ಮತ್ತೆ ಮಳೆ ನರ್ತನ: ತುಂಬಿ ಹರಿದ ಹಳ್ಳ ಕೊಳ್ಳ

7
ಮತ್ತೆ ಮಳೆ ನರ್ತನ: ಹಾರಂಗಿ ಜಲಾಶಯದ ಒಳಹರಿವು ಏರಿಕೆ

ಮತ್ತೆ ಮಳೆ ನರ್ತನ: ತುಂಬಿ ಹರಿದ ಹಳ್ಳ ಕೊಳ್ಳ

Published:
Updated:
Deccan Herald

ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಗುರುವಾರವೂ ಉತ್ತಮ ಮಳೆಯಾಗಿದೆ.

ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿಯಲ್ಲಿ ಗಾಳಿಗೆ ಬೃಹತ್‌ ಮರವೊಂದು ಬಿದ್ದು ಎರಡು ಗಂಟೆ ವಾಹನ ಸಂಚಾರ ಬಂದ್‌ ಆಗಿತ್ತು. ಮುಕ್ಕೊಡ್ಲು ಗ್ರಾಮದ ಭದ್ರಕಾಳೇಶ್ವರಿ ದೇವಾಯಲವು ಜಲಾವೃತಗೊಂಡಿದ್ದು ಪೂಜಾ ಕಾರ್ಯ ಸ್ಥಗಿತವಾಗಿದೆ. ಕೃಷಿ ಚಟುವಟಿಕೆ ಸ್ಥಗಿತಗೊಂಡಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

24 ಗಂಟೆ ಅವಧಿಯಲ್ಲಿ ಮಡಿಕೇರಿಯಲ್ಲಿ 144 ಮಿ.ಮೀ., ಶಾಂತಳ್ಳಿಯಲ್ಲಿ 132, ಸುಂಟಿಕೊಪ್ಪದಲ್ಲಿ 109, ಸಂಪಾಜೆ 96, ಹುದಿಕೇರಿ 73, ಭಾಗಮಂಡಲದಲ್ಲಿ 62 ಮಿ.ಮೀ. ಮಳೆಯಾಗಿದೆ.

ತಾಲ್ಲೂಕು ಕೇಂದ್ರ ಸರಗೂರಿನಿಂದ ಬಿದರಹಳ್ಳಿ ಭಾಗದ 40 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆ ಮುಳುಗಡೆಯಾಗಿದೆ. ಬದಲಿ ಮಾರ್ಗದಲ್ಲೂ 4 ಅಡಿಗಳಷ್ಟು ನೀರು ಕಾಲುವೆಯಂತೆ ಹರಿಯುತ್ತಿದೆ. ಇದರಿಂದ ಕಾಲುವೆಯ ಏರಿ ಮೇಲೆ ದ್ವಿಚಕ್ರ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುವಂತಾಗಿದೆ. ಈ ಭಾಗದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ಮಾದಾಪುರದಿಂದ ನಂಜನಗೂಡು ಸಂಪರ್ಕಿಸುವ ಚೆಕ್ಕೂರು ಸೇತುವೆ, ಎಚ್.ಡಿ.ಕೋಟೆ– ಸರಗೂರಿಗೆ ಸಂಪರ್ಕ ಬೆಸೆಯುವ ತುಂಬಸೋಗೆ ಸೇತುವೆ ಹಾಗೂ ಹೊಮ್ಮರಗಳ್ಳಿ– ನಂಜನಗೂಡು ಸೇತುವೆ ಮುಳುಗಡೆಯಾಗಿದೆ.

ಕಬಿನಿ ಜಲಾಶಯದ ಮೇಲೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಭಾರಿ ಮಳೆ: ಶಿವಮೊಗ್ಗ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿಯಲ್ಲಿ ಧಾರಾಕಾರ ಮಳೆ ಸುರಿದಿದೆ.

7 ಗಂಟೆ ಸಂಚಾರ ಸ್ಥಗಿತ (ಮಂಗಳೂರು ವರದಿ): ಘಟ್ಟ ಪ್ರದೇಶದಲ್ಲಿ ಸತತ ಎರಡನೇ ದಿನವೂ ಭಾರಿ ಮಳೆ ಸುರಿದಿರುವುದರಿಂದ ಗುಂಡ್ಯ ಹೊಳೆ ಉಕ್ಕಿ ಹರಿಯುತ್ತಿದ್ದು, ಉದನೆಯಲ್ಲಿ ಪ್ರವಾಹ ನೀರು ಹೆದ್ದಾರಿಯನ್ನೂ ವ್ಯಾಪಿಸಿತು. ಇದರಿಂದ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಗುರುವಾರ 7 ಗಂಟೆ ಸ್ಥಗಿತವಾಯಿತು.

ಗುರುವಾರ ಬೆಳಿಗ್ಗೆ 5.30ರ ಹೊತ್ತಿಗೆ ಶಿರಾಡಿ ಗ್ರಾಮದ ಉದನೆ ಪೇಟೆ ಸನಿಹದ ತೂಗು ಸೇತುವೆ ಪಕ್ಕದಲ್ಲಿ ಹೊಳೆ ನೀರು ಹೆದ್ದಾರಿಗೆ ನುಗ್ಗಿದ್ದು, ರಸ್ತೆಯಲ್ಲಿ 3 ಅಡಿ ನೀರು ಹರಿಯುತ್ತಿತ್ತು. ಕ್ರಮೇಣ ನೀರಿನ ಮಟ್ಟ ಏರಿಕೆ ಆಗುತ್ತಲೇ ಇತ್ತು. ಮಧ್ಯಾಹ್ನ 12.25ರ ಹೊತ್ತಿಗೆ ರಸ್ತೆಯಲ್ಲಿ ನೀರು ಸಂಪೂರ್ಣ ಇಳಿಕೆಯಾಗಿದ್ದು, ವಾಹನ ಸಂಚಾರಕ್ಕೆ ಅವಕಾಶ ಲಭಿಸಿತು. ಗುಂಡ್ಯದಿಂದ ಉದನೆ ತನಕ ಬೆಳಿಗ್ಗಿನಿಂದಲೇ ವಾಹನ ಸಂಚಾರ ಸ್ಥಗಿತವಾಗಿದ್ದರಿಂದ, ಈ ಭಾಗದಿಂದ ನೆಲ್ಯಾಡಿ, ಉಪ್ಪಿನಂಗಡಿ, ಪುತ್ತೂರು, ಮಂಗಳೂರಿಗೆ ತೆರಳಬೇಕಿದ್ದ ಶಾಲಾ ವಿದ್ಯಾರ್ಥಿಗಳು, ಉದ್ಯೋಗಿಗಳು, ಉದ್ಯಮಿಗಳು ಸಮಸ್ಯೆ ಎದುರಿಸುವಂತಾಯಿತು.

ಮಂಗಳೂರು-ಬೆಂಗಳೂರು ಮಧ್ಯೆ ಸಂಚರಿಸುವ ಬುಲೆಟ್ ಟ್ಯಾಂಕರ್, ಕಂಟೈನರ್, ಲಾರಿಗಳು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಹೆದ್ದಾರಿಯ ಎರಡೂ ಬದಿಯಲ್ಲಿ ಸುಮಾರು 4 ಕಿ.ಮೀ. ವರೆಗೆ ಸರತಿ ಸಾಲಿನಲ್ಲಿ ನಿಂತಿದ್ದವು. ಬಸ್, ಕಾರು, ಟೆಂಪೋ ಟ್ರಾವೆಲ್ ಮೊದಲಾದ ವಾಹನಗಳು ಪೆರಿಯಶಾಂತಿ-ಮರ್ದಾಳ, ಕೈಕಂಬ-ಗುಂಡ್ಯ ಮೂಲಕ ಪ್ರಯಾಣ ಬೆಳೆಸಿದವು. ಗುಂಡ್ಯ ಹೊಳೆಯಲ್ಲಿ ನೀರಿನ ಪ್ರವಾಹದಿಂದಾಗಿ ಬುಧವಾರ ಬೆಳಿಗ್ಗೆನಿಂದ ಹೊಸಮಠ ಸೇತುವೆ ಮುಳುಗಡೆ ಆಗಿದ್ದು, ಗುರುವಾರವೂ ಸೇತುವೆಯ ಮೇಲೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಉಪ್ಪಿನಂಗಡಿ-ಕಡಬ ಮಧ್ಯೆ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಸುಬ್ರಹ್ಮಣ್ಯದಲ್ಲಿ ಸ್ನಾನಘಟ್ಟ ಸತತ ಎರಡನೇ ದಿನವೂ ಮುಳುಗಡೆಯಾಗಿದೆ. ಬಿಳಿನೆಲೆ ಸೇತುವೆಯೂ ಮುಳುಗಡೆಯಾಗಿತ್ತು.

ಶವ ಪತ್ತೆ: ಚಿಕ್ಕಮಗಳೂರು ಜಿಲ್ಲೆ ಕಳಸದ ಅಂಬಾತೀರ್ಥದ ಭದ್ರಾ ನದಿಯಲ್ಲಿ ಎರಡು ವಾರದ ಹಿಂದೆ ನೀರು ಪಾಲಾಗಿದ್ದ ಮಂಗಳೂರು ಸಮೀಪದ ತುಂಬೆಯ ಕಿರಣ್ ಕೋಟ್ಯಾನ್‌ ಅವರ ಶವ ಗುರುವಾರ ಪತ್ತೆಯಾಗಿದೆ.

ಭದ್ರಾ ನದಿಯ ನೆರೆಯಲ್ಲಿ ಹಳುವಳ್ಳಿ ಸಮೀಪ ಗುರುವಾರ ಬೆಳಿಗ್ಗೆ 8.45ಕ್ಕೆ ಶವ ತೇಲಿಕೊಂಡು ಬರುತ್ತಿದ್ದುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.

ರೈಲು ಸಂಚಾರ ಸ್ಥಗಿತ

ಸಕಲೇಶಪುರ: ಸಕಲೇಶಪುರ– ಕುಕ್ಕೆ ಸುಬ್ರಹ್ಮಣ್ಯ ನಡುವಿನ ರೈಲು ಮಾರ್ಗದ ಎಡಕುಮೇರಿ ಹಾಗೂ ಅರೆಬೆಟ್ಟ ನಡುವೆ ರೈಲು ಹಳಿ ಮೇಲೆ ಎರಡು ಕಡೆ ಮಣ್ಣು ಕುಸಿದಿದ್ದು, ಗುರುವಾರವೂ ರೈಲು ಸಂಚಾರ ಸ್ಥಗಿತಗೊಂಡಿತು.

ಎರಡು ಕಡೆ ಮಣ್ಣು ಕುಸಿದಿದೆ. ತೆರವು ಕಾರ್ಯಾಚರಣೆ ವಿಳಂಬವಾಗುವ ಸಂಭವ ಇರುವುದರಿಂದ ಬೆಂಗಳೂರು– ಮಂಗಳೂರು ನಡುವಿನ ರೈಲು ಸಂಚಾರ ರದ್ದುಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಯಶವಂತಪುರ–ಮಂಗಳೂರು ಜಂಕ್ಷನ್‌ ರೈಲು ಸೇವೆ ಸಂಪೂರ್ಣ ರದ್ದಾಗಿದ್ದು, ಮಂಗಳೂರು ಸೆಂಟ್ರಲ್‌–ಕಾರವಾರ ರೈಲು ಸಂಚಾರವೂ ರದ್ದಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !