ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಆಲಿಕಲ್ಲು ಸಹಿತ ಜೋರು ಮಳೆ

ಬಿರುಗಾಳಿ– ಮಳೆ: ಬಾಳೆ, ಅಡಿಕೆ ತೋಟಕ್ಕೆ ಹಾನಿ, ಸಿಡಿಲಿಗೆ ಮೂರು ಮೇಕೆ ಬಲಿ
Last Updated 9 ಏಪ್ರಿಲ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಂಗಳವಾರ ಗಾಳಿ, ಗುಡುಗು, ಸಿಡಿಲು ಹಾಗೂ ಆಲಿಕಲ್ಲು ಸಹಿತ ಮಳೆಯಾಗಿದೆ. ಕೆಲವೆಡೆ ಕಟಾವಿಗೆ ಬಂದಿದ್ದ ಬಾಳೆ ತೋಟ ನೆಲಕಚ್ಚಿದ್ದು, ಆಲಿಕಲ್ಲು ಮಳೆಯಿಂದ ಕಾಫಿ, ಕಾಳುಮೆಣಸಿಗೆ ಹಾನಿಯಾಗಿದೆ.

ಕೊಡಗು ಜಿಲ್ಲೆಯ ತಲಕಾವೇರಿ, ನಾಪೋಕ್ಲು, ಭಾಗಮಂಡಲ, ಕಕ್ಕಬ್ಬೆ ಭಾಗದಲ್ಲಿ ಸತತ ನಾಲ್ಕನೇ ದಿನಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿಯಿತು. ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಸಂಜೆ 4ರಿಂದ ಒಂದು ತಾಸು ಗುಡುಗು, ಮಿಂಚಿನೊಂದಿಗೆ ಮಳೆ ಆರ್ಭಟಿಸಿತು. ರಸ್ತೆಗಳು ಹಳ್ಳದಂತೆ ಗೋಚರಿಸಿದವು. ಮಳೆಯೊಂದಿಗೆ ರಾಶಿ ರಾಶಿ ಆಲಿಕಲ್ಲು ಸುರಿಯಿತು.

ಭಾರೀ ಗಾಳಿಗೆ ಸುಂಟಿಕೊಪ್ಪ– ಮಾದಾಪುರ ರಸ್ತೆಯಲ್ಲಿ ಮರ ಬಿದ್ದು ಒಂದು ಗಂಟೆ ವಾಹನ ಸಂಚಾರ ಬಂದ್‌ ಆಗಿತ್ತು. ಕುಶಾಲನಗರ, 7ನೇ ಹೊಸಕೋಟೆ, ದುಬಾರೆ, ಚಿಕ್ಲಿಹೊಳೆಯಲ್ಲಿ ಸಾಧಾರಣೆ ಮಳೆಯಾಗಿದೆ.

‘ಏಪ್ರಿಲ್‌ನಲ್ಲಿ ಮಳೆ ಬಿದ್ದಷ್ಟು ಕಾಫಿ ಬೆಳೆಗೆ ಅನುಕೂಲ. ಆದರೆ, ಆಲಿಕಲ್ಲು ಸುರಿಯಬಾರದು. ಆಲಿಕಲ್ಲಿನಿಂದ ಕಾಫಿ ಹಾಗೂ ಕಾಳುಮೆಣಸಿಗೆ ಕೊಳೆರೋಗ ತಗಲುವ ಸಾಧ್ಯತೆಯಿದೆ. ಜತೆಗೆ, ಮುಂದಿನ ವರ್ಷದ ಫಸಲಿನ ಮೇಲೂ ಪರಿಣಾಮ ಬೀರಲಿದೆ’ ಎಂದು ಬೆಳೆಗಾರರು ಅಭಿಪ್ರಾಯಪಟ್ಟಿದ್ದಾರೆ.

ಕೊಡಗು ಜಿಲ್ಲೆಯ ನಾಪೋಕ್ಲು ಮನೆಯೊಂದರ ಅಂಗಳದಲ್ಲಿ ಸುರಿದಿದ್ದ ಆಲಿಕಲ್ಲಿನ ರಾಶಿ
ಕೊಡಗು ಜಿಲ್ಲೆಯ ನಾಪೋಕ್ಲು ಮನೆಯೊಂದರ ಅಂಗಳದಲ್ಲಿ ಸುರಿದಿದ್ದ ಆಲಿಕಲ್ಲಿನ ರಾಶಿ

ಎಚ್.ಡಿ.ಕೋಟೆ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮಂಗಳವಾರ ಸಂಜೆ ಉತ್ತಮ ಮಳೆಯಾಗಿದೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಶೆಟ್ಟಿಹಳ್ಳಿ ಸುತ್ತಮುತ್ತ ಸಂಜೆ ಗಾಳಿ ಸಹಿತ ಸುರಿದ ಮಳೆಗೆ ಬಾಳೆ, ತೆಂಗು ಬೆಳೆಗೆ ಹಾನಿಯಾಗಿದೆ.

20 ನಿಮಿಷ ಅಲಿಕಲ್ಲು ಸಹಿತ ಮಳೆ ಬಂತು. ಇದರ ಜೊತೆಗೆ ಜೋರಾಗಿ ಗಾಳಿ ಬೀಸಿದ್ದರಿಂದ ಕೆಲಮನೆಗಳ ಹೆಂಚುಗಳಿಗೆ ಹಾನಿ ಸಂಭವಿಸಿದೆ. 15–20 ತೆಂಗಿನ ಮರಗಳು, ಕೆಲ ಮರಗಳು ಉರುಳಿವೆ.

ಚಿಕ್ಕಮಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಧಾರಣ ಮಳೆಯಾಗಿದೆ. ಮಧ್ಯಾಹ್ನ 2.10ಕ್ಕೆ ತುಂತುರು ಮಳೆ ಆರಂಭವಾಗಿ ಹತ್ತು ನಿಮಿಷ ಸುರಿಯಿತು. ಪುನಃ ಸಂಜೆ ಹತ್ತು ನಿಮಿಷ ದಪ್ಪಹನಿಗಳ ಮಳೆಯಾಯಿತು. ತಾಲ್ಲೂಕಿನ ಆಲ್ದೂರು, ಕೆಳಗೂರು, ಸಂಗಮೇಶ್ವರಪೇಟೆ, ಅಲ್ಲಂಪುರ ಮತ್ತು ಗಿರಿಶ್ರೇಣಿಯಲ್ಲಿ ತುಂತುರು ಮಳೆಯಾಗಿದೆ.

‌ತರೀಕೆರೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಸಾಧಾರಣಾ ಮಳೆಯಾಗಿದೆ. ಅರ್ಧ ತಾಸಿಗೂ ಹೆಚ್ಚು ಮಳೆಯಾಗಿದ್ದು, ಬೀರೂರಿನಲ್ಲೂ ಸಾಧಾರಣ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆಯಾಗಿದೆ. ರಿಪ್ಪನ್‌ಪೇಟೆಯಲ್ಲಿ ಗಾಳಿ ಮಳೆಗೆ ಸಮೀಪದ ಸೂಡೂರು ಗೇಟ್‌ನ ಬಳಿಯ ಅಡಿಕೆ ಮರ ಹಾಗೂ ಬಾಳೆಗಿಡಗಳು ನೆಲಕಚ್ಚಿವೆ.

ಹೊಸನಗರ, ಸೊರಬ, ಶಿಕಾರಿಪುರ, ಕೋಣಂದೂರು, ಭದ್ರಾವತಿ,ಶಿವಮೊಗ್ಗ ಸುತ್ತಮುತ್ತ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ. ಆನವಟ್ಟಿ ಸಮೀಪದ ತಾಳಗುಪ್ಪ ಗ್ರಾಮದ ರೈತ ಕಾನಬಸಪ್ಪ ಅವರ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಬಾಳೆ
ತೋಟ ಸಂಪೂರ್ಣ ನಾಶವಾಗಿದೆ.

ದಾವಣಗೆರೆ ಜಿಲ್ಲೆ ಮಲೇಬೆನ್ನೂರು ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಗುಡುಗು, ಸಿಡಿಲುಸಹಿತ ಆಲಿಕಲ್ಲು ಮಳೆ ಸುರಿದಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಸಂಜೆ ಗುಡುಗು, ಬಿರುಗಾಳಿ ಸಹಿತ ಉತ್ತಮ ಮಳೆ ಸುರಿಯಿತು. ಬಿಸಿಲಿನ ಧಗೆಗೆ ಮಳೆ ತಂಪೆರೆಯಿತು. ಚಳ್ಳಕೆರೆ ಮತ್ತು ಮೊಳಕಾಲ್ಮುರಿನಲ್ಲೂ ತುಂತುರು ಮಳೆಯಾಗಿದೆ. ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ನಿತ್ಯ ಮಳೆಯಾಗುತ್ತಿದೆ. ಏರುತ್ತಿರುವ ಬಿಸಿಲ ಧಗೆ ಕಡಿಮೆಯಾಗುತ್ತಿದೆ.

ಹಾರಿ ಹೋದ 15 ಮನೆಗಳ ಶೀಟುಗಳು: ಬಳ್ಳಾರಿ ಜಿಲ್ಲೆಯ ಸಂಡೂರು, ಕೊಟ್ಟೂರಿನಲ್ಲಿ ಬಿರುಗಾಳಿ, ಗುಡುಗು ಸಹಿತ ಮಳೆಯಾಗಿದೆ. ಎಸ್‌. ಓಬಳಾಪುರದಲ್ಲಿ ಆಲಿಕಲ್ಲು ಬಿದ್ದು, 15 ಮನೆಗಳಿಗೆ ಹಾನಿಯಾಗಿದೆ. ದೇವರ ಬುಡ್ಡೇನಹಳ್ಳಿಯಲ್ಲಿ ಎರಡು ಮನೆಗಳ ಶೀಟು ಹಾರಿ ಹೋಗಿವೆ.

‘ತಿಪ್ಪನಮರಡಿಯ ಬಳಿಯ ಹೊಲದಲ್ಲಿ ಸಿಡಿಲು ಬಡಿದು ಒಡೇರಹಳ್ಳಿಯ ಸಣ್ಣ ಬೊಮ್ಮಯ್ಯ ಎಂಬ ಕುರಿಗಾಹಿಯ 3 ಕುರಿ ಹಾಗೂ 6 ಮೇಕೆಗಳು ಮೃತಪಟ್ಟಿವೆ’ ಎಂದು ಕಂದಾಯ ನಿರೀಕ್ಷಕ ಯರಿಸ್ವಾಮಿ ತಿಳಿಸಿದರು.

ಸಂಡೂರು ಪಟ್ಟಣ, ತಾಲ್ಲೂಕಿನ ತಾರಾನಗರ, ಗೌರಿಪುರ, ಚೋರುನೂರಿನಲ್ಲಿ ಗುಡುಗು ಸಹಿತ ಕೆಲ ನಿಮಿಷ ಮಳೆಯಾಗಿದೆ. ಕೊಟ್ಟೂರು ತಾಲ್ಲೂಕಿನ ನಿಂಬಳಗೆರೆ ಗ್ರಾಮದಲ್ಲಿ ಬಿರುಗಾಳಿಗೆ ಹಲವೆಡೆ ಮರಗಳು ಬುಡಸಮೇತ ಉರುಳಿ ಬಿದ್ದಿವೆ.

ಕೂಡ್ಲಿಗಿ ತಾಲ್ಲೂಕಿನ ಕಾನಹೊಸಹಳ್ಳಿ, ಹುಲಿಕೆರೆ, ಹೊಸಹಳ್ಳಿ, ಆಲೂರು ಗ್ರಾಮಗಳಲ್ಲಿ ಮಳೆಯಾಗಿದ್ದು ಬಿಸಿಲ ಝಳಕ್ಕೆ ತತ್ತರಿಸಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.ಹಾವೇರಿ ಜಿಲ್ಲೆಯ ಅಕ್ಕಿಆಲೂರಿನಲ್ಲಿಯೂ ಮಳೆಯಾಗಿದೆ.

ತುಮಕೂರಿನಲ್ಲಿ ರಾತ್ರಿ ಕೆಲಸಮಯ ಗಾಳಿ, ಗುಡುಗು ಸಹಿತ ಮಳೆಯಾಯಿತು.

ಚನ್ನರಾಯಪಟ್ಟಣ ತಾಲ್ಲೂಕು ಶೆಟ್ಟಿಹಳ್ಳಿಯಲ್ಲಿ ಮಂಗಳವಾರ ಗಾಳಿ ಸಹಿತ ಸುರಿದ ಮಳೆಗೆ ಬಾಳೆಗಿಡಗಳು ನೆಲಕ್ಕುರುಳಿದೆ
ಚನ್ನರಾಯಪಟ್ಟಣ ತಾಲ್ಲೂಕು ಶೆಟ್ಟಿಹಳ್ಳಿಯಲ್ಲಿ ಮಂಗಳವಾರ ಗಾಳಿ ಸಹಿತ ಸುರಿದ ಮಳೆಗೆ ಬಾಳೆಗಿಡಗಳು ನೆಲಕ್ಕುರುಳಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT