ ಉದ್ದದಷ್ಟು ರಸ್ತೆ ಕುಸಿದಿದ್ದು ವಾಹನ ಸಂಚಾರ ಸ್ಥಗಿತವಾಗಿದೆ. ಸೋಮವಾರಪೇಟೆ ಬಳಿಯ ಮಾಗೇರಿ ರಸ್ತೆಯೂ ಕುಸಿದಿದ್ದು ಮಡಿಕೇರಿಗೆ ಸಂಪರ್ಕ ಸಾಧ್ಯವಾಗುತ್ತಿಲ್ಲ.

ಹಾರಂಗಿ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ಕಣಿವೆ ಗ್ರಾಮದ ಸೇತುವೆ ಮುಳುಗಡೆಯಾಗಿದೆ. ಇದರಿಂದ ಕುಶಾಲನಗರ– ಹಾಸನ ಮಾರ್ಗವೂ ಬಂದ್‌ ಆಗಿದೆ. ಮೇಕೇರಿ ಬಳಿ ಬೃಹತ್‌ ಗುಡ್ಡ ಕುಸಿದಿದ್ದು ಮಡಿಕೇರಿ– ವಿರಾಜಪೇಟೆ ರಸ್ತೆಯೂ ಬುಧವಾರ ದಿನವಿಡೀ ಬಂದ್‌ ಆಗಿತ್ತು.

ಮೈಸೂರು– ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರ ಮದೆನಾಡು ಗ್ರಾಮದಿಂದ 8 ಕಿ.ಮೀ. ದೂರದಲ್ಲಿ ಬುಧವಾರ ಬೆಳಿಗ್ಗೆ ಮತ್ತೆ ಗುಡ್ಡ ಕುಸಿದಿದೆ. ಗುಡ್ಡ ಕುಸಿದ ರಭಸಕ್ಕೆ ರಸ್ತೆಯ ಬದಿ ನಿಲುಗಡೆ ಮಾಡಿದ್ದ ವಾಹನವೊಂದು ಕೊಚ್ಚಿ ಹೋಗಿ ಹಳ್ಳದಲ್ಲಿ ಬಿದ್ದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಜಲಾವೃತ: ಕಾವೇರಿ ನದಿಯ ನೀರು ಕುಶಾಲನಗರದ ಕಾವೇರಿ, ಸಾಯಿ, ಕುವೆಂಪು, ಇಂದಿರಾ ಬಡಾವಣೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಗಂಜಿಕೇಂದ್ರಕ್ಕೆ ನಿರಾಶ್ರಿತರನ್ನು ಸ್ಥಳಾಂತರ ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್‌ಡಿಆರ್‌ಎಫ್‌) 30 ಮಂದಿ ಕೊಡಗಿಗೆ ಬಂದಿದ್ದು, ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಭಾಗಮಂಡಲ ಸಂ‍ಪೂರ್ಣ ಮುಳುಗಿದೆ. ನಾಪೋಕ್ಲುವಿನಿಂದ ಭಾಗಮಂಡಲ, ಮೂರ್ನಾಡು, ಮಡಿಕೇರಿ, ಪಾರಾಣೆ ಭಾಗಗಳನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳು ಬಂದ್‌ ಆಗಿದ್ದು, ಬಸ್‌ ಸಂಚಾರ ಸ್ಥಗಿತಗೊಂಡಿದೆ.

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲೂ ಮಳೆ ಸುರಿಯುತ್ತಿರುವುದರಿಂದ ಅಪಾರ ಪ್ರಮಾಣದ ಅನಾಹುತವಾಗಿದೆ. ಹೆತ್ತೂರು ಹೋಬಳಿ ಪಟ್ಲ ಬಳಿ ಸಕಲೇಶಪುರ– ಸೋಮವಾರಪೇಟೆಗೆ ಸಂಪರ್ಕ ಕಲ್ಪಿಸುವ ಮಾಗೇರಿ ರಸ್ತೆ ನಾಲ್ಕೈದು ಕಡೆ ಭೂಕಂಪನವಾದ ರೀತಿಯಲ್ಲಿ ಸೀಳು ಬಿಟ್ಟಿದೆ. ಇದರಿಂದಾಗಿ ಈ ಮಾರ್ಗದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು, ಅರಕಲಗೂಡು ತಾಲ್ಲೂಕಿನ ರಾಮನಾಥಪುರದಲ್ಲಿ ಕೆಲ ಮನೆ, ಶಾಲೆಗಳು ಜಲಾವೃತವಾಗಿವೆ.

ಕೆಆರ್‌ಎಸ್‌ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ಕಾವೇರಿ ನದಿಗೆ ನೀರನ್ನು ಹರಿಸುತ್ತಿದ್ದು, ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಹಾಗೂ ರಂಗನತಿಟ್ಟು ಪಕ್ಷಿಧಾಮ ಮುಳುಗಡೆಯಾಗುವ ಹಂತ ತಲುಪಿದೆ. ನದಿಮಟ್ಟದಿಂದ 30 ಅಡಿ ಎತ್ತರದ ಸೇತುವೆಯ ತಳ ಭಾಗದವರೆಗೆ ನೀರು ತುಂಬಿ ಹರಿಯುತ್ತಿದೆ. ನೀರು ಮತ್ತಷ್ಟು ಹೆಚ್ಚಾದರೆ ಸೇತುವೆ ಮುಳುಗಲಿದೆ.

ರಂಗನತಿಟ್ಟು ಪಕ್ಷಿಧಾಮದಲ್ಲಿ ನಡುಗಡ್ಡೆಗಳು ಮುಳುಗಿದ್ದು ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಅಂಬೇಡ್ಕರ್‌ ಭವನದ ಬಳಿಯ ರಾಮಕೃಷ್ಣ ವಿವೇಕಾನಂದ ಆಶ್ರಮ ಜಲಾವೃತವಾಗಿದೆ. ಮೈಸೂರು ಜಿಲ್ಲೆ ತಲಕಾಡು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮುಳುಗಡೆಯಾಗಿದೆ. ತಡಿ ಮಾಲಂಗಿ ಗ್ರಾಮಕ್ಕೆ ನೀರು ನುಗ್ಗಿದ್ದು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.

ಮಳೆ ಅಡ್ಡಿ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಮತ್ತು ಸುಳ್ಯದ ಘಟ್ಟ ಪ್ರದೇಶಗಳಲ್ಲಿ ಮಳೆ ಮುಂದುವರಿದಿದೆ. ಶಿರಾಡಿ ಮತ್ತು ಸಂಪಾಜೆ ಘಾಟಿ ಪ್ರದೇಶದಲ್ಲೂ ನಿರಂತರ ಮಳೆಯಾಗಿದೆ. ಈ ಮಾರ್ಗಗಳಲ್ಲಿ ಭೂಕುಸಿತದಿಂದ ರಸ್ತೆಗೆ ಬಿದ್ದಿರುವ ಮಣ್ಣನ್ನು ತೆರವು ಮಾಡುವುದಕ್ಕೆ ಮಳೆ ಅಡ್ಡಿಯಾಗಿದೆ.

ನೇತ್ರಾವತಿ, ಕುಮಾರಧಾರ, ಶಾಂಭವಿ ಮತ್ತು ನಂದಿನಿ ನದಿಗಳ ನೀರಿನ ಮಟ್ಟದಲ್ಲಿ ಕೊಂಚ ಇಳಿಕೆಯಾಗಿದೆ. ಉಪ್ಪಿನಂಗಡಿಯಲ್ಲಿ ಮಂಗಳವಾರ ರಾತ್ರಿ ನೇತ್ರಾವತಿ ನದಿ ಮಟ್ಟ 32 ಮೀಟರ್‌ ತಲುಪಿತ್ತು. 2013ರ ಬಳಿಕ ಇದೇ ಮೊದಲ ಬಾರಿಗೆ ನೇತ್ರಾವತಿ ಮತ್ತು ಕುಮಾರಧಾರ ನದಿಗಳು ಅಲ್ಲಿನ ಸಹಸ್ರಲಿಂಗೇಶ್ವರ ದೇವಸ್ಥಾನವನ್ನು ಸುತ್ತುವರಿದು ಸಂಗಮವಾಗಿದೆ. ಬುಧವಾರ ಬೆಳಿಗ್ಗೆಯಿಂದ ನೀರಿನ ಮಟ್ಟ ತಗ್ಗಿದ್ದು, ಪ್ರವಾಹ ಕಡಿಮೆಯಾಗಿದೆ.

ಮಾರ್ಗ ಬದಲಾವಣೆ: ಸುಬ್ರಹ್ಮಣ್ಯ– ಸಕಲೇಶಪುರ ನಡುವಿನ ಶಿರಿಬಾಗಿಲು ಬಳಿ ಭೂಕುಸಿತದಿಂದ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಮಣ್ಣನ್ನು ಪೂರ್ಣವಾಗಿ ತೆರವು ಮಾಡಲು ಆಗಿಲ್ಲ. ಈ ಕಾರಣದಿಂದ ಕುಣಿಗಲ್‌ ಮಾರ್ಗವಾಗಿ ಸಾಗುವ ಮಂಗಳೂರು ಸೆಂಟ್ರಲ್‌– ಬೆಂಗಳೂರು ರೈಲಿನ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ರೈಲು ಪಾಲಕ್ಕಾಡ್‌– ಈರೋಡ್‌– ತಿರುಪತ್ತೂರು ಮಾರ್ಗವಾಗಿ ಬೆಂಗಳೂರು ತಲುಪಲಿದೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಸಾಧಾರಣ ಮಳೆ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸೊರಬ, ಸಾಗರದಲ್ಲಿ ಕಳೆದ ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆ ಆರ್ಭಟ ಸ್ವಲ್ಪಮಟ್ಟಿಗೆ ತಗ್ಗಿದೆ.

ಮಂಗಳವಾರ ತುಂಗಾ ಜಲಾಶಯದಿಂದ 90 ಸಾವಿರಕ್ಕೂ ಹೆಚ್ಚು ನೀರು ನದಿಗೆ ಹರಿಸಿದ ಪರಿಣಾಮ ಶಿವಮೊಗ್ಗ ನಗರದ ಸೀಗೆಹಟ್ಟಿ, ಕುಂಬಾರ ಗುಂಡಿ, ಮಂಡಕ್ಕಿಬಟ್ಟಿ, ಕನಕದಾಸ ಉದ್ಯಾನ, ಜೆಪಿಎನ್‌ ಶಾಲೆ ಸುತ್ತಮುತ್ತಲ ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಬುಧವಾರ ಈ ಪ್ರದೇಶಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ.

ಕಂಪ್ಲಿ– ಗಂಗಾವತಿ ಸೇತುವೆ ಜಲಾವೃತ: ಬಳ್ಳಾರಿ ಜಿಲ್ಲೆಯ ಕಂಪ್ಲಿ, ಹಾವೇರಿ ಜಿಲ್ಲೆಯ ಕುಮಾರಪಟ್ಟಣ ಹಾಗೂ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕುಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಹಲವು ಕಡೆ ಗ್ರಾಮಗಳಿಗೆ ನೀರು ನುಗ್ಗಿ, ಜನಜೀವನ ಅಸ್ತವ್ಯಸ್ತಗೊಂಡಿದೆ. ಗದ್ದೆ, ತೋಟಗಳು ಜಲಾವೃತವಾಗಿ, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾಳಾಗಿದೆ.

ಕಂಪ್ಲಿ- ಗಂಗಾವತಿ ಸೇತುವೆ ಮುಳುಗಿದೆ. ಕಂಪ್ಲಿಯ ಕೋಟೆ ಪ್ರದೇಶದಲ್ಲಿ ಮುಳುಗಡೆ ಭೀತಿಯಲ್ಲಿದ್ದ ಮೀನುಗಾರ ಕಾಲೊನಿಯ ಕುಟುಂಬಗಳನ್ನು ಸರ್ಕಾರಿ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಲಾಗಿದೆ. ಐತಿಹಾಸಿಕ ಕೋಟೆ ಕುಮಾರರಾಮ ಮಹಾದ್ವಾರ, ಕೋಟೆ ಪಂಪಾಪತಿ ದೇವಸ್ಥಾನ ಜಲಾವೃತವಾಗಿವೆ.

ಹಾವೇರಿ ತಾಲ್ಲೂಕಿನ ಕುಮಾರಪಟ್ಟಣ, ಮುದೇನೂರು, ಮಾಕನೂರು, ಕವಲೆತ್ತು, ಕೊಡಿಯಾಲ ಹೊಸಪೇಟೆ, ನಲವಾಗಲ, ಐರಣಿ, ಹಿರೇಬಿದರಿ ಗ್ರಾಮಗಳಿಗೆ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಚಿಕ್ಕೋಡಿ ತಾಲ್ಲೂಕಿನ ಅಕ್ಕೋಳ– ಸಿದ್ನಾಳ, ಭೋಜವಾಡಿ– ಕುನ್ನೂರ, ಕಾರದಗಾ–ಭೋಜ, ಮಲಿಕವಾಡ– ದತ್ತವಾಡ, ಕಲ್ಲೋಳ– ಯಡೂರ ಸೇತುವೆಗಳು ಮುಳುಗಡೆಯಾಗಿವೆ.

‘ಕಾರವಾರದ ಕರಾವಳಿಯಲ್ಲಿ ಪಶ್ಚಿಮ ದಿಕ್ಕಿನಿಂದ ಗಂಟೆಗೆ 35ರಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದು ಕೆಲವೊಮ್ಮೆ ಗಂಟೆಗೆ 60 ಕಿ.ಮೀ.ನಷ್ಟು ವೇಗ ಪಡೆಯುವ ಸಂಭವವಿದೆ. ಇದರ ಪರಿಣಾಮ ಸಮುದ್ರದಲ್ಲಿ ಸುಮಾರು 4 ಮೀಟರ್‌ಗಳಷ್ಟು ಎತ್ತರದ ಅಲೆಗಳು ಏಳುವ ಸಾಧ್ಯತೆಯಿದೆ’ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. 

ಪ್ರಪಾತಕ್ಕೆ ಬಿದ್ದ ಟ್ಯಾಂಕರ್: ಇಬ್ಬರ ಸಾವು
ಸಕಲೇಶಪುರ:
ಅನಿಲ ತುಂಬಿದ್ದ ಟ್ಯಾಂಕರ್ ಮಂಗಳವಾರ ರಾತ್ರಿ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ದೊಡ್ಡತಪ್ಪಲೆ ಬಳಿ ಪ್ರಪಾತಕ್ಕೆ ಬಿದ್ದು ಚಾಲಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ರಸ್ತೆಯ ಎಡಭಾಗದಲ್ಲಿ ಗುಡ್ಡ ಕುಸಿದಿದ್ದರಿಂದ ಬಲಭಾಗದಲ್ಲಿ ಚಾಲನೆ ಮಾಡಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಚಾಲಕ, ಕ್ಲೀನರ್ ಸಮೇತ ಟ್ಯಾಂಕರ್‌ನ ಎಂಜಿನ್ ಕೆಸರಿನಲ್ಲಿ ಮುಳುಗಿದೆ. ಟ್ಯಾಂಕರ್‌ ಒಡೆದು ಅನಿಲ ಸೋರಿಕೆಯಾಗಿದ್ದು, ಮಳೆಯಾಗುತ್ತಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಟ್ಯಾಂಕರ್ ತೆರವು ಮಾಡಲು ಸಾಧ್ಯವಾಗಿಲ್ಲ.

ಭದ್ರಾನದಿ ತಡೆಗೋಡೆ ಕುಸಿತ: ಆತಂಕ
ಶಿವಮೊಗ್ಗ:
ಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಸಿದ ಹಿನ್ನಲೆಯಲ್ಲಿ ಜಲಾಶಯದ ಬಳಿ ಬುಧವಾರ ನದಿಯ ತಡೆಗೋಡೆ ಕುಸಿದಿದೆ.

ಭದ್ರಾ ಜಲಾಶಯದಿಂದ ಕೇವಲ 500 ಮೀಟರ್ ದೂರದಲ್ಲಿ ಕುಸಿತ ಸಂಭವಿಸಿದೆ. ಭದ್ರಾ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ. ಕಳೆದೆರಡು ದಿನಗಳಿಂದ ಗಂಟೆ ಗಂಟೆಗೂ, ನೀರಿನ ಒಳಹರಿವು ಮತ್ತು ಹೊರಹರಿವಿನಲ್ಲಿ ಏರಿಕೆ ಆಗುತ್ತಿತ್ತು. ನೀರಿನ ರಭಸ ಮತ್ತು ಈ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಕುಸಿತ ಸಂಭವಿಸಿರುವ ಸಾಧ್ಯತೆ ಇದೆ.

ತಡೆಗೋಡೆ ಕುಸಿದ ವಿಚಾರ ತಿಳಿಯುತ್ತಿದ್ದಂತೆ, ನೀರಾವರಿ ಇಲಾಖೆ ಅಧಿಕಾರಿಗಳು, ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ತಡೆಗೋಡೆ ಕುಸಿದ ಸ್ಥಳದ ಸುತ್ತಲೂ ಬ್ಯಾರಿಕೇಡ್ ಹಾಕಿದ್ದಾರೆ.

*

-ಭದ್ರಾ ಜಲಾಶಯದ ಬಳಿ ಬುಧವಾರ ನದಿಯ ತಡೆಗೋಡೆ ಕುಸಿದಿದೆ. - (ಪ್ರಜಾವಾಣಿ ಚಿತ್ರಗಳು)

*

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !