ಕರಾವಳಿ, ಕೊಡಗಿನಲ್ಲಿ ಮತ್ತೆ ಮಳೆ; ಕೊಡಗಿನಲ್ಲಿ ಗುರುವಾರ ಶಾಲಾ–ಕಾಲೇಜುಗಳಿಗೆ ರಜೆ

7
ನೀರಿನಲ್ಲಿ ಮುಳುಗಿದ ಖಾಸಗಿ ಬಸ್‌, ಮತ್ತೆ ಕುಸಿದ ರಾಷ್ಟ್ರೀಯ ಹೆದ್ದಾರಿ

ಕರಾವಳಿ, ಕೊಡಗಿನಲ್ಲಿ ಮತ್ತೆ ಮಳೆ; ಕೊಡಗಿನಲ್ಲಿ ಗುರುವಾರ ಶಾಲಾ–ಕಾಲೇಜುಗಳಿಗೆ ರಜೆ

Published:
Updated:

ಬೆಂಗಳೂರು: ಕೊಡಗು, ಘಟ್ಟ ಪ್ರದೇಶ ಹಾಗೂ ಕರಾವಳಿ ಭಾಗದಲ್ಲಿ ಮತ್ತೆ ಮುಂಗಾರು ಚುರುಕುಗೊಂಡಿದೆ. ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ.

ಮಳೆ‌, ಗಾಳಿ ಮತ್ತಷ್ಟು‌ ತೀವ್ರಗೊಂಡಿದ್ದು‌, ಕೊಡಗು‌ ಜಿಲ್ಲೆಯ‌ ಎಲ್ಲಾ ಶಾಲಾ- ಕಾಲೇಜುಗಳಿಗೆ‌ ಆ. 9ರಂದು‌ ಜಿಲ್ಲಾಡಳಿ‌ತ ರಜೆ ಘೋಷಿಸಿದೆ. ಧಾರಾಕಾರ ಮಳೆಯಿಂದಾಗಿ ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಮಡಿಕೇರಿ, ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಅಯ್ಯಂಗೇರಿ ವ್ಯಾಪ್ತಿಯಲ್ಲಿ ಮಳೆ ಬಿರುಸಾಗಿದ್ದು ನೂರಾರು ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಮಡಿಕೇರಿ ಸಮೀಪ ಮೈಸೂರು– ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯು ಮೂರನೇ ಬಾರಿಗೆ ಕುಸಿದಿದ್ದು, ಹೆದ್ದಾರಿ ಅಪಾಯದ ಸ್ಥಿತಿಗೆ ತಲುಪಿದೆ.

ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತವಾಗಿದ್ದು ಭಾಗಮಂಡಲ– ಅಯ್ಯಂಗೇರಿ ರಸ್ತೆ ಸಂಪರ್ಕ ಕಡಿತವಾಗಿದೆ. ಕಕ್ಕಬ್ಬೆ ಹೊಳೆಯ ನೀರು ರಸ್ತೆಯ ಮೇಲೆ ಉಕ್ಕಿ ಹರಿದ ಪರಿಣಾಮ ಖಾಸಗಿ ಬಸ್ ಎರಡು ಗಂಟೆ ನೀರಿನಲ್ಲಿ ಮುಳುಗಿತ್ತು. ಬಳಿಕ ಪ್ರಯಾಣಿಕರನ್ನು ಬೇರೊಂದು ಬಸ್‌ನಲ್ಲಿ ಮಡಿಕೇರಿಗೆ ಕರೆ ತರಲಾಯಿತು. ಮಕ್ಕಂದೂರು ಹಾಗೂ ಮಂಗಳಾದೇವಿ ನಗರದಲ್ಲಿ ಮನೆ ಕುಸಿದು ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಮಡಿಕೇರಿಯ ಕಾವೇರಿ ಲೇಔಟ್‌ನಲ್ಲಿ ಹಲವು ಮನೆಗಳಿಗೆ ಮಳೆಯ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಪುಟಾಣಿ ನಗರದಲ್ಲಿ ರಸ್ತೆಯೇ ಕೊಚ್ಚಿ ಹೋಗಿದೆ.

ಹೊಸಮಠ ಸೇತುವೆ ಮುಳುಗಡೆ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸಮೀಪದ ಗುಂಡ್ಯ ಹೊಳೆಗೆ ಅಡ್ಡವಾಗಿ ಇರುವ ಹೊಸಮಠ ಸೇತುವೆ ಬುಧವಾರ ಬೆಳಿಗ್ಗೆಯಿಂದಲೇ ಮುಳುಗಡೆಯಾಗಿದ್ದು, ಉಪ್ಪಿನಂಗಡಿ-ಕಡಬ ಮಧ್ಯೆ ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ. ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಸೇತುವೆ ಮೇಲೆ 3 ಅಡಿ ನೀರು ಇತ್ತು. ಮಧ್ಯಾಹ್ನದ ಹೊತ್ತಿಗೆ ಸೇತುವೆ ಮೇಲೆ 6 ಅಡಿ ನೀರು ಹರಿಯುತ್ತಿತ್ತು. ಕತ್ತಲಾಗುವ ಹೊತ್ತಿಗೆ ಸೇತುವೆ ಮೇಲೆ 7 ಅಡಿ ನೀರು ಇತ್ತು.

ಸುಬ್ರಹ್ಮಣ್ಯ ಪರಿಸರದಲ್ಲೂ ಭಾರಿ ಮಳೆ ಸುರಿದಿದ್ದು, ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ಕುಮಾರಧಾರ ಸ್ನಾನ ಘಟ್ಟ ಸಂಪೂರ್ಣ ಮುಳುಗಡೆಯಾಗಿದೆ.

ಕಬಿನಿ ಏರಿಕೆ: ಕೇರಳದ ವೈನಾಡಿನಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ವೈನಾಡು ಜಿಲ್ಲೆಯಲ್ಲಿರುವ ಬಾಣಾಸುರ ಜಲಾಶಯ 10 ವರ್ಷಗಳ ಬಳಿಕ ಭರ್ತಿಯಾಗಿದ್ದು, ನೀರನ್ನು ಹೊರ ಬಿಡಲಾಗುತ್ತಿದೆ. ಒಟ್ಟು 45,000 ಕ್ಯುಸೆಕ್‌ ಒಳಹರಿವು ಇದೆ. ರಾತ್ರಿ ಒಳಹರಿವು ಹೆಚ್ಚಳವಾಗುವ ಸಾಧ್ಯತೆಯಿರುವುದರಿಂದ 50,000 ಕ್ಯುಸೆಕ್‌ ನೀರನ್ನು ಕಬಿನಿ ಜಲಾಶಯದಿಂದ ನದಿಗೆ ಬಿಡಲಾಗುತ್ತಿದೆ.

ಹೊರ ಹರಿವು ಹೆಚ್ಚುವ ಸಾಧ್ಯತೆ ಇರುವುದರಿಂದ ನದಿ ತೀರದಲ್ಲಿರುವ ಜನರು ಸೂಕ್ತಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ.

ಭಾಗಮಂಡಲ, ಮಡಿಕೇರಿಯಲ್ಲಿ 11 ಸೆಂ.ಮೀ ಮಳೆ

ಬೆಂಗಳೂರು: ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದ್ದು, ರಾಜ್ಯದ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಉತ್ತಮ ಮಳೆ ಆಗಿದೆ.

ಭಾಗಮಂಡಲ, ಮಡಿಕೇರಿಯಲ್ಲಿ 11ಸೆಂ.ಮೀ. ಮಳೆಯಾಗಿದೆ.

ಬೆಳ್ತಂಗಡಿ, ಗೇರುಸೊಪ್ಪ 10, ಧರ್ಮಸ್ಥಳ, ನಾಪೋಕ್ಲು, ಆಗುಂಬೆ 9, ಕುಕ್ಕೆಸುಬ್ರಹ್ಮಣ್ಯ, ಕಾರ್ಕಳ 8, ಶಿರಾಲಿ 7, ಕೊಲ್ಲೂರು, ಹೊನ್ನಾವರ, ಮಂಕಿ, ಶೃಂಗೇರಿ 6, ಸುಳ್ಯ, ಪೊನ್ನಂಪೇಟೆ 5, ಕದ್ರಾ, ಸೋಮವಾರ‌ಪೇಟೆ, ತಾಳಗುಪ್ಪ, ಕಳಸ 4, ಮೂಡುಬಿದಿರೆ, ಬಂಟ್ವಾಳ, ಮೂಡಿಗೆರೆ, ಕೊಪ್ಪ 3, ಯಲ್ಲಾಪುರ, ಲಿಂಗನಮಕ್ಕಿ 2, ಕಾರವಾರ, ಖಾನಾಪುರ, ಹಾಸನ, ಮಂಡ್ಯ, ಕುಶಾಲನಗರದಲ್ಲಿ ತಲಾ ಒಂದು ಸೆಂ.ಮೀ. ಮಳೆ ಬಿದ್ದಿದೆ.

ಹವಾಮಾನ ಮುನ್ಸೂಚನೆ: ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ಮುನ್ಸೂಚನೆ ನೀಡಿದೆ.

ಬರಹ ಇಷ್ಟವಾಯಿತೆ?

 • 20

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !