ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಗಾಳಿ ಸಹಿತ ಮಳೆ: ಮೂವರು ಸಾವು

Last Updated 7 ಜೂನ್ 2019, 20:00 IST
ಅಕ್ಷರ ಗಾತ್ರ

ರಾಯಚೂರು: ತಾಲ್ಲೂಕಿನ ಕೊತ್ತದೊಡ್ಡಿ ಗ್ರಾಮದಲ್ಲಿ ಗುರುವಾರ ರಾತ್ರಿ ಬೀಸಿದ ಬಿರುಗಾಳಿ ಹಾಗೂ ಮಳೆಯಿಂದ ಗುಡಿಸಲಿನ ಕಲ್ಲಿನ ಗೋಡೆ ಕುಸಿದು ಗೋವಿಂದಮ್ಮ (55) ಹಾಗೂ ಅವರ ಮೊಮ್ಮಕ್ಕಳಾದಶಿವಾನಿ (3), ಮಲ್ಲಿಕಾರ್ಜುನ (5 ತಿಂಗಳು) ಮೃತಪಟ್ಟಿದ್ದಾರೆ.

ಮೃತ ಮಕ್ಕಳ ತಾಯಿ ಸುಜಾತಾ ಮತ್ತು ಇನ್ನೊಬ್ಬ ಪುತ್ರಿ ಗುರುದೇವಿ ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಮೆಡಕುಂದಾ ಗ್ರಾಮದ ಗೋವಿಂದಮ್ಮಮಗಳನ್ನು ನೋಡಿಕೊಂಡು ಹೋಗಲು ಕೊತ್ತದೊಡ್ಡಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಅವಘಡ ಸಂಭವಿಸಿದೆ.

ಸಿಂಧನೂರು ತಾಲ್ಲೂಕು ತುರ್ವಿಹಾಳ ಸಮೀಪ ಪಂಪಾಪತಿ ನಾಯಕ ಅವರ ತೋಟದಲ್ಲಿದ್ದ ಮೂವರು ಆಕಳು ಸಿಡಿಲು ಬಡಿದು ಮೃತಪಟ್ಟಿವೆ.

ಜಿಲ್ಲೆಯ ವಿವಿಧೆಡೆಯೂ ಬಿರುಗಾಳಿ ಸಹಿತ ಮಳೆ ಸುರಿದಿದೆ. ಮಾನ್ವಿ ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ಮರವೊಂದು ಉರುಳಿ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.

ಮೈಸೂರಿನಲ್ಲಿ ಶುಕ್ರವಾರ ಸಂಜೆ ಆಲಿಕಲ್ಲು ಸಹಿತ ಮಳೆಯಾಗಿದೆ. ಪಿರಿಯಾಪಟ್ಟಣ, ಕೆ.ಆರ್‌.ನಗರ, ಬೆಟ್ಟದಪುರದ ಸುತ್ತಮುತ್ತ ಉತ್ತಮ ಮಳೆಯಾಗಿದೆ.

ತುಮಕೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಗುರುವಾರ ರಾತ್ರಿ ಉತ್ತಮ ಮಳೆ ಸುರಿದಿದೆ. ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಕಂಬ ಮತ್ತು ಮರಗಳು ಮುರಿದು ಬಿದ್ದಿವೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯ ಬಸವನಗುಡಿ, ಕೆಂಕೆರೆ, ಶಿರಾ ತಾಲ್ಲೂಕಿನ ವೀರಗಾನಹಳ್ಳಿ, ಮಧುಗಿರಿ ತಾಲ್ಲೂಕು ಪುರವರ, ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆ ಹೋಬಳಿಯಲ್ಲಿ ಉತ್ತಮ ಮಳೆ ಆಗಿದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮತ್ತಿಘಟ್ಟ ಗ್ರಾಮದ ಮೇವು ಬ್ಯಾಂಕ್‌ಗೆ ತಾಲ್ಲೂಕು ಆಡಳಿತವು ತಂದಿದ್ದ ಮೇವು ಮಳೆಗೆ ಪೂರ್ಣವಾಗಿ ನೆನೆದಿದೆ. ಅದೇ ಮೇವನ್ನು ಶುಕ್ರವಾರ ವಿತರಿಸಲು ಅಧಿಕಾರಿಗಳು ಮುಂದಾದಾಗ ರೈತರು ಆಕ್ರೋಶ ವ್ಯಕ್ತಪಡಿಸಿದರು. ತುಮಕೂರು ಗ್ರಾಮಾಂತರ, ಗುಬ್ಬಿಯಲ್ಲಿಯೂ ಹದವಾದ ಮಳೆ ಸುರಿದಿದೆ.

ಹೊನ್ನಾಳಿ ವರದಿ: ಪಟ್ಟಣ ಸೇರಿ ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ.

ಹನುಮನಹಳ್ಳಿ, ಕುಳಗಟ್ಟೆ, ಭೈರನಹಳ್ಳಿ, ಕ್ಯಾಸಿನಕೆರೆ, ಬೆನಕನಹಳ್ಳಿ ಚಿಕ್ಕಬಾಸೂರು, ತಾಂಡಾ, ಹಿರೇಬಾಸೂರು, ರಾಂಪುರದಲ್ಲೂ ಭಾರಿ ಮಳೆಯಾಗಿದೆ.

ಸಿಡಿಲು ಬಡಿದು ನಗರ ದೇವತೆ ದುರ್ಗಮ್ಮ ದೇವಸ್ಥಾನದ ಕಳಸಕ್ಕೆ ಹಾನಿಯಾಗಿದೆ.

ಶಿಕಾರಿಪುರದಲ್ಲೂ ಮಳೆ: ಶಿವಮೊಗ್ಗ ಜಿಲ್ಲೆಯ ಹಲವೆಡೆ ಶುಕ್ರವಾರ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ನಂತರ ಶಿಕಾರಿಪುರ ಪಟ್ಟಣ ಹಾಗೂ ಸುತ್ತಲಿನ ಒಂದು ತಾಸು ಗುಡುಗು ಸಹಿತ ಮಳೆ ಸುರಿಯಿತು.

ಹೊಸದುರ್ಗ ತಾಲ್ಲೂಕಿನ ಮತ್ತೋಡು ಹೋಬಳಿ ವ್ಯಾಪ್ತಿಯ ಹಲವು ಹಳ್ಳಿಗಳಲ್ಲಿ ಗುರುವಾರ ತಡರಾತ್ರಿ ಧಾರಾಕಾರವಾಗಿ ರೋಹಿಣಿ ಮಳೆ ಸುರಿದಿದೆ.

**

ಉತ್ತರ ಕರ್ನಾಟಕಕ್ಕೆ ತಂಪೆರೆದ ಮಳೆ

ಬಿಸಿಲ ಬೇಗೆಯಿಂದ ಭೂಮಿ ಬಿರುಕುಬಿಟ್ಟಂತಾಗಿದ್ದ ಉತ್ತರ ಕರ್ನಾಟಕದಲ್ಲಿ ಗುರುವಾರ ತಡರಾತ್ರಿ ಹಾಗೂ ಶುಕ್ರವಾರ ಬೆಳಗಿನ ಜಾವ ಬಿದ್ದ ಗುಡುಗು ಸಹಿತ ಮಳೆಯಿಂದಾಗಿ ತಂಪೆರೆದಂತಾಗಿದೆ.

ಧಾರವಾಡ, ಬಾಗಲಕೋಟೆ, ಹೊಸಪೇಟೆಯಲ್ಲಿ ಧಗೆಯ ತಾಪ ಕಡಿಮೆಯಾಗಿದೆ. ಬೆಳಗಾವಿ, ಹಿರೇಬಾಗೇವಾಡಿ, ಬೈಲಹೊಂಗಲ
ದಲ್ಲಿ ತುಂತುರು ಮಳೆಯಾಗಿದೆ. ಹಾವೇರಿ ಜಿಲ್ಲೆಯಬ್ಯಾಡಗಿ ತಾಲ್ಲೂಕಿನಲ್ಲಿ ಗುರುವಾರ ತಡ ರಾತ್ರಿ ಬೀಸಿದ ರಭಸದ ಗಾಳಿ ಹಾಗೂ ಮಳೆಗೆ ಬಾಳೆ, ಅಡಿಕೆ, 2 ಹೆಕ್ಟೇರ್ ರೇಷ್ಮೆ ಹಾಗೂ 58ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಗದಗ ಜಿಲ್ಲೆಯಗಜೇಂದ್ರಗಡ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ರಾತ್ರಿ ಸಿಡಿಲು, ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT