ತುಂಗಾ–ಭದ್ರಾ ನದಿಗಳಲ್ಲಿ ನೀರಿನ ಮಟ್ಟ ಏರಿಕೆ

7

ತುಂಗಾ–ಭದ್ರಾ ನದಿಗಳಲ್ಲಿ ನೀರಿನ ಮಟ್ಟ ಏರಿಕೆ

Published:
Updated:

ಬೆಂಗಳೂರು: ಮಳೆಯ ತೀವ್ರತೆ ಹೆಚ್ಚಾಗಿದ್ದು, ಹಳ್ಳಕೊಳ್ಳ, ಝರಿ ಜಲಪಾತ, ಹೊಳೆಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆ ಭಾಗದಲ್ಲಿ ಗುರುವಾರ 188 ಮಿ.ಮೀ. ದಾಖಲೆಯ ಮಳೆಯಾಗಿದೆ.

ಶೃಂಗೇರಿ ತಾಲ್ಲೂಕಿನ ಯಡದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಮ್ಮಾರ್ ಸಮೀಪ ಹೊಳೆಹದ್ದು ಉಮೇಶ್ ಎಂಬುವರು ತುಂಗಾ ನದಿಯ ಸಮೀಪವಿರುವ ತೋಟದ ಕೆಲಸಕ್ಕೆ ತೆರಳಿದವರು ನಾಪತ್ತೆಯಾಗಿದ್ದಾರೆ. ಕಾಲು ಜಾರಿ ಬಿದ್ದು ನದಿಯ ಪಾಲಾಗಿರಬಹುದು ಎಂದು ಕುಟುಂಬದವರು ಶಂಕಿಸಿದ್ದು, ಶೋಧಕಾರ್ಯ ಮುಂದುವರಿದಿದೆ.

ಉಡುಪಿ ಜಿಲ್ಲೆಯ ಕೋಟ ಮಣೂರಿನಲ್ಲಿ ಬುಧವಾರ ಗದ್ದೆಗೆ ಹುಲ್ಲು ಕೊಯ್ಯಲು ಹೋದ ಕಂಬಳಗದ್ದೆ ಬೆಟ್ಟಿನ ಸಾಕು ಮರಕಾಲ್ತಿ ಆಕಸ್ಮಿಕವಾಗಿ ಹೊಳೆಗೆ ಬಿದ್ದು, ಕೊಚ್ಚಿ ಹೋಗಿದ್ದಾರೆ. ಗುರುವಾರ ಹೊಳೆಯ ಸಮೀಪದ ಪೊದೆಯಲ್ಲಿ ಶವ ಪತ್ತೆಯಾಗಿದೆ. ತುಂಗಾನದಿ ಉಕ್ಕಿ ಹರಿದು ಶಾರದ ಪೀಠದ ಭಾರತೀತೀರ್ಥ ಸ್ವಾಮಿಜೀಯವರ ಸ್ನಾನ ಘಟ್ಟ, ಸಂಧ್ಯಾವಂದನೆ ಮಂಟಪ ಹಾಗೂ ಕಪ್ಪೆ ಶಂಕರ ದೇವಾಲಯ ಮುಳುಗಿದೆ. ಶೃಂಗೇರಿಯ ಮುಖ್ಯ ಬೀದಿಗಳಲ್ಲಿ ನೀರು ಉಕ್ಕಿ ಹರಿದಿದೆ.

ಭದ್ರಾನದಿಯಲ್ಲಿ ಪ್ರವಾಹ ಏರಿಕೆಯಾಗಿದ್ದು, ಕಳಸ-ಹೊರನಾಡು ರಸ್ತೆಯ ಹೆಬ್ಬೊಳೆ ಸೇತುವೆ ಗುರುವಾರ ಮಧ್ಯಾಹ್ನದವರೆಗೂ ಜಲಾವೃತವಾಗಿತ್ತು. ಬೆಟ್ಟದಮನೆ ಬಳಿ ಹೇಮಾವತಿ ನೀರಿನ ಹರಿಯುವ ಮಟ್ಟ ಹೆಚ್ಚಳವಾಗಿತ್ತು. ಚಾರ್ಮಾಡಿ ಘಾಟಿಯಲ್ಲಿ ಮಳೆ ಅವಘಡ ನಿರ್ವಹಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಧಾರಾಕಾರ ಮಳೆ ಸುರಿದಿದ್ದು, ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಬಳಿ ನಂದಿನಿ ನದಿ ಉಕ್ಕಿ ಹರಿಯುತ್ತಿದೆ. ಕಟೀಲಿನ ’ರಜ’ ಕಲ್ಲು ಮುಳುಗಡೆಯಾಗಿದೆ. ಪುತ್ತೂರು ತಾಲ್ಲೂಕಿನ ಪರ್ಲಡ್ಕ– ಪಾಣಾಜೆ ರಸ್ತೆಯ ಚೆಲ್ಯಡ್ಕ ಸೇತುವೆ ಮೂರನೇ ಬಾರಿಗೆ ಮುಳುಗಡೆಯಾಗಿದೆ. ಉಡುಪಿ ಜಿಲ್ಲೆಯಲ್ಲೂ ಧಾರಾಕಾರ ಮಳೆ ಸುರಿದಿದ್ದು, ಕೊಂಜಾಡಿ- ತೊನ್ನಾಸೆ- ಮರೂರು ಸಂಪರ್ಕ ಸೇತುವೆ ಜಲಾವೃತವಾಗಿದೆ.

ಶಿವಮೊಗ್ಗ ಜಿಲ್ಲೆಯ ಹಲವೆಡೆ ಗುರುವಾರ ಉತ್ತಮ ಮಳೆ ಸುರಿದಿದ್ದು, ತೀರ್ಥಹಳ್ಳಿ–ಬಿದರಗೋಡಿನ ಹೊನ್ನೆತಾಳು ಬಳಿ ನಾಬಳ ಸೇತುವೆ ಮೇಲೆ ನೀರು ಹರಿಯುತ್ತಿರುವ ಪರಿಣಾಮ ಮಾರ್ಗದ ಸಂಪರ್ಕ ಕಡಿತಗೊಂಡಿದೆ. ತುಂಗಾ ಜಲಾಶಯಕ್ಕೆ 30,561 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ 14 ಕ್ರೆಸ್ಟ್‌ ಗೇಟ್‌ ತೆರೆದು, 30,526 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಶಿವಮೊಗ್ಗ ನಗರ, ಶಿಕಾರಿಪುರ, ಸಾಗರ, ಭದ್ರಾವತಿ, ಸೊರಬ, ಹೊಸನಗರ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.

ಭಾಗಮಂಡಲ ಜಲಾವೃತ: ಕೊಡಗು ಜಿಲ್ಲೆಯಲ್ಲಿ ಬುಧವಾರ ರಾತ್ರಿ ಭಾರಿ ಮಳೆಯಾಗಿದೆ. ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದ ಭಾಗಮಂಡಲ ಮತ್ತೊಮ್ಮೆ ಜಲಾವೃತ್ತಗೊಂಡಿತ್ತು. ಗುರುವಾರ ಬೆಳಿಗ್ಗೆ 8 ಗಂಟೆ ನಂತರ ಮಳೆ ಅಬ್ಬರ ಕಡಿಮೆಯಾಗಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಇಳಿಕೆ ಆಯಿತು. ಹಾರಂಗಿ ಜಲಾಶಯದ ಒಳಹರಿವು 3,292 ಕ್ಯುಸೆಕ್‌ಗೆ ಏರಿಕೆಯಾಗಿದ್ದು, ಕಾವೇರಿ ನದಿ ಸೇರಿದಂತೆ ಹಳ್ಳಕೊಳ್ಳಗಳು ಮೈದುಂಬಿಕೊಂಡಿವೆ.

ಸಕಲೇಶಪುರ ತಾಲ್ಲೂಕಿನಲ್ಲಿ ಬುಧವಾರ ಸಂಜೆಯಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಪಶ್ಚಿಮಘಟ್ಟದ ಬೆಟ್ಟಗಳ ಸಾಲಿನಲ್ಲಿ ಮಳೆ ಆರ್ಭಟ ಹೆಚ್ಚಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಲ್ಲಿ ಬುಧವಾರ ರಾತ್ರಿಯಿಂದ ಆರಂಭವಾದ ಮಳೆ ಗುರುವಾರವೂ ಅಬ್ಬರಿಸಿತು. ನದಿ, ತೊರೆಗಳು, ಹಳ್ಳಗಳು ತುಂಬಿ ಹರಿಯುತ್ತಿವೆ. ಶಿರಸಿ ತಾಲ್ಲೂಕಿನಲ್ಲೂ ಮಧ್ಯಾಹ್ನದವರೆಗೆ ಭಾರಿ ಮಳೆ ಸುರಿದಿದೆ. ಸಮುದ್ರದಲ್ಲಿ 35ರಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಎಚ್ಚರದಿಂದ ಇರುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆಲಮಟ್ಟಿಗೆ ಹೆಚ್ಚಿದ ನೀರು: ಕೃಷ್ಣಾ ನದಿ ಪಾತ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಹೆಚ್ಚುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 10 ಟಿಎಂಸಿ ಅಡಿಗೂ ಹೆಚ್ಚಿನ ನೀರು ಸಂಗ್ರಹವಾಗಿದೆ. ಬೆಳಗಾವಿ, ಹಾವೇರಿಯಲ್ಲೂ ದಿನವಿಡೀ ಜಿಟಿಜಿಟಿ ಮಳೆಯಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ಫಾಲ್ಸ್‌ ತುಂಬಿ ಹರಿಯುತ್ತಿದೆ.


ಕುಮಟಾ ತಾಲ್ಲೂಕಿನ ಪ್ರವಾಸಿ ತಾಣ ಯಾಣ ರಸ್ತೆಯ ಪಕ್ಕ ಮರಾಠಕೇರಿಗೆ ಹೋಗಲು ಚಂಡಿಕಾಹೊಳೆಗೆ ನಿರ್ಮಿಸಿದ್ದ ಸೇತುವೆ ಪ್ರವಾಹದಿಂದ ಕುಸಿದಿದೆ. ಇದರಿಂದ ಈ ಭಾಗದ 10 ಮನೆಗಳ ಸಂಪರ್ಕ ಕಡಿದಿದೆ. ಈ ಸೇತುವೆಯನ್ನು ಗ್ರಾಮಸ್ಥರೇ ಸೇರಿ ನಿರ್ಮಿಸಿಕೊಂಡಿದ್ದರು

24 ಗಂಟೆಯ ಅವಧಿಯಲ್ಲಿ ದಾಖಲಾದ ಮಳೆ ಪ್ರಮಾಣ (ಮೀ.ಮೀ. ನಲ್ಲಿ)

ಬೆಳ್ತಂಗಡಿ  ;175.3,

ಭಾಗಮಂಡಲ   ;160

ಸುಳ್ಯ  ;142.2,

ತೀರ್ಥಹಳ್ಳಿ  ;137.70

ಬಂಟ್ವಾಳ   ;137.3,

ಪುತ್ತೂರು   ;116

ನಾಪೋಕ್ಲು  ;108

ಹೊಸನಗರ   ;102.20

Tags: 

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !