ಬೆಂಗಳೂರು: ಹುಬ್ಬಳ್ಳಿ–ಧಾರವಾಡ, ಹಾವೇರಿ, ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಸಿಡಿಲು ಬಡಿದು ಯುವಕರೊಬ್ಬರು ಮೃತಪಟ್ಟಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಗೋಡೆ ಕುಸಿದು ದಂಪತಿ ಗಾಯಗೊಂಡರು.
ಹುಬ್ಬಳ್ಳಿ–ಧಾರವಾಡ ಅವಳಿ ನಗರ, ಗದಗ ಜಿಲ್ಲೆಯ ಡಂಬಳ, ನರಗುಂದ, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ತಾಳಿಕೋಟೆ, ಮುದ್ದೇಬಿಹಾಳ,ಬಾದಾಮಿ, ಬಾಗಲಕೋಟೆಯ ಕೆರೂರಿನಲ್ಲಿ ಗುರುವಾರ ತಡ ರಾತ್ರಿ ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರು, ಹಂಸಭಾವಿಯಲ್ಲಿ ಶುಕ್ರವಾರ ಧಾರಾಕಾರ ಮಳೆಯಾಗಿದೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಹರನಗಿರಿ ಗ್ರಾಮದಲ್ಲಿ ಕಾಂತೀಯ ಅಂಜನಪ್ಪ ತಳವಾರ (29)ಗುರುವಾರ ರಾತ್ರಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಇಲ್ಲಿನ ಹರಳಯ್ಯನಗರದಲ್ಲಿ ರಾತ್ರಿ ಮನೆಯ ಗೋಡೆ ಕುಸಿದಿದ್ದು, ಮನೆಯಲ್ಲಿ ಮಲಗಿದ್ದ ದಂಪತಿ ಮೇಲೆ ಗೋಡೆ ಬಿದ್ದು ಗಾಯಗೊಂಡಿದ್ದಾರೆ.
ಹಾವೇರಿ ತಾಲ್ಲೂಕಿನ ಬಸಾಪೂರ ಗ್ರಾಮದಲ್ಲಿ ಹೊಲಗಳಿಗೆ ನೀರು ನುಗ್ಗಿದ ಪರಿಣಾಮ ಬಾಳೆ, ಅಡಿಕೆ, ಮೆಣಸಿನಕಾಯಿ ಗಿಡಗಳು ನೆಲಕಚ್ಚಿವೆ.
ತಾಳಿಕೋಟೆ ತಾಲ್ಲೂಕಿನಲ್ಲಿ ಡೋಣಿ ನದಿಗೆ ಶುಕ್ರವಾರ ಬೆಳಿಗ್ಗೆ ಪ್ರವಾಹ ಬಂದಿತ್ತು. ಹಡಗಿನಾಳ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿತ್ತು. ಕಲಬುರ್ಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ವಿವಿಧೆಡೆ ಶುಕ್ರವಾರ ಉತ್ತಮ ಮಳೆಯಾಯಿತು.ಕೊಪ್ಪಳ ಜಿಲ್ಲೆಯ ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕು ವ್ಯಾಪ್ತಿಯಲ್ಲಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ರಾಯಚೂರು ಜಿಲ್ಲೆಯ ಮುದಗಲ್‌ನಲ್ಲಿ ಮಳೆಯಾದ್ದರಿಂದ ವೆಂಕಟರಾಯನಪೇಟೆಯ ಜನತಾ ಕಾಲೊನಿಯಲ್ಲಿ ಚರಂಡಿ ನೀರು ಮಿಶ್ರಣಗೊಂಡು ಮಳೆ ನೀರು ಮನೆಗಳಿಗೆ ನುಗ್ಗಿತು. ಶಹಾಪುರ ತಾಲ್ಲೂಕಿನ ಹಾರಣಗೇರಾ ಗ್ರಾಮದಲ್ಲಿ ಬಸವಣ್ಣ ದೇವಸ್ಧಾನದ ಗೋಪುರಕ್ಕೆ ಸಿಡಿಲು ಬಡಿದಿದ್ದರಿಂದ ಹಾನಿಯಾಗಿದೆ.
ಚಾಮರಾಜನಗರ, ಕೊಡಗು ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಳೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.