ತಾಪಮಾನ ಏರಿಕೆಯಿಂದ ರಾಜ್ಯ ತತ್ತರ

ಗುರುವಾರ , ಏಪ್ರಿಲ್ 25, 2019
31 °C
ಕಳೆದ ಒಂದು ದಶಕದಿಂದ ಬಯಲುಸೀಮೆ– ಮಲೆನಾಡಿನಲ್ಲಿ ವ್ಯತ್ಯಾಸ ಕಾಣದ ಬಿಸಿಲಿನ ಪ್ರಮಾಣ

ತಾಪಮಾನ ಏರಿಕೆಯಿಂದ ರಾಜ್ಯ ತತ್ತರ

Published:
Updated:

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳು ಬೇಸಿಗೆಯ ತಾಪಮಾನದ ಏರಿಕೆಯಿಂದ ತತ್ತರಿಸಿವೆ. ಕಳೆದ ಒಂದು ದಶಕದಿಂದ ಈಚೆಗೆ ಬಯಲುಸೀಮೆಗೂ ಮಲೆನಾಡಿಗೂ ಹೆಚ್ಚಿಗೆ ವ್ಯತ್ಯಾಸವಿಲ್ಲದಂತೆ ತಾಪಮಾನ ಏರಿಕೆ ಗತಿಯಲ್ಲಿದೆ.

ಉಷ್ಣಾಂಶ ಏರಿಕೆ ಮತ್ತು ವಾಯುಭಾರ ಕುಸಿತದಿಂದ ರಾಜ್ಯ ಹಲವು ಕಡೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಉತ್ತರ ಕರ್ನಾಟಕದ ಭಾಗದ ಕಲಬುರ್ಗಿ, ಗದಗ, ಧಾರವಾಡ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸು ಇದ್ದರೆ, ದಕ್ಷಿಣದ ‘ಚಿರಾಪುಂಜಿ’ ಎನಿಸಿರುವ ಅತಿ ಹೆಚ್ಚು ಮಳೆ ಬೀಳುವ ಆಗುಂಬೆ ಮತ್ತು ಕರ್ನಾಟಕದ ಸ್ವಿಜರ್ಲೆಂಡ್‌ ಎಂದೇ ಖ್ಯಾತಿ ಪಡೆದಿರುವ ಮಡಿಕೇರಿ ಜಿಲ್ಲೆಯಲ್ಲಿ ತಾಪಮಾನ 31 ಡಿಗ್ರಿ ಸೆಲ್ಸಿಯಸ್‌ನಿಂದ 35 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

ಕಲಬುರ್ಗಿ, ಗದಗ, ವಿಜಯಪುರ, ರಾಯಚೂರು, ಬಳ್ಳಾರಿಗಳಲ್ಲಿನ ಕಳೆದ ಐದು ವರ್ಷಗಳಲ್ಲಿ ಏಕ ಪ್ರಕಾರ ಉಷ್ಣಾಂಶ ದಾಖಲಾಗಿದೆ. ಕಲಬುರ್ಗಿಯಲ್ಲಿ ಈ ಬಾರಿ ಮಾರ್ಚ್‌ನಲ್ಲಿ 43 ಡಿಗ್ರಿ ಸೆಲ್ಸಿಯಸ್‌ ತಲುಪಿತ್ತು. ಅಲ್ಲಿ ಒಂದೆರಡು ಮಳೆಯಾಗಿದ್ದರಿಂದ ತಾಪಮಾನದಲ್ಲಿ ಕೊಂಚ ಇಳಿಕೆಯಾಗಿದೆ. ಈ ಭಾಗದಲ್ಲಿ ಒಂದೆರಡು ವಾರಗಳಲ್ಲಿ ಮತ್ತೆ ಸಾಧಾರಣ ಮಳೆಯಾಗುವ ಸೂಚನೆ ಇದೆ.

ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳಲ್ಲೂ ಕಳೆದ ಹತ್ತು ವರ್ಷಗಳಲ್ಲಿ ತಪಮಾನ ಏರಿಕೆಯಾಗಿದೆ. ಉದ್ಯಾನಗಳ ನಗರಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲೂ 35 ಡಿಗ್ರಿ ಸೆಲ್ಸಿಯಸ್‌ನಿಂದ 39 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಏರಿಕೆ ಆಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಹವಾಮಾನ ಬದಲಾವಣೆ ಪರಿಣಾಮ ಕಳೆದ 9 ವರ್ಷಗಳಲ್ಲಿ ತಾಪಮಾನದಲ್ಲಿ ಹಠಾತ್‌ ಏರಿಕೆಯಾಗಿದೆ. 50 ವರ್ಷಗಳ ಸರಾಸರಿ ತೆಗೆದುಕೊಂಡರೂ ಉಷ್ಣಾಂಶ ವೈಪರೀತ್ಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು. ಮಲೆನಾಡು ಪ್ರದೇಶ ಮತ್ತು ಕೊಡಗು ಜಿಲ್ಲೆಯಲ್ಲಿ 80 ರ ದಶಕದಲ್ಲಿ ಬೇಸಿಗೆ ತಾಪಮಾನವು ಸರಾಸರಿ 20 ರಿಂದ 25 ಡಿಗ್ರಿ ಸೆಲ್ಸಿಯಸ್‌ ಇರುತ್ತಿತ್ತು. ಆದರೆ ಈಗ 30 ರಿಂದ 35 ಡಿಗ್ರಿ ಸೆಲ್ಸಿಯಸ್‌ ದಾಟಿರುವುದು ಹವಾಮಾನ ಇಲಾಖೆ ಅಂಕಿ ಅಂಶಗಳು ಹೇಳುತ್ತವೆ.

ಈ ವಾರ ಮಳೆ ಸಾಧ್ಯತೆ
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ವಾರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇದರಿಂದ ತಾಪಮಾನವೂ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಬಿಸಿಗಾಳಿಯಿಂದ ನಷ್ಟವೂ ಪ್ರಾಕೃತಿಕ ವಿಕೋಪ
ರಾಜ್ಯದಲ್ಲಿ ಬಿಸಿಗಾಳಿಯಿಂದ ಜೀವಹಾನಿ, ಜಾನುವಾರು ಹಾನಿ ಆದಲ್ಲಿ ಸ್ಥಳೀಯ ನೈಸರ್ಗಿಕ ವಿಕೋಪ ಎಂಬುದಾಗಿ ಪರಿಗಣಿಸಿ ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !