ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ

ಮರ ಬಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಸಾವು
Last Updated 23 ಜುಲೈ 2019, 19:38 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಜೋರಾಗಿದೆ. ಮಡಿಕೇರಿ– ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ನಾಲ್ಕೈದು ಸ್ಥಳಗಳಲ್ಲಿ ಗುಡ್ಡ ಕುಸಿದು ಆತಂಕ ಸೃಷ್ಟಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಮಳೆಯಾಗುತ್ತಿದ್ದು, ಸಾಕಷ್ಟು ಹಾನಿಯಾಗಿದೆ.

ಭಟ್ಕಳ ಬಳಿ ಐದಾರು ಮನೆಗಳ ಮೇಲೆ ಗುಡ್ಡಕುಸಿಯುವ ಭೀತಿಯಿದೆ. ಹೆದ್ದಾರಿ ಮೇಲೆ ಮಣ್ಣು ಕುಸಿದು ಸಂಚಾರಕ್ಕೆ ತೊಂದರೆಯಾಗಿದೆ. ಜತೆಗೆ ಅಂಕೋಲಾ ತಾಲ್ಲೂಕಿನ ಹುಲಿದೇವರವಾಡಾ ಬಳಿಯ ಕೊಂಕಣ ರೈಲ್ವೆ ಸುರಂಗ ಮಾರ್ಗದ ಮುಂಭಾಗ ಮಧ್ಯಾಹ್ನ ಗುಡ್ಡ ಕುಸಿಯಿತು. ಹಾಗಾಗಿ ಈ ಮಾರ್ಗದಲ್ಲಿ ರೈಲುಗಳ ಸಂಚಾರದಲ್ಲಿ ವಿಳಂಬವಾಯಿತು. ರಸ್ತೆ ಮೇಲೆ ಮರ ಉರುಳಿಬಿದ್ದು, ಅರಣ್ಯ ಇಲಾಖೆ ನೌಕರ ಹುಸೂರಿನ ಶಶಿಧರ ನಾಯ್ಕ (54) ಮೃತಪಟ್ಟಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಮದೆನಾಡು ಸಮೀಪದ ಕರ್ತೋಜಿ ಹಾಗೂ ಕಾಟಕೇರಿ ಬಳಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಮಂಗಳವಾರ ಬೆಳಿಗ್ಗೆಯೇ ‘ಕ್ಷಿಪ್ರ ಕಾರ್ಯ ಪಡೆ’ ಸಿಬ್ಬಂದಿ ನಾಲ್ಕು ಜೆಸಿಬಿ ಯಂತ್ರಗಳನ್ನು ಬಳಸಿ ಮಣ್ಣು ತೆರವುಗೊಳಿಸುವ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

2ನೇ ಮೊಣ್ಣಂಗೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲೂ ಗುಡ್ಡ ಕುಸಿದು ವಾಹನ ಸಂಚಾರ ಬಂದ್‌ ಆಗಿತ್ತು. ಶನಿವಾರವೂ ಇದೇ ಸ್ಥಳದಲ್ಲಿ ಗುಡ್ಡ ಕುಸಿದಿತ್ತು. ಮಡಿಕೇರಿ– ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಕಾಂಡನಕೊಲ್ಲಿ, ಮಾದಾಪುರ, ಕೊಪ್ಪತ್ತೂರು, ಗರ್ವಾಲೆ, ಸೂರ್ಲಬ್ಬಿಯಲ್ಲಿ ಸಣ್ಣ ಪ್ರಮಾಣದ ಭೂಕುಸಿತ ಉಂಟಾಗಿದೆ.ಮಳೆಯ ಅಬ್ಬರಕ್ಕೆ ಅಲ್ಲಲ್ಲಿ ಅನಾಹುತಗಳು ಸಂಭವಿಸುತ್ತಿವೆ.

ಪರಿಸ್ಥಿತಿ ಅವಲೋಕಿಸಿದ ಎನ್‌ಡಿಆರ್‌ಎಫ್‌:

ಜಿಲ್ಲೆಯಲ್ಲೇ ಬೀಡುಬಿಟ್ಟಿರುವ ಎನ್‌ಡಿಆರ್‌ಎಫ್‌ ಸಿಬ್ಬಂದಿ ಸುಬ್ರಹ್ಮಣ್ಯ ನಗರ, ಖಾಸಗಿ ಬಸ್‌ ನಿಲ್ದಾಣ, ಇಂದಿರಾ ನಗರ, ಚಾಮುಂಡೇಶ್ವರಿ ನಗರಕ್ಕೆ ಮಂಗಳವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಂಗಳವಾರವೂ ಧಾರಾಕಾರ ಮಳೆ ಮುಂದುವರಿದಿದ್ದು, ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಸಾಧಾರಣ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶಂಭೂರು ಎಎಂಆರ್‌ ಡ್ಯಾಂ, ದಿಶಾ ಡ್ಯಾಂ, ತುಂಬೆ ಕಿಂಡಿ ಅಣೆಕಟ್ಟೆ, ಸಾಗರ ಡ್ಯಾಂನಿಂದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ಜಿಲ್ಲೆಯ ಹಲವೆಡೆ ಭೂಕುಸಿತ ಸಂಭವಿಸಿದ್ದು, ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ನಗರದ ಸೇಂಟ್‌ ಅಲೋಶಿಯಸ್ ಕಾಲೇಜಿನ ಈಜುಕೊಳದ ಬಳಿ ಗುಡ್ಡ ಕುಸಿದಿದೆ. ಬಜ್ಪೆಯ ಆದ್ಯಪಾಡಿ ರಸ್ತೆ ಮೇಲೆ ಗುಡ್ಡ ಕುಸಿದಿದ್ದು, ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಕೊಳ್ನಾಡು ಗ್ರಾಮದ ಕರೈ ಭಾಗದಲ್ಲಿ ಮರ ವಿದ್ಯುತ್ ತಂತಿಯ ಮೇಲೆ ಬಿದ್ದು, 8 ಕಂಬಗಳು ರಸ್ತೆಗೆ ಉರುಳಿವೆ. ವಾಹನ ಸಂಚಾರ ಸ್ಥಗಿತಗೊಂಡಿದೆ.

ಉಡುಪಿ ಜಿಲ್ಲೆಯಲ್ಲಿ ಎರಡು ದಿನಗಳಿಂದ ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಹಲವೆಡೆ ನೆರೆ ಭೀತಿ ಎದುರಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು, ಮೂಡಿಗೆರೆ, ಕೊಟ್ಟಿಗೆಹಾರ, ಕೊಪ್ಪ, ಎನ್‌.ಆರ್‌.ಪುರ, ಶೃಂಗೇರಿ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ಹೊನ್ನಾವರತಾಲ್ಲೂಕಿನಭಾಸ್ಕೇರಿ ಹಳ್ಳಉಕ್ಕಿ ಹರಿದಿದ್ದು, ಸುತ್ತಮುತ್ತಲಿನ25– 30 ಮನೆಗಳಿಗೆ ನೀರು ನುಗ್ಗಿದೆ. ಕುಮಟಾ ತಾಲ್ಲೂಕಿನಾದ್ಯಂತ ಭಾರಿ ಮಳೆಯಾಗಿದೆ. ಬಡಗಣಿ ನದಿಯು ತುಂಬಿ ಹರಿಯುತ್ತಿದ್ದು, ಕೋನಳ್ಳಿ ಮತ್ತು ಊರುಕೇರಿಗಳಲ್ಲಿ ಸುಮಾರು 20 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಎರಡೂ ಗ್ರಾಮಗಳಲ್ಲಿ ತಾತ್ಕಾಲಿಕ ಪುನರ್ವಸತಿ ವ್ಯವಸ್ಥೆ ಮಾಡಲಾಗಿದೆ.

ಕುಮಟಾ– ಸಿದ್ದಾಪುರ ನಡುವಿನ ರಾಜ್ಯ ಹೆದ್ದಾರಿಯಲ್ಲಿ ನೀರು ತುಂಬಿದ್ದು, ಹಲವು ತಾಸುಗಳವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕಾರವಾರ ಸಮೀಪದ ಸಂಕ್ರುಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಸಮೀಪಗುಡ್ಡ ಕುಸಿದಿದೆ. ವಾಹನ ಸಂಚಾರಕ್ಕೆ ಅಡಚಣೆಯಾಗಲಿಲ್ಲ.

ಸಾಧಾರಣ ಮಳೆ: ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಮಂಗಳವಾರ ಸಾಧಾರಣ ಮಳೆಯಾಗಿದ್ದು,ಹೊಸನಗರದಲ್ಲಿ ಜೋರು ಮಳೆ ಮುಂದುವರೆದಿದೆ.

ಸಾಗರ, ತೀರ್ಥಹಳ್ಳಿ, ಸೊರಬ, ಕೋಣಂದೂರಿನಲ್ಲಿ ಸಾಧಾರಣ ಮಳೆಯಾಗಿದೆ.

ಕೆಆರ್‌ಎಸ್‌ ಒಳಹರಿವು ಹೆಚ್ಚಳ; ನೀರಿನಮಟ್ಟ ಹೆಚ್ಚಳ:

ಕಾವೇರಿ ನದಿಯಲ್ಲಿ ನೀರಿನಮಟ್ಟ ಮತ್ತಷ್ಟು ಏರಿಕೆಯಾಗಿದೆ. ಭಾಗಮಂಡಲ, ಸಿದ್ದಾಪುರ, ನೆಲ್ಯಹುದಿಕೇರಿ, ದುಬಾರೆ, ಕುಶಾಲನಗರ ಭಾಗದಲ್ಲಿ ಕಾವೇರಿ ನದಿಯು ಮೈದುಂಬಿಕೊಂಡು ಹರಿಯುತ್ತಿದೆ. ಮಡಿಕೇರಿಯ ಕೂಟುಹೊಳೆ ಭರ್ತಿಯಾಗಿದೆ. ಬ್ರಹ್ಮಗಿರಿ ಭಾಗದಲ್ಲೂ ಮಧ್ಯಾಹ್ನದ ಬಳಿಕ ಮಳೆ ಬಿರುಸು ಪಡೆದುಕೊಂಡಿದೆ. ಹಾರಂಗಿ ಜಲಾಶಯದ ಒಳಹರಿವು 2,335 ಕ್ಯುಸೆಕ್‌ಗೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 3 ಅಡಿಗಳಷ್ಟು ನೀರು ಹರಿದುಬಂದಿದೆ.

ರೈಲು ಸಂಚಾರ ವಿಳಂಬ ಸಾಧ್ಯತೆ

ಸುಬ್ರಹ್ಮಣ್ಯ - ಸಕಲೇಶಪುರ ರೈಲು ಮಾರ್ಗದ ಮಣಿಭಂಡ ಬಳಿ ಹಳಿ ಮೇಲೆ ಉರುಳುವ ಆತಂಕವಿರುವ ಬಂಡೆಗಲ್ಲುಗಳ ತೆರವು ಕಾರ್ಯಾಚರಣೆ ಮಂಗಳವಾರವೂ ಮುಂದುವರಿದಿದೆ. ಇದೇ 24ರ ವರೆಗೆ ಈ ಮಾರ್ಗವಾಗಿ ಸಂಚರಿಸುವ ರೈಲುಗಳು ರದ್ದುಪಡಿಸಲಾಗಿದ್ದು, ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

ಮಂಗಳೂರು–ಯಶವಂತಪುರ ರೈಲು ಸಂಚಾರವನ್ನು ಇದೇ 24 ರವರೆಗೆ ರದ್ದುಗೊಳಿಸಲಾಗಿದೆ. ಮಂಗಳೂರು ಸೆಂಟ್ರಲ್‌–ಕೆಎಸ್‌ಆರ್‌ ಬೆಂಗಳೂರು ರೈಲು ಇದೇ 25 ರವರೆಗೆ ಪಾಲ್ಘಾಟ್‌, ಸೇಲಂ, ಜೋಲಾರ್‌ಪೇಟ್‌ ಮೂಲಕ ಸಂಚರಿಸಲಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT