ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಅಕ್ರಮ ತಡೆಗೆ ಹದ್ದಿನ ಕಣ್ಣು

ಜಿಲ್ಲೆಯಾದ್ಯಂತ 47 ಚೆಕ್‌ಪೋಸ್ಟ್‌; 32 ಅಕ್ರಮ ಮದ್ಯ ಸಾಗಣೆ ಪ್ರಕರಣ ದಾಖಲು
Last Updated 12 ಏಪ್ರಿಲ್ 2018, 7:28 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿವೆ. ಇದರ ಮಧ್ಯೆಯೇ ಚುನಾವಣಾ ಅಕ್ರಮಗಳನ್ನು ತಡೆಯಲು ಜಿಲ್ಲಾಡಳಿತ ಹದ್ದಿನ ಕಟ್ಟಿಟ್ಟಿದೆ.

ಜಿಲ್ಲೆಯಲ್ಲಿ 47 ಚೆಕ್‌ಪೋಸ್ಟ್‌: ಮತದಾರರಿಗೆ ಹಣ, ಹೆಂಡ, ಉಡುಗೊರೆ ಹಂಚದಂತೆ ತಡೆಯಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಜಿಲ್ಲೆಯಾದ್ಯಂತ 47 ಚೆಕ್‌ಪೋಸ್ಟ್‌ಗಳನ್ನು ತೆರೆದಿದೆ. ನಗರ ಅಥವಾ ಪಟ್ಟಣ ಪ್ರವೇಶಿಸುವ ವಾಹನಗಳನ್ನು ಸಿಬ್ಬಂದಿ ತಪಾಸಣೆ ಮಾಡುತ್ತಿದ್ದಾರೆ.

24‌x7 ಕಾರ್ಯ: ದಾಖಲೆ ಇಲ್ಲದ ಹಣ, ಅಕ್ರಮ ಮದ್ಯ, ಮತದಾರರಿಗೆ ಆಮಿಷವೊಡ್ಡುವ ಯಾವುದೇ ಸರಕುಗಳು ಕಂಡುಬಂದರೂ ಅಧಿಕಾರಿಗಳು ಅವುಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸುತ್ತಿದ್ದಾರೆ. ಇದಕ್ಕಾಗಿಯೇ ದಿನದ 24 ಗಂಟೆಯೂ ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿ ಅವಿತರವಾಗಿ ಶ್ರಮಿಸುತ್ತಿದ್ದಾರೆ.

ಚೆಕ್‌ಪೋಸ್ಟ್‌ನಲ್ಲಿ ಎಷ್ಟು ಸಿಬ್ಬಂದಿ?

ಚೆಕ್‌ಪೋಸ್ಟ್‌ನಲ್ಲಿ ನಿಯೋಜನೆಗೆ ಎಸ್‌ಎಸ್‌ಟಿ ತಂಡ ರಚನೆ ಮಾಡಲಾಗಿದೆ. ಒಬ್ಬರು ಎಸ್‌ಎಸ್‌ಟಿ ಮುಖ್ಯಸ್ಥರು ಹಾಗೂ ಮೂವರು ಸಿಬ್ಬಂದಿ, ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ. ಇವರ ಜತೆಗೆ ನಾಲ್ವರು ಪ್ಯಾರಾ ಮಿಲಿಟರಿ ಸಿಬ್ಬಂದಿ ಭದ್ರತೆ ಜವಾಬ್ದಾರಿ ಹೊತ್ತಿದ್ದಾರೆ.

ಮೂರು ಪಾಳಿಯಲ್ಲಿ ಕೆಲಸ:

ಬೆಳಿಗ್ಗೆ 6ರಿಂದ ಆರಂಭವಾಗುವ ಮೊದಲ ಪಾಳಿ ಮಧ್ಯಾಹ್ನ 2ಕ್ಕೆ ಮುಕ್ತಾಯವಾಗುತ್ತದೆ. ಮಧ್ಯಾಹ್ನ 2ರಿಂದ ಎರಡನೇ ಪಾಳಿ ಶುರುವಾಗಿ ರಾತ್ರಿ 10ಕ್ಕೆ ಅಂತ್ಯವಾಗುತ್ತದೆ. ಹಾಗೆಯೇ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೂ ರಾತ್ರಿ ಪಾಳಿ ಇರುತ್ತದೆ. ಹೀಗೆ, ಮೂರು ಪಾಳಿಗಳಲ್ಲಿ ದಿನವಿಡೀ ಸಿಬ್ಬಂದಿ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ.

ಕಾರ್ಯವೈಖರಿ ಹೇಗೆ?

ಚೆಕ್‌ಪೋಸ್ಟ್‌ನಲ್ಲಿ ಯಾವುದೇ ವಾಹನವನ್ನು ತಡೆದು ತಪಾಸಣೆ ಮಾಡುವ ಹಾಗೂ ಅಕ್ರಮ ಕಂಡುಬಂದರೆ ಜಪ್ತಿ ಮಾಡುವ ಅಧಿಕಾರ ಚುನಾವಣಾ ಸಿಬ್ಬಂದಿಗೆ ಇರುತ್ತದೆ. ಅದರಂತೆ, ಅನುಮಾನಾಸ್ಪದವಾಗಿ ಓಡಾಡುವ ವಾಹನಗಳನ್ನು ತಡೆದು ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ.

ವಾಹನದ ದಾಖಲೆ, ಮಾಲೀಕರ ವಿಳಾಸ, ಯಾವ ಉದ್ದೇಶಕ್ಕೆ ಪ್ರವಾಸ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಈ ವೇಳೆ ಅನುಮಾನಾಸ್ಪದವಾಗಿ ವರ್ತಿಸಿದರೆ, ನೀಡಿದ ಮಾಹಿತಿ ಸುಳ್ಳು ಎಂದು ತಿಳಿದುಬಂದರೆ ಅಂತಹವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಬಹುದು.

ಸರಕು ಸಾಗಣೆ ವಾಹನಗಳು, ಬೇರೆ ಜಿಲ್ಲೆಯ ಅಥವಾ ರಾಜ್ಯದ ನೋಂದಣಿ ಸಂಖ್ಯೆಯ ವಾಹನಗಳು ಹಾಗೂ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಒಳಗೊಂಡಿರುವ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆಗೊಳಿಸಲಾಗುವುದು. ಎಷ್ಟೇ ದೊಡ್ಡ ಅಧಿಕಾರಿಯಾದರೂ ತಪಾಸಣೆ ಮಾಡುವಂತೆ ಚುನಾವಣಾ ಆಯೋಗದಿಂದಲೇ ಸ್ಪಷ್ಟವಾದ ನಿರ್ದೇಶನ ಇದೆ ಎನ್ನುತ್ತಾರೆ ಎಸ್‌ಎಸ್‌ಟಿ ಮುಖ್ಯಸ್ ನಾಗರಾಜ್‌.

ವಾಹನಗಳಲ್ಲಿರುವ ಬ್ಯಾಗ್‌, ಕವರ್, ಆಸನದ ಕೆಳಗಿನ ಭಾಗ ಹಾಗೂ ಎಲ್ಲೆಲ್ಲಿ ಸರಕು ಸಾಗಿಸಲು ಸಾಧ್ಯಲು ಅವಕಾಶವಿರುತ್ತದೋ ಅಲ್ಲೆಲ್ಲ ತಪಾಸಣೆ ಮಾಡಲಾಗುವುದು. ಸೂಕ್ತ ದಾಖಲೆಗಳಿಲ್ಲದ ಹಣ, ಪರವಾನಗಿ ಇಲ್ಲದ ಮದ್ಯ ಹಾಗೂ ಚುನಾವಣಾ ಅಕ್ರಮಗಳನ್ನು ಎಸಗಲು ಯಾವುದೇ ವಸ್ತುಗಳನ್ನು ಸಾಗಿಸುತ್ತಿದ್ದರೂ ವಶಕ್ಕೆ ತೆಗೆದುಕೊಳ್ಳಲಾಗುವುದು.

ಅಕ್ರಮ ಮದ್ಯ, ಹಣ ಸಿಕ್ಕರೆ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ₹ 10 ಲಕ್ಷಕ್ಕೂ ಹೆಚ್ಚಿನ ನಗದು ಪತ್ತೆಯಾದರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ವಶಪಡಿಸಿಕೊಂಡ ಹಣವನ್ನು ಜಿಲ್ಲಾ ಖಜಾನೆಗೆ ತುಂಬಲಾಗುವುದು. ಮಾಲೀಕರು ಸೂಕ್ತ ದಾಖಲಾತಿಗಳನ್ನು ಒದಗಿಸಿ ಹಣವನ್ನು ಮರಳಿ ಪಡೆಯಬಹುದು ಎಂದರು ನಾಗರಾಜ್‌.

ಪ್ರತಿಯೊಂದು ವಾಹನವನ್ನೂ ತಪಾಸಣೆಗೆ ಒಳಪಡಿಸುವುದು ಸವಾಲಿನ ಕೆಲಸ. ಇದರಿಂದ ವಾಹನ ದಟ್ಟಣೆಯೂ ಹೆಚ್ಚಲಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುತ್ತಾರೆ. ಆದರೂ ಚುನಾವಣಾ ಆಯೋಗದ ನಿಯಮಗಳಿಗೆ ಅನುಗುಣವಾಗಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿಸಿಲಿನ ಝಳ ಸಿಬ್ಬಂದಿಯನ್ನು ಹೈರಾಣಾಗಿಸಿದೆ ಎನ್ನುತ್ತಾರೆ ಅಧಿಕಾರಿಯೊಬ್ಬರು.

ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಜಿಲ್ಲೆಯಲ್ಲಿ ಇದುವರೆಗೂ 32 ಅಕ್ರಮ ಮದ್ಯ ಸಾಗಣೆ ಪ್ರಕರಣಗಳು ದಾಖಲಾಗಿವೆ. 500 ಲೀಟರ್‌ಗೂ ಹೆಚ್ಚು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಮತದಾರರಿಗೆ ಆಮಿಷವೊಡ್ಡಿದ ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ 5 ಪ್ರಕರಣಗಳು ದಾಖಲಾಗಿವೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಜೆ. ಉದೇಶ್‌ ಮಾಹಿತಿ ನೀಡಿದರು.

**

ತುರ್ತು ಉದ್ದೇಶಗಳಿಗೆ ಹಣ ಕೊಂಡೊಯ್ಯಬೇಕಾದರೆ ಅಗತ್ಯ ದಾಖಲೆಗಳನ್ನು ಬಳಿಯಲ್ಲೇ ಇಟ್ಟುಕೊಳ್ಳಿ. ವ್ಯಾಪಾರಿಗಳೂ ಬಿಲ್ ಕಡ್ಡಾಯವಾಗಿ ಹೊಂದಿರಬೇಕು – ನಾಗರಾಜ್‌, ಎಸ್‌ಎಸ್‌ಟಿ ಮುಖ್ಯಸ್ಥ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT